ದಾವಣಗೆರೆ: “ನಾನು ಹಾಗೂ ಶಾಮನೂರು ಶಿವಶಂಕರಪ್ಪನವರು 1995ರಿಂದಲೂ ಪರಿಚಿತರು. ಅವರು 95ನೇ ವಸಂತಕ್ಕೆ ಕಾಲಿಟ್ಟ ಹುಟ್ಟುಹಬ್ಬದ ಕಾರ್ಯಕ್ರಮದಲ್ಲೂ ನಾನು ಭಾಗಿಯಾಗಿದ್ದೆ. ಅವರು 100 ವರ್ಷಗಳ ವರೆಗೆ ಬದುಕುತ್ತಾರೆ ಎಂದುಕೊಂಡಿದ್ದೆವು. ಆದರೆ ಅವರ ಅಗಲಿಕೆಯಿಂದ ನಮಗೆಲ್ಲ ತುಂಬಲಾರದ ನಷ್ಟವಾಗಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಶ್ರೀ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ಆಯೋಜಿಸಿದ್ದ ಲಿಂಗೈಕ್ಯ ಹಿರಿಯ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ನುಡಿನಮನ ಹಾಗೂ ಶಿವಗಣಾರಾಧನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಶಾಮನೂರು ಶಿವಶಂಕರಪ್ಪನವರು ವ್ಯಾಪಾರ–ಉದ್ಯಮ ಕ್ಷೇತ್ರದ ಕುರಿತು ಸದಾ ಚಿಂತಿಸುತ್ತಿದ್ದವರು. ಪಕ್ಷದಲ್ಲಿ ಸುದೀರ್ಘ ಕಾಲ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದರು. ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಎಲ್ಲ ಕಚೇರಿಗಳಲ್ಲೂ ಬಸವಣ್ಣನವರ ಭಾವಚಿತ್ರ ಕಡ್ಡಾಯಗೊಳಿಸಿದ ಕಾರಣಕ್ಕೆ ಅವರು ನನಗೆ ಕಾರ್ಯಕ್ರಮವೊಂದರಲ್ಲಿ ಸನ್ಮಾನಿಸಿದ್ದರು ಎಂದು ಸ್ಮರಿಸಿದರು.
ಶಾಮನೂರು ಅವರನ್ನು ಜಾತ್ಯತೀತ ನಾಯಕ ಎಂದು ಬಣ್ಣಿಸಿದ ಸಿಎಂ, ಅವರು ಗೆದ್ದ ಕ್ಷೇತ್ರ ದಾವಣಗೆರೆ ದಕ್ಷಿಣ. ಅಲ್ಲಿ ಲಿಂಗಾಯತ ಮತದಾರರು ಕಡಿಮೆ ಇದ್ದರೂ ಜನಪ್ರಿಯತೆಯಿಂದ ಜಯ ಸಾಧಿಸಿದ್ದರು. ನಾನು ಅವರನ್ನು ಯಾವಾಗಲೂ ‘ಯಜಮಾನ್ರೇ’ ಎಂದು ಕರೆಯುತ್ತಿದ್ದೆ. ಮತ್ತೊಮ್ಮೆ ಚುನಾವಣೆಗೆ ನಿಲ್ತೀರಾ ಎಂದು ಕೇಳಿದ್ದಾಗ, ‘ಹೌದು, ನಿಲ್ತೀನಿ’ ಎಂದು ಆತ್ಮವಿಶ್ವಾಸದಿಂದ ಉತ್ತರಿಸಿದ್ದರು. ಅಷ್ಟೊಂದು ಉತ್ಸಾಹ ಅವರಲ್ಲಿತ್ತು ಎಂದರು.

ಬಡವರು, ವೃದ್ಧರಿಗೆ ಅವರು ಸದಾ ದಾನಿ. ಹುಟ್ಟು ಆಕಸ್ಮಿಕ, ಸಾವು ಗ್ಯಾರಂಟಿ. ಈ ಎರಡು ನಡುವಿನ ಅವಧಿಯಲ್ಲಿ ನಾವು ಏನು ಮಾಡುತ್ತೇವೆ ಎನ್ನುವುದೇ ಮುಖ್ಯ. ಒಮ್ಮೆ ಜವಳಿ ನಗರವಾಗಿದ್ದ ದಾವಣಗೆರೆ, ಜವಳಿ ಉದ್ಯಮ ಕುಸಿದ ಬಳಿಕ ವಿದ್ಯಾಕಾಶಿಯಾಗಿ ರೂಪಾಂತರಗೊಂಡಿದೆ. ಅದಕ್ಕೆ ಶಾಮನೂರು ಶಿವಶಂಕರಪ್ಪನವರ ಕೊಡುಗೆ ಅಪಾರ. 62 ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿರುವುದು ಆಶ್ಚರ್ಯಕರ ಸಾಧನೆ. ಅವರು ಮನುಷ್ಯಪ್ರೇಮಿ, ಅಜಾತಶತ್ರು ಎಂದು ಕೊಂಡಾಡಿದರು.

‘ಶಾಸಕನಾಗಿ ಅಪರೂಪದ ದಾಖಲೆ’ – ಡಿಸಿಎಂ ಡಿ.ಕೆ.ಶಿವಕುಮಾರ್
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ,
95 ವರ್ಷಗಳ ಕಾಲ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದು, ಶಾಸಕನಾಗಿ ಕಾರ್ಯನಿರ್ವಹಿಸಿ ದೇಶದಲ್ಲೇ ಅಪರೂಪದ ದಾಖಲೆಯನ್ನು ಶಾಮನೂರು ಶಿವಶಂಕರಪ್ಪ ಸೃಷ್ಟಿಸಿದ್ದಾರೆ. ಯೋಗಿ ಎಂದು ಕರೆಸಿಕೊಳ್ಳುವುದಕ್ಕಿಂತ ಉಪಯೋಗಿ ಎಂದು ಕರೆಸಿಕೊಳ್ಳುವುದು ಮೇಲು ಎಂಬುದಕ್ಕೆ ಅವರ ಜೀವನವೇ ಉದಾಹರಣೆ ಎಂದರು.
ಅವರಿಗೆ ಅಪಾರ ಹೃದಯ ಶ್ರೀಮಂತಿಕೆ ಇತ್ತು. ಒಬ್ಬ ವ್ಯಕ್ತಿಯ ಹಿಂದೆ ಎಷ್ಟು ಜನ ಇದ್ದಾರೆ ಎಂಬುದು ಅವರು ಬದುಕಿದ್ದಾಗಲೇ ಗೊತ್ತಾಗುತ್ತದೆ. ಅವರ ಬದುಕು ಎಷ್ಟೋ ಜನರ ಜೀವನದಲ್ಲಿ ಬದಲಾವಣೆ ತಂದಿದೆ. ಕೋವಿಡ್ ಸಂದರ್ಭದಲ್ಲಿ ಹತ್ತಾರು ಕೋಟಿ ರೂಪಾಯಿ ವೆಚ್ಚ ಮಾಡಿ ಲಸಿಕೆ ನೀಡಿಸಿದ್ದು ಮಾನವೀಯತೆಯ ಪ್ರತೀಕ. ಅವರ ಮಕ್ಕಳು, ಮೊಮ್ಮಕ್ಕಳು ದಾನ–ಧರ್ಮದ ಪರಂಪರೆಯನ್ನು ಮುಂದುವರಿಸಬೇಕು ಎಂದು ಆಶಿಸಿದರು.
ಎಲ್ಲ ಜಾತಿ, ಧರ್ಮದ ಜನರನ್ನು ಸಮಾನವಾಗಿ ಪ್ರೀತಿಸಿದವರು. ಧಾರ್ಮಿಕವಾಗಿ, ರಾಜಕೀಯವಾಗಿ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಅವರು ಶ್ರೇಷ್ಠ ಸೇವೆ ಸಲ್ಲಿಸಿದ್ದಾರೆ. ಇಂದು ವಿವಿಧ ಮಠಾಧೀಶರು, ಧಾರ್ಮಿಕ ಗುರುಗಳು ನಮನ ಸಲ್ಲಿಸಿರುವುದು ಅವರ ಜೀವನದ ಮಹತ್ವಕ್ಕೆ ಸಾಕ್ಷಿ ಎಂದು ಹೇಳಿದರು.

ವಿಶೇಷ ಪುತ್ಥಳಿ ಉದ್ಘಾಟನೆ, ಗಣ್ಯರಿಂದ ಪುಷ್ಪನಮನ
ಲಿಂಗೈಕ್ಯ ಶಾಮನೂರು ಶಿವಶಂಕರಪ್ಪ ಅವರ ವಿಶೇಷ ಪುತ್ಥಳಿಯನ್ನು ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ನಿರ್ಮಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. ಬಳಿಕ ಗಣ್ಯರು ಪುಷ್ಪನಮನ ಸಲ್ಲಿಸಿದರು.
ಶಾಮನೂರು ಅವರ ಸಮಾಧಿಗೆ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು.
ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ,
ಶಾಮನೂರು ಶಿವಶಂಕರಪ್ಪನವರು ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇಡೀ ದೇಶಕ್ಕೆ ದಾವಣಗೆರೆಯನ್ನು ಪರಿಚಯಿಸಿದವರು ಅವರು. ಎಲ್ಲ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ವಿಶಾಲ ಮನಸ್ಸಿನ ನಾಯಕ ಎಂದು ಸ್ಮರಿಸಿದರು.
ಸಂಸದ ಜಗದೀಶ್ ಶೆಟ್ಟರ್ ಮಾತನಾಡಿ,
ಅವರು ಎಲ್ಲ ಪಕ್ಷಗಳ ನಾಯಕರು, ಸ್ವಾಮೀಜಿಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ವೀರಶೈವ ಲಿಂಗಾಯತ ಸಮುದಾಯದ ಒಳಪಂಗಡಗಳನ್ನು ಒಗ್ಗೂಡಿಸಿದ ಅಪರೂಪದ ನಾಯಕ ಎಂದರು.

ವಿವಿಧ ಮಠಾಧೀಶರಿಂದ ಗೌರವ ನಮನ
ರಂಭಾಪುರಿ, ಶ್ರೀಶೈಲ, ಉಜ್ಜಯಿನಿ, ಕಾಶಿ ಜಗದ್ಗುರು, ಓಂಕಾರ ಪೀಠಗಳು ಸೇರಿದಂತೆ ಪಂಚಪೀಠದ ಸ್ವಾಮೀಜಿಗಳು, ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳು, ಮಾದರಚನ್ನಯ್ಯ ಶ್ರೀಗಳು ಶಾಮನೂರು ಶಿವಶಂಕರಪ್ಪ ಅವರ ಸಮಾಧಿಗೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು.
ರಂಭಾಪುರಿ ಪೀಠಾಧಿಪತಿ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಜಗದ್ಗುರು ಮಾತನಾಡಿ, ಶಾಮನೂರು ಶಿವಶಂಕರಪ್ಪನವರ ಅಗಲಿಕೆಯಿಂದ ಇಡೀ ವೀರಶೈವ ಲಿಂಗಾಯತ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ತಳಮಟ್ಟದಿಂದ ಬಂದ ಅವರು ಶಾಸಕನಿಂದ ಸಚಿವ ಸ್ಥಾನವರೆಗೆ ಬೆಳೆದು ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದಾರೆ. ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ಮರೆಯಲಾಗದು ಎಂದು ಹೇಳಿದರು.
ವೀರಶೈವ ಲಿಂಗಾಯತ ಸಮುದಾಯದ ಐಕ್ಯತೆಗಾಗಿ ಅವರು ಜೀವಿತಾವಧಿ ಪೂರ್ತಿ ಶ್ರಮಿಸಿದರು. ಜುಲೈನಲ್ಲಿ ಶೃಂಗ ಸಮ್ಮೇಳನ ಆಯೋಜಿಸಿ ಗುರು–ವಿರಕ್ತರ ಪರಂಪರೆಯನ್ನು ಎತ್ತಿ ಹಿಡಿದವರು ಎಂದು ಸ್ಮರಿಸಿದರು.
ಒಟ್ಟಾರೆ, ಶಾಮನೂರು ಶಿವಶಂಕರಪ್ಪ ಅವರ ಜೀವನ ಸೇವೆ, ಮಾನವೀಯತೆ ಮತ್ತು ಸಮಾಜಮುಖಿ ಚಿಂತನೆಗಳು ದಾವಣಗೆರೆ ಮಾತ್ರವಲ್ಲದೆ ರಾಜ್ಯದ ರಾಜಕೀಯ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಿಗೆ ಶಾಶ್ವತ ಕೊಡುಗೆಯಾಗಿ ಉಳಿಯಲಿವೆ ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.







