ನವದೆಹಲಿ, ಡಿ.15: ವೋಟ್ ಚೋರಿ ಎಂಬ ನೆಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಹಾಗೂ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಸುಳ್ಳಿನ ಸಂಕಥನಗಳನ್ನು ಸೃಷ್ಟಿಸುತ್ತಿರುವ ಪ್ರತಿಪಕ್ಷಗಳು ಮುಂದಿನ ದಿನಗಳಲ್ಲಿ ಅದರ ಘೋರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಗಂಭೀರ ಎಚ್ಚರಿಕೆ ನೀಡಿದರು.
ಸೋಮವಾರ ರಾಜ್ಯಸಭೆಯ ಚಳಿಗಾಲದ ಅಧಿವೇಶನದಲ್ಲಿ ವೋಟ್ ಚೋರಿ ವಿಷಯದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಪಕ್ಷಗಳು ನಿರಂತರವಾಗಿ ಸುಳ್ಳಿನ ಕಥೆಗಳನ್ನು ಪ್ರಚಾರ ಮಾಡುತ್ತಾ, ಮತದಾರರ ಮನಸ್ಸಿನಲ್ಲಿ ಅನುಮಾನ ಹುಟ್ಟು ಹಾಕುವ ಪ್ರಯತ್ನ ನಡೆಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಅಪಪ್ರಚಾರದಿಂದ ಪ್ರತಿಪಕ್ಷಗಳಿಗೆ ಯಾವ ಲಾಭವೂ ಆಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಾರ್ವಜನಿಕ ವೇದಿಕೆಗಳಲ್ಲಿ ಮತ್ತು ಬೀದಿಗಳಲ್ಲಿ ಅಸಂಬದ್ಧ ಟೀಕೆಗಳನ್ನು ಮಾಡುತ್ತಿರುವುದನ್ನು ಖಂಡಿಸಿದ ದೇವೇಗೌಡರು, “ಭಾರತವು ಅತ್ಯಂತ ದೊಡ್ಡ ರಾಷ್ಟ್ರ. ಕಾಂಗ್ರೆಸ್ ಪಕ್ಷವು ಸದ್ಯ ಮೂರು ರಾಜ್ಯಗಳಲ್ಲಿ ಮಾತ್ರ ಅಧಿಕಾರದಲ್ಲಿದೆ. ನನ್ನ ಪ್ರತಿಪಕ್ಷ ಸ್ನೇಹಿತರು ದಯವಿಟ್ಟು ನೆನಪಿಟ್ಟುಕೊಳ್ಳಿ – ‘ವೋಟ್ ಚೋರಿ’ ಎಂಬ ಪದ ಬಳಕೆ ನಿಮ್ಮದೇ ಭವಿಷ್ಯಕ್ಕೆ ತೊಂದರೆಯಾಗಲಿದೆ. ಈ ರೀತಿಯ ಆರೋಪಗಳಿಂದ ನೀವು ಯಾವುದೇ ಯುದ್ಧವನ್ನು ಗೆಲ್ಲಲು ಸಾಧ್ಯವಿಲ್ಲ,” ಎಂದು ಕಟುವಾಗಿ ಹೇಳಿದರು.
‘ವೋಟ್ ಚೋರಿ’ ಎಂಬ ಅಪಪ್ರಚಾರದ ಮೂಲಕ ಪ್ರಧಾನಿ ಮೋದಿ ಅವರ ನಾಯಕತ್ವವನ್ನು ದೂಷಿಸಿ, ಮತದಾರರ ಮನಸ್ಸಿನಲ್ಲಿ ಸಂಶಯ ಮೂಡಿಸುವುದರಿಂದ ಪ್ರತಿಪಕ್ಷಗಳು ಏನು ಸಾಧಿಸಲು ಹೊರಟಿವೆ ಎಂದು ಪ್ರಶ್ನಿಸಿದ ಅವರು, “ನಿಮ್ಮ ಮನಸ್ಸಿಗೆ ಏನಾಗಿದೆ? ಸಮಸ್ಯೆಗಳಿದ್ದರೆ ಅವನ್ನು ಸರಿಪಡಿಸಿಕೊಳ್ಳಿ,” ಎಂದು ಪ್ರತಿಪಕ್ಷ ನಾಯಕರಿಗೆ ಕಿವಿಮಾತು ಹೇಳಿದರು.
ತಮ್ಮ ಏಳು ದಶಕಕ್ಕೂ ಅಧಿಕ ಸಾರ್ವಜನಿಕ ಜೀವನವನ್ನು ಉಲ್ಲೇಖಿಸಿದ ದೇವೇಗೌಡರು, “ನಾನು ಅನೇಕ ಚುನಾವಣೆಗಳಲ್ಲಿ ಸೋಲು-ಗೆಲುವು ಕಂಡಿದ್ದೇನೆ. ಆದರೆ ಎಂದಿಗೂ ಮತಗಳ್ಳತನ ಎಂಬ ಆರೋಪಗಳನ್ನು ಮಾಡಿಲ್ಲ,” ಎಂದು ಹೇಳಿದರು. ಕೇರಳದಲ್ಲಿ 18,000 ಮತದಾರರ ಸೇರ್ಪಡೆಗೆ ಸಂಬಂಧಿಸಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಬರೆದಿದ್ದ ಪತ್ರವನ್ನು ಉಲ್ಲೇಖಿಸಿ, ಹಿಂದೆಯೂ ಚುನಾವಣಾ ವ್ಯವಸ್ಥೆಯಲ್ಲಿ ಕೆಲ ಲೋಪಗಳು ಇದ್ದವು ಎಂಬುದನ್ನು ಅವರು ಸ್ಮರಿಸಿದರು.
ಮತದಾರರ ಪಟ್ಟಿಯಲ್ಲಿನ ಲೋಪಗಳನ್ನು ಪ್ರಸ್ತಾಪಿಸಿದರೂ ಕಾಂಗ್ರೆಸ್ ಪಕ್ಷವು ಇತ್ತೀಚಿನ ಬಿಹಾರ ಚುನಾವಣೆಯಲ್ಲಿ ಸೋಲು ಅನುಭವಿಸಿದೆ ಎಂದು ವ್ಯಂಗ್ಯವಾಡಿದ ದೇವೇಗೌಡರು, ಮತದಾರರ ಪಟ್ಟಿಯ ಕೂಲಂಕಷ ಪರಿಶೀಲನೆಯ ನಂತರವೂ ಆ ರಾಜ್ಯದಲ್ಲಿ ಏನಾಯಿತು ಎಂಬುದನ್ನು ಪ್ರತಿಪಕ್ಷ ನಾಯಕರು ಆತ್ಮಪರಿಶೀಲನೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಬಿಹಾರದಲ್ಲಿ ಕಾಂಗ್ರೆಸ್‌ಗೆ ಕೇವಲ ಆರು ಶಾಸಕರು ಮಾತ್ರ ಸಿಕ್ಕಿದ್ದಾರೆ ಎಂಬುದನ್ನೂ ಅವರು ಉಲ್ಲೇಖಿಸಿದರು.
ಮತದಾರರ ಪಟ್ಟಿಯ ಪರಿಷ್ಕರಣೆ ವಿಚಾರದಲ್ಲಿ ಪ್ರಧಾನಿಯವರ ಮೇಲೆ ಆರೋಪ ಮಾಡಲು ಪ್ರತಿಪಕ್ಷಗಳು ಏಕೆ ಆಸಕ್ತಿ ತೋರುತ್ತಿವೆ ಎಂದು ಪ್ರಶ್ನಿಸಿದ ಅವರು, ದೇಶದಲ್ಲಿ ಚುನಾವಣಾ ಆಯೋಗವೂ ಇದೆ, ಸುಪ್ರೀಂ ಕೋರ್ಟ್ ಕೂಡ ಇದೆ. ಯಾವುದೇ ಲೋಪಗಳನ್ನು ಸರಿಪಡಿಸಲು ಚುನಾವಣಾ ಆಯೋಗವು ರಾಜ್ಯ ಘಟಕಗಳಿಗೆ ಈಗಾಗಲೇ ನಿರ್ದೇಶನ ನೀಡಿದೆ ಎಂದು ಒತ್ತಿ ಹೇಳಿದರು.
ರಾಷ್ಟ್ರದ ಜನರು ನರೇಂದ್ರ ಮೋದಿ ಅವರ ಸರ್ಕಾರದ ಮೇಲೆ ಸಂಪೂರ್ಣ ವಿಶ್ವಾಸ ಹೊಂದಿದ್ದಾರೆ ಎಂದು ಹೇಳಿದ ದೇವೇಗೌಡರು, ಮುಂದಿನ ಲೋಕಸಭೆ ಚುನಾವಣೆಯ ಬಳಿಕವೂ ಮೋದಿ ಮತ್ತೆ ಪ್ರಧಾನಿಯಾಗಿ ಅಧಿಕಾರಕ್ಕೆ ಬರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.





