ಬೆಂಗಳೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಕರ್ನಾಟಕ ಸರ್ಕಾರದ ಅರಣ್ಯ ಸಚಿವರಾದ ಶ್ರೀ ಈಶ್ವರ ಬಿ. ಖಂಡ್ರೆ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಇಂದು ಬೆಂಗಳೂರಿನ ಮಹಾಸಭಾ ಕಚೇರಿಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಯಾವುದೇ ಚುನಾವಣೆ ನಡೆಸದೇ ಅವಿರೋಧವಾಗಿ ಅವರನ್ನು ಆಯ್ಕೆ ಮಾಡುವ ನಿರ್ಣಯವನ್ನು ಎಲ್ಲ ಸದಸ್ಯರೂ ಒಮ್ಮತದಿಂದ ಕೈಗೊಂಡರು.

ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ, ದೀರ್ಘ ಅನುಭವ ಹಾಗೂ ಸಂಘಟನಾ ಹಿನ್ನೆಲೆ ಹೊಂದಿರುವ ಈಶ್ವರ ಖಂಡ್ರೆ ಅವರನ್ನು ಆಯ್ಕೆ ಮಾಡಲು ಕಾರ್ಯಕಾರಿ ಸಮಿತಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಈ ಕುರಿತು ಮಾಹಿತಿ ನೀಡಿದ ಮಹಾಸಭಾದ ರಾಜ್ಯಾಧ್ಯಕ್ಷರು ಹಾಗೂ ನಿವೃತ್ತ ಡಿಜಿಪಿ ಶ್ರೀ ಶಂಕರ ಬಿದರಿ ಅವರು, “ಮಹಾಸಭೆಯ ಹಿತದೃಷ್ಟಿಯಿಂದ ಹಾಗೂ ಸಂಘಟನೆಯ ನಿರಂತರತೆಗೆ ಅನುಗುಣವಾಗಿ ಈಶ್ವರ ಖಂಡ್ರೆ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ” ಎಂದು ತಿಳಿಸಿದರು.

ಈಶ್ವರ ಖಂಡ್ರೆ ಅವರು ಕಳೆದ 13 ವರ್ಷಗಳಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು, ಇತ್ತೀಚಿನ ಒಂದು ವರ್ಷದಿಂದ ಹಿರಿಯ ಉಪಾಧ್ಯಕ್ಷರ ಪ್ರಭಾರ ಹೊಣೆಯನ್ನೂ ಯಶಸ್ವಿಯಾಗಿ ನಿರ್ವಹಿಸಿದ್ದರು. ಅವರ ಸಂಘಟನಾ ಸಾಮರ್ಥ್ಯ, ಸಮಾಜಮುಖಿ ಚಿಂತನೆ ಹಾಗೂ ಆಡಳಿತ ಅನುಭವವನ್ನು ಗುರುತಿಸಿ ಈ ಮಹತ್ವದ ಜವಾಬ್ದಾರಿಯನ್ನು ಅವರಿಗೆ ಒಪ್ಪಿಸಲಾಗಿದೆ.
“ವೀರಶೈವ – ಲಿಂಗಾಯತ ಒಂದೇ” ಎಂಬ ಸ್ಪಷ್ಟ ನಿಲುವು
ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ ಅವರು, ತಮಗೆ ಈ ಜವಾಬ್ದಾರಿ ನೀಡಿದ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು. ವೀರಶೈವ ಮತ್ತು ಲಿಂಗಾಯತ ಎಂಬುದು ಬೇರೆ ಬೇರೆ ಅಲ್ಲ, ಎರಡೂ ಒಂದೇ ಸಮುದಾಯ ಎಂಬುದು ತಮ್ಮ ಸ್ಪಷ್ಟ ಪ್ರತಿಪಾದನೆ ಎಂದು ಅವರು ಹೇಳಿದರು. ಸಮಾಜದ ಎಲ್ಲಾ ಒಳಪಂಗಡಗಳನ್ನು ಒಗ್ಗೂಡಿಸುವುದೇ ತಮ್ಮ ಪ್ರಮುಖ ಗುರಿಯಾಗಿದ್ದು, ಈ ದಿಕ್ಕಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.

ವೀರಶೈವ ಲಿಂಗಾಯತ ಸಮಾಜ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ನಾಡಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿವೆ. ಆದರೆ ನಮ್ಮ ಸಮಾಜದಲ್ಲಿಯೇ ಶೇ.40 ರಿಂದ 50ರಷ್ಟು ಜನರು ಬಡವರಾಗಿದ್ದು, ಶೇ.30ಕ್ಕಿಂತ ಹೆಚ್ಚು ಮಂದಿ ತೀವ್ರ ಹಿಂದುಳಿದ ಸ್ಥಿತಿಯಲ್ಲಿದ್ದಾರೆ. ಈ ಹಿನ್ನೆಲೆ ಸಾಮಾಜಿಕ ನ್ಯಾಯ ಎಲ್ಲರಿಗೂ ದೊರಕಬೇಕು ಎಂಬ ಧ್ಯೇಯದೊಂದಿಗೆ, ಸಮಾನ ಅವಕಾಶ ಮತ್ತು ನ್ಯಾಯಕ್ಕಾಗಿ ಮಹಾಸಭೆಯ ಮೂಲಕ ನಿರಂತರ ಹೋರಾಟ ನಡೆಸಲಾಗುವುದು ಎಂದು ಈಶ್ವರ ಖಂಡ್ರೆ ಹೇಳಿದರು.

ಮಹಾಸಭೆಯ ಮುಂದಿನ ಯೋಜನೆಗಳು
ತಮ್ಮ ಮುಂದಿನ ಕಾರ್ಯಯೋಜನೆಗಳ ಕುರಿತು ಮಾಹಿತಿ ನೀಡಿದ ಅವರು, ಬೆಂಗಳೂರು ನಗರದಲ್ಲಿ ಸುಮಾರು 1,000 ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತೆ ಆಧುನಿಕ ಸೌಲಭ್ಯಗಳನ್ನೊಳಗೊಂಡ ವಸತಿ ನಿಲಯ ನಿರ್ಮಾಣ ಮಾಡುವ ಸಂಕಲ್ಪವನ್ನು ಪ್ರಕಟಿಸಿದರು. ಬರುವ ಮಾರ್ಚ್ ತಿಂಗಳೊಳಗೆ ವಸತಿ ನಿಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಒಂದೂವರೆ ವರ್ಷದೊಳಗೆ ಕಟ್ಟಡ ನಿರ್ಮಾಣವನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದರು.

ಇದಲ್ಲದೆ ಈಗಾಗಲೇ ಹಲವು ಜಿಲ್ಲಾ ಕೇಂದ್ರಗಳಲ್ಲಿ ವೀರಶೈವ ಲಿಂಗಾಯತ ಭವನಗಳು ಕಾರ್ಯನಿರ್ವಹಿಸುತ್ತಿದ್ದು, ಭವನಗಳಿಲ್ಲದ ಜಿಲ್ಲೆಗಳಲ್ಲಿ ಹೊಸ ಭವನಗಳನ್ನು ನಿರ್ಮಿಸಲು ಮಹಾಸಭೆ ಶ್ರಮಿಸಲಿದೆ. ಈ ಭವನಗಳಲ್ಲಿ ಸಮುದಾಯದ ಪ್ರತಿಭಾವಂತ ಯುವಕರಿಗೆ ಲೋಕಸೇವಾ ಆಯೋಗ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಒಗ್ಗಟ್ಟಿಗೆ ಕರೆ
ಪಂಚಾಚಾರ್ಯರು, ಜಗದ್ಗುರುಗಳು, ಮಠಾಧಿಪತಿಗಳು, ಹರ–ಚರ ಗುರು ಮೂರ್ತಿಗಳು ಹಾಗೂ ವಿರಕ್ತರ ಮಾರ್ಗದರ್ಶನ ಮತ್ತು ಆಶೀರ್ವಾದದೊಂದಿಗೆ ಕೆಲಸ ಮಾಡುವುದಾಗಿ ತಿಳಿಸಿದ ಈಶ್ವರ ಖಂಡ್ರೆ ಅವರು, “ಒಗ್ಗಟ್ಟಿನಲ್ಲಿ ಬಲವಿದೆ, ವಿಘಟನೆಯಲ್ಲಿ ದೌರ್ಬಲ್ಯವಿದೆ” ಎಂಬ ಸಂದೇಶವನ್ನು ಪುನರುಚ್ಚರಿಸಿದರು. ಸಮುದಾಯದ ಜೊತೆಗೆ ಎಲ್ಲ ಜಾತಿ–ಜನಾಂಗದವರನ್ನೂ ಜೊತೆಯಲ್ಲಿ ತೆಗೆದುಕೊಂಡು ಲೋಕಕಲ್ಯಾಣ, ಜನಹಿತ ಹಾಗೂ ಸಮಾಜದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುವುದಾಗಿ ಹೇಳಿದರು.
ವೀರಶೈವ ಲಿಂಗಾಯತ ಸಮಾಜಕ್ಕೆ ತನ್ನದೇ ಆದ ಸುದೀರ್ಘ ಇತಿಹಾಸ, ಭವ್ಯ ಪರಂಪರೆ ಹಾಗೂ ಶ್ರೇಷ್ಠ ಮೌಲ್ಯಗಳಿವೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ಸಾರಿದ ನಮ್ಮ ಹಿರಿಯರು ಸಕಲ ಜೀವಾತ್ಮರ ಹಿತಕ್ಕಾಗಿ ಶ್ರಮಿಸಿದ್ದಾರೆ ಎಂದು ಅವರು ಸ್ಮರಿಸಿದರು.
ಐತಿಹಾಸಿಕ ಪರಂಪರೆ
1904ರಲ್ಲಿ ಪರಮಪೂಜ್ಯ ಹಾನಗಲ್ ಕುಮಾರೇಶ್ವರ ಮಹಾಸ್ವಾಮೀಜಿ ಅವರ ದಿವ್ಯ ಸಂಕಲ್ಪದಿಂದ ಸ್ಥಾಪಿತವಾದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಸಿರಸಂಗಿ ಲಿಂಗರಾಜದೇಸಾಯರು, ರಾಜಾ ಲಖಮನಗೌಡರು, ಫ.ಗು. ಹಳಕಟ್ಟಿಯವರು, ಬಂಥನಾಳ ಸಂಗನ ಬಸವ ಸ್ವಾಮಿಗಳು, ಶತಾಯುಷಿ ಡಾ. ಶಿವಕುಮಾರ ಮಹಾಸ್ವಾಮೀಜಿ, ಲೋಕನಾಯಕ ಡಾ. ಭೀಮಣ್ಣ ಖಂಡ್ರೆ, ಡಾ. ಶಾಮನೂರು ಶಿವಶಂಕರಪ್ಪ ಸೇರಿದಂತೆ ಅನೇಕ ಮಹಾನ್ ನಾಯಕರು ಸೇವೆ ಸಲ್ಲಿಸಿದ್ದಾರೆ. ಆ ಮಹಾನ್ ಪರಂಪರೆಯ ಈ ಸ್ಥಾನದಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ತಮ್ಮ ಜೀವನದ ಸೌಭಾಗ್ಯ ಎಂದು ಈಶ್ವರ ಖಂಡ್ರೆ ಹೇಳಿದರು.
ಈ ಸಂದರ್ಭದ ಸುದ್ದಿಗೋಷ್ಠಿಯಲ್ಲಿ ಮಹಾಸಭೆಯ ಪ್ರಮುಖರಾದ, ಶಂಕರ ಬಿದರಿ, ಗಣೇಶ್ ಎಸ್. ಶಾಮನೂರು, ಪ್ರಭಾಕರ ಕೋರೆ, ರಾಜಣ್ಣ, ವೀರಣ್ಣ ಚರಂತಿ ಮಠ ಸೇರಿದಂತೆ ಮಹಾರಾಷ್ಟ್ರ, ಕೇರಳ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಘಟಕಗಳ ಅಧ್ಯಕ್ಷರು ಹಾಗೂ ಪ್ರತಿನಿಧಿಗಳು ಉಪಸ್ಥಿತರಿದ್ದರು.







