ಬಾರಾಮತಿ / ಮುಂಬೈ: ಮಹಾರಾಷ್ಟ್ರದ ರಾಜಕೀಯ ವಲಯವನ್ನು ಬೆಚ್ಚಿಬೀಳಿಸಿದ ಭೀಕರ ದುರಂತವೊಂದು ಇಂದು ಬಾರಾಮತಿಯಲ್ಲಿ ಸಂಭವಿಸಿದೆ. ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಪ್ರಯಾಣಿಸುತ್ತಿದ್ದರು ಎನ್ನಲಾದ ಖಾಸಗಿ ವಿಮಾನವು ಲ್ಯಾಂಡಿಂಗ್ ವೇಳೆ ನಿಯಂತ್ರಣ ತಪ್ಪಿ ಪತನಗೊಂಡಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಈ ದುರ್ಘಟನೆಯಲ್ಲಿ ವಿಮಾನದಲ್ಲಿದ್ದ ಆರು ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಅಪಘಾತದ ತೀವ್ರತೆಯಿಂದಾಗಿ ಮೃತದೇಹಗಳು ಸುಟ್ಟು ಕರಕಲಾಗಿ ಗುರುತು ಪತ್ತೆ ಹಚ್ಚುವುದು ಕಷ್ಟಕರವಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಂಬೈನಿಂದ ಬಾರಾಮತಿಗೆ ತೆರಳುತ್ತಿದ್ದ ಖಾಸಗಿ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಬಾರಾಮತಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ (ಎಮರ್ಜೆನ್ಸಿ ಲ್ಯಾಂಡಿಂಗ್) ಮಾಡಲು ಯತ್ನಿಸಿದ ವೇಳೆ ವಿಮಾನವು ನೆಲಕ್ಕೆ ಅಪ್ಪಳಿಸಿ ಪತನಗೊಂಡಿದೆ. ಪತನದ ತಕ್ಷಣವೇ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಅದು ಸಂಪೂರ್ಣವಾಗಿ ಅಗ್ನಿಗಾಹುತಿಯಾಗಿದೆ.

ಸಂಪೂರ್ಣ ನಜ್ಜುಗುಜ್ಜಾದ ವಿಮಾನ, ಎದೆನಡುಗಿಸುವ ದೃಶ್ಯಗಳು
ಅಪಘಾತದ ಸ್ಥಳದಿಂದ ಹೊರಬಂದಿರುವ ದೃಶ್ಯಗಳು ಅತ್ಯಂತ ಹೃದಯವಿದ್ರಾವಕವಾಗಿವೆ. ವಿಮಾನವು ಪೀಸ್ ಪೀಸ್ ಆಗಿ ಚದುರಿಹೋಗಿದ್ದು, ಸುತ್ತಮುತ್ತ ದಟ್ಟ ಹೊಗೆ ಆವರಿಸಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಅಪಘಾತದ ರಭಸಕ್ಕೆ ವಿಮಾನದ ಭಾಗಗಳು ದೂರದವರೆಗೆ ಚದುರಿದ್ದು, ಪರಿಸ್ಥಿತಿ ಭಯಾನಕವಾಗಿತ್ತು. ವಿಮಾನದಲ್ಲಿದ್ದವರ ಮೃತದೇಹಗಳು ಸುಟ್ಟು ಕರಕಲಾಗಿ ಪತ್ತೆಯಾಗಿವೆ ಎನ್ನಲಾಗಿದೆ.
ಘಟನೆಯ ಬಳಿಕ ತಕ್ಷಣವೇ ಅಗ್ನಿಶಾಮಕ ದಳ, ಪೊಲೀಸ್ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಸದ್ಯ ಮೃತದೇಹಗಳನ್ನು ಡಿಎನ್‌ಎ ಪರೀಕ್ಷೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಪಘಾತದ ತೀವ್ರತೆಯಿಂದಾಗಿ ಮೃತರ ಗುರುತು ಪತ್ತೆ ಹಚ್ಚುವುದು ಕಷ್ಟಕರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಕೀಯ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ದುರಂತ
ಇಂದು ಬಾರಾಮತಿಯಲ್ಲಿ ಜಿಲ್ಲಾ ಪರಿಷತ್ ಹಾಗೂ ಪಂಚಾಯತ್ ಸಮಿತಿ ಚುನಾವಣೆಗಳಿಗೆ ಸಂಬಂಧಿಸಿದಂತೆ ಅಜಿತ್ ಪವಾರ್ ಅವರ ಹಲವು ಪ್ರಮುಖ ಸಭೆಗಳು ನಿಗದಿಯಾಗಿದ್ದವು. ಈ ಸಭೆಗಳಲ್ಲಿ ಭಾಗವಹಿಸಲು ಅವರು ಬೆಳಿಗ್ಗೆ ವಿಮಾನದ ಮೂಲಕ ಬಾರಾಮತಿಗೆ ಹೊರಟಿದ್ದರು ಎಂದು ಹೇಳಲಾಗಿದೆ. ಆದರೆ ವಿಮಾನ ನಿಲ್ದಾಣ ತಲುಪುವ ಮುನ್ನವೇ ಈ ಭೀಕರ ವಿಧಿಲೀಲೆ ಸಂಭವಿಸಿದೆ ಎಂಬ ಮಾಹಿತಿ ಹರಿದಾಡುತ್ತಿದೆ.
ಕುಟುಂಬದವರು ಬಾರಾಮತಿಯತ್ತ ಪ್ರಯಾಣ
ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ, ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಹಾಗೂ ಪುತ್ರ ಪಾರ್ಥ್ ಪವಾರ್ ಅವರು ತಕ್ಷಣವೇ ದೆಹಲಿಯಿಂದ ಬಾರಾಮತಿಗೆ ಹೊರಟಿದ್ದಾರೆ ಎಂದು ವರದಿಯಾಗಿದೆ. ಸಂಸತ್ ಅಧಿವೇಶನದ ಹಿನ್ನೆಲೆ ಅವರು ನಿನ್ನೆ ದೆಹಲಿಯಲ್ಲಿ ವಿವಿಧ ಪೂರ್ವಭಾವಿ ಸಭೆಗಳಲ್ಲಿ ಭಾಗವಹಿಸಿದ್ದರು. ಆದರೆ ದುರಂತದ ಮಾಹಿತಿ ದೊರಕುತ್ತಿದ್ದಂತೆ, ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಬಾರಾಮತಿಯತ್ತ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ.
ಬಾರಾಮತಿಯಲ್ಲಿ ಶೋಕ ಸಾಗರ
ಬಾರಾಮತಿ ಕ್ಷೇತ್ರದೊಂದಿಗೆ ಅಜಿತ್ ಪವಾರ್ ಅವರ ಸಂಬಂಧ ಅವಿನಾಭಾವವಾಗಿದ್ದು, ‘ಅಜಿತ್ ದಾದಾ’ ಎಂದೇ ಜನಪ್ರಿಯರಾಗಿದ್ದರು. ಇಂದು ಅವರ ಭಾಷಣ ಕೇಳಲು ಸಾವಿರಾರು ಕಾರ್ಯಕರ್ತರು ಮತ್ತು ನಾಗರಿಕರು ಕಾಯುತ್ತಿದ್ದರು. ಆದರೆ ಈ ಅಘಾತಕಾರಿ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಬಾರಾಮತಿ ಮಾತ್ರವಲ್ಲ, ಮಹಾರಾಷ್ಟ್ರದಾದ್ಯಂತ ಶೋಕದ ವಾತಾವರಣ ಆವರಿಸಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಎರಡು ದಿನಗಳ ಶೋಕಾಚರಣೆ ಎಂಬ ವರದಿ
ಡಿಸಿಎಂ ಅಜಿತ್ ಪವಾರ್ ಅವರ ನಿಧನದ ವರದಿಗಳ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಾದ್ಯಂತ ಎರಡು ದಿನಗಳ ಕಾಲ ಶೋಕಾಚರಣೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಅಧಿಕೃತ ಘೋಷಣೆಗೆ ಇನ್ನಷ್ಟೇ ನಿರೀಕ್ಷೆ ಇದೆ.
ಪ್ರಧಾನಿ ಮೋದಿ ಸಂತಾಪ
ಈ ದುರ್ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅಪಘಾತದಲ್ಲಿ ತಮ್ಮ ಆತ್ಮೀಯರನ್ನು ಕಳೆದುಕೊಂಡ ಎಲ್ಲರಿಗೂ ಅವರು ಸಂತಾಪ ಸೂಚಿಸಿದ್ದು, ಈ ಕಠಿಣ ಸಮಯದಲ್ಲಿ ಮೃತರ ಕುಟುಂಬಗಳಿಗೆ ಧೈರ್ಯ ಮತ್ತು ಶಕ್ತಿಯನ್ನು ನೀಡುವಂತೆ ಪ್ರಾರ್ಥಿಸಿದ್ದಾರೆ.







