ದೆಹಲಿ: ಕರ್ನಾಟಕದಲ್ಲಿ ನಡೆಯುತ್ತಿರುವ ಕುರ್ಚಿ ಕದನಕ್ಕೆ ಉಪಹಾರ ಸಭೆಯ ನಂತರ ತಾತ್ಕಾಲಿಕ ಬ್ರೇಕ್ ಬಿದ್ದಂತೆ ಕಂಡರೂ, ದೆಹಲಿ ರಾಜಕೀಯ ವಲಯದಲ್ಲಿ ಈ ವಿಚಾರ ಮತ್ತೆ ಬಿಸಿ ವಿಚಾರವಾಗಿ ಚರ್ಚೆಗೆ ಬಂದಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಪೈಪೋಟಿ ಈಗ ‘ಪವರ್ ಶೇರಿಂಗ್’ ಎಂಬ ಹೆಸರಿನಲ್ಲಿ ಹೊಸ ಬಣ್ಣ ಪಡೆದುಕೊಂಡಿದೆ.
ದೆಹಲಿಯಲ್ಲಿ ಸೋನಿಯಾ ಗಾಂಧಿ ನಿವಾಸದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ನಾಯಕತ್ವದ ಬಗ್ಗೆ ಆಳವಾದ ಚರ್ಚೆ ನಡೆಸಿದೆ. ಸಭೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಕೆ.ಸಿ. ವೇಣುಗೋಪಾಲ್ ಹಾಜರಿದ್ದರು ಎನ್ನಲಾಗಿದೆ. ಸಿಎಂ ಪಟ್ಟದ ಬಗ್ಗೆ ನಿರ್ಣಯ ಕಾದಿರುವ ಸಂದರ್ಭದಲ್ಲಿ, “ಯಾವುದೇ ತೀರ್ಮಾನವಾಗಿಲ್ಲ, ಮುಂದಿನ ದಿನಗಳಲ್ಲಿ ಮತ್ತೆ ಸಭೆ ನಡೆಯಲಿದೆ” ಎಂದು ವೇಣುಗೋಪಾಲ್ ತಿಳಿಸಿದ್ದಾರೆ. ಕಾಂಗ್ರೆಸ್ ಒಗ್ಗಟ್ಟಿನಿಂದಿದೆ ಎಂಬ ಸಂದೇಶ ನೀಡಿದರೂ, ಅಸಮಾಧಾನದ ರಾಜಕೀಯ ವಾತಾವರಣ ಸ್ಪಷ್ಟವಾಗಿಯೇ ಕಾಣಿಸುತ್ತಿದೆ.
ಇದಕ್ಕೆ ಮಧ್ಯೆ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ನೀಡಿದ “ಇನ್ನೂ ಎರಡೂವರೆ ವರ್ಷ ಸಿದ್ದರಾಮಯ್ಯರೇ ಸಿಎಂ” ಎಂಬ ಹೇಳಿಕೆ ಪಕ್ಷದ ಒಳಕಲಹಕ್ಕೆ ಹೆಚ್ಚುವರಿ ಇಂಧನ ಸುರಿದಂತಾಗಿದೆ. ಈ ಹೇಳಿಕೆಯು ಡಿಕೆಶಿ ಬಣಕ್ಕೆ ನೇರ ಸವಾಲು ಎನ್ನಲಾಗಿದೆ. ಇದರ ಜೊತೆಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಮತ್ತಷ್ಟು ವಿವಾದ ಹುಟ್ಟುಹಾಕುವಂತೆ “ಡಿಕೆಶಿ ಸಿಎಂ ಆದರೆ, ಅವರ ಸಂಪುಟದಲ್ಲಿ ನಾನು ಸಚಿವನಾಗಲ್ಲ” ಎಂದು ಸ್ಪಷ್ಟ ಘೋಷಿಸಿದ್ದಾರೆ.
ಅದೇ ವೇಳೆ ಸಿದ್ಧರಾಮಯ್ಯ ಅವರ ಇತ್ತೀಚಿನ ಮಾತುಗಳ ಬದಲಾವಣೆ ರಾಜಕೀಯ ಕುತೂಹಲವನ್ನು ಹೆಚ್ಚಿಸಿದೆ. ಹಿಂದೆ “ಪೂರ್ಣಾವಧಿಗೆ ನಾನು ಸಿಎಂ” ಎಂದು ಹೇಳುತ್ತಿದ್ದ ಅವರು, ಬ್ರೇಕ್‌ಫಾಸ್ಟ್ ಮೀಟ್ ನಂತರ “ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ” ಎಂದು ಹೇಳಿರುವುದು ಹೈಕಮಾಂಡ್ ನಿರ್ಧಾರಕ್ಕೆ ಬದ್ದ ಹೇಳಿಕೆ ರಾಜಕೀಯ ಕುತೂಹಲ ಕಾರಣವಾಗಿದೆ.
ರಾಜ್ಯದಲ್ಲಿ ನಾಯಕರು ಮೌನವಾಗಿ ಇದ್ದರೂ, ಅವರ ಬೆಂಬಲಿಗರ ಕದನ ದಿನದಿಂದ ದಿನಕ್ಕೆ ಹೆಚ್ಚು ಸ್ಪಷ್ಟವಾಗುತ್ತಿದೆ. ಈಗ ಎಲ್ಲರ ಕಣ್ಣೂ ದೆಹಲಿಯತ್ತಿದ್ದು, ಕಾಂಗ್ರೆಸ್ ಹೈಕಮಾಂಡ್ ನೇತೃತ್ವ ಯಾವ ಟ್ವಿಸ್ಟ್ ನೀಡುತ್ತದೆ ಎಂಬುದೇ ಕರ್ನಾಟಕ ರಾಜಕೀಯದ ಮುಂದಿನ ಅಧ್ಯಾಯವಾಗಲಿದೆ.





