ಶಿವಮೊಗ್ಗ: ನವೆಂಬರ್ 1ರಂದು ಬೆಳಗಾವಿಯಲ್ಲಿ ನಡೆದ 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಗಳು ಸಂಪೂರ್ಣ ಶಾಂತಿ, ಸೌಹಾರ್ದತೆ ಹಾಗೂ ಸಂವಿಧಾನಬದ್ಧ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿದ್ದರೂ, ಈ ಯಶಸ್ಸನ್ನು ಸಹಿಸಲಾಗದೇ ಮಹಾರಾಷ್ಟ್ರದ ಸಂಸದ ಧೈರ್ಯಶೀಲ್ ಮಾನೆ ಅವರು ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೊಹಮ್ಮದ್ ರೋಷನ್ ಅವರ ವಿರುದ್ಧ ಹಕ್ಕುಚ್ಯುತಿ ಪ್ರಕರಣ ದಾಖಲಿಸುವಂತೆ ಲೋಕಸಭಾ ಸ್ಪೀಕರ್‌ಗೆ ಮನವಿ ಸಲ್ಲಿಸಿರುವುದು ಅತ್ಯಂತ ಖಂಡನೀಯ ಮತ್ತು ಪ್ರಚೋದನಕಾರಿ ಕ್ರಮವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ರಾಜ್ಯೋತ್ಸವದ ದಿನ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಕರ್ನಾಟಕ–ಮಹಾರಾಷ್ಟ್ರ ಗಡಿಭಾಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆಯನ್ನು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಅತ್ಯಂತ ದಿಟ್ಟವಾಗಿ ನಿರ್ವಹಿಸಿದ್ದರು. ಕನ್ನಡ ರಾಜ್ಯೋತ್ಸವದ ಪಾವಿತ್ರ್ಯಕ್ಕೆ ಧಕ್ಕೆ ಉಂಟಾಗದಂತೆ, ಕನ್ನಡ ವಿರೋಧಿ ಶಕ್ತಿಗಳಿಂದ ಉಂಟಾಗಬಹುದಾದ ಅಶಾಂತಿಯನ್ನು ಮುಂಚಿತವಾಗಿಯೇ ತಡೆಯುವ ನಿಟ್ಟಿನಲ್ಲಿ ಅವರು ಕೈಗೊಂಡ ಕಟ್ಟುನಿಟ್ಟಿನ ಆಡಳಿತ ಕ್ರಮಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದವು.

ಆದರೆ, ಈ ಶಾಂತಿಯುತ ವಾತಾವರಣವನ್ನು ರಾಜಕೀಯ ಲಾಭಕ್ಕಾಗಿ ದುರುಪಯೋಗ ಪಡಿಸಿಕೊಳ್ಳುವ ಉದ್ದೇಶದಿಂದ ಸಂಸದ ಧೈರ್ಯಶೀಲ್ ಮಾನೆ ಅವರು “ತಮ್ಮನ್ನು ಅಕ್ರಮವಾಗಿ ತಡೆಹಿಡಿಯಲಾಗಿದೆ” ಎಂಬ ಸುಳ್ಳು ಆರೋಪಗಳನ್ನು ಮಾಡಿ, ಜಿಲ್ಲಾಧಿಕಾರಿಗಳ ವಿರುದ್ಧ ಲೋಕಸಭಾ ಸ್ಪೀಕರ್‌ಗೆ ದೂರು ನೀಡಿರುವುದು ಕರ್ನಾಟಕದ ಆಡಳಿತ ವ್ಯವಸ್ಥೆಯ ಮೇಲೆಯೇ ನೇರ ದಾಳಿಯಾಗಿದೆ ಎಂದು ಕರವೇ ಸ್ವಾಭಿಮಾನಿ ಬಣ ಅಭಿಪ್ರಾಯಪಟ್ಟಿದೆ.
ಜಿಲ್ಲಾಧಿಕಾರಿ ರೋಷನ್ ಅವರು ಯಾವುದೇ ವ್ಯಕ್ತಿ ಅಥವಾ ಜನಪ್ರತಿನಿಧಿಯನ್ನು ಗುರಿಯಾಗಿಸಿಕೊಂಡು ಕ್ರಮ ಕೈಗೊಂಡಿಲ್ಲ. ಬದಲಾಗಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ, ಸಂವಿಧಾನ ಹಾಗೂ ಕಾನೂನಿನ ಚೌಕಟ್ಟಿನೊಳಗೆ ಜವಾಬ್ದಾರಿಯುತವಾಗಿ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಾಗೂ ಕೆಲವು ಮರಾಠಿ ಭಾಷಿಕ ಸಂಘಟನೆಗಳು ನವೆಂಬರ್ ೧ನ್ನು “ಕಪ್ಪು ದಿನ”ವೆಂದು ಆಚರಿಸುವ ಮೂಲಕ ನಿರಂತರವಾಗಿ ಉದ್ವಿಗ್ನತೆ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ, ಯಾವುದೇ ಪ್ರಚೋದನಕಾರಿ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು ಜಿಲ್ಲಾಧಿಕಾರಿಯ ಕರ್ತವ್ಯವೇ ಆಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ)ದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಎಚ್.ಎಸ್. ರವರು ಜನಪ್ರತಿನಿಧಿ ಎಂಬ ಸ್ಥಾನಮಾನವನ್ನು ಮುಂದಿಟ್ಟುಕೊಂಡು ಕಾನೂನಿಗಿಂತ ಮೇಲಿದ್ದೇವೆ ಎಂಬ ಭಾವನೆಯಲ್ಲಿ ವರ್ತಿಸುವುದು ಪ್ರಜಾಪ್ರಭುತ್ವದ ಮೂಲ ತತ್ವಗಳನ್ನೇ ಅಪಮಾನಿಸುವಂತದ್ದು. ಕರ್ನಾಟಕದ ಭೌಗೋಳಿಕ ಏಕತೆ, ಭಾಷಾ ಗೌರವ ಮತ್ತು ಕನ್ನಡಿಗರ ಸ್ವಾಭಿಮಾನವನ್ನು ಪ್ರಶ್ನಿಸುವ ಯಾವುದೇ ಪ್ರಯತ್ನವನ್ನು ರಾಜ್ಯದ ಜನತೆ ಎಂದಿಗೂ ಸಹಿಸುವುದಿಲ್ಲ. ಇಂತಹ ಪ್ರಚೋದನಕಾರಿ ನಡೆಗಳನ್ನು ತಕ್ಷಣವೇ ನಿಲ್ಲಿಸಬೇಕು, ಇಲ್ಲದಿದ್ದರೆ ಕನ್ನಡಿಗರು ಸಂವಿಧಾನಬದ್ಧವಾಗಿ ಆದರೆ ದೃಢವಾಗಿ ಪ್ರತಿರೋಧಿಸುವುದಕ್ಕೆ ಸಿದ್ಧರಾಗಿರುತ್ತಾರೆ ಎಂದು ತೀವ್ರ ಎಚ್ಚರಿಕೆ ನೀಡಿದರು.

ಈ ಮೂಲಕ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ, ಗೌರವಯುತವಾಗಿ ಹಾಗೂ ಶಾಂತಿಯುತವಾಗಿ ಆಚರಿಸಲು ಕಾರಣಕರ್ತರಾಗಿದ್ದು, ಕನ್ನಡಿಗರ ಆತ್ಮಗೌರವವನ್ನು ಎತ್ತಿ ಹಿಡಿದಿದ್ದಾರೆ. ಅವರ ದಿಟ್ಟ ನಿಲುವು ಕನ್ನಡ ವಿರೋಧಿ ಶಕ್ತಿಗಳಿಗೆ ಸ್ಪಷ್ಟ ಹಾಗೂ ಕಠಿಣ ಸಂದೇಶವನ್ನು ರವಾನಿಸಿದೆ ಎಂದು ಕರವೇ ಸ್ವಾಭಿಮಾನಿ ಬಣ ಶ್ಲಾಘಿಸಿದೆ.
ಈ ಹಿನ್ನೆಲೆಯಲ್ಲಿ, ಕರ್ನಾಟಕದ ಎಲ್ಲಾ ಸಂಸದರು ಪಕ್ಷಭೇದ ಮರೆತು ಜಿಲ್ಲಾಧಿಕಾರಿ ರೋಷನ್ ಅವರ ಪರವಾಗಿ ಲೋಕಸಭೆಯಲ್ಲಿ ಧ್ವನಿ ಎತ್ತಬೇಕು ಹಾಗೂ ಕರ್ನಾಟಕದ ಆಡಳಿತಾಧಿಕಾರಿಗಳನ್ನು ಬೆಂಬಲಿಸುವ ನಿಲುವು ತಾಳಬೇಕು ಎಂದು ಕರವೇ ಸ್ವಾಭಿಮಾನಿ ಬಣ ಆಗ್ರಹಿಸಿದೆ.
ಈ ಪ್ರತಿಭಟನಾ ಸಭೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ)ದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಎಚ್.ಎಸ್., ಜಿಲ್ಲಾ ಉಪಾಧ್ಯಕ್ಷರಾದ ಮುಜಬುಲ್ಲ ಹಾಗೂ ವಿಜಯ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ಸಿ., ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಾಧಿಕ್, ಜಿಲ್ಲಾ ಖಜಾಂಚಿ ಗಣೇಶ್, ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆ ಪದ್ಮಾ ಮಾಲತಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಆರ್ಥಿಕ ತಿವಾರಿ ಮತ್ತು ಜ್ಯೋತಿ, ಗ್ರಾಮಾಂತರ ಘಟಕದ ಅಧ್ಯಕ್ಷ ಮಂಜುನಾಥ್, ನಗರ ಪ್ರಧಾನ ಕಾರ್ಯದರ್ಶಿ ನಾಗರಾಜ್, ಕರವೇ ಮುಖಂಡರಾದ ಆನ್ಸರ್ ಮತ್ತು ಅಜ್ಗರ್ ಸೇರಿದಂತೆ ಹಲವಾರು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದು, ಸಂಸದ ಧೈರ್ಯಶೀಲ್ ಮಾನೆ ಅವರ ನಡೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದರು.







