ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಎಚ್ಚರ…! ಎಚ್ಚರ…! ಡೊಮಿನೊಸ್ ಪಿಜ್ಜಾ ಬುಕ್ ಮಾಡದೇ ಮನೆ ಬಾಗಿಲಿಗೆ ಬರುತ್ತಿದೆಯೇ..?

On: January 13, 2026 6:58 PM
Follow Us:

ಆರ್ಡರ್ ಇಲ್ಲದೆ ಗಲಾಟೆ ಯಾಕೆ? ಡೆಲಿವರಿ ವ್ಯವಸ್ಥೆಗೆ ಪ್ರಶ್ನೆ,.!? ಶಿವಮೊಗ್ಗದಲ್ಲಿ ಅಚ್ಚರಿ ಹುಟ್ಟಿಸಿದ ಮೊಬೈಲ್ ದುರ್ಬಳಕೆ ಪ್ರಕರಣ – ಸಾರ್ವಜನಿಕರಲ್ಲಿ ಆತಂಕ

ಶಿವಮೊಗ್ಗ: ನಗರದಲ್ಲಿ ಇಂದು ನಡೆದ ಒಂದು ವಿಚಿತ್ರ ಮತ್ತು ಆತಂಕಕಾರಿ ಘಟನೆ ಸಾರ್ವಜನಿಕರ ಗಮನ ಸೆಳೆದಿದೆ. ರಾಜ್ಯದ ಪ್ರತಿಷ್ಠಿತ ಅಗ್ನಿಯುಗ ಪತ್ರಿಕೆಯ ಉಪಸಂಪಾದಕರಾದ ಗಿರೀಶ್ ಅವರ ಹೆಸರಿನಲ್ಲಿ ಹಾಗೂ ಅವರ ವಿನೋಬನಗರದ ನರಸಿಂಹ ಬಡಾವಣೆಯ ಮನೆ ವಿಳಾಸಕ್ಕೆ, ಯಾವುದೇ ಪಿಜ್ಜಾ ಆರ್ಡರ್ ಮಾಡದೇ ಇದ್ದರೂ ಡೊಮಿನೊಸ್ ಚಿಕನ್ ಪಿಜ್ಜಾ ಡೆಲಿವರಿ ಮಾಡಲು ಬಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇಂದು ಡೊಮಿನೊಸ್ ಪಿಜ್ಜಾ ಡೆಲಿವರಿ ಬಾಯ್ ಗಿರೀಶ್ ಅವರ ಮನೆಗೆ ಬಂದು ಫೋನ್ ಕರೆ ಮಾಡಿ ಪಿಜ್ಜಾ ಸ್ವೀಕರಿಸುವಂತೆ ತಿಳಿಸಿದ್ದಾನೆ. ಇದರಿಂದ ಅಚ್ಚರಿ ಗೊಂಡ ಗಿರೀಶ್, “ನಾನು ಯಾವುದೇ ಪಿಜ್ಜಾ ಆರ್ಡರ್ ಮಾಡಿಲ್ಲ” ಎಂದು ಸ್ಪಷ್ಟವಾಗಿ ಹೇಳಿದರೂ, ಡೆಲಿವರಿ ಬಾಯ್ ಮಾತ್ರ “ನಿಮ್ಮ ಮೊಬೈಲ್ ನಂಬರ್‌ನಿಂದಲೇ ಆರ್ಡರ್ ಆಗಿದೆ, ನೀವು ತೆಗೆದುಕೊಳ್ಳಲೇಬೇಕು” ಎಂದು ಗಟ್ಟಿಯಾಗಿ ವಾದಿಸಿದ್ದಾನೆ. ಇದರಿಂದ ಇಬ್ಬರ ನಡುವೆ ತೀವ್ರ ವಾಗ್ವಾದ ಉಂಟಾಗಿದೆ.

ಡೊಮಿನೊಸ್ ಸೆಂಟರ್‌ಗೆ ತೆರಳಿದರೂ ಉತ್ತರವೇ ಇಲ್ಲ

ನಂತರ ಗಿರೀಶ್ ಹಾಗೂ ಡೆಲಿವರಿ ಬಾಯ್ ಇಬ್ಬರೂ ಉಷಾ ನರ್ಸಿಂಗ್ ಹೋಂ ಬಳಿ ಇರುವ ಡೊಮಿನೊಸ್ ಪಿಜ್ಜಾ ಸೆಂಟರ್‌ಗೆ ತೆರಳಿದ್ದಾರೆ. ಅಲ್ಲಿ ಗಿರೀಶ್ ಅವರು, “ನನ್ನ ಮೊಬೈಲ್ ನಂಬರ್ ಬಳಸಿಕೊಂಡು ಆರ್ಡರ್ ಮಾಡಿರುವುದು ಯಾರು? ನಾನು ಯಾವುದೇ ಆರ್ಡರ್ ಮಾಡಿಲ್ಲ” ಎಂದು ಸೆಂಟರ್ ವ್ಯವಸ್ಥಾಪಕರಿಗೆ ಪ್ರಶ್ನಿಸಿದರೂ, ಅಲ್ಲಿನ ಸಿಬ್ಬಂದಿ ಯಾವುದೇ ಸ್ಪಷ್ಟ ಮಾಹಿತಿಯನ್ನೂ ನೀಡದೆ ಮೌನ ವಹಿಸಿದ್ದಾರೆ.

ಆಶ್ಚರ್ಯಕರ ಸಂಗತಿ ಎಂದರೆ, ಗಿರೀಶ್ ಅವರು ಸಂಪೂರ್ಣ ಸಸ್ಯಹಾರಿ. ಅವರು ಯಾವುದೇ ರೀತಿಯ ನಾನ್‌ವೆಜ್ ಆಹಾರವನ್ನು ಸೇವಿಸುವುದಿಲ್ಲ. ಇಂತಹ ವ್ಯಕ್ತಿಯ ಹೆಸರಿನಲ್ಲಿ ಚಿಕನ್ ಪಿಜ್ಜಾ ಆರ್ಡರ್ ಆಗಿರುವುದು ಈ ಘಟನೆಯ ಅನುಮಾನವನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಸೈಬರ್ ಕ್ರೈಮ್ ದೂರು – ಪ್ರತಿಕ್ರಿಯೆ ಶೂನ್ಯ

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಗಿರೀಶ್ ಅವರು ತಕ್ಷಣವೇ ಸೈಬರ್ ಕ್ರೈಮ್ ವಿಭಾಗಕ್ಕೆ ಆನ್‌ಲೈನ್ ಮೂಲಕ ದೂರು ದಾಖಲಿಸಿದ್ದಾರೆ. ಆದರೆ ದೂರು ನೀಡಿದ ಬಳಿಕವೂ ಇದುವರೆಗೂ ಪೊಲೀಸ್ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲವೆಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಯಾರಾದರೂ ಏನಾದರೂ ಕಳುಹಿಸಿದರೆ…?” ಎಂಬ ಆತಂಕ

ಈ ಪ್ರಕರಣದ ಮತ್ತೊಂದು ಆತಂಕಕಾರಿ ಅಂಶವೆಂದರೆ, ಯಾರಾದರೂ ದುರುದ್ದೇಶದಿಂದ ಯಾರ ಮನೆ ವಿಳಾಸಕ್ಕೆ ಯಾವುದೇ ವಸ್ತುವನ್ನು ಕಳುಹಿಸಬಹುದಾದ ಪರಿಸ್ಥಿತಿ ನಿರ್ಮಾಣವಾಗಿರುವುದು. “ಇಂತಹ ಪಾರ್ಸೆಲ್‌ಗಳಲ್ಲಿ ಡ್ರಗ್ಸ್, ಗಾಂಜಾ ಅಥವಾ ಇತರೆ ಅಪಾಯಕಾರಿ ವಸ್ತುಗಳು ಇರಬಹುದಲ್ಲವೇ? ಆಗ ಅದರ ಹೊಣೆ ಯಾರು ಹೊರುತ್ತಾರೆ?” ಎಂಬ ಪ್ರಶ್ನೆಯನ್ನು ಗಿರೀಶ್ ಅವರು ಎತ್ತಿದ್ದಾರೆ.

ಡೊಮಿನೊಸ್ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಖಂಡನೆ

ಡೊಮಿನೊಸ್ ಪಿಜ್ಜಾ ಸೆಂಟರ್‌ನ ಸಿಬ್ಬಂದಿ ವರ್ಗದ ವರ್ತನೆಗೆ ಗಿರೀಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇದು ನಮ್ಮ ವ್ಯವಸ್ಥೆಯ ತಪ್ಪು, ನಾವು ಪರಿಶೀಲನೆ ಮಾಡಿ ನಿಮಗೆ ಸಹಾಯ ಮಾಡುತ್ತೇವೆ” ಎಂಬ ಒಂದು ಮಾತಿನ ಭರವಸೆಯನ್ನೂ ನೀಡದೆ, ಮೂಕರಂತೆ ವರ್ತಿಸಿರುವುದು ವ್ಯಾಪಾರ ಸಂಸ್ಥೆಯ ಜವಾಬ್ದಾರಿಯ ಕೊರತೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಸಾರ್ವಜನಿಕರಿಗೆ ಎಚ್ಚರಿಕೆ, ಪೊಲೀಸರಿಗೆ ಮನವಿ

ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ತಡೆಯಲು, ಸೈಬರ್ ಕ್ರೈಮ್ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಬೇಕು. ಮೊಬೈಲ್ ನಂಬರ್ ದುರ್ಬಳಕೆ ಮಾಡಿ ಸುಳ್ಳು ಆರ್ಡರ್‌ಗಳನ್ನು ಮಾಡುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗಿರೀಶ್ ಅವರು ಆಗ್ರಹಿಸಿದ್ದಾರೆ.

ಡೆಲಿವರಿ ಸೇವೆಗಳು ದಿನೇದಿನೇ ವಿಸ್ತಾರಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ಡೆಲಿವರಿ ಬಾಯ್ಸ್‌ಗಳ ವರ್ತನೆ ನಿಯಂತ್ರಣಕ್ಕೆ ವಿಶೇಷ ಕಾನೂನು ಅಥವಾ ಸ್ಪಷ್ಟ ನಿಯಮಾವಳಿ ಅಗತ್ಯವಾಗಿರುವುದು ತುರ್ತು ವಿಷಯವಾಗಿದೆ. ಆರ್ಡರ್ ಮಾಡಿದವರೊಂದಿಗೆ ಅಥವಾ ಆರ್ಡರ್ ಮಾಡದ ನಾಗರಿಕರೊಂದಿಗೆ ಡೆಲಿವರಿ ಸಿಬ್ಬಂದಿ ತೊಡಗುವ ವಾಗ್ವಾದ, ಬೆದರಿಕೆ, ಗೂಂಡಾ ಶೈಲಿಯ ವರ್ತನೆ, ಧ್ವನಿ ಏರಿಕೆ ಅಥವಾ ಮಾನಸಿಕ ಒತ್ತಡ ಉಂಟುಮಾಡುವ ನಡೆಗಳನ್ನು ಕಠಿಣವಾಗಿ ತಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಸಂಬಂಧಿಸಿದ ಕಂಪನಿಗಳು ತಮ್ಮ ಡೆಲಿವರಿ ಸಿಬ್ಬಂದಿಗೆ ನಡವಳಿಕೆ ಸಂಹಿತೆ, ಕಾನೂನು ಜಾಗೃತಿ ಹಾಗೂ ಗ್ರಾಹಕ ಹಕ್ಕುಗಳ ಬಗ್ಗೆ ಕಡ್ಡಾಯ ತರಬೇತಿ ನೀಡಬೇಕು. ಇಂತಹ ನಿಯಮಗಳನ್ನು ಉಲ್ಲಂಘಿಸುವ ಡೆಲಿವರಿ ಬಾಯ್ಸ್‌ಗಳ ವಿರುದ್ಧ ದಂಡ, ಸೇವೆಯಿಂದ ಅಮಾನತು, ಪರವಾನಗಿ ರದ್ದುಪಡಿಸುವುದು ಸೇರಿದಂತೆ ಕಾನೂನು ಕ್ರಮ ಜರುಗಿಸುವ ವ್ಯವಸ್ಥೆ ರೂಪಿಸಬೇಕಾಗಿದೆ. ಇದರಿಂದ ಸಾರ್ವಜನಿಕರ ಸುರಕ್ಷತೆ, ಗೌರವ ಹಾಗೂ ವಿಶ್ವಾಸ ಕಾಪಾಡಲು ಸಾಧ್ಯವಾಗುತ್ತದೆ.

ಈ ಘಟನೆ ಗಿರೀಶ್ ಅವರಿಗೆ ಮಾತ್ರ ಸೀಮಿತವಲ್ಲ, ಇಂತಹ ವಂಚನೆಯಿಂದ ಎಷ್ಟು ಜನ ಈಗಾಗಲೇ ತೊಂದರೆ ಅನುಭವಿಸಿದ್ದಾರೋ ಎಂಬ ಆತಂಕವೂ ವ್ಯಕ್ತವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮೊಬೈಲ್ ನಂಬರ್ ಹಾಗೂ ವೈಯಕ್ತಿಕ ಮಾಹಿತಿಯ ದುರ್ಬಳಕೆಯ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂಬುದು ಈ ಘಟನೆಯಿಂದ ಸಿಗುವ ಸ್ಪಷ್ಟ ಸಂದೇಶ.

— ಸಾರ್ವಜನಿಕ ಹಿತದೃಷ್ಟಿಯಿಂದ ಎಚ್ಚರಿಕೆ ಅಗತ್ಯ.

K.M.Sathish Gowda

Join WhatsApp

Join Now

Facebook

Join Now

Read more

‘ಕೊಟ್ಟ ಮಾತು ಉಳಿಯುತ್ತದೆಯೇ?’ – ಕಾಂಗ್ರೆಸ್ ಒಳಕಿಚ್ಚಿಗೆ ಸುರೇಶ್ ಮಾರ್ಮಿಕ ನುಡಿ, ಡಿಕೆಶಿ ದೆಹಲಿ ಪಯಣ ರಾಜಕೀಯ ಚರ್ಚೆ ತೀವ್ರ

“ಮೊದಲು ನಿಮ್ಮ ಹೈಕಮಾಂಡ್‌ ಹುಡುಕಿ, ಬಳಿಕ ಮೋದಿ ಬಗ್ಗೆ ಮಾತನಾಡಿ”: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ತೀವ್ರ ವಾಗ್ದಾಳಿ

ಪ್ಲಾಸ್ಟಿಕ್ ಮುಕ್ತ ಶಿವರಾತ್ರಿ ಉತ್ಸವಕ್ಕೆ ಹರಕೆರೆ ಹರಕೇಶ್ವರ ದೇವಸ್ಥಾನದಲ್ಲಿ ಸಂಕಲ್ಪ

ಜನಸೇವೆಗೆ ಬದ್ಧ ನಾಯಕತ್ವ: ಹಾರನಹಳ್ಳಿಯಲ್ಲಿ ಡಿ.ಎಸ್. ಅರುಣ್ ಅವರಿಂದ ಪಂಚಾಯಿತಿ ಕಟ್ಟಡ ಉದ್ಘಾಟನೆ ಹಾಗೂ ಹಕ್ಕುಪತ್ರ ವಿತರಣೆ

‘ಎಲ್ಲರೂ ಬಾಯಿ ಮುಚ್ಚಿಕೊಂಡಿರಬೇಕು’: ಕಾಂಗ್ರೆಸ್ ನಾಯಕರಿಗೆ ಡಿಕೆಶಿ ಖಡಕ್ ಸಂದೇಶ

ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿ–ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಕೇಂದ್ರದ ಮೇಲೆ ಒತ್ತಡ: ಮುಖ್ಯಮಂತ್ರಿ ಸಿದ್ದರಾಮಯ್ಯ

Leave a Comment