ಬೆಂಗಳೂರು: ಕಾರು ಅಪಘಾತದಲ್ಲಿ ಅಕಾಲಿಕವಾಗಿ ನಿಧನರಾದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ಮಾನವೀಯ ಸ್ಪಂದನೆ ತೋರಿದ್ದು, ಅನುಕಂಪದ ಆಧಾರದ ಮೇಲೆ ಅವರ ಪುತ್ರಿಗೆ ಸರ್ಕಾರಿ ಉದ್ಯೋಗ ನೀಡಿದೆ. ದಿವಂಗತ ಅಧಿಕಾರಿಯ ಪುತ್ರಿ ಕುಮಾರಿ ಚೈತನ್ಯಾ ಎಂ. ಬೀಳಗಿ ಅವರಿಗೆ ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಸಹಾಯಕ ಹುದ್ದೆಯ ನೇಮಕಾತಿ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಅಧಿಕೃತವಾಗಿ ವಿತರಿಸಿದರು.

ಸೇವೆಯಲ್ಲಿರುವಾಗಲೇ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಮಹಾಂತೇಶ್ ಬೀಳಗಿ ಅವರು 2025ರ ನವೆಂಬರ್ 25ರಂದು ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಈ ದುರ್ಘಟನೆ ರಾಜ್ಯದ ಆಡಳಿತ ವಲಯದಲ್ಲಿ ತೀವ್ರ ದುಃಖವನ್ನುಂಟುಮಾಡಿದ್ದು, ಅವರ ಕುಟುಂಬದ ಭದ್ರತೆಗೆ ಸರ್ಕಾರ ಆಸರೆಯಾಗಿ ನಿಂತಿದೆ.
ಅನುಕಂಪದ ಆಧಾರದಡಿ ಚೈತನ್ಯಾ ಎಂ. ಬೀಳಗಿ ಅವರಿಗೆ ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಸಹಾಯಕ ಹುದ್ದೆಗೆ ನೇಮಕ ನೀಡಲಾಗಿದ್ದು, ರೂ.49,050 ರಿಂದ ರೂ.92,000ರವರೆಗೆ ವೇತನ ಶ್ರೇಣಿಯ ಹುದ್ದೆಯಾಗಿರುತ್ತದೆ. ಎರಡು ವರ್ಷಗಳ ಪರೀಕ್ಷಾರ್ಥಾವಧಿಯ ಮೇರೆಗೆ ಈ ನೇಮಕ ಮಾಡಲಾಗಿದೆ.

ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ದಿವಂಗತ ಮಹಾಂತೇಶ್ ಬೀಳಗಿ ಅವರು ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಸಾರ್ವಜನಿಕ ಸೇವೆ ಸಲ್ಲಿಸಿದ ಹಿರಿಯ ಅಧಿಕಾರಿಯಾಗಿದ್ದರು. ಅವರ ಅಕಾಲಿಕ ನಿಧನದಿಂದ ಕುಟುಂಬಕ್ಕೆ ಉಂಟಾದ ನೋವನ್ನು ಸರ್ಕಾರ ಅರ್ಥಮಾಡಿಕೊಂಡಿದೆ. ಅವರ ಪುತ್ರಿ ಚೈತನ್ಯಾ ಅವರು ತಂದೆಯ ಹಾದಿಯಲ್ಲೇ ಸಮಾಜಮುಖಿಯಾಗಿ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಂತೆ” ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಚಿವರಾದ ಹೆಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್, ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕರಾದ ಅಶೋಕ್ ಪಟ್ಟಣ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ರಾಜ್ಯ ಸರ್ಕಾರ ಕೈಗೊಂಡಿರುವ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸೇವೆಯಲ್ಲಿರುವಾಗಲೇ ಅಕಾಲಿಕವಾಗಿ ಜೀವ ಕಳೆದುಕೊಂಡ ಹಿರಿಯ ಅಧಿಕಾರಿಯ ಕುಟುಂಬಕ್ಕೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಒದಗಿಸುವ ಮೂಲಕ ಸರ್ಕಾರ ಅವರ ಜೀವನದಲ್ಲಿ ಹೊಸ ಬೆಳಕು ತಂದಿದೆ ಎಂಬ ಅಭಿಪ್ರಾಯ ಜನರಲ್ಲಿ ವ್ಯಕ್ತವಾಗಿದೆ. ದುಃಖದ ಸಮಯದಲ್ಲಿ ಕುಟುಂಬದ ಕೈ ಹಿಡಿದು ಭವಿಷ್ಯಕ್ಕೆ ಭರವಸೆ ನೀಡಿದ ಸರ್ಕಾರದ ನಡೆ ಜವಾಬ್ದಾರಿಯುತ ಮತ್ತು ಮಾನವೀಯ ಆಡಳಿತದ ಸ್ಪಷ್ಟ ಪ್ರತಿಬಿಂಬವಾಗಿದೆ ಎಂದು ಸಾರ್ವಜನಿಕರು ಪ್ರಶಂಸಿಸಿದ್ದಾರೆ







