ಬೆಂಗಳೂರು: ಮಕ್ಕಳಲ್ಲಿ ಅಡಗಿರುವ ಸೃಜನಶೀಲತೆ, ಕಲ್ಪನಾ ಶಕ್ತಿ ಮತ್ತು ಸಂವೇದನಾಶೀಲತೆಯನ್ನು ಹೊರತರುವಲ್ಲಿ ಚಿತ್ರಕಲೆಗೆ ಅತ್ಯಂತ ಮಹತ್ವದ ಪಾತ್ರವಿದೆ. ಅಕ್ಷರಗಳ ಕಲಿಕೆ ಎಷ್ಟು ಅಗತ್ಯವೋ, ಚಿತ್ರಕಲೆಯ ಕಲಿಕೆಯೂ ಅಷ್ಟೇ ಅಗತ್ಯ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪ ಹೇಳಿದರು.
ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿರುವ ಮಹಾತ್ಮ ಗಾಂಧೀಜಿಯವರ ಪುತ್ಥಳಿಯ ಎದುರು, ಗದಗ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ “2026ನೇ ಸಾಲಿನ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಹಾಗೂ ಬೃಹತ್ ಚಿತ್ರಕಲಾ ಪ್ರದರ್ಶನ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಕಲೆಯ ಮಹತ್ವವನ್ನು ವಿವರಿಸಿದ ಸಚಿವರು, “ಚಿತ್ರಕಲೆ ಮಕ್ಕಳ ಮನಸ್ಸನ್ನು ಮುಕ್ತಗೊಳಿಸಿ, ಅವರ ಚಿಂತನೆಗೆ ದಿಕ್ಕು ನೀಡುವ ಶಕ್ತಿಯನ್ನು ಹೊಂದಿದೆ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪೋಷಿಸುವ ಜವಾಬ್ದಾರಿ ಚಿತ್ರಕಲಾ ಶಿಕ್ಷಕರ ಮೇಲಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಅಕ್ಷರಜ್ಞಾನಕ್ಕೆ ಎಷ್ಟು ಆದ್ಯತೆ ನೀಡಲಾಗುತ್ತದೋ, ಅದೇ ರೀತಿಯಲ್ಲಿ ಕಲಾ ಶಿಕ್ಷಣಕ್ಕೂ ಮಹತ್ವ ನೀಡಬೇಕಾಗಿದೆ,” ಎಂದು ಅಭಿಪ್ರಾಯಪಟ್ಟರು.
ಶಿಕ್ಷಕರ ಬೇಡಿಕೆಗಳಿಗೆ ಸ್ಪಂದಿಸಿದ ಅವರು, ಕರ್ನಾಟಕ ರಾಜ್ಯವು ಕಲಾ-ಸಾಂಸ್ಕೃತಿಕ ಪರಂಪರೆಯಲ್ಲಿ ಅತ್ಯಂತ ಶ್ರೀಮಂತ ಇತಿಹಾಸ ಹೊಂದಿದೆ ಎಂದು ಹೇಳಿದರು. “ನಮ್ಮ ಸಾಂಸ್ಕೃತಿಕ ಮೌಲ್ಯಗಳು ಮುಂದಿನ ಪೀಳಿಗೆಗೆ ತಲುಪಬೇಕಾದರೆ ಶಾಲಾ ಹಂತದಲ್ಲೇ ಕಲೆಗೆ ಉತ್ತೇಜನ ಅಗತ್ಯ. ಸಾಮಾನ್ಯ ಶಿಕ್ಷಕರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ಜೊತೆಗೆ ಕಲಾ ಶಿಕ್ಷಕರ ನೇಮಕವೂ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆದ್ಯತೆಯ ಮೇರೆಗೆ ಚಿತ್ರಕಲಾ ಶಿಕ್ಷಕರ ನೇಮಕಾತಿ ನಡೆಸಲು ಹಾಗೂ ಸಂಘದ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ,” ಎಂದು ಭರವಸೆ ನೀಡಿದರು.

ಗದಗ ಜಿಲ್ಲೆಯ ಚಿತ್ರಕಲಾ ಶಿಕ್ಷಕರು ಸಂಘಟಿತರಾಗಿ ರಾಜ್ಯದ ಶಕ್ತಿಕೇಂದ್ರವಾದ ರಾಜಧಾನಿಯಲ್ಲಿ ಇಂತಹ ಸೃಜನಶೀಲ ಹಾಗೂ ಕಲಾತ್ಮಕ ಕಾರ್ಯಕ್ರಮವನ್ನು ಆಯೋಜಿಸಿರುವುದನ್ನು ಸಚಿವರು ವಿಶೇಷವಾಗಿ ಶ್ಲಾಘಿಸಿದರು. “ನಿಮ್ಮಲ್ಲಿರುವ ಪ್ರತಿಭೆ ಮತ್ತು ಬದ್ಧತೆ ಪ್ರಶಂಸನೀಯ. ಸರ್ಕಾರಿ ಶಾಲೆಗಳಲ್ಲಿ ನಿಮ್ಮಂತಹ ಕಲಾ ಗುರುಗಳು ಇದ್ದರೆ ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ಸಿಗುತ್ತದೆ. ಇಂತಹ ಪ್ರಯತ್ನಗಳು ಒಂದು ಜಿಲ್ಲೆಗೆ ಮಾತ್ರ ಸೀಮಿತವಾಗದೆ ರಾಜ್ಯದಾದ್ಯಂತ ವಿಸ್ತರಿಸಲಿ,” ಎಂದು ಅವರು ಆಶಿಸಿದರು.
ಚಿತ್ರಕಲಾ ಪ್ರದರ್ಶನದಲ್ಲಿ ಶಿಕ್ಷಕರು ರಚಿಸಿದ ವೈವಿಧ್ಯಮಯ ಕಲಾಕೃತಿಗಳು ನೋಡುಗರನ್ನು ಆಕರ್ಷಿಸಿದವು. ಪ್ರಕೃತಿ ಸೌಂದರ್ಯ, ಗ್ರಾಮೀಣ ಜೀವನ, ಮಾನವೀಯ ಮೌಲ್ಯಗಳು ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ವಿಷಯಾಧಾರಿತ ಚಿತ್ರಗಳು ವಿಶೇಷ ಗಮನ ಸೆಳೆದವು. ಮಕ್ಕಳಿಗೆ ಸಂದೇಶ ನೀಡುವ ಉದ್ದೇಶದಿಂದ ರಚಿಸಲಾದ ಅನೇಕ ಅರ್ಥಪೂರ್ಣ ಚಿತ್ರಗಳು ಪ್ರದರ್ಶನಕ್ಕೆ ಹೆಚ್ಚುವರಿ ಮೆರುಗು ನೀಡಿದವು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ, ಶಶಿಲ್ ಜಿ. ನಮೋಶಿ, ಶಾಸಕರಾದ ಭೀಮಣ್ಣ ಟಿ. ನಾಯ್ಕ್, ಗದಗ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು, ಕಲಾವಿದರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.







