ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಸ್ವಯಂಚಾಲಿತ ಭೂ ಪರಿವರ್ತನೆಗೆ ನೂತನ ತಂತ್ರಾಂಶಕ್ಕೆ ಸಚಿವ ಕೃಷ್ಣಬೈರೇಗೌಡ ಚಾಲನೆ: ಮಧ್ಯವರ್ತಿಗಳ ಹಾವಳಿಗೆ ಬ್ರೇಕ್

On: January 23, 2026 10:03 PM
Follow Us:

ಬೆಂಗಳೂರು: ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ, ನೀತಿ–ನಿಯಮಗಳನ್ನು ಸರಳಗೊಳಿಸುವ ಮೂಲಕ ನೈಜ ಬಂಡವಾಳ ಹೂಡಿಕೆದಾರರಿಗೆ ಅನುಕೂಲ ಮಾಡಿಕೊಡುವುದೇ ರಾಜ್ಯ ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಇಂಧನ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದರು.

ಶುಕ್ರವಾರ ಬೆಂಗಳೂರಿನ ವಿಕಾಸಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನವೀಕರಿಸಬಹುದಾದ ಇಂಧನ ಘಟಕಗಳ ಸ್ಥಾಪನೆಗೆ ಅಗತ್ಯವಿರುವ ಭೂಮಿ ಸ್ವಯಂಚಾಲಿತವಾಗಿ ಭೂ ಪರಿವರ್ತನೆಗೊಳ್ಳುವ ನೂತನ ತಂತ್ರಾಂಶಕ್ಕೆ ಸಚಿವರು ಅಧಿಕೃತ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಗತ್ತಿನಾದ್ಯಂತ ಇಂಧನ ಭದ್ರತೆ ಅತ್ಯಂತ ಪ್ರಮುಖ ವಿಷಯವಾಗಿ ಚರ್ಚೆಯಾಗುತ್ತಿದೆ. ಇಂಧನ ಭದ್ರತೆ ಇಲ್ಲದ ಯಾವುದೇ ರಾಷ್ಟ್ರವೂ ಅಭಿವೃದ್ಧಿಯ ಪಥದಲ್ಲಿ ಸಾಗಲು ಅಥವಾ ಆರ್ಥಿಕವಾಗಿ ಸಬಲವಾಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಇಂದಿನ ತಾಂತ್ರಿಕತೆ ಹಾಗೂ ಬೌದ್ಧಿಕ ಶಕ್ತಿಯ ಮೇಲೆ ಆಧಾರಿತ ಆರ್ಥಿಕ ವ್ಯವಸ್ಥೆಯೂ ವಿದ್ಯುತ್ ಸೇರಿದಂತೆ ವಿವಿಧ ಇಂಧನ ಮೂಲಗಳ ಮೇಲೆಯೇ ಸಂಪೂರ್ಣವಾಗಿ ಅವಲಂಬಿತವಾಗಿದೆ. ನಮ್ಮ ದೇಶದಲ್ಲಿ ಕಡುಬಡವರೂ ಸಹ ಬಡತನದಿಂದ ಹೊರಬರಲು ನೀರಿನ ಭದ್ರತೆಯಷ್ಟೇ ಇಂಧನ ಭದ್ರತೆಯೂ ಅಗತ್ಯವಾಗಿದೆ. ಆ ಹಿನ್ನೆಲೆಯಲ್ಲಿ ಭಾರತಕ್ಕೆ ದೀರ್ಘಕಾಲಿಕ ಇಂಧನ ಭದ್ರತೆಯನ್ನು ಖಚಿತಪಡಿಸುವ ಜವಾಬ್ದಾರಿ ನವೀಕರಿಸಬಹುದಾದ ಇಂಧನ ಘಟಕಗಳ ಮೇಲಿದೆ ಎಂದು ಅವರು ಹೇಳಿದರು.

ಕರ್ನಾಟಕ ರಾಜ್ಯ ಆರಂಭದಿಂದಲೂ ನವೀಕರಿಸಬಹುದಾದ ಇಂಧನ ಘಟಕಗಳ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದ್ದು, ದೇಶಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ. ಆದರೆ ಈ ಹಿಂದೆ ಇಂತಹ ಘಟಕಗಳ ಸ್ಥಾಪನೆಗೆ ಭೂ ಪರಿವರ್ತನೆ ಕಡ್ಡಾಯವಾಗಿದ್ದು, ಅದಕ್ಕೆ ಕನಿಷ್ಠ ಆರು ತಿಂಗಳ ಕಾಲಾವಕಾಶ ಬೇಕಾಗುತ್ತಿತ್ತು. ಇದರಿಂದ ಮಧ್ಯವರ್ತಿಗಳ ಹಸ್ತಕ್ಷೇಪ ಹೆಚ್ಚಾಗಿ ಭ್ರಷ್ಟಾಚಾರ ವ್ಯಾಪಕವಾಗಿತ್ತು. ಅಧಿಕಾರಿಗಳಿಗೆ ಲಾಭವಾಯಿತೋ ಅಥವಾ ಮಧ್ಯವರ್ತಿಗಳಿಗೆ ಲಾಭವಾಯಿತೋ ತಿಳಿಯದ ಸ್ಥಿತಿ ಇದ್ದರೂ, ಸರ್ಕಾರಕ್ಕೆ ಮಾತ್ರ ಕೆಟ್ಟ ಹೆಸರು ಕಟ್ಟಿಟ್ಟ ಬುತ್ತಿಯಾಗಿತ್ತು ಎಂದು ಸಚಿವರು ಸ್ಪಷ್ಟವಾಗಿ ಹೇಳಿದರು.

ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದಲೇ ಭೂ ಪರಿವರ್ತನೆ ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸುವ ನೂತನ ತಂತ್ರಾಂಶಕ್ಕೆ ಚಾಲನೆ ನೀಡಲಾಗಿದೆ. ಇದರಿಂದ ಮಧ್ಯವರ್ತಿಗಳ ಹಾವಳಿ ಸಂಪೂರ್ಣವಾಗಿ ತಡೆಯಲಾಗುವುದರೊಂದಿಗೆ, ನೈಜ ಹೂಡಿಕೆದಾರರಿಗೆ ಸಮಯ ಹಾಗೂ ವೆಚ್ಚ ಎರಡರಲ್ಲಿಯೂ ಲಾಭವಾಗಲಿದೆ. ಪರಿಣಾಮವಾಗಿ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಇನ್ನಷ್ಟು ಹೆಚ್ಚಿನ ಬಂಡವಾಳ ಹರಿದುಬರುವ ಭರವಸೆ ಇದೆ. ಈ ತಂತ್ರಾಂಶ ಇಡೀ ದೇಶಕ್ಕೆ ಮಾದರಿಯಾಗುವ ವ್ಯವಸ್ಥೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ದೇಶದ ಆರ್ಥಿಕತೆಗೆ ಕೃಷಿಯ ಕೊಡುಗೆ ಶೇ.13ರಷ್ಟೇ ಇದ್ದರೂ, ಶೇ.45ರಷ್ಟು ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಕೃಷಿ ಚಟುವಟಿಕೆಗಳು ನಿರಂತರವಾಗಿ ನಡೆಯಲು ವಿದ್ಯುತ್ ಅತ್ಯವಶ್ಯಕವಾಗಿದೆ. ಬೋರ್ವೆಲ್, ನೀರಾವರಿ ಸೇರಿದಂತೆ ಎಲ್ಲಾ ಕೃಷಿ ಸಂಬಂಧಿತ ಕಾರ್ಯಗಳಿಗೂ ವಿದ್ಯುತ್ ಅಗತ್ಯ. ಆದರೆ ಜನ ಸಾಮಾನ್ಯರಿಗೆ ವಿದ್ಯುತ್ ಸುಲಭವಾಗಿ ಹಾಗೂ ಅಗ್ಗವಾಗಿ ಲಭ್ಯವಾಗಬೇಕಾದರೆ ನವೀಕರಿಸಬಹುದಾದ ಇಂಧನ ಮೂಲಗಳೇ ಏಕೈಕ ಮಾರ್ಗವೆಂದು ಸಚಿವರು ಹೇಳಿದರು.

ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವು ಕಲ್ಲಿದ್ದಲು ಸೇರಿದಂತೆ ಜೈವಿಕ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದಾಗಿ ಹಲವು ಬಾರಿ ಭರವಸೆ ನೀಡಿದೆ. ಈ ಭರವಸೆ ಈಡೇರಬೇಕಾದರೆ ದೇಶಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ನವೀಕರಿಸಬಹುದಾದ ಇಂಧನ ಘಟಕಗಳ ಸ್ಥಾಪನೆ ಅನಿವಾರ್ಯವಾಗಿದೆ ಎಂದು ಅವರು ಪುನರುಚ್ಚರಿಸಿದರು.

ಪ್ರಸ್ತುತ ದೇಶದ ಮಟ್ಟದಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳಿಂದ 500 ಗಿಗಾವಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಆದರೆ ಈಗಾಗಲೇ 300 ಗಿಗಾವಾಟ್‌ಗಿಂತ ಸ್ವಲ್ಪ ಹೆಚ್ಚು ಮಾತ್ರ ಉತ್ಪಾದನೆ ಸಾಧ್ಯವಾಗುತ್ತಿದೆ. ಈ ಪೈಕಿ ಕರ್ನಾಟಕವೇ ಶೇ.12 ರಿಂದ ಶೇ.13ರಷ್ಟು ವಿದ್ಯುತ್ ಪೂರೈಕೆ ಮಾಡುತ್ತಿರುವುದು ರಾಜ್ಯದ ಹೆಗ್ಗಳಿಕೆಯಾಗಿದೆ. ಉಳಿದ 200 ಗಿಗಾವಾಟ್ ವಿದ್ಯುತ್ ಉತ್ಪಾದನೆಗೆ ದೇಶಾದ್ಯಂತ ಕನಿಷ್ಠ 8 ಲಕ್ಷ ಎಕರೆ ಭೂಮಿ ಅಗತ್ಯವಿದೆ. ಈ ಪೈಕಿ ರಾಜ್ಯದಲ್ಲೇ 40 ರಿಂದ 50 ಗಿಗಾವಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಲಾಗಿದ್ದು, ಹೊಸ ಘಟಕಗಳ ಸ್ಥಾಪನೆಗೆ ಕನಿಷ್ಠ 1 ಲಕ್ಷ ಎಕರೆ ಭೂಮಿ ಬೇಕಾಗಬಹುದು ಎಂದು ಸಚಿವರು ವಿವರಿಸಿದರು.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿಯೇ ಕಂದಾಯ ಇಲಾಖೆ ಹಾಗೂ ಇಂಧನ ಇಲಾಖೆ ಒಟ್ಟಾಗಿ ಭೂ ಪರಿವರ್ತನೆ ಪ್ರಕ್ರಿಯೆಯನ್ನು ಸರಳಗೊಳಿಸುವ ಮಹತ್ವದ ಹೆಜ್ಜೆ ಇಟ್ಟಿವೆ. ಇದರ ಫಲವಾಗಿ ಕರ್ನಾಟಕ ವಿದ್ಯುತ್ ಉತ್ಪಾದನೆಯಲ್ಲಿ ಇಡೀ ದೇಶದಲ್ಲೇ ಅತ್ಯಂತ ಸ್ವಾವಲಂಬಿ ರಾಜ್ಯವಾಗುವತ್ತ ಸಾಗಲಿದೆ. ಜೊತೆಗೆ ಹೂಡಿಕೆದಾರರಿಗೂ ಇದು ಬಹುಮಾನವಾಗಿ ಪರಿಣಮಿಸಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕವೇ ದೇಶದಲ್ಲೇ ನಂಬರ್–1 ಸ್ಥಾನದಲ್ಲಿದೆ ಎಂದು ಸ್ಪಷ್ಟಪಡಿಸಿದರು. ಸಾಮಾನ್ಯವಾಗಿ ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳು ಹೆಚ್ಚು ಇಂಧನ ಉತ್ಪಾದಿಸುತ್ತವೆ ಎಂಬ ಅಭಿಪ್ರಾಯವಿದೆ. ಆದರೆ ಅದು ಸಂಪೂರ್ಣ ಸತ್ಯವಲ್ಲ. ಕರ್ನಾಟಕದಲ್ಲಿ ಲಭ್ಯವಿರುವ 1.20 ಕೋಟಿ ಹೆಕ್ಟೇರ್ ಜಮೀನಿನ ಪ್ರತಿಯೊಂದು ಇಂಚು ಕೂಡ ಕೃಷಿಗೆ ಯೋಗ್ಯವಾಗಿದ್ದು, ಬಳಸಬಹುದಾದ ಭೂಮಿಯಾಗಿದೆ. ಆದರೆ ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಶೇ.20 ರಿಂದ ಶೇ.25ರಷ್ಟು ಭೂಮಿ ಕೃಷಿಗೆ ಅಸಮರ್ಥವಾಗಿದ್ದು, ಜನವಾಸಕ್ಕೂ ಅಸಾಧ್ಯವಾದ ಮರುಭೂಮಿಯಾಗಿದೆ ಎಂದು ಅವರು ವಿವರಿಸಿದರು.

ಅಂತಹ ಮರುಭೂಮಿಯಲ್ಲಿ ಘಟಕಗಳನ್ನು ಸ್ಥಾಪಿಸುವುದು ಸುಲಭವಾಗಿದ್ದರೂ, ಕರ್ನಾಟಕದಲ್ಲಿ ಕೃಷಿ ಭೂಮಿಯಲ್ಲಿಯೇ ಘಟಕಗಳನ್ನು ಸ್ಥಾಪಿಸಿ ದೇಶದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಗಣನೀಯ ಕೊಡುಗೆ ನೀಡುತ್ತಿರುವುದು ರಾಜ್ಯದ ಸಾಧನೆಯಾಗಿದೆ ಎಂದು ಸಚಿವರು ಹೇಳಿದರು.

ಕಾರ್ಯಕ್ರಮದಲ್ಲಿ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಗಮದ ಅಧ್ಯಕ್ಷ ಟಿ.ಡಿ. ರಾಜೇಗೌಡ, ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತೆ ಮೀನಾ ನಾಗರಾಜ್ ಸೇರಿದಂತೆ ನವೀಕರಿಸಬಹುದಾದ ಇಂಧನ ಕ್ಷೇತ್ರದ ಹಲವು ಹೂಡಿಕೆದಾರರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

‘ಕೊಟ್ಟ ಮಾತು ಉಳಿಯುತ್ತದೆಯೇ?’ – ಕಾಂಗ್ರೆಸ್ ಒಳಕಿಚ್ಚಿಗೆ ಸುರೇಶ್ ಮಾರ್ಮಿಕ ನುಡಿ, ಡಿಕೆಶಿ ದೆಹಲಿ ಪಯಣ ರಾಜಕೀಯ ಚರ್ಚೆ ತೀವ್ರ

“ಮೊದಲು ನಿಮ್ಮ ಹೈಕಮಾಂಡ್‌ ಹುಡುಕಿ, ಬಳಿಕ ಮೋದಿ ಬಗ್ಗೆ ಮಾತನಾಡಿ”: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ತೀವ್ರ ವಾಗ್ದಾಳಿ

ಪ್ಲಾಸ್ಟಿಕ್ ಮುಕ್ತ ಶಿವರಾತ್ರಿ ಉತ್ಸವಕ್ಕೆ ಹರಕೆರೆ ಹರಕೇಶ್ವರ ದೇವಸ್ಥಾನದಲ್ಲಿ ಸಂಕಲ್ಪ

ಜನಸೇವೆಗೆ ಬದ್ಧ ನಾಯಕತ್ವ: ಹಾರನಹಳ್ಳಿಯಲ್ಲಿ ಡಿ.ಎಸ್. ಅರುಣ್ ಅವರಿಂದ ಪಂಚಾಯಿತಿ ಕಟ್ಟಡ ಉದ್ಘಾಟನೆ ಹಾಗೂ ಹಕ್ಕುಪತ್ರ ವಿತರಣೆ

‘ಎಲ್ಲರೂ ಬಾಯಿ ಮುಚ್ಚಿಕೊಂಡಿರಬೇಕು’: ಕಾಂಗ್ರೆಸ್ ನಾಯಕರಿಗೆ ಡಿಕೆಶಿ ಖಡಕ್ ಸಂದೇಶ

ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿ–ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಕೇಂದ್ರದ ಮೇಲೆ ಒತ್ತಡ: ಮುಖ್ಯಮಂತ್ರಿ ಸಿದ್ದರಾಮಯ್ಯ

Leave a Comment