ನಾಗ್ಪುರ: ನಾಗ್ಪುರದ ವಿಭಾಗೀಯ ಆಯುಕ್ತೆಯಾಗಿರುವ ಐಎಎಸ್ ಅಧಿಕಾರಿ ವಿಜಯಲಕ್ಷ್ಮಿ ಬಿದರಿ ಅವರನ್ನು ಮಹಾರಾಷ್ಟ್ರ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಪದೋನ್ನತಿ ನೀಡಲಾಗಿದೆ ಎಂದು ಸಾಮಾನ್ಯ ಆಡಳಿತ ಇಲಾಖೆ ಹೊರಡಿಸಿದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ವಿಜಯಲಕ್ಷ್ಮಿ ಬಿದರಿ ಅವರಿಗೆ ಮಹಾರಾಷ್ಟ್ರ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ದೊರೆತ ಪದೋನ್ನತಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಎರಡೂ ರಾಜ್ಯಗಳಿಗೆ ಅಪಾರ ಹೆಮ್ಮೆಯ ವಿಷಯವಾಗಿದೆ. ಕರ್ನಾಟಕದ ಹೆಣ್ಣುಮಗಳು ಮತ್ತೊಂದು ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಇಂತಹ ಉನ್ನತ ಹುದ್ದೆಯನ್ನು ಅಲಂಕರಿಸಿರುವುದು ಅವರ ಅಸಾಧಾರಣ ಪ್ರತಿಭೆ, ಪರಿಶ್ರಮ ಹಾಗೂ ನಿಷ್ಠೆಯ ಪ್ರತಿಬಿಂಬವಾಗಿದೆ.
ಸಾರ್ವಜನಿಕ ಆಡಳಿತದಲ್ಲಿ ಅವರ ಸಾಧನೆ ಮಹಿಳಾ ಆಡಳಿತಾಧಿಕಾರಿಗಳಿಗೆ ಮಾತ್ರವಲ್ಲದೆ ಮುಂದಿನ ಪೀಳಿಗೆಯ ಯುವತಿಯರಿಗೆ ಸಹ ಪ್ರೇರಣೆಯಾದ ಮಾದರಿಯಾಗಿದ್ದು, ಮಹಿಳೆಯರು ಉನ್ನತ ಆಡಳಿತ ಸ್ಥಾನಗಳಲ್ಲಿ ಯಶಸ್ವಿಯಾಗಿ ಮುನ್ನಡೆಸಬಹುದು ಎಂಬುದಕ್ಕೆ ವಿಜಯಲಕ್ಷ್ಮಿ ಬಿದರಿ ಅವರು ಜೀವಂತ ಉದಾಹರಣೆಯಾಗಿದ್ದಾರೆ.

ಆಡಳಿತಾತ್ಮಕ ಅನುಭವ ಹೊಂದಿರುವ ವಿಜಯಲಕ್ಷ್ಮಿ ಬಿದರಿ ಅವರು ಮಹಾರಾಷ್ಟ್ರ ರಾಜ್ಯದಲ್ಲಷ್ಟೇ ಅಲ್ಲದೆ ಕೇಂದ್ರ ಸರ್ಕಾರದ ಅಧೀನದಲ್ಲಿಯೂ ಹಲವು ಪ್ರಮುಖ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಆಗಸ್ಟ್ 2022ರಲ್ಲಿ ನಾಗ್ಪುರದ ವಿಭಾಗೀಯ ಆಯುಕ್ತರಾಗಿ ಅಧಿಕಾರ ಸ್ವೀಕರಿಸುವ ಮೊದಲು, ಅವರು ಬೆಂಗಳೂರಿನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಯುಆರ್ ರಾವ್ ಉಪಗ್ರಹ ಕೇಂದ್ರದಲ್ಲಿ (ಯುಆರ್‌ಎಸ್‌ಸಿ) ನಿಯಂತ್ರಕರಾಗಿ ಸೇವೆ ಸಲ್ಲಿಸಿದ್ದರು.

ಅವರು ಹಿಂದಿನ ಸೇವಾ ಹುದ್ದೆಗಳಲ್ಲಿ ಸಿಬ್ಬಂದಿ ಆಯ್ಕೆ ಆಯೋಗದ ಪ್ರಾದೇಶಿಕ ನಿರ್ದೇಶಕಿಯಾಗಿ, ಕೊಲ್ಹಾಪುರ ಮಹಾನಗರ ಪಾಲಿಕೆಯ ಆಯುಕ್ತರು, ಸಿಂಧುದುರ್ಗ ಜಿಲ್ಲೆಯ ಜಿಲ್ಲಾಧಿಕಾರಿ, ಸಿಂಧುದುರ್ಗ ಜಿಲ್ಲಾ ಪರಿಷತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ರಾಜ್ಯ ಸರ್ಕಾರದ ಹಲವು ಹಿರಿಯ ಹುದ್ದೆಗಳು ಸೇರಿವೆ. ತಮ್ಮ ಆಡಳಿತಾತ್ಮಕ ವೃತ್ತಿಜೀವನದ ಆರಂಭಿಕ ಹಂತದಲ್ಲಿ ಅವರು ಅಸ್ಸಾಂ ರಾಜ್ಯದಲ್ಲಿಯೂ ಸೇವೆ ಸಲ್ಲಿಸಿದ್ದಾರೆ.

ವಿಜಯಲಕ್ಷ್ಮಿ ಬಿದರಿ ಅವರು ಕರ್ನಾಟಕದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ. ಶಂಕರ ಮಹಾದೇವ್ ಬಿದರಿ ಅವರ ಪುತ್ರಿ. ಅಪ್ಪಟ ಕನ್ನಡತಿಯಾಗಿರುವ ಅವರು ಮಹಾರಾಷ್ಟ್ರ ಸರ್ಕಾರದಲ್ಲಿ ಉನ್ನತ ಹುದ್ದೆ ಅಲಂಕರಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷರಾಗಿರುವ ಅವರ ತಂದೆ ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯಲಕ್ಷ್ಮಿ ಬಿದರಿ ಅವರ ಕುಟುಂಬದಲ್ಲೇ ಐದು ನಾಗರಿಕ ಸೇವಾಧಿಕಾರಿಗಳು ಇದ್ದಾರೆ. ಈ ಹಿಂದೆ ಇವರ ತಂದೆಯವರಾದ ಶಂಕರ ಮಹಾದೇವ್ ಬಿದರಿ ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿ ನಿವೃತ್ತಿ ಹೊಂದಿದ್ದಾರೆ. ಅವರ ಪತಿ ಮಲ್ಲಿಕಾರ್ಜುನ ಪ್ರಸನ್ನ ಮುಂಬೈನಲ್ಲಿ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಅಧಿಕಾರಿ. ಅವರ ಸಹೋದರ ವಿಜಯೇಂದ್ರ ಬಿದರಿ ಕೂಡ ಐಪಿಎಸ್ ಅಧಿಕಾರಿ ಆಗಿದ್ದು, ಸಹೋದರನ ಪತ್ನಿ ರೋಹಿಣಿ ಪಿ. ಭಾಜಿಭಾಕರೆ ಐಎಎಸ್ ಅಧಿಕಾರಿಯಾಗಿದ್ದಾರೆ. ಅವರ ತಾಯಿ ಉಮಾದೇವಿ ವೃತ್ತಿಯಿಂದ ವೈದ್ಯೆಯಾಗಿದ್ದಾರೆ.

ಭಾರತದ ನಾಗರಿಕ ಸೇವೆಗಳ ಇತಿಹಾಸದಲ್ಲಿ (ಐಸಿಎಸ್ ಸೇರಿದಂತೆ) ಕರ್ನಾಟಕದಿಂದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಮೊದಲ ವ್ಯಕ್ತಿ ಎಂಬ ಅಪರೂಪದ ಗೌರವವೂ ವಿಜಯಲಕ್ಷ್ಮಿ ಬಿದರಿ ಅವರಿಗೆ ಸಲ್ಲುತ್ತದೆ. ದಕ್ಷಿಣ ಭಾರತದಿಂದ ಈ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಮೊದಲ ಮಹಿಳೆಯೂ ಅವರು. ಅವರ ಸಾಧನೆಗಳನ್ನು ಗುರುತಿಸಿ ಕರ್ನಾಟಕ ಸರ್ಕಾರವು ಅವರನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯಿಂದ ಗೌರವಿಸಿದೆ.
2008ರಲ್ಲಿ ಮಹಾರಾಷ್ಟ್ರ ಸರ್ಕಾರದ ಮಹಿಳಾ ವಿಕಾಸ ಮಹಾಮಂಡಲದ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ಸಂದರ್ಭದಲ್ಲಿ, ಕೋಮು ಸಾಮರಸ್ಯ ಉತ್ತೇಜನಕ್ಕಾಗಿ ಮಹಾತ್ಮ ಗಾಂಧಿ ಪ್ರಶಸ್ತಿಯನ್ನು ಅವರು ಪಡೆದರು. 2015ರಲ್ಲಿ ‘ರೌಂಡ್ ಟೇಬಲ್ ಇಂಡಿಯಾ’ ಎಂಬ ಸರ್ಕಾರೇತರ ಸಂಸ್ಥೆಯಿಂದ ‘ಪ್ರೈಡ್ ಆಫ್ ಕರ್ನಾಟಕ’ ಪ್ರಶಸ್ತಿಯನ್ನೂ ಅವರಿಗೆ ಪ್ರದಾನ ಮಾಡಲಾಗಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಅವರು ವಿಶೇಷ ಅನುಭವ ಹೊಂದಿದ್ದು, 2012ರಲ್ಲಿ ಯುನೈಟೆಡ್ ಕಿಂಗ್‌ಡಂನ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಂಡ್ ಪೊಲಿಟಿಕಲ್ ಸೈನ್ಸ್‌ನಲ್ಲಿ ಚೆವೆನಿಂಗ್ ಗುರುಕುಲ ಸ್ಕಾಲರ್ ಆಗಿದ್ದರು. 2011ರಲ್ಲಿ ಎಸ್ಟೋನಿಯಾ ಹಾಗೂ ಫಿನ್‌ಲ್ಯಾಂಡ್‌ಗೆ ಭಾರತ ಸರ್ಕಾರದ ಐಟಿ ಇಲಾಖೆಯ ಇ-ಆಡಳಿತ ನಿಯೋಗದಲ್ಲಿ ಅತಿ ಕಿರಿಯ ಸದಸ್ಯರಾಗಿದ್ದರು. ಮಹಾರಾಷ್ಟ್ರ ಸರ್ಕಾರದ ಇ-ಆಡಳಿತ ನೀತಿ ಕಾರ್ಯಪಡೆಯ ಸದಸ್ಯ ಕಾರ್ಯದರ್ಶಿ, ಮೈಕ್ರೋ-ಫೈನಾನ್ಸ್ ಕಾರ್ಯಪಡೆ ಸದಸ್ಯೆ, ಮುಖ್ಯ ಕಾರ್ಯದರ್ಶಿ ಸ್ಥಾಪಿಸಿದ ಥಿಂಕ್ ಟ್ಯಾಂಕ್‌ನ ಸದಸ್ಯೆಯಾಗಿ ಸೇವೆ ಸಲ್ಲಿಸಿರುವುದು ಅವರ ಅನುಭವದ ವ್ಯಾಪ್ತಿಯನ್ನು ತೋರಿಸುತ್ತದೆ.

ವಿಜಯಲಕ್ಷ್ಮಿ ಬಿದರಿ ಅವರು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ. ಶಂಕರ್ ಮಹಾದೇವ್ ಬಿದರಿ ಅವರ ಪುತ್ರಿಯಾಗಿದ್ದು, ಅವರ ಮಹಾರಾಷ್ಟ್ರ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಪದೋನ್ನತಿ ನಮ್ಮ ಕರ್ನಾಟಕ ರಾಜ್ಯಕ್ಕೆ ಅಪಾರ ಹೆಮ್ಮೆಯ ವಿಷಯವಾಗಿದೆ. ಸಾರ್ವಜನಿಕ ಸೇವೆಯ ಮೌಲ್ಯಗಳನ್ನು ಜೀವನದ ಭಾಗವಾಗಿಸಿಕೊಂಡಿರುವ ಬಿದರಿ ಕುಟುಂಬವು ಆಡಳಿತ ಹಾಗೂ ಕಾನೂನು ರಕ್ಷಣಾ ಕ್ಷೇತ್ರಗಳಲ್ಲಿ ನೀಡಿರುವ ನಿಷ್ಠಾವಂತ ಸೇವೆ ಸಮಾಜದ ಮೆಚ್ಚುಗೆಗೆ ಪಾತ್ರವಾಗಿದೆ. ತಂದೆ, ಪುತ್ರಿ, ಮಗ ಹಾಗೂ ಕುಟುಂಬದ ಇತರ ಸದಸ್ಯರು ದೇಶಸೇವೆಯನ್ನು ಆದರ್ಶವಾಗಿ ರೂಪಿಸಿಕೊಂಡಿರುವುದು ನಾಗರಿಕ ಸೇವೆಗಳಲ್ಲಿ ಆಸಕ್ತಿ ಹೊಂದಿರುವ ಯುವ ಪೀಳಿಗೆಗೆ ಪ್ರೇರಣೆಯಾಗಿದ್ದು, ವಿಜಯಲಕ್ಷ್ಮಿ ಬಿದರಿ ಅವರ ಈ ಸಾಧನೆ ಕುಟುಂಬದ ಸೇವಾ ಪರಂಪರೆಯನ್ನು ಮತ್ತಷ್ಟು ಉಜ್ವಲಗೊಳಿಸಿದೆ.







