ಬೆಂಗಳೂರು: ಅಟಲ್ ಬಿಹಾರಿ ವಾಜಪೇಯಿ ಎಂಬ ಹೆಸರಿನ ಉಚ್ಚಾರಣೆಯೇ ರೋಮಾಂಚನ, ಪ್ರೇರಣೆ ಮತ್ತು ಉತ್ಸಾಹವನ್ನು ತುಂಬುತ್ತದೆ. ಅಂಥ ಶ್ರೇಷ್ಠ ನಾಯಕತ್ವದ ಪರಂಪರೆ ನಮಗೆ ಸಿಕ್ಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಹೇಳಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ನಡೆದ ಮಾಜಿ ಪ್ರಧಾನಿ, ಭಾರತರತ್ನ ದಿ. ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಜಪೇಯಿ ಅವರು ಕರ್ನಾಟಕಕ್ಕೆ ಹಲವು ಬಾರಿ ಭೇಟಿ ನೀಡಿ ರಾಜ್ಯದಲ್ಲಿ ಬಿಜೆಪಿ ಸಂಘಟನೆ ಬಲಪಡಿಸಲು ಯಡಿಯೂರಪ್ಪ, ಶಂಕರಮೂರ್ತಿ, ರಾಮಚಂದ್ರೇಗೌಡ, ಜಗದೀಶ ಶೆಟ್ಟರ್ ಸೇರಿದಂತೆ ಹಿರಿಯ ನಾಯಕರಿಗೆ ಪ್ರೇರಣೆ ನೀಡಿದ್ದರು ಎಂದು ಸ್ಮರಿಸಿದರು.
ದಕ್ಷಿಣ ಭಾರತದಲ್ಲಿ ಕರ್ನಾಟಕವು ಮುಂದೊಂದು ದಿನ ಬಿಜೆಪಿಯ ಭದ್ರ ಕೋಟೆಯಾಗಲಿದೆ ಎಂಬ ದೂರದೃಷ್ಟಿ ಅಟಲ್ ಜೀ ಅವರಲ್ಲಿತ್ತು. ಕಾರ್ಯಕರ್ತರ ಮೇಲಿನ ಅವರ ಅದಮ್ಯ ವಿಶ್ವಾಸವೇ ಇಂದು ಪಕ್ಷದ ಬಲವಾಗಿದೆ ಎಂದು ಹೇಳಿದರು.

ಜವಾಹರಲಾಲ್ ನೆಹರು ಅವರು ಪ್ರಧಾನಿಯಾಗಿದ್ದಾಗಲೇ ಅಟಲ್ ಜೀ ಅವರ ಭಾಷಣವನ್ನು ಕೇಳಿ, “ಇವರು ಒಮ್ಮೆ ದೇಶದ ಪ್ರಧಾನಿ ಆಗುತ್ತಾರೆ” ಎಂದು ಹೇಳಿದ್ದನ್ನು ವಿಜಯೇಂದ್ರ ನೆನಪಿಸಿದರು. ಸೋಲಿಗೆ ಅಂಜದ ಆತ್ಮವಿಶ್ವಾಸವನ್ನು ಕಾರ್ಯಕರ್ತರಲ್ಲಿ ತುಂಬಿದ ಮಹಾನ್ ನಾಯಕ ಅಟಲ್ ಜೀ ಎಂದು ಬಣ್ಣಿಸಿದರು.
ಕಾಂಗ್ರೆಸ್ಸಿನ ಹಣೆಬರಹ ಬದಲಾಗದು
ವಾಜಪೇಯಿ ಅವರ ದೇಶಭಕ್ತಿ ಮತ್ತು ದೂರದೃಷ್ಟಿಯನ್ನು ಅರ್ಥಮಾಡಿಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ‘ಸಬ್ ಕಾ ವಿಕಾಸ್’ ಧ್ಯೇಯದೊಂದಿಗೆ ಬಿಜೆಪಿ ಮುನ್ನಡೆಯುತ್ತಿದೆ. ಕಾಂಗ್ರೆಸ್‌ನ ಅಪಪ್ರಚಾರಗಳ ನಡುವೆಯೂ ಕೇಂದ್ರದ ಎನ್‌ಡಿಎ ಸರ್ಕಾರ ಭ್ರಷ್ಟಾಚಾರರಹಿತ ಆಡಳಿತ ನೀಡುತ್ತಿದೆ ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಚುನಾವಣೆಗಳೇ ಕಾಂಗ್ರೆಸ್ ಪಕ್ಷ ಅಸ್ತಿತ್ವ ಕಳೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿ. ಇವಿಎಂ ಇರಲಿ ಅಥವಾ ಬ್ಯಾಲೆಟ್ ಇರಲಿ, ಕಾಂಗ್ರೆಸ್‌ನ ಹಣೆಬರಹ ಬದಲಾಗಲು ಸಾಧ್ಯವಿಲ್ಲ ಎಂದು ವಿಜಯೇಂದ್ರ ಹೇಳಿದರು.
ಅಟಲ್ ಜೀ, ಲಾಲ್ ಕೃಷ್ಣ ಅಡ್ವಾಣಿ ಅವರಂತಹ ಶ್ರೇಷ್ಠ ನಾಯಕರ ಪರಂಪರೆಯಲ್ಲಿ ಮೋದಿ, ಅಮಿತ್ ಶಾ ಹಾಗೂ ಜೆ.ಪಿ. ನಡ್ಡಾ ಅವರ ನೇತೃತ್ವದಲ್ಲಿ ಬಿಜೆಪಿ ವೇಗವಾಗಿ ಮುನ್ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ನಾವು ಸ್ವಯಂಕೃತ ಕಾರಣಗಳಿಂದ ವಿಪಕ್ಷದಲ್ಲಿದ್ದೇವೆ. ಆದರೆ ಜನವಿರೋಧಿ, ಬಡವರ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಕ್ರೋಶ ಹೆಚ್ಚುತ್ತಿದೆ. 2028ರಲ್ಲಿ ಅಥವಾ ನಾಳೆಯೇ ಚುನಾವಣೆ ನಡೆದರೂ ಬಿಜೆಪಿ 130–140 ಶಾಸಕರೊಂದಿಗೆ ಸ್ವಂತ ಶಕ್ತಿಯ ಮೇಲೆ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಎನ್ನುವ ಆರೋಪಗಳನ್ನು ತಳ್ಳಿ ಹಾಕಿದ ಅವರು, ದೇಶದ್ರೋಹಿ ಘೋಷಣೆಗಳನ್ನು ಮಾಡುವವರ ವಿರುದ್ಧ ಮಾತ್ರ ಬಿಜೆಪಿ ನಿಲುವು ಕಠಿಣವಾಗಿದೆ ಎಂದರು.
ಹಿಂದುಳಿದ ವರ್ಗ–ದಲಿತರ ಕಲ್ಯಾಣಕ್ಕೆ ಅಟಲ್ ಜೀ ಆದ್ಯತೆ: ಶೆಟ್ಟರ್
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಅವರು ಅಟಲ್ ಜೀ ಕುರಿತ ಸಾಹಿತ್ಯ ಕಿರುಹೊತ್ತಗೆಯನ್ನು ಬಿಡುಗಡೆ ಮಾಡಿದರು. ಪೋಖ್ರಾನ್ ಅಣು ಪರೀಕ್ಷೆ ದೇಶಕ್ಕೆ ಹೆಮ್ಮೆ ತಂದ ನಿರ್ಧಾರವಾಗಿದ್ದು, ಅದರ ಹಿಂದೆ ಅಟಲ್ ಜೀ ಅವರ ಧೈರ್ಯಶಾಲಿ ನಾಯಕತ್ವವಿದೆ ಎಂದರು. ಹಿಂದುಳಿದ ವರ್ಗ ಮತ್ತು ದಲಿತರ ಒಳಿತಿಗೆ ಅವರು ವಿಶೇಷ ಒತ್ತು ನೀಡಿದ್ದರು ಎಂದು ಸ್ಮರಿಸಿದರು.
ಬಿಜೆಪಿ ‘ದಿಲ್ ಚೋರಿ’ ಪಕ್ಷ: ಛಲವಾದಿ ನಾರಾಯಣಸ್ವಾಮಿ
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಅಟಲ್ ಜೀ ಅವರದ್ದು ನಿಷ್ಕಳಂಕ ನಾಯಕತ್ವ. ಕಾಂಗ್ರೆಸ್ ಮತಗಳ್ಳರ ಪಕ್ಷವಾಗಿದ್ದರೆ, ಬಿಜೆಪಿ ಜನರ ಮನಸ್ಸು ಗೆಲ್ಲುವ ‘ದಿಲ್ ಚೋರಿ’ ಪಕ್ಷ ಎಂದು ಟೀಕಿಸಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಉಪಾಧ್ಯಕ್ಷ ಎನ್. ಮಹೇಶ್, ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ಪೂರ್ಣಿಮಾ ಶ್ರೀನಿವಾಸ್, ಎಂ.ಡಿ. ಲಕ್ಷ್ಮೀನಾರಾಯಣ್, ವೈ.ಎ. ನಾರಾಯಣಸ್ವಾಮಿ, ಪ್ರಮೋದ್ ಮಧ್ವರಾಜ್, ಜಗದೀಶ್ ಹಿರೇಮನಿ ಸೇರಿದಂತೆ ಪಕ್ಷದ ನಾಯಕರು ಉಪಸ್ಥಿತರಿದ್ದರು.







