ಅಜ್ಜಂಪುರ : ಮಾನವ ಜನಾಂಗಕ್ಕೆ ದೇವರು ನೀಡಿರುವ ಕೊಡುಗೆಗಳು ಅಪಾರ. ನಿಲ್ಲದಂತೆ ಹರಿಯುವ ನೀರು, ತಿನ್ನುವ ಅನ್ನ, ಉಸಿರಾಡುವ ಗಾಳಿ— ಎಲ್ಲವು ದೇವರ ಅಮೂಲ್ಯ ದಾನ. ಈ ಅನ್ನ–ನೀರು–ಉಸಿರಿನಷ್ಟೇ ಮಾನವನಿಗೆ ಧರ್ಮಪಾಲನೆಯ ಅಗತ್ಯವೂ ಅಷ್ಟೇ ಅನಿವಾರ್ಯವಾಗಿದೆ ಎಂದು ಶ್ರೀ ರಂಭಾಪುರಿ ಪೀಠದ ಪರಮಪೂಜ್ಯ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಇಂದಿನ ಸಮಾಜದಲ್ಲಿ ಮಾನವ ವಿವಿಧ ವ್ಯಸನಗಳಿಗೆ ಒಳಗಾಗಿ ಸಂಕಷ್ಟಕರ ಬದುಕು ನಡೆಸುತ್ತಿರುವುದು ಆತಂಕಕಾರಿ ಸಂಗತಿ. ವ್ಯಸನಗಳ ಪರಿಣಾಮ ಅನೇಕ ಕುಟುಂಬಗಳು ಬೀದಿಗೆ ಬೀಳುತ್ತಿರುವುದು ಸಮಾಜದ ಮುಂದಿರುವ ದೊಡ್ಡ ಸವಾಲಾಗಿದೆ. ವ್ಯಸನಮುಕ್ತ, ಶಾಂತ ಹಾಗೂ ಸಂಸ್ಕಾರಯುತ ಸಮಾಜ ನಿರ್ಮಾಣವಾಗಬೇಕಾದರೆ ಜನರಲ್ಲಿ ಜಾಗೃತಿ ಮೂಡಿಸಿ, ಧರ್ಮಪ್ರಜ್ಞೆ ಬೆಳೆಸುವುದು ಅತ್ಯಂತ ಅಗತ್ಯವೆಂದು ಜಗದ್ಗುರುಗಳು ತಿಳಿಸಿದರು.

ಅವರು ತಾಲ್ಲೂಕಿನ ಬುಕ್ಕಂಬುಧಿ ಗ್ರಾಮದ ಪಂಪಾ ವಿರೂಪಾಕ್ಷೇಶ್ವರ ದೇವಾಲಯದಿಂದ ಬೆಟ್ಟದವರೆಗೆ ನಡೆದ ಪರಮ ತಪಸ್ವಿ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಬೆಳ್ಳಿ ಪುತ್ಥಳಿ ಮೆರವಣಿಗೆಯ ಸಂದರ್ಭದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀ ಉಜ್ಜಯಿನಿ ಹಾಗೂ ಶ್ರೀ ಕಾಶಿ ಜಗದ್ಗುರುಗಳು ಉಪಸ್ಥಿತರಿದ್ದು, ಪುಷ್ಪಾರ್ಚನೆ ಸಲ್ಲಿಸಿ, ಚಾಲನೆ ನೀಡಿ, ಲಿಖಿತ ಆಶೀರ್ವಚನ ನೀಡಿದರು.
ಮಾನವನು ಸಹಜವಾಗಿ ಸದಾ ಸುಖವನ್ನು ಬಯಸುವವನು. ಯಾರಿಗೂ ಕಷ್ಟ ಬೇಕಾಗುವುದಿಲ್ಲ. ಹೊರಗೆ ಬಡತನವಿದ್ದರೂ ಒಳಗೆ ಶ್ರೀಮಂತಿಕೆ ಇದ್ದರೆ ಜೀವನ ಸುಂದರವಾಗುತ್ತದೆ. ಆದರೆ ಹೊರಗೆ ಶ್ರೀಮಂತಿಕೆ ಇದ್ದು ಒಳಗೆ ಬಡತನವಿದ್ದರೆ ಜೀವನವೇ ಭಾರವಾಗುತ್ತದೆ. ಹೃದಯದಲ್ಲಿ ಶ್ರೀಮಂತಿಕೆ ಇಲ್ಲದೆ ಕೇವಲ ಬುದ್ಧಿಶಕ್ತಿ ಇದ್ದರೆ ಅದರಿಂದ ಪ್ರಯೋಜನವಿಲ್ಲ ಎಂದು ಜಗದ್ಗುರುಗಳು ಹೇಳಿದರು.

ನೀರು ಎರೆಯುವವರಿಗೆ ಮತ್ತು ಕಡಿಯುವವರಿಗೆ ಭೇದಭಾವ ತೋರಿಸದೆ ನೆರಳು ಹಾಗೂ ಹಣ್ಣು ನೀಡುವ ಮರದಂತೆ ಮಹಾತ್ಮರು ಯಾರಿಗೂ ಕೆಡುಕನ್ನು ಬಯಸದೇ ಸದಾ ಹಿತವನ್ನೇ ಚಿಂತಿಸುತ್ತಾರೆ. ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಅಂತಹ ಮಹಾನ್ ತಪಸ್ವಿಗಳಾಗಿದ್ದರು. ತಮ್ಮ ಜೀವನದಲ್ಲೇ ನೋವು ಅನುಭವಿಸಿ, ನಂಬಿದ ಭಕ್ತರಿಗಾಗಿ ಭಕ್ತಸಂಕುಲಕ್ಕೆ ಒಳಿತನ್ನು ಮಾಡಿದ ಮಹಾನುಭಾವರು ಅವರು. ಭೌತಿಕ ದೇಹಕ್ಕೆ 90 ವರ್ಷಗಳಾದರೂ ಅವರ ಸೇವಾ ಸಾಧನೆಗಳು ಇಂದಿಗೂ ಗೋಚರಿಸುತ್ತಿವೆ. ಸತ್ಪುರುಷರು, ಸಂತ ಮಹಾತ್ಮರ ಕೃಪಾಕಾರುಣ್ಯದಿಂದ ಜೀವನವನ್ನು ಕಟ್ಟಿಕೊಳ್ಳಬೇಕು ಎಂಬ ಸಂದೇಶವನ್ನು ಅವರು ನೀಡಿದರು.
ಇದೇ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು, ಸಂಪತ್ತಿನಿಂದ ದೊರೆಯುವ ಸುಖ–ಸೌಕರ್ಯಗಳಿಗೆ ಶ್ರಮ ಮತ್ತು ಸಾಧನೆ ಅಗತ್ಯ. ಅಧರ್ಮದ ದಾರಿಯಲ್ಲಿ ನೂರು ಹೆಜ್ಜೆ ಹಾಕುವುದಕ್ಕಿಂತ ನ್ಯಾಯ–ನೀತಿ–ಧರ್ಮದ ಮಾರ್ಗದಲ್ಲಿ ನಡೆದರೆ ಅದೇ ಶ್ರೇಯಸ್ಕರ. ತಮ್ಮ ಶಿವಯೋಗ ಸಾಧನೆ, ತಪಸ್ಸು ಹಾಗೂ ಬೋಧಿಸಿದ ಚಿಂತನೆಗಳು ಎಲ್ಲರಿಗೂ ದಾರಿದೀಪವಾಗಿವೆ ಎಂದು ಹೇಳಿದರು.

ಶ್ರೀಮತ್ಕಾಶಿ ಡಾ. ಚಂದ್ರಶೇಖರ ಜಗದ್ಗುರುಗಳು ಆಶೀರ್ವಚನದಲ್ಲಿ ಮಾತನಾಡಿ, ಒಳ್ಳೆಯದು ಉಳಿಯಬೇಕಾದರೆ ಕೆಟ್ಟದೊಂದಿಗೆ ಹೋರಾಟ ಅನಿವಾರ್ಯ. ಸತ್ಯಕ್ಕಿಂತ ದೊಡ್ಡ ಧರ್ಮ ಇನ್ನೊಂದಿಲ್ಲ. ಸತ್ಯವೇ ಧರ್ಮದ ರಕ್ಷಣಾಕವಚ. ಸುಳ್ಳಿಗೆ ಸುಣ್ಣ ಬಣ್ಣ ಹಚ್ಚಬಹುದು, ಆದರೆ ನಿಜ ಸತ್ಯಕ್ಕೆ ಯಾವ ಅಲಂಕಾರವೂ ಅಗತ್ಯವಿಲ್ಲ. ಬದುಕಿನ ಯಶಸ್ಸಿಗೆ ಲೌಕಿಕ ಜ್ಞಾನ ಎಷ್ಟು ಅಗತ್ಯವೋ, ಅಷ್ಟೇ ಆಧ್ಯಾತ್ಮಿಕ ಜ್ಞಾನವೂ ಅಗತ್ಯ ಎಂದು ಹೇಳಿದರು. ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಜಗದೋದ್ಧಾರಕ್ಕೆ ಮಹಾನ್ ಶಕ್ತಿಯಾಗಿದ್ದು, ಅವರ ಆದರ್ಶ ಚಿಂತನೆಗಳು ಜನಸಾಮಾನ್ಯರಿಗೆ ಮಾರ್ಗದರ್ಶನವಾಗಿವೆ ಎಂದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಏಡೆಯೂರು ಕ್ಷೇತ್ರ ರೇಣುಕ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ, ಸ್ನೇಹ, ಸಂತೃಪ್ತಿ ಹಾಗೂ ಸಂತೋಷವೇ ಜೀವನದ ನಿಜವಾದ ಐಶ್ವರ್ಯ. ದುರ್ಜನರ ಸಂಗದಿಂದ ದೂರವಿದ್ದು ಸಜ್ಜನರ ಸಂಗ ಮಾಡುವುದೇ ಶ್ರೇಯಸ್ಕರ ಎಂದು ಹೇಳಿದರು. ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಭಗವತ್ಪಾದರು ಆಚಾರ್ಯ ಶ್ರೇಷ್ಠರಾಗಿದ್ದು, ಜನಸಮುದಾಯದ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸಿದವರು ಎಂದು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ಶ್ರೀ ರಂಭಾಪುರಿ, ಶ್ರೀ ಉಜ್ಜಯಿನಿ ಹಾಗೂ ಶ್ರೀ ಕಾಶಿ ಜಗದ್ಗುರುಗಳ ನೇತೃತ್ವದಲ್ಲಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನರಲ್ಲಿ ಜಾಗೃತಿ ಹಾಗೂ ಧರ್ಮಪ್ರಜ್ಞೆ ಮೂಡಿಸುವ ಸಂಕಲ್ಪದೊಂದಿಗೆ ಪಾದಯಾತ್ರೆ ನಡೆಯಿತು. ಅಖಿಲ ಭಾರತ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ ಸಿಂದಗಿ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು, ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಶಿವಾಚಾರ್ಯರು, ಹುಲಿಕೇರಿ ವಿರೂಪಾಕ್ಷಲಿಂಗ ಶಿವಾಚಾರ್ಯರು ಸೇರಿದಂತೆ ಸಿದ್ಧರಬೆಟ್ಟ, ಹುಣಸಘಟ್ಟ, ನಂದೀಪುರ, ಮಳಲಿ, ಹಣೆ, ಕೆ.ಬಿದರೆ, ಅಂಬಳದೇವರಹಳ್ಳಿ, ಬೀರೂರು ಮೊದಲಾದ ಸ್ಥಳಗಳಿಂದ ಆಗಮಿಸಿದ ಶ್ರೀಗಳು ಉತ್ಸವದಲ್ಲಿ ಭಾಗವಹಿಸಿದ್ದರು.
ಸಕಲ ವಾದ್ಯ ವೈಭವಗಳೊಂದಿಗೆ ಸಂಭ್ರಮದಿಂದ ಉತ್ಸವ ಜರುಗಿತು. ಸಹಸ್ರಾರು ಭಕ್ತರು ಪಾಲ್ಗೊಂಡು ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಬೆಳ್ಳಿ ಮಂಗಲ ಮೂರ್ತಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ದೃಶ್ಯ ಅತ್ಯಂತ ಅಪೂರ್ವವಾಗಿ ಮೂಡಿಬಂದಿತು.











