ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಾದ್ಯಂತ ಇಂದು ಆರಕ್ಷಕ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದ್ದು, ಈ ಸಂದರ್ಭವನ್ನು ಸಾರ್ವಜನಿಕ ಹಿತಾಸಕ್ತಿಗೆ ಮೀಸಲಿಟ್ಟ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ, ಶಾಲಾ–ಕಾಲೇಜು ವಿದ್ಯಾರ್ಥಿಗಳಲ್ಲಿ ಕಾನೂನು ಜಾಗೃತಿ ಮೂಡಿಸುವ ಶ್ಲಾಘನೀಯ ಕಾರ್ಯಕ್ಕೆ ಕೈ ಹಾಕಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ತಮ್ಮ ತಮ್ಮ ಠಾಣಾ ವ್ಯಾಪ್ತಿಯ ಶಾಲಾ ಹಾಗೂ ಕಾಲೇಜುಗಳಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ, ಸೈಬರ್ ಅಪರಾಧಗಳು, ಪೋಕ್ಸೋ ಕಾಯ್ದೆ, ಮಹಿಳೆ ಹಾಗೂ ಮಕ್ಕಳ ಸುರಕ್ಷತೆ, ರಸ್ತೆ ಸುರಕ್ಷತೆ, ಸಂಚಾರ ನಿಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಜವಾಬ್ದಾರಿಯುತ ಬಳಕೆ ಕುರಿತು ಅರಿವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ಈ ಸರಣಿಯ ಪ್ರಮುಖ ಕಾರ್ಯಕ್ರಮವಾಗಿ, ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ನಗರದ NES ವಿದ್ಯಾಸಂಸ್ಥೆಯ SRNMNC ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅರಿವು ಸಭೆಯಲ್ಲಿ ನಿಖಿಲ್ ಬಿ., ಐಪಿಎಸ್, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಹತ್ವದ ಸಂದೇಶ ನೀಡಿದರು.

ಸಭೆಯಲ್ಲಿ ಮಾತನಾಡಿದ ಪೊಲೀಸ್ ಅಧೀಕ್ಷಕರು, ಮಾದಕ ದ್ರವ್ಯಗಳ ದುಷ್ಪರಿಣಾಮಗಳು, ಯುವಜನರನ್ನು ಗುರಿಯಾಗಿಸಿಕೊಂಡು ನಡೆಯುವ ಆನ್‌ಲೈನ್ ಹೂಡಿಕೆ ಮೋಸಗಳು, ಡಿಜಿಟಲ್ ಅರೆಸ್ಟ್ ಎಂಬ ಹೊಸ ರೀತಿಯ ವಂಚನೆಗಳಿಂದ ಹೇಗೆ ದೂರವಿರಬೇಕು, ಪೋಕ್ಸೋ ಕಾಯ್ದೆಯ ಕಠಿಣತೆ ಹಾಗೂ ಸೈಬರ್ ಅಪರಾಧಗಳ ಸ್ವರೂಪ ಕುರಿತು ವಿಸ್ತಾರವಾಗಿ ವಿವರಿಸಿದರು.

“ತಂತ್ರಜ್ಞಾನ ಉಪಯೋಗವೇ ಯುವಜನರ ಶಕ್ತಿ; ಅದೇ ಅಜಾಗರೂಕತೆಯಿಂದ ಅಪಾಯವಾಗಬಾರದು” ಎಂದು ಎಚ್ಚರಿಸಿದ ಅವರು, ಯಾವುದೇ ಸಂಶಯಾಸ್ಪದ ಕರೆ, ಲಿಂಕ್ ಅಥವಾ ಹೂಡಿಕೆ ಆಮಿಷಗಳಿಗೆ ಒಳಗಾಗಬಾರದೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ಕಾರ್ಯಪ್ಪ, ಎ.ಜಿ., ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರುಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದು, ಪೊಲೀಸ್ ಇಲಾಖೆಯ ಈ ಸಾಮಾಜಿಕ ಹೊಣೆಗಾರಿಕೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದಲ್ಲದೆ, ಜಿಲ್ಲೆಯಾದ್ಯಂತ ಪೊಲೀಸ್ ಉಪ ವಿಭಾಗ ಮಟ್ಟದಲ್ಲಿ ಡಿ.ಎಸ್.ಪಿ ರವರುಗಳು 06 ಶಾಲಾ–ಕಾಲೇಜುಗಳಲ್ಲಿ, ಪೊಲೀಸ್ ವೃತ್ತ ಮಟ್ಟದಲ್ಲಿ ಸಿ.ಪಿ.ಐ ರವರುಗಳು 10 ಶಾಲಾ–ಕಾಲೇಜುಗಳಲ್ಲಿ, ಹಾಗೂ ಪೊಲೀಸ್ ಠಾಣಾ ಮಟ್ಟದಲ್ಲಿ ಠಾಣಾಧಿಕಾರಿಗಳು ಒಟ್ಟು 110 ಶಾಲಾ–ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವುದು ವಿಶೇಷವಾಗಿದೆ.
ಕಾನೂನು ಕೇವಲ ಶಿಕ್ಷೆಗೆ ಮಾತ್ರವಲ್ಲ, ಸುರಕ್ಷತೆ ಮತ್ತು ಸಂರಕ್ಷಣೆಗೆ ಎಂಬ ಸಂದೇಶವನ್ನು ವಿದ್ಯಾರ್ಥಿಗಳ ಮನಸ್ಸಿಗೆ ತಲುಪಿಸುವಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಆರಕ್ಷಕ ದಿನಾಚರಣೆಯನ್ನು ಕೇವಲ ಆಚರಣೆಯ ಮಟ್ಟಕ್ಕೆ ಸೀಮಿತಗೊಳಿಸದೇ, ಸಮಾಜದ ಭವಿಷ್ಯವಾಗಿರುವ ವಿದ್ಯಾರ್ಥಿಗಳ ಬದುಕಿಗೆ ಮಾರ್ಗದರ್ಶನ ನೀಡಿದ ಈ ಪ್ರಯತ್ನ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.







