ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಕಾಂಗ್ರೆಸ್ ಸರ್ಕಾರ ಬ್ರೋಕರ್‌ಗಳ ಕೈಗೊಂಬೆ: ಹಾಸನ ಜೆಡಿಎಸ್ ಸಮಾವೇಶದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

On: January 24, 2026 10:34 PM
Follow Us:

ಹಾಸನ: ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರವು ಇಂದು ಬ್ರೋಕರ್‌ಗಳು ಹಾಗೂ ಲೂಟಿಕೋರರ ಹಿಡಿತಕ್ಕೆ ಸಿಲುಕಿದ್ದು, ಅಹಿಂದ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ಹಿರಿಯ ನಾಯಕ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.

ಹಾಸನ ಜಿಲ್ಲೆಯ ಬೂವನಹಳ್ಳಿಯಲ್ಲಿ ನಡೆದ ಜೆಡಿಎಸ್ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಕಳೆದ ಎರಡುವರೆ ವರ್ಷಗಳಿಂದ ಅಭಿವೃದ್ಧಿಯ ಬಗ್ಗೆ ಯೋಚಿಸದೆ, ಕೇವಲ ಮುಖ್ಯಮಂತ್ರಿ ಕುರ್ಚಿಗಾಗಿ ರಾಜಕೀಯ ನಾಟಕವನ್ನೇ ನಡೆಸುತ್ತಿದೆ ಎಂದು ಕಿಡಿಕಾರಿದರು.

ರಾಜ್ಯ ನೈಸರ್ಗಿಕ ಸಂಪತ್ತಿನಿಂದ ಸಮೃದ್ಧವಾಗಿದ್ದರೂ, ಇಂದು ಆ ಸಂಪತ್ತು ಸಾಮಾನ್ಯ ಜನರ ಕೈಯಲ್ಲಿ ಇಲ್ಲದೆ, ಬ್ರೋಕರ್‌ಗಳ ಕೈ ಸೇರಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, ಆಡಳಿತ ವ್ಯವಸ್ಥೆಯೇ ಸಂಪೂರ್ಣವಾಗಿ ದಿಕ್ಕು ತಪ್ಪಿದೆ ಎಂದರು.

ರಾಜ್ಯದಲ್ಲಿ 2,000ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಸರ್ಕಾರಕ್ಕೆ ಅವರ ಬದುಕಿನ ಬಗ್ಗೆ ಯಾವುದೇ ಕಾಳಜಿಯಿಲ್ಲ. ರೈತರ ಸಂಕಷ್ಟಗಳನ್ನು ನಿರ್ಲಕ್ಷಿಸಿ, ಅವರ ಜೀವನದ ಜೊತೆ ಚೆಲ್ಲಾಟ ಆಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಸನ ಸಂಸದ ಶ್ರೇಯಸ್ ಪಟೇಲ್ ಅವರು ಜೆಡಿಎಸ್ ಕೊಡುಗೆ ಕುರಿತು ಮಾಡಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ನಮ್ಮ ತಪ್ಪುಗಳಿಂದಾಗಿ ನಾವು ಹಾಸನದಲ್ಲಿ ಸೋತಿರಬಹುದು. ಆದರೆ ನಾನು ಯಾರ ಬಗ್ಗೆ ಕೆಟ್ಟದಾಗಿ ಮಾತನಾಡುವ ಸಂಸ್ಕೃತಿಯನ್ನು ಬೆಳೆಸಿಕೊಂಡಿಲ್ಲ” ಎಂದು ತಿರುಗೇಟು ನೀಡಿದರು.

ತುಮಕೂರಿನಲ್ಲಿ ಜನರು ‘2028ರ ಮುಖ್ಯಮಂತ್ರಿ’ ಎಂದು ಘೋಷಣೆ ಕೂಗಿದ್ದನ್ನು ಸ್ಮರಿಸಿದ ಅವರು, ಜೆಡಿಎಸ್ ಮುಗಿದುಹೋಯಿತು ಎಂದು ಹೇಳುವವರಿಗೆ ಈ ಬೃಹತ್ ಸಮಾವೇಶವೇ ಸ್ಪಷ್ಟ ಉತ್ತರ ಎಂದು ಹೇಳಿದರು.

ಮುಂಬರುವ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಆ ಸಂದರ್ಭದಲ್ಲಿ ಸಂಸತ್ತಿನ ಅಧಿವೇಶನದಲ್ಲಿ ರಾಜ್ಯದ ಹಿತಾಸಕ್ತಿಗಳನ್ನು ಮುಂದಿಟ್ಟು ಮಾತನಾಡಲು ಸಭಾಪತಿಗಳಿಗೆ ಮನವಿ ಮಾಡಿರುವುದಾಗಿ ಇದೇ ವೇಳೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ, ಆರೋಪ ಸಾಬೀತುಪಡಿಸಿದ ಪೊಲೀಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರವು 30 ಲಕ್ಷ ರೂ. ಬಹುಮಾನ ಘೋಷಿಸಿರುವುದನ್ನು ಕಟುವಾಗಿ ಟೀಕಿಸಿದರು. ಈ ಹಿಂದೆ ಕಾಡುಗಳ್ಳ ವೀರಪ್ಪನ್‌ನನ್ನು ಹಿಡಿಯಲು ಪ್ರಾಣ ಪಣಕ್ಕಿಟ್ಟು ಕಾಡಿಗೆ ತೆರಳಿದ್ದ ಪೊಲೀಸರಿಗೆ ದೇವೇಗೌಡರು ಗೌರವ ಹಾಗೂ ಉಡುಗೊರೆ ನೀಡಿದ್ದರು. ಆದರೆ ಇಂದಿನ ಸರ್ಕಾರ ತನಗೆ ಬೇಕಾದ ರೀತಿಯಲ್ಲಿ ತನಿಖೆ ನಡೆಸಿಸಿಕೊಳ್ಳಲು ಕೆಲ ಅಧಿಕಾರಿಗಳಿಗೆ ಲಕ್ಷಾಂತರ ರೂ. ಬಹುಮಾನ ನೀಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ಶಿಕ್ಷೆ ವಿಧಿಸುವ ಪ್ರಕ್ರಿಯೆಯಲ್ಲಿ ಎಸ್‌ಐಟಿ ಅಧಿಕಾರಿಗಳಿಗೆ 30 ಲಕ್ಷ ರೂ. ಬಹುಮಾನ ನೀಡಿರುವುದನ್ನು ಉಲ್ಲೇಖಿಸಿದ ಅವರು, ಆಡಳಿತ ನಡೆಸುವವರು ಸರ್ಕಾರದ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಒಟ್ಟಿನಲ್ಲಿ, ರಾಜ್ಯ ಸರ್ಕಾರದ ಧೋರಣೆಗಳು ಜನವಿರೋಧಿಯಾಗಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕುಮಾರಸ್ವಾಮಿ ತಮ್ಮ ಭಾಷಣದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

K.M.Sathish Gowda

Join WhatsApp

Join Now

Facebook

Join Now

Leave a Comment