ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

“ಸಮಾಜ ಒಡೆಯುವ ರಾಜಕಾರಣಕ್ಕೆ ಸ್ಪಷ್ಟ ಸಂದೇಶ”: ಈಶ್ವರಪ್ಪ–ಕಾಂತೇಶ್‌ ನಡೆಗೆ ವೀರಶೈವ ಲಿಂಗಾಯತ ಸಮಾಜದ ಖಡಕ್ ಎಚ್ಚರಿಕೆ,.!

On: January 18, 2026 12:17 PM
Follow Us:

ಶಿವಮೊಗ್ಗ, : ಇತ್ತೀಚಿನ ದಿನಗಳಲ್ಲಿ ವೀರಶೈವ ಲಿಂಗಾಯತ ಸಮಾಜದ ಒಳಗಿನ ಗೊಂದಲ, ರಾಜಕೀಯ ಹಸ್ತಕ್ಷೇಪ ಮತ್ತು ಧರ್ಮ–ಸಮಾಜದ ಹೆಸರಿನಲ್ಲಿ ನಡೆಯುತ್ತಿರುವ ವಿಭಜನಾ ಪ್ರಯತ್ನಗಳಿಗೆ ಸ್ಪಷ್ಟ ತಡೆಗೋಡೆ ನಿರ್ಮಿಸುವ ಉದ್ದೇಶದಿಂದ, ನಿನ್ನೆ ಸಂಜೆ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಸಮಸ್ತ ಸಮಾಜ ಬಾಂಧವರ ಮಹತ್ವದ ಸಭೆ ನಡೆಯಿತು. ಸಮಾಜದ ಹಿರಿಯರು, ಮುಖಂಡರು, ವಿವಿಧ ಉಪಪಂಗಡಗಳ ಪ್ರತಿನಿಧಿಗಳು ಒಂದೇ ವೇದಿಕೆಯಲ್ಲಿ ಸೇರಿ, ಸಮಾಜ ಒಡೆಯುವ ಯಾವುದೇ ರಾಜಕೀಯ ಆಟಕ್ಕೆ ಅವಕಾಶವಿಲ್ಲ ಎಂಬ ಗಟ್ಟಿ ಸಂದೇಶವನ್ನು ಸರ್ವಾನುಮತದಿಂದ ನೀಡಿದರು.

ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಆಯನೂರು ಮಂಜುನಾಥ್ ಅವರು, ವೀರಶೈವ ಲಿಂಗಾಯತ ಸಮಾಜದ ಹೆಸರಿನಲ್ಲಿ ನಡೆಯುತ್ತಿರುವ ಉದ್ದೇಶಪೂರ್ವಕ ಗೊಂದಲ ಸೃಷ್ಟಿಯನ್ನು ಕಠಿಣ ಪದಗಳಲ್ಲಿ ಖಂಡಿಸಿದರು. “ನಾವು ವಿಭಿನ್ನ ರಾಜಕೀಯ ಪಕ್ಷಗಳಲ್ಲಿ ಇರಬಹುದು. ಚುನಾವಣೆ ಬಂದಾಗ ಪಕ್ಷಗಳು ಮುಖ್ಯ. ಆದರೆ ಸಮಾಜದ ವಿಚಾರ ಬಂದಾಗ ಪಕ್ಷಗಳನ್ನು ಬದಿಗಿಟ್ಟು ಒಂದಾಗಬೇಕು. ಸಮಾಜಕ್ಕೆ ಅಪಮಾನ, ಅವಮಾನ ಅಥವಾ ಪ್ರತ್ಯಕ್ಷ–ಪರೋಕ್ಷ ದಾಳಿಗಳು ನಡೆದಾಗ, ನಾವು ಎಲ್ಲರೂ ವೀರಶೈವ ಲಿಂಗಾಯತರೆಂಬ ಒಂದೇ ಗುರುತಿನಲ್ಲಿ ನಿಲ್ಲಬೇಕು” ಎಂದು ಅವರು ಹೇಳಿದರು.

ವೀರಶೈವ ಲಿಂಗಾಯತ ಜಾತಿಗಣತಿ ಸಂದರ್ಭದಲ್ಲಿ ಉಂಟಾದ ಗೊಂದಲಗಳನ್ನು ಉಲ್ಲೇಖಿಸಿದ ಮಂಜುನಾಥ್, “ಈಶ್ವರಪ್ಪನವರು ‘ವೀರಶೈವ ಲಿಂಗಾಯತ’ ಎಂದು ಬರೆಸಲು ಹೇಳಲು ಅವರಿಗೆ ಅಧಿಕಾರ ಕೊಟ್ಟವರು ಯಾರು? ಸಮಾಜದ ಪರವಾಗಿ ಸರ್ಟಿಫಿಕೆಟ್ ಕೊಡುವ ಹಕ್ಕು ಯಾರಿಗೂ ಇಲ್ಲ. ನಮ್ಮ ಸಮಾಜಕ್ಕೆ ಮಾರ್ಗದರ್ಶನ ನೀಡಲು ಸಾಕಷ್ಟು ನಾಯಕರು, ಮಠಾಧಿಪತಿಗಳು ಇದ್ದಾರೆ” ಎಂದು ಪ್ರಶ್ನಿಸಿದರು.

ಈಶ್ವರಪ್ಪನವರು ಯಡಿಯೂರಪ್ಪನವರ ವಿರುದ್ಧ ಉದ್ದೇಶಪೂರ್ವಕವಾಗಿ ‘ಸಂಗೋಳ್ಳಿ ರಾಯಣ್ಣ ಬ್ರಿಗೇಡ್’ಕಟ್ಟಿದ್ದು, ವೀರಶೈವ ಲಿಂಗಾಯತ ವಿರುದ್ಧ ‘ಹಿಂದೂ ಧರ್ಮ’ಹೆಸರಿನಲ್ಲಿ ಸಂಘಟನೆ ಮಾಡಿದ್ದು, “ಇಡೀ ರಾಜ್ಯ ನಮ್ಮದು”ಎಂಬ ಘೋಷಣೆಗಳ ಮೂಲಕ ಸಮಾಜವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಾರೇ ಎಂಬ ಆರೋಪಗಳನ್ನು ಮಂಜುನಾಥ್ ಗಂಭೀರವಾಗಿ ಮುಂದಿಟ್ಟರು. “ಅಧಿಕಾರ ಕಳೆದುಕೊಂಡ ನಂತರ ಏಕಾಏಕಿ ಎಲ್ಲವೂ ಸರಿಯಾಗಬೇಕು ಎನ್ನುವ ಮಾತುಗಳು ನಂಬಿಕೆ ಹುಟ್ಟಿಸುವುದಿಲ್ಲ” ಎಂದರು.

ನಿಮ್ಮ ಸಮಾಜದ ಒಳಪಂಗಡಗಳನ್ನು ಒಟ್ಟುಗೂಡಿಸುವ ಕೆಲಸ ಮಾಡಿದ್ದೀರಾ? ಅಥವಾ ರಾಜಕೀಯ ಲಾಭಕ್ಕಾಗಿ ಹಾಗೂ ನಿಮ್ಮ ಮತ್ತು ನಿಮ್ಮ ಮಗನ ರಾಜಕೀಯ ಭವಿಷ್ಯಕ್ಕಾಗಿ ಎಲ್ಲ ಸಮಾಜಗಳಲ್ಲೂ ಕೈ ಹಾಕುತ್ತಿದ್ದೀರಾ? ಎಂದು ಈಶ್ವರಪ್ಪನವರ ನಡೆಗೆ ಆಯನೂರು ಮಂಜುನಾಥ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಯಡಿಯೂರಪ್ಪನವರು ತಮ್ಮ ರಾಜಕೀಯ ಗುರುಗಳೆಂದು ಹೇಳಿದ ಅವರು, ಉದ್ದೇಶಪೂರ್ವಕವಾಗಿ ಯಡಿಯೂರಪ್ಪನವರ ವಿರುದ್ಧ ಸಂಘಟನೆ ಕಟ್ಟಿದ್ದು, ವೀರಶೈವ ಲಿಂಗಾಯತ ವಿರೋಧಿ ನಿಲುವು ತೆಗೆದುಕೊಂಡಿದ್ದನ್ನು ಸಮಾಜ ಮರೆತಿಲ್ಲ ಎಂದರು.

ಶಿವಸಂಕಲ್ಪ ಕಾರ್ಯಕ್ರಮದ ಉದ್ಘಾಟನೆಗೆ ಸಮಾಜವನ್ನು ಒಟ್ಟುಗೂಡಿಸುವ ನಾಯಕರನ್ನು ಕಡೆಗಣಿಸಿ, ಕೆಲವೇ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡಿರುವುದನ್ನೂ ಸಭೆಯಲ್ಲಿ ಪ್ರಶ್ನಿಸಲಾಯಿತು. “ಆಯನೂರು ಮಂಜುನಾಥ್, ಚನ್ನಬಸಪ್ಪ, ಸಂಸದ ಬಿ.ವೈ. ರಾಘವೇಂದ್ರ, ಎಸ್.ಪಿ. ದಿನೇಶ್, ಹೆಚ್.ಸಿ. ಯೋಗೀಶ್ ಮೊದಲಾದವರನ್ನು ಯಾಕೆ ಕರೆಯಲಿಲ್ಲ? ಅವರು ಬಿಜೆಪಿ, ಕಾಂಗ್ರೆಸ್‌ ಪರರಾಗಿದ್ದಾರೆ ಎಂಬ ಕಾರಣಕ್ಕೇ ಆಹ್ವಾನವಿಲ್ಲವೇ?” ಎಂಬ ಪ್ರಶ್ನೆಗಳು ಸಭೆಯಲ್ಲಿ ಮೊಳಗಿದವು.

ವೀರಶೈವ ಲಿಂಗಾಯತ ಸಮಾಜದ ಕಾರ್ಯಕ್ರಮಗಳಿಗೆ ಬೇರೆ ಸಮಾಜದ ವ್ಯಕ್ತಿಗಳನ್ನು ಕರೆಸಿ, ನಮ್ಮ ಸಮಾಜಕ್ಕೆ ಪಾಠ ಹೇಳಿಸುವ ಪ್ರಯತ್ನಗಳನ್ನೂ ಸಭೆ ತೀವ್ರವಾಗಿ ಖಂಡಿಸಿತು. ನಮ್ಮ ಸಮಾಜದ ಉದ್ಘಾಟನೆಗೆ ಬೇರೆ ಸಮಾಜದವರು ಬೇಕೆ? ಇದು ಸಮಾಜದ ಗೌರವಕ್ಕೆ ಧಕ್ಕೆ ತರುವ ನಡೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ನಮ್ಮ ಸಮಾಜದಲ್ಲಿ ನೂರು ಸಂಘಟನೆಗಳಿದ್ದರೂ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ‘ಎಲ್ಲವನ್ನೂ ಹೊಂದು ಮಾಡುತ್ತೇನೆ’ ಎಂಬ ಹೆಸರಿನಲ್ಲಿ ಸಮಾಜದ ಮುಖಂಡರನ್ನು ಭಾಗ ಮಾಡಿ ರಾಜಕಾರಣ ಮಾಡುವುದು ಸರಿಯಲ್ಲ. ‘ಈಶ್ವರಪ್ಪನವರನ್ನು ಒಪ್ಪದವರು ಲಿಂಗಾಯತರೇ ಅಲ್ಲ’ ಎನ್ನುವ ಸಂಸ್ಕೃತಿ ನಮ್ಮ ಸಮಾಜದಲ್ಲಿ ಇಲ್ಲ ಎಂದು ಮಂಜುನಾಥ್ ಎಚ್ಚರಿಸಿದರು.

ಬೆಕ್ಕಿನಕಲ್ಮಠದ ಸ್ಮರಣೋತ್ಸವ ಕಾರ್ಯಕ್ರಮದ ಸಂದರ್ಭವನ್ನು ಉಲ್ಲೇಖಿಸಿ, ಸಮಾಜದ ಹಿರಿಯ ಮುಖಂಡರನ್ನು ಕಡೆಗಣಿಸಿ, ದೇಣಿಗೆಯ ಆಧಾರದಲ್ಲಿ ಕೆಲವರನ್ನು ವೇದಿಕೆಗೆ ಕರೆತರುವ ಪ್ರವೃತ್ತಿಯನ್ನೂ ಸಭೆ ಖಂಡಿಸಿತು. “ಸಮಾಜದ ನಾಯಕರ ಕೊಡುಗೆ ಹಣಕ್ಕಿಂತ ದೊಡ್ಡದು. ಅದನ್ನು ಮರೆತರೆ ಸಮಾಜಕ್ಕೆ ಒಳ್ಳೆಯ ಬೆಳವಣಿಗೆ ಅಲ್ಲ” ಎಂದು ಆಯನೂರು ಮಂಜುನಾಥ್ ಎಚ್ಚರಿಸಿದರು.

ಮಾಜಿ ವಿಧಾನ ಪರಿಷತ್ ಸದಸ್ಯ ರುದ್ರೇಗೌಡ್ರು ಮಾತನಾಡಿ, ನನ್ನ ಅನುಮತಿ ಇಲ್ಲದೇ ನನ್ನ ಫೋಟೋ ಬಳಸಿ ಪ್ಲೆಕ್ಸ್ ಹಾಕಲಾಗಿದೆ. ತೆಗೆದುಹಾಕಿ ಎಂದು ತಿಳಿಸಿದ್ದರೂ ಪಾಲಿಸಲಿಲ್ಲ. ನಮ್ಮ ಸಮಾಜದಲ್ಲಿ ಇಂತಹ ಅಕ್ರಮಗಳು ನಡೆಯುತ್ತಿವೆ. ಬೇರೆ ಸಮಾಜದಲ್ಲಿ ನಾವು ಹೀಗೇ ಮಾಡಬಹುದೇ? ಎಂದು ಪ್ರಶ್ನಿಸಿದರು. ಸಮಾಜದ ಲಾಭ ಪಡೆದು, ಅದನ್ನೇ ದುರುಪಯೋಗಪಡಿಸಿಕೊಂಡು ಸಮಾಜದ ದಿಕ್ಕು ತಪ್ಪಿಸುವುದು ಅಪರಾಧ ಎಂದು ಅವರು ಹೇಳಿದರು.

ಧರ್ಮವನ್ನು ರಾಜಕೀಯಕ್ಕೆ, ರಾಜಕೀಯವನ್ನು ಧರ್ಮಕ್ಕೆ ತರುವುದು ಬೇಡ. ಸಮಾಜದ ಸಮಸ್ಯೆ ಬಂದಾಗ ಯಾವುದೇ ಪಕ್ಷ ಬೇಡ. ಮೊದಲು ನಾವು ಸರಿಯಾಗಬೇಕು ಎಂದು ರುದ್ರೇಗೌಡ್ರು ಹೇಳಿದರು. ಭೀಮಣ್ಣ ಖಂಡ್ರೆ ಸೇರಿದಂತೆ ಹಲವರ ಕೊಡುಗೆಗಳನ್ನು ಸ್ಮರಿಸಿ, ವ್ಯಕ್ತಿ ವಿರೋಧಕ್ಕಿಂತ ಸಮಾಜದ ಹಿತ ಮುಖ್ಯ ಎಂದು ಹೇಳಿದರು.

ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ಪ್ರಧಾನ ಕಾರ್ಯದರ್ಶಿ ಎಸ್.ಪಿ. ದಿನೇಶ್ ಮಾತನಾಡಿ, ನೀವು ವೈಯಕ್ತಿಕವಾಗಿ ಬೆಳೆದುಕೊಳ್ಳಿ, ನಮ್ಮ ಸಹಕಾರ ಇರುತ್ತದೆ. ಆದರೆ ನಮ್ಮ ಸಮಾಜವನ್ನು ಮತ್ತೊಬ್ಬರ ಪಾದದ ಕೆಳಗೆ ಇಡುವ ಕೆಲಸ ಮಾಡಬೇಡಿ. ನಮ್ಮ ಸಮಾಜದ ಕಾರ್ಯಕ್ರಮಗಳಲ್ಲಿ ಬೇರೆ ಸಮಾಜದ ನಾಯಕರಿಂದ ಪಾಠ ಕೇಳಬೇಕಾದ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿದರು. 2002ರ ಕುವೇಂಪು ರಂಗಮಂದಿರದ ಘಟನೆಯನ್ನು ಸ್ಮರಿಸಿ, ಸಮಾಜದ ವಿಚಾರ ಬಂದಾಗ ವೇದಿಕೆಯಲ್ಲಿ ಧೈರ್ಯವಾಗಿ ಖಂಡಿಸುವ ಮನೋಭಾವ ಯುವಕರಲ್ಲಿ ಬೆಳೆಯಬೇಕು ಎಂದು ಹೇಳಿದರು.

ಈಶ್ವರಪ್ಪನವರ ಹಾಗೂ ಅವರ ಪುತ್ರ ಕಾಂತೇಶ್‌ರವರ ನಡೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಸಮಾಜದ ಹೆಸರಿನಲ್ಲಿ ಯುವಕರನ್ನು ದಿಕ್ಕು ತಪ್ಪಿಸುವ ಯಾವುದೇ ಪ್ರಯತ್ನವನ್ನು ವೀರಶೈವ ಲಿಂಗಾಯತ ಸಮಾಜ ಸಹಿಸುವುದಿಲ್ಲ. ನಮ್ಮ ಸಮಾಜದಲ್ಲಿ ಈಗಾಗಲೇ ಹಲವಾರು ಸಂಘಟನೆಗಳಿವೆ; ಆದರೆ ಸಮಾಜಕ್ಕೆ ಸಂಬಂಧಿಸಿದ ಸಮಸ್ಯೆ ಎದುರಾದಾಗ ಎಲ್ಲರೂ ವೈಯಕ್ತಿಕ ಅಜೆಂಡಾಗಳನ್ನು ಬದಿಗೊತ್ತಿ ಒಗ್ಗೂಡಬೇಕಾಗಿದೆ. ಸಮಾಜದ ವಿಚಾರದಲ್ಲಿ ಅನಗತ್ಯವಾಗಿ ತಲೆಹಾಕಿ ಗೊಂದಲ ಸೃಷ್ಟಿಸುವವರ ವಿರುದ್ಧ ಗಟ್ಟಿಯಾದ ಎಚ್ಚರಿಕೆ ನೀಡಲು ನಾವು ಸಂಪೂರ್ಣವಾಗಿ ಸಿದ್ಧವಾಗಿದ್ದೇವೆ ಎಂದು ಖಡಕ್ ಸಂದೇಶ ನೀಡಿದ್ದಾರೆ.‌

  • ವೀರಶೈವ ಲಿಂಗಾಯತ ಸಮಾಜದ ಸಂಘಟನೆ–ಉಳಿವು–ಬೆಳವಣಿಗೆಗಾಗಿ ಸಾಮರಸ್ಯ ಮತ್ತು ಸಹಕಾರದೊಂದಿಗೆ ಸ್ಪಂದಿಸುವುದು.
  • ಅನ್ಯ ಸಮಾಜದ ನಾಯಕರ ನೇತೃತ್ವದಲ್ಲಿ ಸಮಾಜದಸಭೆ–ಸಮಾರಂಭ ನಡೆಸುವ ಪ್ರವೃತ್ತಿಯನ್ನು ಖಂಡಿಸುವುದು.
  • ಇಂತಹ ಚಟುವಟಿಕೆಗಳು ಸಮಾಜದ ಏಕತೆಗೆ ಹಾನಿಕಾರಕವೆಂದು ಘೋಷಿಸುವುದು.
  • ಸಮಾಜದ ಸಮಸ್ಯೆಗಳನ್ನುನಾವೇ ಬಗೆಹರಿಸಿಕೊಳ್ಳಬೇಕು; ಸ್ವಾರ್ಥಕ್ಕಾಗಿ ಸಮಾಜ ಒಡೆಯುವ ಪ್ರಯತ್ನಗಳನ್ನು ತಿರಸ್ಕರಿಸುವುದು.
  • ಭವಿಷ್ಯದಲ್ಲಿ ಅನ್ಯರ ನೆರವಿನಿಂದ ನಡೆಯುವ ಯಾವುದೇ ಸಮಾಜ ಚಟುವಟಿಕೆಗಳಿಗೆ ತೀವ್ರ ವಿರೋಧ.
  • ವೈಯಕ್ತಿಕ–ವ್ಯಾವಹಾರಿಕ ಸಂಬಂಧಗಳನ್ನು ಸಮಾಜದ ಮೇಲೆ ಹೇರಬಾರದು.
  • ಯಾವುದೇ ಮಠಾಧ್ಯಕ್ಷರು–ಪೀಠಾಧ್ಯಕ್ಷರ ಬಗ್ಗೆ ಪ್ರತಿಕೂಲ ಹೇಳಿಕೆಗಳನ್ನು ನೀಡಬಾರದು.
  • ಧಾರ್ಮಿಕ–ಪ್ರವಚನ ಕಾರ್ಯಕ್ರಮಗಳನ್ನು ಸಮಾಜದ ಎಲ್ಲ ಸಂಘಟನೆಗಳ ಸಹಕಾರದೊಂದಿಗೆ ಒಗ್ಗಟ್ಟಾಗಿ ನಡೆಸುವುದು.

ಸಭೆಯ ಅಂತ್ಯದಲ್ಲಿ, ವೀರಶೈವ ಲಿಂಗಾಯತ ಸಮಾಜದ ಹೆಸರಿನಲ್ಲಿ ರಾಜಕೀಯ ಲಾಭಕ್ಕಾಗಿ ಗೊಂದಲ, ವಿಭಜನೆ ಮತ್ತು ದಿಕ್ಕು ತಪ್ಪಿಸುವ ಪ್ರಯತ್ನಗಳಿಗೆ ಸಮಾಜದಿಂದ ಇನ್ನು ಸಹನೆಯ ಗಡಿ ದಾಟಿದೆ. ಶಿವಮೊಗ್ಗದಲ್ಲಿ ನಡೆದ ಸಮಸ್ತ ವೀರಶೈವ ಲಿಂಗಾಯತ ಸಮಾಜ ಬಾಂಧವರ ಸಭೆ ಈ ಸಂದೇಶವನ್ನು ಸ್ಪಷ್ಟವಾಗಿ ಘೋಷಿಸಿದೆ. ಈಶ್ವರಪ್ಪ ಹಾಗೂ ಅವರ ಮಗ ಕಾಂತೇಶ ತಮ್ಮ ವೈಯಕ್ತಿಕ ಮತ್ತು ರಾಜಕೀಯ ಭವಿಷ್ಯಕ್ಕಾಗಿ ಸಮಾಜವನ್ನು ಉಪಯೋಗಿಸುವ ನಡೆ ತಕ್ಷಣ ನಿಲ್ಲಿಸಬೇಕು ಎಂದು ಕಠಿಣ ಎಚ್ಚರಿಕೆ ನೀಡಿದೆ. ಸಮಾಜಕ್ಕೆ ಸರ್ಟಿಫಿಕೆಟ್ ನೀಡುವ ಅಧಿಕಾರ ಯಾರಿಗೂ ಇಲ್ಲ; ಸಮಾಜದ ಗುರುತು, ಗೌರವ ಮತ್ತು ಏಕತೆಯನ್ನು ಪ್ರಶ್ನಿಸುವ ಯಾವುದೇ ಪ್ರಯತ್ನವನ್ನು ವೀರಶೈವ ಲಿಂಗಾಯತ ಸಮಾಜ ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತದೆ. ಇಂತಹ ರಾಜಕಾರಣ ಮುಂದುವರಿದರೆ, ಸಮಾಜ ಒಗ್ಗಟ್ಟಾಗಿ ಪ್ರತಿರೋಧಿಸಲು ಸಿದ್ಧ ಎಂಬ ಸ್ಪಷ್ಟ ಸಂದೇಶವನ್ನು ಈ ಸಭೆ ನೀಡಿದೆ.

ಸಭೆಯಲ್ಲಿ ಮಾಜಿ ಶಾಸಕರಾದ ಆಯನೂರು ಮಂಜುನಾಥ್, ಎಸ್. ರುದ್ರೇಗೌಡ್ರು, ಹೆಚ್‌.ಎಂ. ಚಂದ್ರಶೇಖರಪ್ಪ, ಸಮಾಜದ ಅಧ್ಯಕ್ಷ ಎಸ್‌.ಎಸ್‌. ಜ್ಯೋತಿ ಪ್ರಕಾಶ್, ಎಸ್.ಪಿ. ದಿನೇಶ್, ಬಳ್ಳೇಕೆರೆ ಸಂತೋಷ್, ಸಿ.ಎಸ್. ಷಡಾಕ್ಷರಿ, ರುದ್ರೇಶ್, ಹೆಚ್.ಸಿ. ಯೋಗೀಶ್, ಬಾಳೇಕಾಯಿ ಮೋಹನ್, ರಾಜಶೇಖರ್ ಹೆಚ್.ಕೆ. ಮೋಹನ್‌ ಕುಮಾರ್‌, ತಮ್ಮಡಿಹಳ್ಳಿ ನಾಗರಾಜ್‌,  ಸೇರಿದಂತೆ ಅನೇಕ ಗಣ್ಯರು ಹಾಗೂ ಉಪಪಂಗಡಗಳ ಪ್ರಮುಖರು ಭಾಗವಹಿಸಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

‘ಕೊಟ್ಟ ಮಾತು ಉಳಿಯುತ್ತದೆಯೇ?’ – ಕಾಂಗ್ರೆಸ್ ಒಳಕಿಚ್ಚಿಗೆ ಸುರೇಶ್ ಮಾರ್ಮಿಕ ನುಡಿ, ಡಿಕೆಶಿ ದೆಹಲಿ ಪಯಣ ರಾಜಕೀಯ ಚರ್ಚೆ ತೀವ್ರ

“ಮೊದಲು ನಿಮ್ಮ ಹೈಕಮಾಂಡ್‌ ಹುಡುಕಿ, ಬಳಿಕ ಮೋದಿ ಬಗ್ಗೆ ಮಾತನಾಡಿ”: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ತೀವ್ರ ವಾಗ್ದಾಳಿ

ಪ್ಲಾಸ್ಟಿಕ್ ಮುಕ್ತ ಶಿವರಾತ್ರಿ ಉತ್ಸವಕ್ಕೆ ಹರಕೆರೆ ಹರಕೇಶ್ವರ ದೇವಸ್ಥಾನದಲ್ಲಿ ಸಂಕಲ್ಪ

ಜನಸೇವೆಗೆ ಬದ್ಧ ನಾಯಕತ್ವ: ಹಾರನಹಳ್ಳಿಯಲ್ಲಿ ಡಿ.ಎಸ್. ಅರುಣ್ ಅವರಿಂದ ಪಂಚಾಯಿತಿ ಕಟ್ಟಡ ಉದ್ಘಾಟನೆ ಹಾಗೂ ಹಕ್ಕುಪತ್ರ ವಿತರಣೆ

‘ಎಲ್ಲರೂ ಬಾಯಿ ಮುಚ್ಚಿಕೊಂಡಿರಬೇಕು’: ಕಾಂಗ್ರೆಸ್ ನಾಯಕರಿಗೆ ಡಿಕೆಶಿ ಖಡಕ್ ಸಂದೇಶ

ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿ–ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಕೇಂದ್ರದ ಮೇಲೆ ಒತ್ತಡ: ಮುಖ್ಯಮಂತ್ರಿ ಸಿದ್ದರಾಮಯ್ಯ

Leave a Comment