ಬೆಳಗಾವಿ: ರಾಜ್ಯದ ಕಾರ್ಯನಿರತ ಪತ್ರಕರ್ತರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ವತಿಯಿಂದ ಡಿಸೆಂಬರ್ 15 ರಂದು ಬೆಳಗಾವಿಯ ಸುವರ್ಣಾ ಸೌಧದ ಮುಂಭಾಗ ಬೃಹತ್ ಪ್ರತಿಭಟನೆ ನಡೆಯಲಿದೆ.
ಈ ಹೋರಾಟಕ್ಕೆ ಸಂಬಂಧಿಸಿದ ಅಧಿಕೃತ ಅನುಮತಿಯನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ನೀಡಿರುವುದಾಗಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಪ್ರಕಟಿಸಿದ್ದಾರೆ. ಪತ್ರಕರ್ತರ ಸುರಕ್ಷತೆ, ವೃತ್ತಿಪರ ಸೌಲಭ್ಯಗಳು ಹಾಗೂ ಹಿತಾಸಕ್ತಿಗಾಗಿ ಈ ಹೋರಾಟ ಮಹತ್ವದ ಹೆಜ್ಜೆಯಾಗಿದೆ.
ಸಮಾಜಕ್ಕೆ ಧ್ವನಿ ನೀಡುವ ಪತ್ರಕರ್ತರು, ಇಂದು ತಮ್ಮ ಧ್ವನಿಗೇ ರಕ್ಷಣೆಯನ್ನು ಬೇಡಬೇಕಾದ ಸ್ಥಿತಿಗೆ ತಲುಪಿರುವುದು ಪ್ರಜಾಪ್ರಭುತ್ವಕ್ಕೆ ಎಚ್ಚರಿಕೆಯ ಘಂಟೆ. ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಸೇತುವೆಯಾಗಿರುವ ಮಾಧ್ಯಮ, ತನ್ನ ಬದುಕಿನ ಭದ್ರತೆಯಿಗಾಗಿ ಹೋರಾಡಬೇಕು ಎನ್ನುವುದು, ರಾಜ್ಯದ ಮಾಧ್ಯಮ ನೀತಿ ಎಷ್ಟು ದುರ್ಬಲವಾಗಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿ. ಪತ್ರಕರ್ತರ ರಕ್ಷಣೆಯಿಲ್ಲದೆ ಸತ್ಯ ಸುರಕ್ಷಿತವಲ್ಲ; ಸತ್ಯಕ್ಕೆ ರಕ್ಷಣೆಯಿಲ್ಲದಾಗ, ಪ್ರಜಾಪ್ರಭುತ್ವಕ್ಕೂ ಭದ್ರತೆ ಇರುವುದಿಲ್ಲ.

ಜನರ ಪರವಾಗಿ ಪ್ರಶ್ನೆ ಕೇಳುವ ಹೊಣೆಗಾರಿಕೆಯನ್ನು ಹೊತ್ತಿರುವ ಮಾಧ್ಯಮವೇ, ಇಂದು ತಮ್ಮ ಪ್ರಾಣರಕ್ಷಣೆ ಮತ್ತು ವೃತ್ತಿಗೌರವಕ್ಕಾಗಿ ಸರ್ಕಾರದ ಮುಂದೆ ಹಕ್ಕು ಕೇಳುವ ಸ್ಥಿತಿಗೆ ತಳ್ಳಲ್ಪಟ್ಟಿದೆ. ಸಾರ್ವಜನಿಕ ಹಿತಾಸ್ತಿಯನ್ನು ಕಾಪಾಡಬೇಕಾದ ಆಡಳಿತವನ್ನು ಪ್ರಶ್ನಿಸುವ ಪತ್ರಕರ್ತರಿಗೆ ಸುರಕ್ಷತಾ ಕಾನೂನು, ವೃತ್ತಿಪರ ರಕ್ಷಣೆ ಮತ್ತು ನೈತಿಕ ಸೌಲಭ್ಯವಿಲ್ಲದಿರುವುದು, ರಾಜ್ಯದ ಮಾಧ್ಯಮ ನೀತಿ ಕೇವಲ ಜಾರಿಯಿಲ್ಲದ ಖಾಲಿ ಘೋಷಣೆಯಾಗಿ ಉಳಿದಿದೆ ಎಂಬ ಕಠೋರ ಸತ್ಯವನ್ನು ಬಯಲಾಗಿಸುತ್ತದೆ. ಪತ್ರಕರ್ತರ ಹಕ್ಕುಗಳನ್ನು ವರ್ಷಗಳಿಂದ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುವ ಸರ್ಕಾರ, ಸಾರ್ವಜನಿಕರ ಹಕ್ಕುಗಳನ್ನು ರಕ್ಷಿಸುವ ತನ್ನ ಕಾನೂನು ಕರ್ತವ್ಯವನ್ನು ತಪ್ಪಿಸಿದೆ ಎಂಬುದು ಸ್ಪಷ್ಟ. ಈ ಕಾನೂನುಬದ್ಧ ಹಕ್ಕುಗಳ ಜಾರಿಗೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ರವರ ನೇತೃತ್ವದಲ್ಲಿ ಕಠಿಣ ಹೋರಾಟ ನಡೆಯುತ್ತಿದೆ; ಇದು ಕೇವಲ ಪತ್ರಕರ್ತರ ಪರ ಹೋರಾಟವಲ್ಲ, ಜನರ ಮಾಹಿತಿ ಸ್ವಾತಂತ್ರ್ಯದ ರಕ್ಷಣೆಯ ಹೋರಾಟವೂ ಆಗಿದೆ.
ಹೋರಾಟದ ಪ್ರಮುಖ ಬೇಡಿಕೆಗಳು
- IPRGI–RNI ಮಾನ್ಯತೆ ಹೊಂದಿರುವ ಎಲ್ಲಾ ಪತ್ರಕರ್ತರಿಗೆ ರಾಜ್ಯ ವ್ಯಾಪ್ತಿಯಲ್ಲಿ ಉಚಿತ ಬಸ್ ಪಾಸ್ ವ್ಯವಸ್ಥೆ.
- ಪತ್ರಕರ್ತರ ರಕ್ಷಣಾ ಕಾಯ್ದೆ ತಕ್ಷಣ ಜಾರಿಗೊಳಿಸುವುದು.
- ವಾರ್ತಾ ಇಲಾಖೆಯಲ್ಲಿ ಖಾಲಿ ಇರುವ 300 ಕ್ಕೂ ಅಧಿಕ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವುದು.
- IPRGI–RNI ಪತ್ರಕರ್ತರಿಗೆ ವಿಧಾನಸೌಧ, ವಿಕಾಸಸೌಧ ಪ್ರವೇಶಕ್ಕೆ ಮುಕ್ತ ಅವಕಾಶ.
- ರಾಜ್ಯದ ಪ್ರತಿಯೊಬ್ಬ ಪತ್ರಕರ್ತರಿಗೆ ಜೀವ ವಿಮೆ.
- ಜಿಲ್ಲಾ ಪತ್ರಿಕಾ ಭವನಗಳನ್ನು ಯಾವುದೇ ಸಂಘಟನೆಗೆ ನೀಡದೆ ಜಿಲ್ಲಾಧಿಕಾರಿ ಸುಪರ್ದಿಯಲ್ಲಿ ಇಲಾಖೆಯ ಮೂಲಕ ನಿರ್ವಹಣೆ.
- ಪತ್ರಕರ್ತರ ಮೇಲೆ ಕೆಲ ಪೊಲೀಸ್ ಅಧಿಕಾರಿಗಳಿಂದ ನಡೆಯುವ ದೌರ್ಜನ್ಯಕ್ಕೆ ತಡೆ.
- ರಾಜ್ಯ ಪತ್ರಕರ್ತರ ಹಿತಕ್ಕಾಗಿ ಪತ್ರಕರ್ತರ ಅಭಿವೃದ್ಧಿ ನಿಗಮ ಸ್ಥಾಪನೆ.
- ಕರ್ತವ್ಯ ನಿರ್ವಹಣೆ ವೇಳೆ ಸಾವಿಗೀಡಾದ ಪತ್ರಕರ್ತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ.
- ನಿಯಮ 7 ರ ಅಡಿಯಲ್ಲಿ ಮಾಸಾಶನದಿಂದ ವಂಚಿತರಾಗಿರುವ ಪಾಕ್ಷಿಕ, ಮಾಸ ಪತ್ರಿಕೆಗಳಿಗೆ ನ್ಯಾಯಯುತ ಸೌಲಭ್ಯ.
- ಪತ್ರಕರ್ತರ ಮಾಸಾಶನ ನಿಯಮ ಸರಳೀಕರಣ ಹಾಗೂ ಹಿರಿಯ ಪತ್ರಕರ್ತರಿಗೆ ನೆರವು.
- ಪತ್ರಕರ್ತರು ತಮ್ಮ ಸ್ವಂತ ವಾಹನಗಳಲ್ಲಿ ಸಂಚಾರ ಮಾಡುವಾಗ ಉಚಿತ ಟೋಲ್ ವ್ಯವಸ್ಥೆ.
ಈ ಹೋರಾಟ ಕೇವಲ ಪತ್ರಕರ್ತರ ಹಕ್ಕುಗಳ ಪ್ರಶ್ನೆಯಲ್ಲ, ಸಮಾಜಕ್ಕೆ ನಿಷ್ಠೆಯಿಂದ ಸೇವೆ ನೀಡುವ ಮಾಧ್ಯಮದ ಅಸ್ತಿತ್ವ ರಕ್ಷಣೆಯ ಹೊಣೆ. ಜನರ ಕಿರುಕುಳ, ಸತ್ಯ ಮತ್ತು ನ್ಯಾಯದ ಧ್ವನಿಯನ್ನು ಹೊತ್ತಿರುವ ಮಾಧ್ಯಮ ದುರ್ಬಲವಾದರೆ, ಸಮಾಜದ ಧ್ವನಿಯೇ ಮೌನವಾಗುತ್ತದೆ. ಆದ್ದರಿಂದ ಇದು ಸಮಯೋಚಿತ ಬೇಡಿಕೆ ಅಲ್ಲ — ಎಚ್ಚರಿಕೆ ಘಂಟೆಯ ಕೂಗಾಗಿದೆ.
ರಾತ್ರಿ–ಹಗಲು, ತಮ್ಮ ಕುಟುಂಬವನ್ನು ಲೆಕ್ಕಿಸದೆ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ, ತಾಲ್ಲೂಕಿನಲ್ಲಿ ಪತ್ರಕರ್ತರ ಹಿತಕ್ಕಾಗಿ ನಿರಂತರ ಹೋರಾಟಕ್ಕೆ ನಿಂತಿರುವ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ರವರ ಕೈ ಬಲಪಡಿಸುವುದು ಈಗ ನಮ್ಮ ಜವಾಬ್ದಾರಿ, ನಮ್ಮ ಕರ್ತವ್ಯ.
ಎಲ್ಲ ಸಂಘಟನೆಗಳ ಪತ್ರಕರ್ತರು, ಕಾರ್ಯಕರ್ತರು ಮತ್ತು ಮಾಧ್ಯಮ ಸ್ನೇಹಿತರು ಪೋಸ್ಟರ್‌ಗಳು, ಪತ್ರಿಕಾ ಹೇಳಿಕೆಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಒಗ್ಗಟ್ಟಿನ ಘೋಷಣೆಯಿಂದ ಈ ಹೋರಾಟಕ್ಕೆ ಬೆಂಬಲ ನೀಡಬೇಕು. ನಮ್ಮ ಸಮಸ್ಯೆಗಳಿಗೆ ಇನ್ನೂ ಯಾರಾದರೂ ಮಾತಾಡುತ್ತಾರೆ ಎಂಬ ನಿರೀಕ್ಷೆಯಲ್ಲಿರದೇ, ನಾವು ಮಾತಾಡುವ ಕಾಲ ಬಂದಿದೆ; ಹೋರಾಡುವ ಕಾಲ ಬಂದಿದೆ; ಎಲ್ಲರೂ ಒಂದಾಗಿ ನಿಂತಾಗ ಮಾತ್ರ ಸರ್ಕಾರ ಕೇಳುತ್ತದೆ.
ಒಂದಾಗೋಣ — ಪತ್ರಿಕಾ ಸ್ವಾತಂತ್ರ್ಯ, ಸುರಕ್ಷತೆ ಮತ್ತು ಗೌರವಕ್ಕಾಗಿ.
ಸಂಪರ್ಕ:
ಬಂಗ್ಲೆ ಮಲ್ಲಿಕಾರ್ಜುನ್
ರಾಜ್ಯಾಧ್ಯಕ್ಷರು – ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ (ರಿ) ಬೆಂಗಳೂರು. ಮೊ:9535290300
ಡಿ.ಜಿ.ನಾಗರಾಜ್
ಅಧ್ಯಕ್ಷರು- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ (ರಿ), ಜಿಲ್ಲಾ ಘಟಕ ಶಿವಮೊಗ್ಗ. ಮೊ:9449063043
ಕೆ.ಎಂ.ಸತೀಶ್‌ಗೌಡ
ಪ್ರಧಾನ ಕಾರ್ಯದರ್ಶಿ- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ (ರಿ), ಜಿಲ್ಲಾ ಘಟಕ ಶಿವಮೊಗ್ಗ. ಮೊ: 9972221153





