ಶಿವಮೊಗ್ಗ: ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕ ಏಕೀಕರಣದ ರೂವಾರಿಗಳು, ಅಪಾರ ಜನಸೇವೆಯ ಮೂಲಕ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅಳಿಸಲಾಗದ ಗುರುತು ಮೂಡಿಸಿದ್ದ ಲೋಕನಾಯಕ ಭೀಮಣ್ಣ ಖಂಡ್ರೆ ಅವರು ತಮ್ಮ ಇಹಲೋಕದ ಯಾತ್ರೆಯನ್ನು ಪೂರ್ಣಗೊಳಿಸಿ ಚಿರಶಾಂತಿಗೆ ಲೀನರಾದ ಸುದ್ದಿ ಅತ್ಯಂತ ವೇದನೆಯನ್ನುಂಟುಮಾಡಿದೆ. ನೂರಾ ಎರಡು ವರ್ಷಗಳ ದೀರ್ಘ, ಅರ್ಥಪೂರ್ಣ ಹಾಗೂ ಹೋರಾಟಮಯ ಜೀವನವನ್ನು ಸಾರ್ಥಕಗೊಳಿಸಿದ ಅವರು, ಸಮಾಜದ ಪ್ರತಿಯೊಂದು ಹಂತದಲ್ಲಿಯೂ ನ್ಯಾಯ, ಸಮಾನತೆ ಮತ್ತು ಮಾನವೀಯ ಮೌಲ್ಯಗಳಿಗಾಗಿ ಅಚಲವಾಗಿ ನಿಂತ ಮಹಾನ್ ವ್ಯಕ್ತಿತ್ವವಾಗಿದ್ದರು.

ಸ್ವಾತಂತ್ರ್ಯ ಹೋರಾಟದ ದಿನಗಳಿಂದಲೇ ರಾಷ್ಟ್ರಭಕ್ತಿಯ ಬೀಜವನ್ನು ತಮ್ಮ ಬದುಕಿನಲ್ಲಿ ಬಿತ್ತಿಕೊಂಡಿದ್ದ ಭೀಮಣ್ಣ ಖಂಡ್ರೆ ಅವರು, ಕರ್ನಾಟಕ ಏಕೀಕರಣ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ನಾಡಿನ ಭೌಗೋಳಿಕ ಮತ್ತು ಸಾಂಸ್ಕೃತಿಕ ಏಕತೆಯ ಕನಸನ್ನು ಸಾಕಾರಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರ ರಾಜಕೀಯ ಜೀವನವು ಅಧಿಕಾರಕ್ಕಾಗಿ ಅಲ್ಲ, ಜನಸೇವೆಯಿಗಾಗಿ ಎಂಬುದನ್ನು ಪ್ರತಿಯೊಂದು ಹಂತದಲ್ಲಿಯೂ ಸಾಬೀತುಪಡಿಸಿದಂತಿತ್ತು.

ಆರು ಬಾರಿ ವಿಧಾನಸಭೆ ಸದಸ್ಯರಾಗಿ, ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದ ಅವರು, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮೌಲ್ಯಾಧಾರಿತ ರಾಜಕಾರಣದ ಮಾದರಿಯನ್ನು ನಿರ್ಮಿಸಿದರು. ಸಚಿವರಾಗಿ ಕಾರ್ಯನಿರ್ವಹಿಸುವ ಅವಧಿಯಲ್ಲಿ ಸಾರಿಗೆ ವ್ಯವಸ್ಥೆಯ ಸುಧಾರಣೆ, ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ವಿಸ್ತರಣೆ ಮತ್ತು ಸಾರ್ವಜನಿಕ ಹಿತಾಸಕ್ತಿಯ ಯೋಜನೆಗಳಿಗೆ ಆದ್ಯತೆ ನೀಡಿದವರು ಎಂಬುದು ಸ್ಮರಣೀಯ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಅವರು ಸಮುದಾಯದ ಸಂಘಟನೆ, ಜಾಗೃತಿ ಮತ್ತು ಹಕ್ಕುಗಳ ರಕ್ಷಣೆಗೆ ದಿಟ್ಟ ಧ್ವನಿಯಾಗಿ ಕಾರ್ಯನಿರ್ವಹಿಸಿದರು. ಸಮುದಾಯಕ್ಕೆ ಅನ್ಯಾಯವಾದಾಗಲೆಲ್ಲ ದಿಟ್ಟತನದಿಂದ ದನಿಯೆತ್ತಿ, ಭಯವಿಲ್ಲದೆ ಸತ್ಯವನ್ನು ಪ್ರತಿಪಾದಿಸಿದ ಹೋರಾಟಗಾರರಾಗಿದ್ದರು. ಅವರ ಮಾತುಗಳಲ್ಲಿ ಕಠೋರತೆ ಕಂಡರೂ ಅದರ ಹಿಂದೆ ಸಮಾಜದ ಹಿತ ಮತ್ತು ನ್ಯಾಯದ ಮೇಲಿನ ಅಚಲ ಬದ್ಧತೆ ಅಡಗಿತ್ತು.

ಬಸವತತ್ವದ ಮೇಲೆ ಅಪಾರ ನಂಬಿಕೆ ಹೊಂದಿದ್ದ ಶರಣರಾಗಿದ್ದ ಅವರು, ನಿತ್ಯ ಇಷ್ಟಲಿಂಗ ಪೂಜೆ, ಕಾಯಕ ಮತ್ತು ದಾಸೋಹಗಳ ತತ್ವಗಳನ್ನು ತಮ್ಮ ಬದುಕಿನ ಅವಿಭಾಜ್ಯ ಅಂಗವನ್ನಾಗಿಸಿಕೊಂಡಿದ್ದರು. ಅವರ ಜೀವನವೇ ಒಂದು ವಚನದಂತೆ ಸರಳ, ಶುದ್ಧ ಮತ್ತು ಮೌಲಿಕವಾಗಿತ್ತು. ರಾಜಕೀಯದ ಗದ್ದಲದ ನಡುವೆಯೂ ಶರಣ ಸಂಸ್ಕೃತಿಯ ಮೌಲ್ಯಗಳನ್ನು ಅವರು ಎಂದಿಗೂ ಮರೆತವರಲ್ಲ.
ಇವೆಲ್ಲಕ್ಕೂ ಕಿರೀಟಪ್ರಾಯವಾಗಿದ್ದದ್ದು ಅವರ ಅಸಾಧಾರಣ ಜೀವನೋತ್ಸಾಹ. ನೂರಾ ಎರಡು ವರ್ಷಗಳ ತುಂಬು ಜೀವನದಲ್ಲಿಯೂ ಸಮಾಜದ ಬೆಳವಣಿಗೆಯನ್ನು ಗಮನಿಸುತ್ತಾ, ಹೊಸ ತಲೆಮಾರಿಗೆ ಮಾರ್ಗದರ್ಶನ ನೀಡುತ್ತಾ ಸದಾ ಸಕ್ರಿಯವಾಗಿದ್ದ ಅವರು ಅನೇಕರಿಗೆ ಪ್ರೇರಣೆಯಾಗಿ ಉಳಿದಿದ್ದಾರೆ.
ಭೀಮಣ್ಣ ಖಂಡ್ರೆ ಅವರ ಅಗಲುವಿಕೆಯಿಂದ ನಾಡು ಒಬ್ಬ ಮಹಾನ್ ನಾಯಕನನ್ನು ಕಳೆದುಕೊಂಡಿದೆ. ಆದರೆ ಅವರ ಹೋರಾಟಮಯ ಬದುಕು, ಮೌಲಿಕ ಜೀವನ ಮತ್ತು ಸಮಾಜದ ಮೇಲಿನ ನಿಸ್ವಾರ್ಥ ಸೇವೆ ಬಸವತತ್ವದ ಬೆಳಕಿನಲ್ಲಿ ಎಂದೆಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ.

ಈ ದುಃಖದ ಸಂದರ್ಭದಲ್ಲಿ ಪರಮಾತ್ಮನು ಅವರ ಕುಟುಂಬಕ್ಕೆ, ಆಪ್ತವಲಯಕ್ಕೆ ಹಾಗೂ ಅಪಾರ ಅಭಿಮಾನಿ ವೃಂದಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ. ಮಹಾ ಶರಣರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇವೆ.
ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ,. ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು
ಬಸವಕೇಂದ್ರ, ಶಿವಮೊಗ್ಗ
ಹಿರಿಯ ಚೇತನ ಡಾ. ಭೀಮಣ್ಣ ಖಂಡ್ರೆ ಸ್ಮರಣೆಗೆ ಬಸವಕೇಂದ್ರದಲ್ಲಿ ಇಂದು ಶ್ರದ್ಧಾಂಜಲಿ ಸಭೆ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಗೌರವಾಧ್ಯಕ್ಷರು, ಮಾಜಿ ಸಚಿವರು, ಶತಾಯುಷಿ ಡಾ. ಭೀಮಣ್ಣ ಖಂಡ್ರೆ ಅವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ, ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಭೆಯನ್ನು ಇಂದು ಮಧ್ಯಾಹ್ನ 3 ಗಂಟೆಗೆ ಬಸವ ಕೇಂದ್ರ, ವೆಂಕಟೇಶ್ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಭೆ ಶ್ರೀ ಮ.ನಿ.ಪ್ರ. ಡಾ. ಮರುಳ ಸಿದ್ಧ ಸ್ವಾಮೀಜಿಗಳು, ಬಸವ ಕೇಂದ್ರ ಅವರ ಸಾನಿಧ್ಯದಲ್ಲಿ ನಡೆಯಲಿದೆ. ಎಲ್ಲರೂ ಭಾಗವಹಿಸಿ ಹಿರಿಯ ಚೇತನಕ್ಕೆ ಗೌರವ ಸಲ್ಲಿಸುವಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಶಿವಮೊಗ್ಗ ಜಿಲ್ಲಾ ಘಟಕವು ಮನವಿ ಮಾಡಿದೆ.







