ಬೆಳಗಾವಿ, ಡಿಸೆಂಬರ್ 10: ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ ಇಂದು ಬೆಳಗಾವಿಯಲ್ಲಿ ಭಾರೀ ಪ್ರತಿಭಟನೆಯನ್ನು ನಡೆಸಿ, ಗ್ರಾಮೀಣ ಆಡಳಿತಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳ ತಕ್ಷಣದ ಪರಿಹಾರಕ್ಕಾಗಿ RDPR (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್) ಇಲಾಖೆಗೆ ಮನವಿ ಸಲ್ಲಿಸಿತು. ಸ್ಥಳೀಯ ಸಂಸ್ಥೆಗಳ ಕ್ಷೇತ್ರವನ್ನು ಪ್ರತಿನಿಧಿಸುವ ಶಿವಮೊಗ್ಗ ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್. ಅರುಣ್ ಅವರು ಪ್ರತಿಭಟನೆಗೆ ಆಗಮಿಸಿ, ಸದಸ್ಯರಿಗೆ ಬೆಂಬಲ ಸೂಚಿಸಿದರು.
ಆಂದೋಲನಕಾರರ ಪರವಾಗಿ ಮಾತನಾಡಿದ ಅರುಣ್, ಗ್ರಾಮ ಪಂಚಾಯಿತಿ ವ್ಯವಸ್ಥೆ ಬಲವಾಗಿರುವುದು ಗ್ರಾಮೀಣ ಅಭಿವೃದ್ಧಿಯ ಮೂಲ ಶಕ್ತಿ ಎಂದು ಸ್ಮರಿಸಿದರು. “ಗ್ರಾಮ ಪಂಚಾಯಿತಿ ಸದಸ್ಯರ ಹಕ್ಕು ಹಾಗೂ ಹಿತ ರಕ್ಷಿಸುವುದು ನಮ್ಮ ಹೊಣೆಗಾರಿಕೆ. ನಾವೆಲ್ಲರೂ ಒಟ್ಟಾಗಿ ಬಂದಾಗ ಮಾತ್ರ ಪಂಚಾಯಿತಿ ವ್ಯವಸ್ಥೆಗೆ ಬೇಕಾದ ಗೌರವ ದೊರೆಯುತ್ತದೆ,” ಎಂದು ಅವರು ತಿಳಿಸಿದರು. ಪ್ರತಿಭಟನೆಯಲ್ಲಿ ಸದಸ್ಯರು ಮಂಡಿಸಿದ ಬೇಡಿಕೆಗಳನ್ನು ಅಧಿವೇಶನದಲ್ಲಿಯೇ ಪ್ರಸ್ತಾಪಿಸುವುದಾಗಿ ಅವರು ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟವು ಸರ್ಕಾರಕ್ಕೆ ಸಲ್ಲಿಸಿದ ಬೇಡಿಕೆಗಳಲ್ಲಿ ಗ್ರಾಮೀಣ ಆರ್ಥಿಕ ಹಾಗೂ ಆಡಳಿತಾತ್ಮಕ ವ್ಯವಸ್ಥೆಯ ಬಲವರ್ಧನೆಗೆ ಸಂಬಂಧಿಸಿದ ಪ್ರಮುಖ ಅಂಶಗಳು ಒಳಗೊಂಡಿವೆ. 15ನೇ ಹಣಕಾಸು ಆಯೋಗದ 2024–25 ಸಾಲಿನ ಅನುದಾನವು ಇನ್ನೂ ಬಿಡುಗಡೆಯಾಗದೇ ಇರುವುದರಿಂದ, ಅನೇಕ ಗ್ರಾಮೀಣ ಅಭಿವೃದ್ಧಿ ಕಾಮಗಾರಿಗಳು ಅಡ್ಡಿಪಡಿಸಿದಂತಾಗಿದೆ. ಇದೇ ರೀತಿ, ಉದ್ಯೋಗ ಖಾತ್ರಿ ಯೋಜನೆ (MGNREGA)ಗೆ ಸಂಬಂಧಿಸಿದ ಸಾಮಗ್ರಿ ವೆಚ್ಚ ಪಾವತಿ ವಿಳಂಬದಿಂದ, ಪಂಚಾಯಿತಿಗಳು ಕೆಲಸಗಳನ್ನು ಮುಂದುವರಿಸುವಲ್ಲಿ ಹಣಕಾಸು ಸಂಕಷ್ಟಕ್ಕೆ ಸಿಲುಕಿವೆ, ಇದರಿಂದ ಕಾರ್ಮಿಕರಿಗೆ ತೊಂದರೆ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ನಿಗದಿತ ಅವಧಿಯಲ್ಲೇ ನಡೆಸಬೇಕೆಂಬ ಬೇಡಿಕೆ ಸ್ಥಳೀಯ ಆಡಳಿತದ ನಿರಂತರತೆ ಮತ್ತು ಜವಾಬ್ದಾರಿಯುತ ಕಾರ್ಯವೈಖರಿಗಾಗಿ ಮಹತ್ವದ್ದಾಗಿದೆ. ಮತ್ತೊಂದು ಸಾಮಾಜಿಕ ಅಂಶವಾಗಿ, ಘನತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಂಜೀವಿನಿ ಮಹಿಳೆಯರಿಗೆ ರಾಜ್ಯ ಸರ್ಕಾರವು ಮಾಸಿಕ ಗೌರವಧನ ನೀಡಬೇಕು ಎಂಬುದು ಪ್ರಮುಖ ಮನವಿ. ಗ್ರಾಮೀಣ ಸ್ವಚ್ಛತೆಯಲ್ಲಿ ಮಹತ್ತರ ಪಾತ್ರವಹಿಸುತ್ತಿರುವ ಈ ಮಹಿಳೆಯರ ಸೇವೆಗೆ ಸಮರ್ಪಕ ಗೌರವ ಮತ್ತು ಭದ್ರತೆ ನೀಡಬೇಕೆಂಬ ಒತ್ತಾಯವನ್ನು ಒಕ್ಕೂಟ ಮುಂದಿಟ್ಟಿದೆ.
ಪ್ರತಿಭಟನಾ ಮಂಡಳಿಯ ಪ್ರತಿನಿಧಿಗಳೊಂದಿಗೆ RDPR ಇಲಾಖೆಯ ಕಾರ್ಯದರ್ಶಿ ರಂದೀಪ್ ಅವರನ್ನು ಭೇಟಿ ಮಾಡಿದ ಅರುಣ್ ಹಾಗೂ ಸದಸ್ಯರು, ಬೇಡಿಕೆಗಳ ಮನವಿಯನ್ನು ಅಧಿಕೃತವಾಗಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ಮಂಜೇಗೌಡ, ಸುನಿಲ್ ಗೌಡ ಪಾಟೀಲ ರವರು ಉಪಸ್ಥಿತರಿದ್ದರು.





