ನ್ಯಾಮತಿ: ವಿದ್ಯುಚ್ಛಕ್ತಿ ಮಾನವನ ದಿನನಿತ್ಯದ ಜೀವನಕ್ಕೆ ಅವಿಭಾಜ್ಯವಾಗಿದ್ದರೂ, ಅಜಾಗ್ರತೆಯಿಂದ ಬಳಕೆಯಾದರೆ ಅದು ಪ್ರಾಣಾಪಾಯಕ್ಕೂ ಕಾರಣವಾಗುವ ಶಕ್ತಿಯಾಗುತ್ತದೆ. ಈ ಅರಿವನ್ನು ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲೇ ಮೂಡಿಸುವ ಉದ್ದೇಶದಿಂದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಹಾಗೂ ಕರ್ನಾಟಕ ಪಬ್ಲಿಕ್ ಶಾಲೆ, ನ್ಯಾಮತಿ ಇವರ ಸಹಯೋಗದಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳು ಹಾಗೂ ತಾಲ್ಲೂಕು ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ವಿದ್ಯುಚ್ಛಕ್ತಿ ಮಾನವನ ಜೀವನವನ್ನು ಸುಗಮಗೊಳಿಸುವ ಶಕ್ತಿಯಾಗಿದ್ದರೂ, ಅಜಾಗ್ರತೆ ಮತ್ತು ನಿರ್ಲಕ್ಷ್ಯದಿಂದ ಬಳಕೆಯಾದರೆ ಅದು ಕ್ಷಣಾರ್ಧದಲ್ಲೇ ಜೀವ ಹಿಂಡುವ ಮಾರಕ ಶಕ್ತಿಯಾಗುತ್ತದೆ. ಈ ಕಠಿಣ ಸತ್ಯವನ್ನು ಸಮಾಜದ ಪ್ರತಿಯೊಬ್ಬರೂ ಅರಿತುಕೊಳ್ಳಬೇಕಾದ ಅಗತ್ಯವಿದ್ದು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಸ್ವಯಂ ವಿದ್ಯುತ್ ರಿಪೇರಿ ಪ್ರಯತ್ನಗಳು ಭಾರೀ ಅವಘಡಗಳಿಗೆ ಕಾರಣವಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ.

ಈ ಹಿನ್ನೆಲೆಯಲ್ಲೇ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವತಿಯಿಂದ ಶಾಲಾ ಮಕ್ಕಳಲ್ಲಿ ವಿದ್ಯುತ್ ಸುರಕ್ಷತಾ ಅರಿವು ಮೂಡಿಸಿ, ಅವರ ಮೂಲಕ ಪೋಷಕರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಹರಡುವ ಮಹತ್ವದ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಅದರ ಅಂಗವಾಗಿ ನ್ಯಾಮತಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಲಾಯಿತು.

ಮನೆಯಲ್ಲಿನ ವಿದ್ಯುತ್ ತೊಂದರೆಗಳನ್ನು “ನಾವು ಮಾಡಿಕೊಳ್ಳಬಹುದು” ಎಂಬ ತಪ್ಪು ಭಾವನೆಯೇ ಅನೇಕ ಅಪಘಾತಗಳಿಗೆ ಕಾರಣವಾಗುತ್ತಿದೆ. ಜೀವಕ್ಕೆ ಅಪಾಯ ತಂದೊಡ್ಡುವ ಇಂತಹ ಸಾಹಸಗಳನ್ನು ಯಾವುದೇ ಕಾರಣಕ್ಕೂ ಕೈಗೊಳ್ಳಬಾರದು ಎಂಬ ಸಂದೇಶವನ್ನು ಮಕ್ಕಳ ಮನಸ್ಸಿನಲ್ಲಿ ಗಟ್ಟಿಯಾಗಿ ಬಿತ್ತುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಮಕ್ಕಳಿಂದ ಈ ಸಂದೇಶ ಮನೆಮನೆಗೆ ತಲುಪಿದಾಗ ಮಾತ್ರ ವಿದ್ಯುತ್ ಅವಘಡಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯ ಎಂಬ ನಿಲುವಿನಿಂದಲೇ ಬೆಸ್ಕಾಂ ಈ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿದೆ. ನ್ಯಾಮತಿ ಬೆಸ್ಕಾಂ ವಿಭಾಗದಲ್ಲಿ ಈ ವರ್ಷ ಯಾವುದೇ ವಿದ್ಯುತ್ ಅವಘಡಗಳು ಸಂಭವಿಸಿಲ್ಲ ಎಂಬುದು ಸಂತೋಷದ ಸಂಗತಿ. ಆದರೆ ಇದರಲ್ಲಿ ಅಲಕ್ಷ್ಯ ವಹಿಸದೇ, “ಅವಘಡಗಳು ಆಗಲಿಲ್ಲ” ಎಂಬ ಆತ್ಮತೃಪ್ತಿಯ ಬದಲು “ಮುಂದೆಯೂ ಆಗದಂತೆ ತಡೆಯೋಣ” ಎಂಬ ಸಂಕಲ್ಪದೊಂದಿಗೆ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀನಿವಾಸ್ ಬಿ.ಕೆ. ಅವರು ಸ್ಪಷ್ಟಪಡಿಸಿದರು.
ಕರ್ನಾಟಕ ಪಬ್ಲಿಕ್ ಶಾಲೆಯ ಹಿರಿಯ ಸಹ ಶಿಕ್ಷಕ ಕೃಷ್ಣನಾಯ್ಕ್ ಕೆ. ಅವರು ಮಾತನಾಡಿ, “ಮಕ್ಕಳಲ್ಲಿ ಮೂಡುವ ಅರಿವು ಕೇವಲ ಪಠ್ಯಕ್ಕೆ ಸೀಮಿತವಾಗದೆ, ಕುಟುಂಬ ಮತ್ತು ಸಮಾಜದ ಸುರಕ್ಷತೆಗೆ ಕಾರಣವಾಗಬೇಕು” ಎಂದು ಕರೆ ನೀಡಿದರು.
ಪರೀಕ್ಷಾ ಪೂರ್ವಭಾವಿಯಾಗಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಬೆಸ್ಕಾಂ ಶಾಖಾಧಿಕಾರಿಗಳಾದ ಕೆ.ಬಿ. ಹುತ್ತೇಶ್ ನಾಯಕ್ (ಕತ್ತಿಗೆ), ರಾಘವೇಂದ್ರ ಬಿ. (ಚೀಲೂರು), ಕುಮಾರಸ್ವಾಮಿ (ನ್ಯಾಮತಿ ಘಟಕ–1), ಯೋಗೇಶ್ (ನ್ಯಾಮತಿ ಘಟಕ–2), ವೆಂಕಟೇಶ್ (ಸೌಳಂಗ), ಶಿವಕುಮಾರ್ (ತಾಂತ್ರಿಕ ಶಾಖೆ) ಹಾಗೂ ಕರ್ನಾಟಕ ಪಬ್ಲಿಕ್ ಶಾಲೆಯ ಹಿರಿಯ ಸಹ ಶಿಕ್ಷಕ ಕೃಷ್ಣನಾಯ್ಕ್ ಕೆ. ಉಪಸ್ಥಿತರಿದ್ದರು. ವಿದ್ಯುತ್ ಸುರಕ್ಷತೆ, ಅಪಘಾತಗಳ ಸಾಧ್ಯತೆ ಮತ್ತು ಅವುಗಳನ್ನು ತಪ್ಪಿಸುವ ಮಾರ್ಗಗಳ ಬಗ್ಗೆ ಮಕ್ಕಳಿಗೆ ವಿವರವಾಗಿ ಮಾಹಿತಿ ನೀಡಲಾಯಿತು.

ಪ್ರಬಂಧ ಸ್ಪರ್ಧೆಯಲ್ಲಿ 6 ರಿಂದ 8ನೇ ತರಗತಿ ವಿಭಾಗದಲ್ಲಿ ಲಾವಣ್ಯ ಎ.ಎಸ್. (ನ್ಯಾಮತಿ) ಪ್ರಥಮ ಸ್ಥಾನ, ಅದ್ವಿಕ್ ಕಾವ್ಯ ಎ.ಟಿ. (ನ್ಯಾಮತಿ) ದ್ವಿತೀಯ ಸ್ಥಾನ ಹಾಗೂ ಮಾನಸ ಎನ್.ಎಸ್. (ಬೆಳಗುತ್ತಿ) ತೃತೀಯ ಸ್ಥಾನ ಪಡೆದುಕೊಂಡರು. 9 ರಿಂದ 10ನೇ ತರಗತಿ ವಿಭಾಗದಲ್ಲಿ ಕಸ್ತೂರಿ ಹೆಚ್.ಎಸ್. (ನ್ಯಾಮತಿ) ಪ್ರಥಮ ಸ್ಥಾನ, ಲಾವಣ್ಯ ಎಂ. (ಟಿ.ಜಿ. ಹಳ್ಳಿ) ದ್ವಿತೀಯ ಸ್ಥಾನ ಹಾಗೂ ಕೋಮಲಾ (ಬೆಳಗುತ್ತಿ) ತೃತೀಯ ಸ್ಥಾನ ಗಳಿಸಿದರು. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನಗಳನ್ನು ವಿತರಿಸಿ ಪ್ರೋತ್ಸಾಹಿಸಲಾಯಿತು.
ವಿದ್ಯುತ್ ಅವಘಡಗಳಂತಹ ಅನಾಹುತಗಳನ್ನು ತಡೆಯಲು ಕೇವಲ ಇಲಾಖೆಯಷ್ಟೇ ಅಲ್ಲ, ಸಾರ್ವಜನಿಕರೂ ಸಹ ಜವಾಬ್ದಾರಿಯಿಂದ ವರ್ತಿಸಬೇಕು ಎಂಬ ಸಂದೇಶವನ್ನು ಈ ಕಾರ್ಯಕ್ರಮ ಪರಿಣಾಮಕಾರಿಯಾಗಿ ಸಾರಿತು. ಮಕ್ಕಳಿಂದ ಮನೆಮನೆಗೆ ವಿದ್ಯುತ್ ಸುರಕ್ಷತಾ ಅರಿವು ತಲುಪುವಂತೆ ಮಾಡುವ ಈ ಪ್ರಯತ್ನವು ಸಮಾಜಕ್ಕೆ ಮಾದರಿಯಾಗುವಂತಹ ಮಹತ್ವದ ಹೆಜ್ಜೆಯಾಗಿದೆ.





