ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ – “ಆಡಳಿತ ಸತ್ತಿದೆ, ಕುರ್ಚಿಯಲ್ಲಿ ಕುಳಿತವರು ಮಾತ್ರ ಬದಲಾಗಬಹುದು”
ಮೈಸೂರು, ಜ.15 : ಮೈಸೂರು ನಗರದ ಚಾಮರಾಜ ವಿಧಾನಸಭಾ ಕ್ಷೇತ್ರದಿಂದ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಇಚ್ಛೆಯನ್ನು ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ. ನಾನು ಚಾಮರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷ ನಿರ್ಧಾರ ಮಾಡಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಗುರುವಾರ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, “ಆಕಾಂಕ್ಷಿ ಮತ್ತು ಅಭ್ಯರ್ಥಿ ಎಂಬ ಎರಡು ಪದಗಳ ಅರ್ಥವೇ ತಿಳಿಯದೆ ಕೆಲವರು ಮಾತನಾಡುತ್ತಿದ್ದಾರೆ. ಅಭ್ಯರ್ಥಿಯನ್ನು ಯಾರು ಎಂದು ತೀರ್ಮಾನಿಸುವುದು ಪಕ್ಷದ ಕೆಲಸ. ನಾನು ಕೇವಲ ಟಿಕೆಟ್ ಆಕಾಂಕ್ಷಿ ಮಾತ್ರ. ಅಂತಿಮ ನಿರ್ಧಾರವನ್ನು ನಮ್ಮ ಪಕ್ಷವೇ ತೆಗೆದುಕೊಳ್ಳಲಿದೆ” ಎಂದು ಸ್ಪಷ್ಟಪಡಿಸಿದರು.
ಚಾಮರಾಜ ಕ್ಷೇತ್ರದ ಜನರು ವಿದ್ಯಾವಂತ, ವಿಚಾರಶೀಲ ಹಾಗೂ ಪ್ರಬುದ್ಧ ಪ್ರತಿನಿಧಿಯನ್ನು ಬಯಸುತ್ತಿದ್ದಾರೆ. ವಾಸು ಎಚ್.ಎಸ್. ಮತ್ತು ಶಂಕರಲಿಂಗೇಗೌಡ ಅವರ ರಾಜಕೀಯ ಹಾದಿಯಲ್ಲಿ ನಾನು ನಡೆಯುತ್ತಿದ್ದೇನೆ. ಅವಕಾಶ ದೊರೆತರೆ ಕ್ಷೇತ್ರದ ಅಭಿವೃದ್ಧಿಗೆ ಸಂಪೂರ್ಣವಾಗಿ ಶ್ರಮಿಸುತ್ತೇನೆ ಎಂದು ಪ್ರತಾಪ್ ಸಿಂಹ ಹೇಳಿದರು.

ಸರ್ಕಾರದ ವಿರುದ್ಧ ಕಟು ಟೀಕೆ
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, “ಪ್ರಸ್ತುತ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಸತ್ತು ಹೋಗಿದೆ. ಆದರೆ, ಈ ಸರ್ಕಾರ ಅವಧಿಗೆ ಮುನ್ನವೇ ಬಿದ್ದು ಹೋಗುವುದಿಲ್ಲ. ಸತ್ತ ಆಡಳಿತದ ಹೆಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಹೊತ್ತಿದ್ದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಿಂದೆ ಹೊತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.
ಆಡಳಿತದ ಹೆಣವನ್ನು ಮುಂದೆ ಯಾರು ಹೊತ್ತರೂ, ಹಿಂದೆ ಯಾರು ಹೊತ್ತರೂ ವ್ಯತ್ಯಾಸವೇನೂ ಇಲ್ಲ. ಕುರ್ಚಿಯಲ್ಲಿ ಕೂರುವವರು ಬದಲಾಗಬಹುದು ಅಷ್ಟೇ ಹೊರತು, ಆಡಳಿತದ ಸ್ವರೂಪದಲ್ಲಿ ಯಾವುದೇ ಬದಲಾವಣೆ ಬರಲಾರದು ಎಂದು ಅವರು ಹೇಳಿದರು.
ಸಿದ್ದರಾಮಯ್ಯ–ದೇವರಾಜ ಅರಸು ಹೋಲಿಕೆ ತಿರಸ್ಕಾರ
ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಮಾತನಾಡಿದ ಪ್ರತಾಪ್ ಸಿಂಹ, “ಸಿದ್ದರಾಮಯ್ಯ ಯಾವತ್ತಿಗೂ ದೇವರಾಜ ಅರಸು ಆಗಲು ಸಾಧ್ಯವಿಲ್ಲ. ಜನರ ಮನಸ್ಸಿನಿಂದ ಅವರು ಬಹಳ ಬೇಗ ದೂರವಾಗುತ್ತಾರೆ. ಸಿದ್ದರಾಮಯ್ಯರನ್ನು ಜನ ಮರೆಯುವ ದಿನಗಳು ದೂರವಿಲ್ಲ” ಎಂದು ಕಟುವಾಗಿ ಟೀಕಿಸಿದರು.
ಡಿ.ಕೆ. ಶಿವಕುಮಾರ್ ಅವರೊಂದಿಗೆ ಪೈಪೋಟಿ ನಡೆಸುತ್ತಾ ಸಿದ್ದರಾಮಯ್ಯ ಇನ್ನಷ್ಟು ದಿನ ತಮ್ಮ ಸ್ಥಾನ ಉಳಿಸಿಕೊಳ್ಳಬಹುದು. ಆದರೆ, ಅದರಿಂದ ಯಾವುದೇ ಪ್ರಯೋಜನವಿಲ್ಲ. ಕಳೆದ ಚುನಾವಣೆಯಲ್ಲಿ ಜನ ಮಾಡಿದ ತಪ್ಪಿನಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇನ್ನೂ ಎರಡೂವರೆ ವರ್ಷ ಈ ಸತ್ತ ಆಡಳಿತವನ್ನು ಜನ ಸಹಿಸಿಕೊಳ್ಳಲೇಬೇಕು ಎಂದು ಹೇಳಿದರು.
“ಸರ್ಕಾರ ಬೀಳಲ್ಲ, ಆದರೆ ಕುರ್ಚಿಯವರು ಬದಲಾಗಬಹುದು”
ಈ ಸರ್ಕಾರ ಬೀಳುವುದಿಲ್ಲ ಎಂಬುದನ್ನು ಒಪ್ಪಿಕೊಂಡ ಪ್ರತಾಪ್ ಸಿಂಹ, “ಸರ್ಕಾರ ಉಳಿಯಬಹುದು. ಆದರೆ, ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರುವವರು ಬದಲಾಗಬಹುದು. ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ಜೀವಂತಿಕೆ ಇಲ್ಲ” ಎಂದು ಮಾರ್ಮಿಕವಾಗಿ ನುಡಿದರು.
ಚಾಮರಾಜ ಕ್ಷೇತ್ರದ ರಾಜಕೀಯ ವಲಯದಲ್ಲಿ ಪ್ರತಾಪ್ ಸಿಂಹ ಅವರ ಈ ಹೇಳಿಕೆಗಳು ಮಹತ್ವದ ಚರ್ಚೆಗೆ ಕಾರಣವಾಗಿದ್ದು, ಮುಂದಿನ ವಿಧಾನಸಭಾ ಚುನಾವಣೆಯ ರಾಜಕೀಯ ತಂತ್ರಗಾರಿಕೆಗೆ ಹೊಸ ಆಯಾಮ ನೀಡಿವೆ.







