ಸಿಡ್ನಿ/ಬೆಂಗಳೂರು: ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದರಿಂದ ಉಂಟಾಗುತ್ತಿರುವ ಅಪಾಯಗಳ ಬಗ್ಗೆ ವಿಶ್ವದಾದ್ಯಂತ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲೇ, ಆಸ್ಟ್ರೇಲಿಯಾ ದೊಡ್ಡ ಕ್ರಮ ಕೈಗೊಂಡಿದೆ. 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ಪೂರ್ಣವಾಗಿ ನಿಷೇಧಿಸುವ ಕಾನೂನು ಜಾರಿಗೆ ತಂದಿದ್ದು, ಅದು ಡಿಸೆಂಬರ್ 10ರಿಂದ ಜಾರಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಯೂಟ್ಯೂಬ್ ಮತ್ತು ಥ್ರೆಡ್‌ಗಳಂತಹ ಸಾಮಾಜಿಕ ಜಾಲತಾಣಗಳ ಮಾಲೀಕ ಸಂಸ್ಥೆಯಾದ ಮೆಟಾ, 16 ವರ್ಷದೊಳಗಿನ ಬಳಕೆದಾರರ ಖಾತೆಗಳನ್ನು ಸ್ಥಗಿತಗೊಳಿಸುವ ಕೆಲಸ ಆರಂಭಿಸಿದೆ. ವಯಸ್ಸು 16 ವರ್ಷಕ್ಕಿಂತ ಕಡಿಮೆ ಇರುವ ಬಳಕೆದಾರರನ್ನು ಗುರುತಿಸಿ ತೆಗೆದುಹಾಕುವ ಕಾರ್ಯ ನಿರಂತರವಾಗಿ ನಡೆದಿದೆ ಎಂದು ಕಂಪನಿ ವಕ್ತಾರರು ತಿಳಿಸಿದ್ದಾರೆ.

ಸಣ್ಣ ಮಕ್ಕಳನ್ನು ಆನ್‌ಲೈನ್ ಕಿರುಕುಳ, ತಪ್ಪು ಮಾಹಿತಿ ಪ್ರಚಾರ ಮತ್ತು ಸಾಮಾಜಿಕ ಜಾಲತಾಣ ನಶೆಯಿಂದ ದೂರವಿಡುವ ಉದ್ದೇಶದಿಂದ ಆಸ್ಟ್ರೇಲಿಯಾ ಈ ಕ್ರಮ ಕೈಗೊಂಡಿದೆ. ಕಾನೂನನ್ನು ಉಲ್ಲಂಘಿಸಿದಲ್ಲಿ ಅಂದಾಜು ₹289 ಕೋಟಿ (5.5 ಲಕ್ಷ ಆಸ್ಟ್ರೇಲಿಯನ್ ಡಾಲರ್)ವರೆಗೆ ದಂಡ ವಿಧಿಸಲಾಗುತ್ತದೆ. ಅದರಲ್ಲೂ, ಈ ಕಾನೂನು ಜಾರಿಗೆ ತಂದದ್ದು ಕೇವಲ ಸಾಮಾಜಿಕ ಜಾಲತಾಣ ನಿಷೇಧಕ್ಕಾಗಿ ಮಾತ್ರವಲ್ಲ; ಮಕ್ಕಳ ಮಾನಸಿಕ ಆರೋಗ್ಯ, ಅವರ ಶಿಕ್ಷಣ ಮತ್ತು ಭವಿಷ್ಯವನ್ನು ರಕ್ಷಿಸುವ ದೃಷ್ಟಿಯಿಂದ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿದೆ.

ಭಾರತದಲ್ಲಿ ಹೆಚ್ಚುತ್ತಿರುವ ಸಮಸ್ಯೆ
ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲೇ ಮುಳುಗಿ ಹೋಗಿರುವ ಮಕ್ಕಳ ಸಂಖ್ಯೆ ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 10 ರಿಂದ 16 ವರ್ಷದವರೆಗಿನ ಮಕ್ಕಳು ಹೆಚ್ಚು ಬಳಕೆ ಮಾಡುತ್ತಿದ್ದು, ಗಂಟೆಗಳ ಕಾಲ ಫೋನ್ ಹಿಡಿದು ಕುಳಿತುಕೊಳ್ಳುವುದು ಸಾಮಾನ್ಯವಾಗಿದೆ. ಕೆಲವು ಸಂದರ್ಭಗಳಲ್ಲಿ, ಪೋಷಕರು ಮೊಬೈಲ್ ಕೊಡದಿದ್ದರೂ ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ದೇಶದ ವಿವಿಧ ಭಾಗಗಳಲ್ಲಿ ವರದಿಯಾಗಿವೆ. ಪೋಷಕರೊಡನೆ ಮಾತುಕತೆ ಇಲ್ಲದಿರುವುದು, ಓದಿನಲ್ಲಿ ಆಸಕ್ತಿ ಕಡಿಮೆಯಾಗುವುದು, ಕಣ್ಣು ಮತ್ತು ಮೆದುಳಿಗೆ ಹಾನಿ, ಒತ್ತಡ, ಆತಂಕ ಮತ್ತು ಕಿರುಕುಳಗಳಂತಹ ಸಮಸ್ಯೆಗಳು ಮಕ್ಕಳನ್ನು ಬಾಲ್ಯದಲ್ಲೇ ಒತ್ತಡದ ಬದುಕಿಗೆ ತಳ್ಳುತ್ತಿವೆ.
ಇದೇ ಕಾರಣಕ್ಕೆ, ಮಕ್ಕಳಲ್ಲಿ ಮೊಬೈಲ್ ದುರಪಯೋಗ ಮತ್ತು ಸಾಮಾಜಿಕ ಜಾಲತಾಣ ನಶೆ ತಡೆಯಲು ಕಠಿಣ ಕಾನೂನು ಅಗತ್ಯವಿದೆ ಎಂದು ಸಮಾಜದ ವಿವಿಧ ಹಂತದ ಪೋಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. “ಮಕ್ಕಳು ಸಾಮಾಜಿಕ ಜಾಲತಾಣಕ್ಕೆ ನಶೆಯಾಗುತ್ತಿದ್ದಾರೆ. ಸರ್ಕಾರ ಕಾನೂನು ಮಾಡಿದರೆ ಪೋಷಕರಿಗೂ ನೆರವಾಗುತ್ತದೆ,” ಎಂದು ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಮಕ್ಕಳಲ್ಲಿ ಒತ್ತಡಕ್ಕೆ ಕಾರಣ ಸೋಷಿಯಲ್ ಮೀಡಿಯಾ
ಮಕ್ಕಳ ಸಾಮಾಜಿಕ ಜಾಲತಾಣ ಬಳಕೆಯನ್ನು ಗಮನಿಸಿದರೆ, ಅವರು ಇದನ್ನು ಬಿಟ್ಟು ಇರಲಾರರು ಎಂಬುದು ಸ್ಪಷ್ಟವಾಗುತ್ತದೆ. ಮುಂಜಾನೆ ಏಳುತ್ತಿದ್ದಂತೆಯೇ ಫೋನ್ ಕೈಗೆತ್ತಿಕೊಳ್ಳುವುದು, ಮಲಗುವ ಮುನ್ನವೂ ವಿವಿಧ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಗಂಟೆಗಳ ಕಾಲ ಕಾಲಹರಣ ಮಾಡುವುದು ಸಾಮಾನ್ಯವಾಗಿದೆ. ಇದರಿಂದ ಮಕ್ಕಳಿಗೆ ತಮ್ಮ ಹವ್ಯಾಸಗಳಿಗೆ ಸಮಯ ನೀಡಲು, ತಮ್ಮ ಮನಸ್ಸನ್ನು ಪರಿಶೀಲಿಸಲು ಹಾಗೂ ಸ್ವವಿಕಾಸಕ್ಕೆ ಅವಕಾಶವೇ ಸಿಗುವುದಿಲ್ಲ. ಈ ಕಾರಣವೂ ಮಕ್ಕಳಲ್ಲಿ ಒತ್ತಡ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.
ಮುಖಾಮುಖಿ ಮಾತನಾಡಲು ಹಿಂಜರಿಯುವ ಕೆಲವು ಮಕ್ಕಳು ಆನ್‌ಲೈನ್‌ನಲ್ಲಿ ಮಾತ್ರ ಧೈರ್ಯದಿಂದ ಸಂವಹನ ನಡೆಸುತ್ತಾರೆ. ಇದರಿಂದ ಅವರ ಸಾಮಾಜಿಕ ಕೌಶಲ್ಯ ಕುಗ್ಗುತ್ತದೆ. ಸೋಷಿಯಲ್ ಮೀಡಿಯಾ ಅವರ ಆತ್ಮಗೌರವಕ್ಕೂ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ವಾಟ್ಸಪ್, ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಂನಲ್ಲಿ ಕಾಣುವ ಫೋಟೋ, ಸ್ಟೇಟಸ್ ಮತ್ತು ಸಾಧನೆಗಳನ್ನು ತಮ್ಮ ಜೀವನದೊಂದಿಗೆ ಹೋಲಿಸಿ ಅವರು ಅಸಮಾಧಾನಗೊಳ್ಳುತ್ತಾರೆ.

ಸರ್ಕಾರ ಗಮನಿಸಬೇಕಾದ ಸಂದೇಶ
ಆಸ್ಟ್ರೇಲಿಯಾದ ಉದಾಹರಣೆ, ಕಾನೂನು ಜಾರಿಯಾದರೆ ಮಾತ್ರ ಮಕ್ಕಳ ಬದುಕಿನಲ್ಲಿ ಸರಿಯಾದ ಬದಲಾವಣೆ ಸಾಧ್ಯ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಭಾರತದ ಮುಂದಿನ ಪೀಳಿಗೆಯನ್ನು ಸಾಮಾಜಿಕ ಜಾಲತಾಣದ ನಶೆಯಿಂದ ಮತ್ತು ಮನೋವೈಕಲ್ಯದಿಂದ ರಕ್ಷಿಸಲು, ಕೇಂದ್ರ ಸರ್ಕಾರ ಕೂಡ ತ್ವರಿತ ಕ್ರಮ ಕೈಗೊಂಡು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ ಕಾನೂನು ತರಬೇಕು. ಅದು ಕೇವಲ ಕಾನೂನು ಅಲ್ಲ; ಮಕ್ಕಳ ಭವಿಷ್ಯವನ್ನು ಕಾಪಾಡುವ, ಆರೋಗ್ಯಕರ ಸಮಾಜ ನಿರ್ಮಿಸುವ ಹಾದಿ.
ದುರ್ಬಲಗೊಳ್ಳುತ್ತಿರುವ ಆತ್ಮವಿಶ್ವಾಸ
ಉದಾಹರಣೆಗೆ, ಅಮಿತ್ ಎಂಬ ಬಾಲಕ ರಜೆಯಲ್ಲಿ ಒಂದು ವಿಶೇಷ ಸ್ಥಳಕ್ಕೆ ಹೋಗಬೇಕೆಂದು ಹಾರೈಸಿದ್ದ. ಆದರೆ ಕೆಲ ಕಾರಣಗಳಿಂದ ಅವನಿಗೆ ಅದು ಸಾಧ್ಯವಾಗಲಿಲ್ಲ. ಕೆಲವು ದಿನಗಳ ನಂತರ, ಅವನ ಸ್ನೇಹಿತನೊಬ್ಬ ಅದೇ ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿ ತೆಗೆಸಿಕೊಂಡ ಫೋಟೋಗಳನ್ನು ವಾಟ್ಸಪ್ ಮತ್ತು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ. ಆ ಚಿತ್ರಗಳನ್ನು ನೋಡಿದ ಅಮಿತ್‌ನಿಗೆ ನಿರಾಶೆ ಉಂಟಾಯಿತು, ಅಸಮಾಧಾನ ಶುರುವಾಯಿತು. ಇದೇ ರೀತಿಯಾಗಿ, ಮಕ್ಕಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಫೋಟೋಗಳಿಗೆ ‘ಲೈಕ್ಸ್’ ಮತ್ತು ‘ಕಾಮೆಂಟ್’ ಕಡಿಮೆ ಬಂದರೆ ಬೇಸರಗೊಳ್ಳುತ್ತಾರೆ. ತಮ್ಮ ಸಾಮರ್ಥ್ಯ ಮತ್ತು ವ್ಯಕ್ತಿತ್ವವನ್ನೇ ಈ ಪ್ರತಿಕ್ರಿಯೆಗಳಿಗೆ ಹೋಲಿಸಿ ನೋಡುವ ಪ್ರವೃತ್ತಿಯಿಂದ, ಮಕ್ಕಳ ಆತ್ಮವಿಶ್ವಾಸ ಕ್ರಮೇಣ ದುರ್ಬಲಗೊಳ್ಳುತ್ತದೆ.
ಸೋಷಿಯಲ್ ಮೀಡಿಯಾದಲ್ಲಿ ಅತಿಯಾಗಿ ತೊಡಗಿಕೊಳ್ಳುವ ಮಕ್ಕಳು ವಾಸ್ತವ ಜೀವನದಿಂದ ದೂರವಾಗುವ ಅಪಾಯವಿದೆ. ತಮ್ಮ ಆಸೆ-ಆಕಾಂಕ್ಷೆಗಳಿಗೆ ವಿರುದ್ಧವಾಗಿ ಏನಾದರೂ ನಡೆದರೆ ತಾಳ್ಮೆ ಕಳೆದುಕೊಳ್ಳುತ್ತಾರೆ, ಮಾನಸಿಕವಾಗಿ ಅಲೆಯಲು ಆರಂಭಿಸುತ್ತಾರೆ. ಒಂದು ಅಧ್ಯಯನದ ಪ್ರಕಾರ, 12ರಿಂದ 15 ವರ್ಷದ ಮಕ್ಕಳಲ್ಲಿ ಮೂವರಲ್ಲಿ ಒಬ್ಬರಿಗೆ ವಾರದಲ್ಲಿ ಕನಿಷ್ಠ ಒಂದು ದಿನ ನಿದ್ರೆಯ ಕೊರತೆಯ ಸಮಸ್ಯೆ ಎದುರಾಗುತ್ತದೆ. ಈ ನಿದ್ರಾಕೋಟೆಗೆ ಮುಖ್ಯ ಕಾರಣವೇ ಸಾಮಾಜಿಕ ಜಾಲತಾಣ ಬಳಕೆ ಎಂದು ತಜ್ಞರು ಹೇಳಿದ್ದಾರೆ. ಕಾರ್ಡಿಫ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯ ಪ್ರಕಾರ, ಐದು ಮಕ್ಕಳಲ್ಲಿ ಒಬ್ಬ ಮಗು ರಾತ್ರಿ ಹೊತ್ತು ಹೆಚ್ಚಿನ ಸಮಯವನ್ನು ಸೋಷಿಯಲ್ ಮೀಡಿಯಾದಲ್ಲೇ ಕಳೆಯುತ್ತದೆ. ಪರಿಣಾಮವಾಗಿ, ಶಾಲಾ ಅವಧಿಯಲ್ಲಿ ಅವರಿಗೆ ದಣಿವು, ಗಮನಕೋರತೆ ಮತ್ತು ಕಲಿಕಾ ಅಡಚಣೆಗಳು ಎದುರಾಗುತ್ತವೆ.
ಆದ್ದರಿಂದ, ಮಕ್ಕಳ ಮಾನಸಿಕ ಆರೋಗ್ಯ, ಆತ್ಮಗೌರವ ಮತ್ತು ಭವಿಷ್ಯವನ್ನು ಕಾಪಾಡಲು, ಸಾಮಾಜಿಕ ಜಾಲತಾಣ ಬಳಕೆಗೆ ನಿಯಂತ್ರಣೆ ಮತ್ತು ಜಾಗೃತಿ ಅವಶ್ಯಕ.

“ಸೋಷಿಯಲ್ ಮೀಡಿಯಾ ನಿಯಂತ್ರಣ: ಭವಿಷ್ಯ ಉಳಿಸುವ ಹೆಜ್ಜೆ”
ಟೆಕ್ನಾಲಜಿಯ ಬಳಕೆ ಅಗತ್ಯವಾದರೂ, ಅದರ ದುರುಪಯೋಗ ಮಕ್ಕಳ ಭವಿಷ್ಯಕ್ಕೆ ದೊಡ್ಡ ಅಪಾಯ. ಪೋಷಕರು ಮಾತ್ರವಲ್ಲ, ಸರ್ಕಾರವೂ ತನ್ನ ಜವಾಬ್ದಾರಿ ನಿರ್ವಹಿಸಿದಾಗ ಮಾತ್ರ ಮುಂದಿನ ಪೀಳಿಗೆಯನ್ನು ರಕ್ಷಿಸುವುದು ಸಾಧ್ಯ. ಆದ್ದರಿಂದ, ಆಸ್ಟ್ರೇಲಿಯಾದಂತೆ ಭಾರತವೂ ತಕ್ಷಣವೇ ಸೋಷಿಯಲ್ ಮೀಡಿಯಾ ನಿಯಂತ್ರಣ ಕಾನೂನು ತರಬೇಕಾಗಿದೆ — ಇದು ಮುಂದಿನ ಭಾರತವನ್ನು ಸುರಕ್ಷಿತಗೊಳಿಸುವ ಹೆಜ್ಜೆ.





