ಶಿವಮೊಗ್ಗ: ಶಿವಮೊಗ್ಗದ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಪ್ರಧಾನಮಂತ್ರಿ ವಿಶ್ವಕರ್ಮ (ಪಿ.ಎಂ–ವಿಶ್ವಕರ್ಮ)’ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸಲಕರಣೆಗಳ ಕಿಟ್‌ಗಳನ್ನು ವಿತರಿಸಿ ಶುಭ ಕೋರಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಿವಮೊಗ್ಗ ಸಂಸದರಾದ ಬಿ.ವೈ. ರಾಘವೇಂದ್ರ, ಕುಲಕಸುಬುಗಳನ್ನು ನಂಬಿ ಬದುಕುತ್ತಿರುವ ವಿಶ್ವಕರ್ಮ ಸಮುದಾಯದ ಸಹೋದರ–ಸಹೋದರಿಯರ ಸಬಲೀಕರಣಕ್ಕಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಈ ಯೋಜನೆ ದೇಶದ ಪರಂಪರ ವೃತ್ತಿಗಳಿಗೆ ಹೊಸ ಆಯಾಮ ನೀಡಿದೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು, ವಿಶ್ವಕರ್ಮ ಸಮುದಾಯದ ವೃತ್ತಿಗಳಿಗೆ ಗೌರವ, ಆರ್ಥಿಕ ಭದ್ರತೆ ಹಾಗೂ ಸ್ವಾವಲಂಬನೆ ಒದಗಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು. ಟೂಲ್‌ಕಿಟ್‌ಗಳ ವಿತರಣೆಯಿಂದ ಕಾರ್ಮಿಕರ ಕೆಲಸದ ಗುಣಮಟ್ಟ ಹೆಚ್ಚುವ ಜೊತೆಗೆ ಉತ್ಪಾದಕತೆ ಮತ್ತು ಆದಾಯ ವೃದ್ಧಿಗೂ ಸಹಕಾರಿಯಾಗಲಿದೆ. ಪರಂಪರೆಯ ಕೌಶಲ್ಯಗಳನ್ನು ಆಧುನಿಕ ತಂತ್ರಜ್ಞಾನ ಮತ್ತು ಸರ್ಕಾರದ ಬೆಂಬಲದೊಂದಿಗೆ ಮುಂದಿನ ಹಂತಕ್ಕೆ ಕೊಂಡೊಯ್ಯುವಲ್ಲಿ ‘ಪಿ.ಎಂ–ವಿಶ್ವಕರ್ಮ’ ಯೋಜನೆ ಪ್ರಮುಖ ಪಾತ್ರ ವಹಿಸಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್ ಅವರು ಮಾತನಾಡಿ, “ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ಫಲವಾಗಿ ಜಾರಿಯಾದ ಈ ಯೋಜನೆ, ವಿಶ್ವಕರ್ಮ ಸಮುದಾಯದ ಕೈಗಾರಿಕೆಗೆ ಗೌರವ, ಸ್ವಾವಲಂಬನೆ ಹಾಗೂ ಆರ್ಥಿಕ ಭದ್ರತೆ ನೀಡಲಿದೆ. ಟೂಲ್‌ಕಿಟ್ ವಿತರಣೆಯಿಂದ ಕೆಲಸದ ಗುಣಮಟ್ಟ ಹೆಚ್ಚುವ ಜೊತೆಗೆ ಆದಾಯ ವೃದ್ಧಿಗೂ ಸಹಕಾರಿಯಾಗಲಿದೆ” ಎಂದರು.
ಶಿವಮೊಗ್ಗ ಗ್ರಾಮಾಂತರದ ಮಾಜಿ ಶಾಸಕರಾದ ಕೆ.ಬಿ. ಅಶೋಕ್ ನಾಯಕ್ ಅವರು, “ಪರಂಪರೆ ವೃತ್ತಿಗಳನ್ನು ಉಳಿಸಿ ಬೆಳೆಸುವ ಮೂಲಕ ಯುವ ಪೀಳಿಗೆಗೂ ಉದ್ಯೋಗಾವಕಾಶ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ವಿಶ್ವಕರ್ಮ ಸಮುದಾಯಸ್ವಾವಲಂಬಿಗಳಾಗಬೇಕು” ಎಂದು ಕರೆ ನೀಡಿದರು.

ಅಂಚೆ ಅಧೀಕ್ಷರಾದ ಕುಮಾರಸ್ವಾಮಿ ಅವರು ಮಾತನಾಡಿ, ಯೋಜನೆಯ ಅನುಷ್ಠಾನದಲ್ಲಿ ಅಂಚೆ ಇಲಾಖೆಯ ಪಾತ್ರವನ್ನು ವಿವರಿಸಿ, ಅರ್ಹ ಫಲಾನುಭವಿಗಳು ಸರಳವಾಗಿ ನೋಂದಣಿ ಮಾಡಿಕೊಂಡು ಸರ್ಕಾರದ ನೆರವು ಪಡೆಯಲು ಇಲಾಖೆ ಸದಾ ಸಹಕಾರ ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎನ್.ಕೆ. ಜಗದೀಶ್, ಜ್ಯೋತಿ ಪ್ರಕಾಶ್, ಬಳ್ಳೇಕೆರೆ ಸಂತೋಷ್, ಕೆ. ದೇವರಾಜ್, ಶಿವಾನಂದ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಟೂಲ್‌ಕಿಟ್ ಪಡೆದ ಫಲಾನುಭವಿಗಳು ಕೇಂದ್ರ ಸರ್ಕಾರಕ್ಕೆ ಹಾಗೂ ಕಾರ್ಯಕ್ರಮದ ಆಯೋಜಕರಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದ ಅಂತ್ಯದಲ್ಲಿ ‘ಪಿ.ಎಂ–ವಿಶ್ವಕರ್ಮ’ ಯೋಜನೆಯ ಮೂಲಕ ಕುಲಕಸುಬುಗಳಿಗೆ ಹೊಸ ಜೀವ ತುಂಬುವ ಪ್ರಯತ್ನ ಮುಂದುವರಿಯಲಿ, ವಿಶ್ವಕರ್ಮ ಸಮುದಾಯದ ಬದುಕು ಇನ್ನಷ್ಟು ಸಬಲವಾಗಲಿ ಎಂಬ ಆಶಯ ವ್ಯಕ್ತಪಡಿಸಲಾಯಿತು.







