ಇದು ಕೇವಲ ಅಸಮಂಜಸವಲ್ಲ; ಇದು ಸ್ಪಷ್ಟವಾದ ಸಾರ್ವಜನಿಕ ಹಣದ ದುರ್ಬಳಕೆ. ನಿನ್ನೆ ದಿನ ರಾಜ್ಯಮಟ್ಟದ ಅನೇಕ ಪತ್ರಿಕೆಗಳ ಮುಖಪುಟಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೀಡಿರುವ ಜಾಹೀರಾತು ಪ್ರಕಟವಾಗಿದೆ. ಆದರೆ ಅದರಲ್ಲಿ ಗ್ರಾಮೀಣಾಭಿವೃದ್ಧಿಯ ಸುಳಿವೇ ಇಲ್ಲ, ಪಂಚಾಯತ್ ರಾಜ್‌ನ ಪತ್ತೆಯೇ ಇಲ್ಲ. ಇದೆಲ್ಲಕ್ಕಿಂತಲೂ ಹೆಚ್ಚಾಗಿ, ಅದರಲ್ಲಿ ಕಾಣಿಸುವುದು ಕೇವಲ ರಾಜಕೀಯ ವ್ಯಂಗ್ಯ, ಕುಚೋದ್ಯ ಮತ್ತು ಎದುರಾಳಿಯ ಮೇಲಿನ ಅಸಹ್ಯಕರ ಟೀಕೆ ಮಾತ್ರ.
ಸರ್ಕಾರದ ಜಾಹೀರಾತು ಎಂದರೆ ಜನರಿಗೆ ಮಾಹಿತಿ ನೀಡುವ ಮಾಧ್ಯಮ. ಅದು ಯೋಜನೆಗಳ ವಿವರ ಹೇಳಬೇಕು, ಸೌಲಭ್ಯಗಳ ಮಾಹಿತಿ ನೀಡಬೇಕು, ಆಡಳಿತಾತ್ಮಕ ಸೂಚನೆಗಳನ್ನು ಸಾರಬೇಕು. ಆದರೆ ಇಂದು ನೀಡಿರುವ ಜಾಹೀರಾತು ಈ ಎಲ್ಲ ಮೌಲ್ಯಗಳನ್ನು ಕಾಲಿಟ್ಟು ತುಳಿದಿದೆ. ಸಾರ್ವಜನಿಕರ ತೆರಿಗೆ ಹಣವನ್ನು ಬಳಸಿ, ಕೇಂದ್ರ ಸರ್ಕಾರದ ಒಂದು ಯೋಜನೆಯನ್ನು ವ್ಯಂಗ್ಯದ ಭಾಷೆಯಲ್ಲಿ ಟೀಕಿಸುವುದಕ್ಕೆ ಜಾಹೀರಾತು ನೀಡಲಾಗಿದೆ ಎಂದರೆ, ಇದು ಆಡಳಿತದ ಗಂಭೀರತೆ ಎಲ್ಲಿ ಉಳಿಯುತ್ತದೆ ಎಂಬ ಪ್ರಶ್ನೆ ಸಹಜ.

ರಾಜಕೀಯ ಪಕ್ಷಗಳ ನಡುವೆ ಟೀಕೆ, ವಿರೋಧ, ವಾದ–ಪ್ರತಿವಾದಗಳು ಸಹಜ. ಆದರೆ ಅದಕ್ಕೆ ಪಕ್ಷದ ವೇದಿಕೆಗಳಿವೆ, ಪಕ್ಷದ ಹಣವಿದೆ, ಪಕ್ಷದ ಜಾಹೀರಾತುಗಳಿವೆ. ಸರ್ಕಾರದ ಖಜಾನೆ ಪಕ್ಷದ ಪ್ರಚಾರ ನಿಧಿ ಅಲ್ಲ. ಆಡಳಿತ ಪಕ್ಷಕ್ಕೆ ಅರ್ಥವಾಗಬೇಕಾದ ಮೂಲಸತ್ಯ ಇದೇ. ಜನರ ಹಣವನ್ನು ಬಳಸಿಕೊಂಡು ತಮ್ಮ ರಾಜಕೀಯ ಅಸಹನೆಯನ್ನು ಜಾಹೀರಾತಿನ ರೂಪದಲ್ಲಿ ಹೊರಹಾಕುವುದು ಅಧಿಕಾರದ ದುರುಪಯೋಗವಲ್ಲದೆ ಮತ್ತೇನು?
ಇನ್ನು ಜಾಹೀರಾತಿನ ದೃಶ್ಯಪ್ರಯೋಗದ ಬಗ್ಗೆ ಹೇಳುವುದಾದರೆ, ಅದು ಇನ್ನಷ್ಟು ಕಳಪೆ. ಕಪ್ಪು–ಬಿಳುಪು ಹಿನ್ನೆಲೆಯ ನಡುವೆ ಪ್ಯಾಂಟ್ ಧರಿಸಿದ ವ್ಯಕ್ತಿಯ ಅರ್ಧ ಚಿತ್ರವನ್ನು ಬಳಸಿಕೊಂಡು, ಖಾಕಿ ಪ್ಯಾಂಟ್‌ನಂತೆ ತೋರಿಸಲು ಬಣ್ಣದ ತಂತ್ರ ಬಳಸಿರುವುದು “ಸೃಜನಶೀಲತೆ” ಅಲ್ಲ; ಅದು ಬಾಲಿಶ ಕುಚೋದ್ಯ. ಇಂತಹ ತಂತ್ರಗಳು ಸಾಮಾಜಿಕ ಜಾಲತಾಣದ ಟ್ರೋಲ್ ಪುಟಗಳಿಗೆ ಸರಿ; ಸರ್ಕಾರದ ಅಧಿಕೃತ ಜಾಹೀರಾತಿಗೆ ಅಲ್ಲ.

ಆಡಳಿತ ಪಕ್ಷಕ್ಕೆ ಜನರನ್ನು ತಲುಪಲು ಏನು ಕೊರತೆ ಇದೆ? ಅಭಿವೃದ್ಧಿ ಯೋಜನೆಗಳ ಮೂಲಕ, ಪಾರದರ್ಶಕ ಆಡಳಿತದ ಮೂಲಕ, ಜನಸ್ಪಂದನೆಯ ಮೂಲಕ ವಿಶ್ವಾಸ ಗಳಿಸುವ ಸಾಕಷ್ಟು ಅವಕಾಶಗಳಿವೆ. ಅದನ್ನು ಬಿಟ್ಟು, ಎದುರಾಳಿಯನ್ನು ಹಾಸ್ಯ ಮಾಡುವುದನ್ನೇ ಆಡಳಿತ ಸಾಧನೆಯಂತೆ ತೋರಿಸುವುದು ಆಡಳಿತದ ದೌರ್ಬಲ್ಯವನ್ನೇ ಬಹಿರಂಗಪಡಿಸುತ್ತದೆ.
ಇದಕ್ಕಿಂತಲೂ ಗಂಭೀರವಾದ ಸಂಗತಿ ಏನೆಂದರೆ, ಈ ಜಾಹೀರಾತಿನಿಂದ ಸಾರ್ವಜನಿಕರಿಗೆ ದೊರೆಯುವ ನೈಜ ಲಾಭ ಶೂನ್ಯ. ಆದರೆ ವೆಚ್ಚ ಮಾತ್ರ ಜನರ ಜೇಬಿನಿಂದಲೇ ಹೋಗಿದೆ. ಇದು ತೆರಿಗೆದಾರರ ಮೇಲಿನ ಅನ್ಯಾಯವಲ್ಲವೇ? ಸರ್ಕಾರ ಜನರ ಸೇವೆಗೆ ಇರಬೇಕೆ ಹೊರತು, ಪಕ್ಷದ ರಾಜಕೀಯ ಅಸ್ತ್ರವಾಗಲು ಅಲ್ಲ.
ಸಾರ್ವಜನಿಕರ ಹಣವನ್ನು ತಮ್ಮ ವೈಯಕ್ತಿಕ ಹಾಗೂ ಪಕ್ಷೀಯ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಖಂಡನೀಯವೂ ಹೌದು, ಅಪಾಯಕಾರಿ ಕೂಡ ಹೌದು. ಇಂತಹ ಜಾಹೀರಾತುಗಳನ್ನು ನೀಡುವ ಆಸೆ ಇದ್ದರೆ, ಸರ್ಕಾರದ ಹೆಸರಿನಲ್ಲಿ ಅಲ್ಲ—ತಮ್ಮದೇ ಪಕ್ಷದ ಹಣದಿಂದ ನೀಡಲಿ. ಇಲ್ಲದಿದ್ದರೆ ನಾಳೆ ಪ್ರತಿಯೊಂದು ಇಲಾಖೆ ಜಾಹೀರಾತು ರಾಜಕೀಯ ವ್ಯಂಗ್ಯದ ವೇದಿಕೆಯಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ.
ಜನರ ಹಣಕ್ಕೆ ಗೌರವವಿರಲಿ. ಆಡಳಿತಕ್ಕೆ ಘನತೆಯಿರಲಿ.ಇಲ್ಲದಿದ್ದರೆ, ಇಂತಹ ಜಾಹೀರಾತುಗಳು ಸರ್ಕಾರದ ವಿರುದ್ಧವೇ ತೀರ್ಪಾಗಿ ನಿಲ್ಲುತ್ತವೆ.
— ತ್ಯಾಗರಾಜ ಮಿತ್ಯಾಂತ







