ಇಂದು ಜನವರಿ 12. ಆಧ್ಯಾತ್ಮದ ಮೂಲಕ ದೇಶಪ್ರೇಮವನ್ನು ಬಿತ್ತಿದ, ಸಿಡಿಲಮರಿ, ವೀರ ಸನ್ಯಾಸಿ, ಯುಗಪುರುಷ ಸ್ವಾಮಿ ವಿವೇಕಾನಂದರ ಜನ್ಮದಿನ. ಈ ಮಹಾನ್ ಪುರುಷರ ಜನ್ಮದಿನವನ್ನು ನಾವು ಹೆಮ್ಮೆಯಿಂದ “ರಾಷ್ಟ್ರೀಯ ಯುವ ದಿನ”ವೆಂದು ಆಚರಿಸುತ್ತಿದ್ದೇವೆ.
ಸ್ವಾರ್ಥ, ವಂಚನೆ, ಆಲಸ್ಯ, ಅಸಡ್ಡೆ ಮತ್ತು ನಿರಾಸಕ್ತಿ ಇವೆಲ್ಲವನ್ನೂ ತೊರೆದು, ವಿವೇಕದ ದೀಪವನ್ನು ಹಚ್ಚಿಕೊಂಡು ರಾಷ್ಟ್ರ ನಿರ್ಮಾಣದ ಮಹತ್ತರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂಬ ಸಂದೇಶವನ್ನು ಈ ದಿನ ನಮಗೆ ನೀಡುತ್ತದೆ. ಇಂತಹ ಮಹಾನ್ ಚಿಂತನೆಯೊಂದಿಗೆ ನಾವು ಎಲ್ಲರೂ ರಾಷ್ಟ್ರಭಕ್ತಿಯ ವಿವೇಕ ಮತಿಗಳಾಗೋಣವೇ?
ರವೀಂದ್ರನಾಥ ಠಾಗೋರರು ಸ್ವಾಮಿ ವಿವೇಕಾನಂದರ ಕುರಿತು ಹೇಳಿದ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ,
“ನೀವು ಭಾರತವನ್ನು ಅರಿಯಬೇಕೆಂದಿದ್ದರೆ ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡಿ. ಅವರಲ್ಲಿ ಎಲ್ಲವೂ ರಚನಾತ್ಮಕವಾದುದು; ಯಾವುದೂ ನಕಾರಾತ್ಮಕವಾದುದಿಲ್ಲ.”

ಚಿಕಾಗೋ ವಿಶ್ವಧರ್ಮ ಸಮ್ಮೇಳನ – ಭಾರತದ ಆತ್ಮಗೌರವದ ಘೋಷಣೆ
ಸ್ವಾಮಿ ವಿವೇಕಾನಂದರು ೧೮೯೩ರ ಸೆಪ್ಟೆಂಬರ್ ೧೧ರಂದು ಅಮೆರಿಕಾದ ಚಿಕಾಗೋ ನಗರದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಐತಿಹಾಸಿಕ ಭಾಷಣ ಭಾರತೀಯ ಇತಿಹಾಸದಲ್ಲಿಯೇ ಮರೆಯಲಾಗದ ಅಧ್ಯಾಯವಾಗಿದೆ. ಸಾವಿರಾರು ಕಿಲೋಮೀಟರ್ ದೂರದ ವಿದೇಶಿ ನೆಲದಲ್ಲಿ ನಿಂತು, ಭಾರತದ ಭವ್ಯ ಪರಂಪರೆ, ಆಧ್ಯಾತ್ಮಿಕ ಶಕ್ತಿ, ವಿಶ್ವಮಾನವತೆಯ ಸಂದೇಶವನ್ನು ಜಗತ್ತಿಗೆ ಸಾರಿದ ಆ ಕ್ಷಣಗಳು ಇಂದು ಸಹ ನಮಗೆ ರೋಮಾಂಚನ ಉಂಟುಮಾಡುತ್ತವೆ.
ಆ ಸಮ್ಮೇಳನವನ್ನು ಆಯೋಜಿಸಿದ ಅಮೆರಿಕದ ಉದ್ದೇಶ, ತಮ್ಮ ಪಂಥವೇ ಶ್ರೇಷ್ಠವೆಂದು ಜಗತ್ತಿಗೆ ಸಾರುವುದು ಎಂಬ ಮಾತುಗಳು ಕೇಳಿಬರುತ್ತಿದ್ದ ಕಾಲದಲ್ಲಿ, ಸ್ವಾಮಿ ವಿವೇಕಾನಂದರು ವೇದಿಕೆಗೆ ಏರಿ,
“ಅಮೆರಿಕಾದ ಸಹೋದರಿಯರೇ ಮತ್ತು ಸಹೋದರರೇ…” ಎಂದು ಆರಂಭಿಸಿದ ಒಂದೇ ವಾಕ್ಯದಲ್ಲಿ ಇಡೀ ಸಭಾಂಗಣವನ್ನು ನಿಂತು ಚಪ್ಪಾಳೆ ತಟ್ಟುವಂತೆ ಮಾಡಿದರು.
ಪ್ರಪಂಚದ ಅತ್ಯಂತ ಪ್ರಾಚೀನ ಸನ್ಯಾಸಿ ಪರಂಪರೆಯ ಪರವಾಗಿ, ಕೋಟ್ಯಂತರ ಭಾರತೀಯರ ಪರವಾಗಿ ಕೃತಜ್ಞತೆ ಸಲ್ಲಿಸಿದ ಅವರ ಮಾತುಗಳು ವಿಶ್ವ ಭ್ರಾತೃತ್ವದ ಸಂದೇಶವನ್ನು ಸಾರಿದವು. ಮರುದಿನದ ಪತ್ರಿಕೆಗಳು
“ಈ ಸಮ್ಮೇಳನದ ನಿಜವಾದ ಹೀರೋ ಸ್ವಾಮಿ ವಿವೇಕಾನಂದರು” ಎಂದು ಶ್ಲಾಘಿಸಿತು. ಮತ್ತೊಂದು ಪತ್ರಿಕೆ, “ಅಮೆರಿಕವೇ ಭಾರತದಿಂದ ಇಂತಹವರನ್ನು ಕರೆಸಿ ಪಾಠ ಕಲಿಯಬೇಕು” ಎಂದು ಬರೆದಿತ್ತು.

ಯುವಶಕ್ತಿಗೆ ದಿಕ್ಕು ತೋರಿದ ಮಹಾತ್ಮ
ವಜ್ರದೇಹದ, ಗಟ್ಟಿಮುಟ್ಟಾದ, ತೇಜಸ್ಸು ತುಂಬಿದ ಆ ತರುಣ ಸನ್ಯಾಸಿ,
“ಏಳಿ! ಎದ್ದೇಳಿ!! ಗುರಿ ಮುಟ್ಟುವವರೆಗೆ ನಿಲ್ಲದಿರಿ!!!”
ಎಂದು ನಿದ್ರಿಸುತಿದ್ದ ಭಾರತೀಯ ಆತ್ಮಗಳಿಗೆ ಮಿಂಚಿನಂತೆ ಹೊಡೆದರು.
ಸ್ವಾಮಿ ವಿವೇಕಾನಂದರು ಕೇವಲ ಧಾರ್ಮಿಕ ನಾಯಕನಲ್ಲ; ಅವರು ರಾಷ್ಟ್ರ ನಿರ್ಮಾತೃ. ಹಿಂದೂ ಧರ್ಮದ ಬಗ್ಗೆ ಅಂದಿನ ಯುವಜನತೆಯಲ್ಲಿ ಮೂಡಿದ್ದ ಗೊಂದಲ, ಹೀನಭಾವನೆ ಮತ್ತು ನಿರಾಸಕ್ತಿಯನ್ನು ತೊಡೆದು ಹಾಕಿ, ಅದರ ಶ್ರೇಷ್ಠತೆ, ವೈಜ್ಞಾನಿಕತೆ ಮತ್ತು ಮಾನವೀಯತೆಯನ್ನು ಬಿಂಬಿಸಿದವರು.
ಎಲ್ಲ ದೇವತೆಗಳನ್ನೂ ತಾಯಿ ಭಾರತಿಯಲ್ಲೇ ಸಮೀಕರಿಸಿದ ಅವತಾರ ಪುರುಷರು ಅವರು. ಈ ಚಿಂತನೆಯೇ ನಮ್ಮ ರಾಷ್ಟ್ರಕವಿ ಕುವೆಂಪು ಅವರಲ್ಲಿ “ವಿಶ್ವಮಾನವ” ಸಂದೇಶವಾಗಿ ವ್ಯಕ್ತವಾಯಿತು. ಕುವೆಂಪು ಅವರ ಚಿಂತನೆಗೆ ಸ್ವಾಮಿ ವಿವೇಕಾನಂದರ ಪ್ರಭಾವವಿತ್ತು ಎಂಬುದು ಎಲ್ಲರಿಗೂ ತಿಳಿದ ವಿಚಾರ.

ಆಧ್ಯಾತ್ಮ ಮತ್ತು ರಾಷ್ಟ್ರಪ್ರಜ್ಞೆಯ ಸಂಗಮ
ಸ್ವಾಮಿ ವಿವೇಕಾನಂದರು ಆಧ್ಯಾತ್ಮವನ್ನು ಪಲಾಯನವಾದವೆಂದುಕೊಂಡಿರಲಿಲ್ಲ. ಅವರ ದೃಷ್ಟಿಯಲ್ಲಿ ಆಧ್ಯಾತ್ಮವೆಂದರೆ ಸಮಾಜೋದ್ಧಾರದ ಶಕ್ತಿ. ಶಾಸ್ತ್ರ, ಪುರಾಣಕ್ಕಿಂತ ಕಾಯಕ, ಶ್ರಮ ಮತ್ತು ಸೇವೆಯೇ ಯೋಗ ಎಂದು ಅವರು ಯುವಕರಿಗೆ ಬೋಧಿಸಿದರು.
ದುರ್ಬಲವಾಗಿದ್ದ ಭಾರತಕ್ಕೆ ಶಕ್ತಿ ಬೇಕೆಂದು ಅವರು ಅರಿತಿದ್ದರು. ಆ ಶಕ್ತಿ ಯುವಕರಲ್ಲಿದೆ ಎಂದು ಅವರು ನಂಬಿದ್ದರು. ಅದಕ್ಕಾಗಿ ವ್ಯಕ್ತಿತ್ವ ನಿರ್ಮಾಣದ ಜೊತೆಗೆ ಸಮಾಜ ನಿರ್ಮಾಣದ ಶಿಕ್ಷಣ ಅವಶ್ಯಕವೆಂದು ಅವರು ಘೋಷಿಸಿದರು.
ಇಂತಹ ಕಾರಣಗಳಿಂದಲೇ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಜನವರಿ 12ರಂದು ರಾಷ್ಟ್ರೀಯ ಯುವ ದಿನವೆಂದು ಆಚರಿಸಲಾಗುತ್ತಿದೆ.
ಸ್ವಾಮಿ ವಿವೇಕಾನಂದರ ಪ್ರಕಾರ ಯುವಕರು ಹೀಗಿರಬೇಕು –
🟥 ① ಮುಖದಲ್ಲಿ ತೇಜಸ್ಸು
🟥 ② ದೇಹದಲ್ಲಿ ಶಕ್ತಿ
🟥 ③ ಮನಸ್ಸಿನಲ್ಲಿ ಉತ್ಸಾಹ
🟥 ④ ಬುದ್ಧಿಯಲ್ಲಿ ವಿವೇಕ
🟥 ⑤ ಹೃದಯದಲ್ಲಿ ಕರುಣೆ
🟥 ⑥ ಮಾತೃಭೂಮಿಯ ಮೇಲೆ ಅಪಾರ ಪ್ರೀತಿ
🟥 ⑦ ಇಂದ್ರಿಯಗಳ ಮೇಲೆ ಸಂಯಮ
🟥 ⑧ ಸ್ಥಿರ ಮನಸ್ಸು
🟥 ⑨ ದೃಢ ಆತ್ಮವಿಶ್ವಾಸ
🟥 ⑩ ಪ್ರಬಲ ಇಚ್ಛಾಶಕ್ತಿ
🟥 ⑪ ಸಿಂಹದಂತೆ ನಿರ್ಭಯತೆ
🟥 ⑫ ಉಚ್ಚ ಧ್ಯೇಯ
🟥 ⑬ ಅನಂತ ಚಿಂತನೆ
🟥 ⑭ ವ್ಯಸನಮುಕ್ತ ಜೀವನ
🟥 ⑮ ಶಿಸ್ತುಬದ್ಧ ಬದುಕು
🟥 ⑯ ಗುರುಭಕ್ತಿ
🟥 ⑰ ದೀನ–ದುರ್ಬಲರ ಮೇಲಿನ ಮಮತೆ
🟥 ⑱ ಸೇವಾಭಾವ
🟥 ⑲ ದೇವಭಕ್ತಿ
🟥 ⑳ ನೀತಿಪಾಲನೆ
🟥 ㉑ ಶುದ್ಧ ಚಾರಿತ್ರ
🟥 ㉒ ಸಮಾಜಕ್ಕೆ ಆದರ್ಶ ಯುವಕನಾಗಿರುವುದು
ಒಟ್ಟಿನಲ್ಲಿ, ಎಷ್ಟೇ ಎಡರು–ತೊಡರುಗಳು ಬಂದರೂ ದೇಶ ಕಟ್ಟುವ ಪವಿತ್ರ ಕಾರ್ಯದಲ್ಲಿ ನಾವು ಹಿಂದೆ ಸರಿಯಬಾರದು. ಅಪ್ಪಟ ದೇಶಭಕ್ತಿ, ಆಧ್ಯಾತ್ಮದೊಂದಿಗೆ ಬೆಸೆದ ರಾಷ್ಟ್ರಪ್ರಜ್ಞೆ ಸದಾ ಜಾಗೃತವಾಗಿರಬೇಕು ಎಂಬುದೇ ಸ್ವಾಮಿ ವಿವೇಕಾನಂದರ ಸಂದೇಶ.
ಅವರ ಕನಸಿನ ಭಾರತವನ್ನು ನಿರ್ಮಿಸಲು ನಾವು ಸ್ವಾರ್ಥವನ್ನು ತ್ಯಜಿಸಿ, ಯುವಶಕ್ತಿಯ ಮಂತ್ರವನ್ನು ಜಪಿಸಿದಾಗ ಮಾತ್ರ ಭವ್ಯ, ಶಕ್ತಿಶಾಲಿ ಭಾರತವನ್ನು ಕಟ್ಟಲು ಸಾಧ್ಯ.
ಇಂತಹ ವಿವೇಕವೀರ ಭಾರತದ ನಿರ್ಮಾಣ ನಮ್ಮ ಕೈಯಲ್ಲಿದೆ.
ಏನಂತೀರಾ…?
✍️ ಲೇಖನ:
ಶ್ರೀ ಸಂತೋಷ್ ಬಿದರಗಡ್ಡೆ
ಶಿಕ್ಷಕ, ಸಾಹಿತಿ
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ,
ತಿಳವಳ್ಳಿ, ತಾ: ಹಾನಗಲ್ಲ












