ಬೆಂಗಳೂರು: ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧದ ಅಂಶಗಳು ಹಾಗೂ ಜಿ. ರಾಮ್ ಜಿ ಕುರಿತು ವಿರೋಧ ವ್ಯಕ್ತಪಡಿಸಿದ್ದ 11 ಪ್ಯಾರಾಗಳಿದ್ದ ಕಾರಣ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಂಪೂರ್ಣ ಭಾಷಣವನ್ನು ಓದದೆ ಸಭೆಯಿಂದ ಹೊರನಡೆಯುವ ಘಟನೆ ರಾಜ್ಯ ರಾಜಕಾರಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಗಣರಾಜ್ಯೋತ್ಸವದ ರಾಜ್ಯಪಾಲರ ಭಾಷಣದ ಮೇಲೆ ವಿಶೇಷ ಕುತೂಹಲ ಮೂಡಿತ್ತು.

77ನೇ ಗಣರಾಜ್ಯೋತ್ಸವದ ಅಂಗವಾಗಿ ರಾಜ್ಯಪಾಲರು ನೀಡಿದ ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಯಾವುದೇ ನೇರ ಟೀಕೆಗಳಿಲ್ಲದೆ, ರಾಜ್ಯ ಸರ್ಕಾರದ ಸಾಧನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಜೊತೆಗೆ ಒಕ್ಕೂಟ ವ್ಯವಸ್ಥೆಯ ಮಹತ್ವವನ್ನು ಸ್ಮರಿಸುವ ಮೂಲಕ ಅದನ್ನು ಸಂರಕ್ಷಿಸುವ ಜವಾಬ್ದಾರಿಯ ಕುರಿತು ಪರೋಕ್ಷವಾಗಿ ಉಲ್ಲೇಖ ಮಾಡಲಾಗಿದೆ. ಈ ಮೂಲಕ ಕೇಂದ್ರ–ರಾಜ್ಯ ಸಂಬಂಧಗಳ ಹಿನ್ನೆಲೆಯಲ್ಲಿ ಒಂದು ಸೂಕ್ಷ್ಮ ಸಂದೇಶವನ್ನು ಭಾಷಣ ಒಳಗೊಂಡಿದೆ ಎನ್ನಲಾಗುತ್ತಿದೆ.
ಭಾಷಣದ ಮುಖ್ಯಾಂಶಗಳು
ಗಣರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಕರ್ನಾಟಕದ ಜನತೆಗೆ ಹೃದಯಪೂರ್ವಕ ಶುಭಾಶಯಗಳನ್ನು ತಿಳಿಸಿದ ರಾಜ್ಯಪಾಲರು, ಜನವರಿ 26 ಭಾರತ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನ ಎಂದು ಹೇಳಿದರು. ಶತಮಾನಗಳ ಕಾಲ ಮುಂದುವರಿದ ರಾಜಪ್ರಭುತ್ವ ಹಾಗೂ ವಸಾಹತುಶಾಹಿ ಆಡಳಿತಕ್ಕೆ ತೆರೆ ಎಳೆದು, ಪ್ರಜಾಪ್ರಭುತ್ವವನ್ನು ಸ್ಥಾಪಿಸಿದ ದಿನವೇ ಈ ದಿನ ಎಂದು ಅವರು ಹೇಳಿದರು.
ತಾರತಮ್ಯವನ್ನು ಆಧಾರವಾಗಿಸಿಕೊಂಡ ವಸಾಹತುಶಾಹಿ ವ್ಯವಸ್ಥೆಯನ್ನು ತೊಡೆದು ಹಾಕಿ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯವನ್ನು ಒದಗಿಸುವ ಸಂವಿಧಾನ ಜಾರಿಗೊಂಡ ದಿನವೂ ಇದೇ ಎಂದು ಅವರು ಸ್ಮರಿಸಿದರು. ಗಣತಂತ್ರದ ಸ್ಥಾಪನೆಗಾಗಿ ಅನೇಕರು ತ್ಯಾಗ ಹಾಗೂ ಬಲಿದಾನಗಳನ್ನು ಮಾಡಿದ್ದಾರೆ. ಆ ಎಲ್ಲ ಮಹನೀಯರನ್ನು ಈ ಅಮೃತಕಾಲದಲ್ಲಿ ಗೌರವಪೂರ್ವಕವಾಗಿ ನೆನಪಿಸಿಕೊಳ್ಳಬೇಕು ಎಂದು ರಾಜ್ಯಪಾಲರು ಕರೆ ನೀಡಿದರು.
ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳನ್ನು ಉಲ್ಲೇಖಿಸಿದ ಅವರು, ರಾಜಕೀಯ ಪ್ರಜಾಪ್ರಭುತ್ವ ಮಾತ್ರ ಸಾಕಾಗುವುದಿಲ್ಲ, ಅದನ್ನು ಸಾಮಾಜಿಕ ಪ್ರಜಾಪ್ರಭುತ್ವವಾಗಿ ರೂಪಿಸುವ ಅಗತ್ಯವಿದೆ ಎಂದರು. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಒಂದರೊಂದಿಗೆ ಒಂದಾಗಿ ನಡೆದುಕೊಂಡಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂಬ ಅಂಬೇಡ್ಕರ್ ಅವರ ಸಂದೇಶವನ್ನು ಅವರು ನೆನಪಿಸಿದರು.

ರಾಜ್ಯ ಸರ್ಕಾರದ ಕ್ರಮಗಳು
ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ರಾಜ್ಯ ಸರ್ಕಾರವು ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಒಳಗೊಳ್ಳುವಿಕೆಗೆ ಆದ್ಯತೆ ನೀಡುತ್ತಿದೆ ಎಂದು ಭಾಷಣದಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯದ ವಿವಿಧ ಸಮುದಾಯಗಳು ಮತ್ತು ಪ್ರದೇಶಗಳ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಸೂಕ್ತ ಪರಿಹಾರ ನೀಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಲಾಯಿತು. ನೇಮಕಾತಿಗಳಲ್ಲಿ ಹಿಂದುಳಿದ ವರ್ಗಗಳಿಗೆ ಅವಕಾಶ ಕಲ್ಪಿಸುವುದು, ವಿವಿಧ ಆಯೋಗಗಳ ಶಿಫಾರಸುಗಳನ್ನು ಜಾರಿಗೆ ತರುವುದು ಹಾಗೂ ಪ್ರಾದೇಶಿಕ ಅಸಮಾನತೆಗಳನ್ನು ಕಡಿಮೆ ಮಾಡುವ ಕಾರ್ಯಗಳು ಮುಂದುವರಿದಿವೆ ಎಂದು ಹೇಳಲಾಗಿದೆ.
ಅತ್ಯಂತ ಹಿಂದುಳಿದ ವರ್ಗಗಳ ಆರ್ಥಿಕ ಬಲವರ್ಧನೆಗಾಗಿ ರಾಜ್ಯ ಸರ್ಕಾರ ಅನೇಕ ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದು, ವರ್ಷಕ್ಕೆ ಸುಮಾರು ₹1.12 ಲಕ್ಷ ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಭಾಷಣದಲ್ಲಿ ತಿಳಿಸಲಾಯಿತು. ಗ್ಯಾರಂಟಿ ಯೋಜನೆಗಳಿಗಾಗಿ ಇದುವರೆಗೆ ₹1.13 ಲಕ್ಷ ಕೋಟಿ ಕ್ಕೂ ಅಧಿಕ ಅನುದಾನ ವಿನಿಯೋಗವಾಗಿದ್ದು, ಇದರಿಂದ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿದೆ ಹಾಗೂ ಕುಟುಂಬಗಳು ಆರ್ಥಿಕವಾಗಿ ಸಬಲವಾಗುತ್ತಿವೆ ಎಂದು ವಿವಿಧ ಅಧ್ಯಯನಗಳು ಸೂಚಿಸುತ್ತಿವೆ ಎಂದು ಉಲ್ಲೇಖಿಸಲಾಗಿದೆ.
ವಿವಾದ ತಪ್ಪಿಸಲು ಸರ್ಕಾರದ ಎಚ್ಚರಿಕೆ
ಕಳೆದ ಬಾರಿ ವಿಧಾನಸಭೆಯಲ್ಲಿ ಭಾಷಣದ ವೇಳೆ ಉಂಟಾದ ಅಸಹಜ ಪರಿಸ್ಥಿತಿಯ ನಂತರ, ಈ ಬಾರಿ ಸರ್ಕಾರ ಹೆಚ್ಚುವರಿ ಎಚ್ಚರಿಕೆ ವಹಿಸಿದೆ. ಗಣರಾಜ್ಯೋತ್ಸವದ ಭಾಷಣದ ಕರಡನ್ನು ಪೂರ್ವದಲ್ಲೇ ರಾಜ್ಯಪಾಲರಿಗೆ ಕಳುಹಿಸಿ, ಅವರ ಅನುಮೋದನೆ ಪಡೆದ ಬಳಿಕವೇ ಅಂತಿಮಗೊಳಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಯಾವುದೇ ಅಡಚಣೆ ಇಲ್ಲದೆ ರಾಜ್ಯಪಾಲರು ಭಾಷಣ ವಾಚಿಸಿದ್ದಾರೆ.
ಈ ಬಾರಿ ಭಾಷಣವು ಸಂಪೂರ್ಣವಾಗಿ ರಾಜ್ಯ ಸರ್ಕಾರದ ಸಾಧನೆಗಳು, ಜನಕಲ್ಯಾಣ ಯೋಜನೆಗಳು ಹಾಗೂ ಭವಿಷ್ಯದ ಗುರಿಗಳ ಮೇಲೆ ಕೇಂದ್ರೀಕರಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧದ ವಿವಾದಾತ್ಮಕ ಅಂಶಗಳನ್ನು ಉದ್ದೇಶಪೂರ್ವಕವಾಗಿ ತಪ್ಪಿಸಲಾಗಿದೆ. ಹಿಂದಿನ ಅನುಭವಗಳಿಂದ ಪಾಠ ಕಲಿತ ಸರ್ಕಾರ ಸಂಘರ್ಷವಿಲ್ಲದ ಸಮನ್ವಯದ ಮಾರ್ಗವನ್ನು ಅಳವಡಿಸಿಕೊಂಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಒಟ್ಟಾರೆ, ಈ ಬಾರಿಯ ಗಣರಾಜ್ಯೋತ್ಸವದ ರಾಜ್ಯಪಾಲರ ಭಾಷಣವು ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಜನಕಲ್ಯಾಣದ ವಿಚಾರಗಳಿಗೆ ಒತ್ತು ನೀಡುವ ಮೂಲಕ ರಾಜ್ಯದ ಭವಿಷ್ಯದ ದಿಕ್ಕನ್ನು ಸೂಚಿಸುವ ಸಂದೇಶವಾಗಿ ಮೂಡಿಬಂದಿದೆ.







