ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ದರ್ಶನ್ ಜೈಲು ಬ್ಯಾರಕ್‌ಗೆ ಟಿವಿ ಅನುಮತಿ: ರೇಣುಕಾಸ್ವಾಮಿ ಕುಟುಂಬಕ್ಕೆ ಕೋರ್ಟ್ ಸಮನ್ಸ್

On: December 3, 2025 7:47 PM
Follow Us:

ಬೆಂಗಳೂರು: ನಟ ದರ್ಶನ್ ಸೇರಿದಂತೆ ಆರೋಪಿಗಳು ಇರುವ ಪರಪ್ಪನ ಅಗ್ರಹಾರ ಜೈಲು ಬ್ಯಾರಕ್‌ಗೆ ಟಿ.ವಿ. ಒದಗಿಸುವಂತೆ ಬೆಂಗಳೂರಿನ 64ನೇ ಸೆಷನ್ಸ್ ಕೋರ್ಟ್ ಆದೇಶ ನೀಡಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ವೇಳೆ ಆರೋಪಿಯಾಗಿರುವ ನಾಗರಾಜ್, “ಜೈಲಿನಲ್ಲಿ ತಲೆ ಕೆಡುತ್ತಿದೆ, ಇರಲು ಆಗುತ್ತಿಲ್ಲ, ದಯವಿಟ್ಟು ಟಿ.ವಿ. ಕೊಡಿಸಿ” ಎಂದು ಮನವಿ ಮಾಡಿದ್ದು, ಇದನ್ನು ಕೋರ್ಟ್ ಪರಿಗಣಿಸಿದೆ. ಚಳಿಗಾಲದ ಹಿನ್ನೆಲೆಯಲ್ಲಿ ಈಗಾಗಲೇ ಬೇಡ್‌ಶೀಟ್ ನೀಡಲಾಗಿದ್ದರೂ, ಮನೋರಂಜನೆಯ ಕೊರತೆಯಿಂದ ಬಳಲುತ್ತಿದ್ದ ಆರೋಪಿಗಳಿಗೆ ಟಿ.ವಿ. ಒದಗಿಸಲು ಕೋರ್ಟ್ ಜೈಲು ಅಧಿಕಾರಿಗಳಿಗೆ ಸೂಚಿಸಿದೆ.

ಇದೇ ವೇಳೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ಮುಂದುವರಿದಿದ್ದು, ಪ್ರಾಸಿಕ್ಯೂಷನ್ ಪರವಾಗಿ ವಕೀಲ ಎಸ್‌ಪಿಪಿ ಸಚಿನ್ ಅವರು ಪ್ರತ್ಯಕ್ಷ ಸಾಕ್ಷಿಗಳು, ಎಫ್‌ಎಸ್‌ಎಲ್ ವರದಿ ಹಾಗು ತಾಂತ್ರಿಕ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ. ಸಾಕ್ಷಿಗಳ ವಿಚಾರಣೆಯನ್ನು ಆರಂಭಿಸಲು ಸಮನ್ಸ್ ಜಾರಿಗೊಳಿಸುವಂತೆ ಅವರು ಮನವಿ ಮಾಡಿದರು. ಇದರಂತೆ ಮೊದಲ ಹಂತದಲ್ಲೇ ಸಾಕ್ಷಿ ನಂ. 7 ಮತ್ತು 8 — ಅಂದರೆ ರೇಣುಕಾಸ್ವಾಮಿಯ ತಂದೆ ಕಾಶೀನಾಥ್ ಮತ್ತು ತಾಯಿಗೆ — ಕೋರ್ಟ್ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ಮಗನನ್ನು ಕಳೆದುಕೊಂಡ ನೋವಿನಲ್ಲಿರುವ ಈ ದಂಪತಿ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಕೋರ್ಟ್‌ಗೆ ಮನವಿ ಮಾಡುವ ಸಾಧ್ಯತೆ ಇದೆ.

ವಿಡಿಯೋ ಕಾನ್ಫರೆನ್ಸ್ ವಿಚಾರಣೆಯಲ್ಲಿ ನಟ ದರ್ಶನ್ ಕೈಕಟ್ಟಿ ನಿಂತುಕೊಂಡೇ ವಕೀಲರ ವಾದವನ್ನು ಆಲಿಸಿದ್ದು ಗಮನ ಸೆಳೆಯಿತು. ಸಾಕ್ಷಿ ಸಮನ್ಸ್ ಕುರಿತು ದರ್ಶನ್ ಪರ ವಕೀಲರು ಆಕ್ಷೇಪಿಸಿದರೂ, ಪ್ರಾಸಿಕ್ಯೂಷನ್ ಸಲ್ಲಿಸಿರುವ ಪಟ್ಟಿಯ ಪ್ರಕಾರವೇ ವಿಚಾರಣೆ ಮುಂದುವರೆಯಬೇಕೆಂಬುದಾಗಿ ಕೋರ್ಟ್ ತಿಳಿಸಿದೆ. ಜೈಲು ಸ್ಥಳಾಂತರಿಸಲು ಅನುಕುಮಾರ್ ಮತ್ತು ಜಗದೀಶ್ ಪುನಃ ಮನವಿ ಮಾಡಿದರೂ, ಅವರ ಅರ್ಜಿ ಈಗಾಗಲೇ ವಜಾಗೊಂಡಿರುವುದನ್ನು ಕೋರ್ಟ್ ಪುನರುಚ್ಚರಿಸಿತು.

ಒಟ್ಟು 272 ಸಾಕ್ಷಿಗಳ ಪಟ್ಟಿಯನ್ನು ಇಂದು ಕೋರ್ಟ್‌ಗೆ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲರಿಗೂ ಕ್ರಮವಾಗಿ ಸಮನ್ಸ್ ಜಾರಿಯಾಗಲಿದೆ. ವಿಚಾರಣೆಯನ್ನು ಡಿಸೆಂಬರ್ 17ಕ್ಕೆ ಮುಂದೂಡಲಾಗಿದ್ದು, ಮುಂದಿನ ದಿನಗಳಲ್ಲಿ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸುವ ಪ್ರಕ್ರಿಯೆ ಆರಂಭವಾಗಲಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment