ಯಲ್ಲಾಪುರ: ಯಲ್ಲಾಪುರಕ್ಕೆ ತೆರಳಿ, ವಿವಾಹ ಪ್ರಸ್ತಾವವನ್ನು ತಿರಸ್ಕರಿಸಿದ್ದ ಕಾರಣಕ್ಕಾಗಿ ನಡುರಸ್ತೆಯಲ್ಲೇ ಭೀಕರವಾಗಿ ಹತ್ಯೆಗೀಡಾದ ರಂಜಿತಾ ಅವರ ಪಾರ್ಥಿವ ಶರೀರಕ್ಕೆ ಅಂತಿಮ ಗೌರವಗಳನ್ನು ಸಲ್ಲಿಸಿ, ಅವರ ಕುಟುಂಬದವರಿಗೆ ಸಾಂತ್ವನ ಹೇಳಲಾಯಿತು. ಕುಟುಂಬದ ಸದಸ್ಯರ ಕಣ್ಣೀರು, ನೋವನ್ನು ಕಂಡು ಮನಸ್ಸು ಆಳವಾದ ದುಃಖದಿಂದ ಭಾರವಾಯಿತು. ರಂಜಿತಾ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಈ ಭರಿಸಲಾಗದ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ಮತ್ತು ಧೈರ್ಯವನ್ನು ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು.
ಅಮಾಯಕ ಹಿಂದೂ ಮಹಿಳೆಯೊಬ್ಬರು ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ಹಾಡುಹಗಲೇ ಭೀಕರವಾಗಿ ಕೊಲೆಯಾಗಿರುವುದು ಕೇವಲ ದುರಂತವಲ್ಲ, ಇದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿರುವುದಕ್ಕೆ ಕನ್ನಡಿ ಹಿಡಿಯುವ ಆತಂಕಕಾರಿ ಘಟನೆ ಎಂದು ವಿಜಯೇಂದ್ರ ಅವರು ಹೇಳಿದರು. ಪದೇ ಪದೇ ಇಂತಹ ಸಮಾಜವಿರೋಧಿ, ಆಘಾತಕಾರಿ ದುಷ್ಕೃತ್ಯಗಳು ನಡೆಯುತ್ತಿರುವುದು ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯವನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದರು.

ಅಸಮರ್ಥ ಗೃಹ ಸಚಿವರು ಮತ್ತು ದಿಕ್ಕು ತಪ್ಪಿದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಸಮಾಜಘಾತುಕರು, ದುಷ್ಕರ್ಮಿಗಳು ಹಾಗೂ ಅಪರಾಧಿಗಳಿಗೆ ಕಾನೂನಿನ ಭಯವೇ ಉಳಿದಿಲ್ಲ. ವರ್ಗಾವಣೆ ದಂಧೆ ಹಾಗೂ ಕೀಳು ರಾಜಕೀಯ ಹಿತಾಸಕ್ತಿಗಳಿಗಾಗಿ ಪೊಲೀಸರ ಕೈಕಟ್ಟಿ ಹಾಕಿರುವ ಪರಿಣಾಮವಾಗಿ, ಇಂದು ಅಪರಾಧಿಗಳು ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಪೊಲೀಸರ ವ್ಯವಸ್ಥೆ ಹಲ್ಲಿಲ್ಲದ ಹಾವಿನಂತಾಗಿದೆ ಎಂದು ಅವರು ಕಿಡಿಕಾರಿದರು.
ಯಲ್ಲಾಪುರದ ಘಟನೆ ರಾಜ್ಯದಲ್ಲಿ ವಿಶೇಷವಾಗಿ ಹಿಂದೂ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂಬುದನ್ನು ಮತ್ತೊಮ್ಮೆ ಒತ್ತಿ ಹೇಳುತ್ತದೆ. ಜಿಹಾದಿ ಮನಸ್ಥಿತಿಗೆ ಮೃದು ಧೋರಣೆ ಹಾಗೂ ಸಹಾನುಭೂತಿ ತೋರಿಸುತ್ತಿರುವ ಆಡಳಿತದ ಅಡಿಯಲ್ಲಿ ಸಮಾಜಘಾತುಕರಿಗೆ ಏನು ಬೇಕಾದರೂ ಮಾಡಬಹುದು ಎಂಬ ಧೈರ್ಯ ಬಂದಿದೆ. ಇದರ ಪರಿಣಾಮವಾಗಿ ಅಮಾಯಕ ಹಿಂದೂ ಮಹಿಳೆಯರು ಹಾಗೂ ಹೆಣ್ಣುಮಕ್ಕಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ವಿಜಯೇಂದ್ರ ಅವರು ಆತಂಕ ವ್ಯಕ್ತಪಡಿಸಿದರು.

ಯಾವುದೇ ಗಂಭೀರ ಅಪರಾಧ ನಡೆದರೂ ಕಟ್ಟಕಡೆಗೆ ಮಾಹಿತಿ ಪಡೆಯುವ ವ್ಯಕ್ತಿಯಾಗಿ ಮಾತ್ರ ಕಾಣಿಸಿಕೊಳ್ಳುವ ಅಸಮರ್ಥ ಗೃಹ ಸಚಿವರು ಹಾಗೂ ಕುರ್ಚಿ ಕಾದಾಟದಲ್ಲಿ ಮಗ್ನರಾಗಿರುವ ಮುಖ್ಯಮಂತ್ರಿಗಳ ರಾಜ್ಯದಲ್ಲಿ, ಮಹಿಳೆಯರ ವಿರುದ್ಧದ ಅಪರಾಧಗಳು ಅವರಿಗೆ ಕಾಣಿಸುತ್ತಿಲ್ಲ. ಪರಿಣಾಮವಾಗಿ ನಾಗರಿಕರು, ವಿಶೇಷವಾಗಿ ಮಹಿಳೆಯರು ಅಪರಾಧಿಗಳ ಮರ್ಜಿಯಲ್ಲಿ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.
ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡ ಬಳಿಕ ಮಹಿಳೆಯರ ವಿರುದ್ಧದ ಅಪರಾಧಗಳು ಗಣನೀಯವಾಗಿ ಹೆಚ್ಚಾಗಿವೆ. ಆದರೆ ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕುಳಿತಿದ್ದು, ರಾಜ್ಯ ಅರಾಜಕತೆಯತ್ತ ಸಾಗುತ್ತಿದೆ. ಸಮಾಜಘಾತುಕರು, ದುಷ್ಕರ್ಮಿಗಳು, ಅಪರಾಧಿಗಳು ಹಾಗೂ ಕೊಲೆಗಾರರಿಗೆ ಕರ್ನಾಟಕ ಸುರಕ್ಷಿತ ತಾಣವಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ ಎಂದು ವಿಜಯೇಂದ್ರ ಅವರು ಆಕ್ರೋಶ ವ್ಯಕ್ತಪಡಿಸಿದರು.
ಅಪರಾಧಿಗಳಿಗೆ ಪೊಲೀಸರ ಭಯವೂ ಇಲ್ಲ, ಕಾನೂನಿನ ಬಗ್ಗೆ ಗೌರವವೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಇನ್ನಾದರೂ ಕಣ್ತೆರೆದು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು, ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃ ಸ್ಥಾಪಿಸಬೇಕು. ನಮ್ಮ ತಾಯಂದಿರು, ಸಹೋದರಿಯರು ಹಾಗೂ ಹೆಣ್ಣುಮಕ್ಕಳು ಈ ನೆಲದಲ್ಲಿ ಭಯವಿಲ್ಲದೆ, ಗೌರವಯುತವಾಗಿ ಬದುಕುವಂತೆ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ನಾನು ತೀವ್ರವಾಗಿ ಒತ್ತಾಯಿಸುತ್ತೇನೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ, ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ಎನ್.ಎಸ್. ಹೆಗ್ಡೆ, ಪಕ್ಷದ ರಾಜ್ಯ ವಕ್ತಾರರಾದ ಹರಿಪ್ರಕಾಶ್ ಕೋಣೆಮನೆ, ಯಲ್ಲಾಪುರ ಮಂಡಲ ಅಧ್ಯಕ್ಷ ಪ್ರಸಾದ್ ಹೆಗ್ಡೆ, ಪಕ್ಷದ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ್, ಅಶೋಕ್ ಚಲವಾದಿ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.







