ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ನರೇಗಾ ಬಚಾವೋ ಸಂಗ್ರಾಮ್ ಆಂದೋಲನ : ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕಾಂಗ್ರೆಸ್ ಬೃಹತ್‌ ಪ್ರತಿಭಟನೆ

On: January 31, 2026 1:46 PM
Follow Us:

ಶಿವಮೊಗ್ಗ: ಗ್ರಾಮೀಣ ಬಡಜನರ ಬದುಕಿಗೆ ಆಸರೆಯಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ (ನರೇಗಾ) ಕೇಂದ್ರದ ಬಿಜೆಪಿ ನೇತೃತ್ವದ ಮೋದಿ ಸರ್ಕಾರ ತಿದ್ದುಪಡಿ ತಂದು, ಅದರ ಹೆಸರನ್ನೇ ಬದಲಾಯಿಸುವ ಮೂಲಕ ಯೋಜನೆಯ ಮೂಲ ಆತ್ಮವನ್ನೇ ಹಾಳು ಮಾಡುತ್ತಿರುವುದನ್ನು ಖಂಡಿಸಿ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಉತ್ತರ ಮತ್ತು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ವತಿಯಿಂದ “ನರೇಗಾ ಬಚಾವೋ ಸಂಗ್ರಾಮ್ ಆಂದೋಲನ” ಹೆಸರಿನಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಭಾರೀ ಪ್ರತಿಭಟನೆ ನಡೆಸಲಾಯಿತು.

ವಿಬಿ ಗ್ರಾಮ್ ಜಿ ಯೋಜನೆಯಿಂದ ಗ್ರಾಮ ಪಂಚಾಯಿತಿಗಳ ಸ್ವಾಯತ್ತತೆಗೆ ಧಕ್ಕೆ ಉಂಟಾಗಿದ್ದು, ಗ್ರಾಮೀಣ ಬಡಜನರ ಉದ್ಯೋಗ ಹಕ್ಕು ಸಂಪೂರ್ಣವಾಗಿ ಅಪಾಯದಲ್ಲಿದೆ. ಆದ್ದರಿಂದ ಈ ಯೋಜನೆಯನ್ನು ತಕ್ಷಣವೇ ರದ್ದುಪಡಿಸಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಅದರ ಮೂಲ ಸ್ವರೂಪದಲ್ಲೇ ಪುನಃ ಜಾರಿಗೊಳಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಒತ್ತಾಯಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್. ಪ್ರಸನ್ನಕುಮಾರ್ ರವರು ತಿಳಿಸಿದರು.

ಮತ್ತೊಂದೆಡೆ ವೇತನ ದರವನ್ನು ಕೇಂದ್ರ ಸರ್ಕಾರವೇ ನಿಗದಿಪಡಿಸಿ, ಕನಿಷ್ಠ ವೇತನ ಹಾಗೂ ಬೆಲೆ ಏರಿಕೆಗೆ ಅನುಗುಣವಾಗಿ ಪರಿಷ್ಕರಣೆ ಮಾಡುವ ಅವಕಾಶವನ್ನು ಕಿತ್ತುಕೊಳ್ಳಲಾಗಿದೆ. ನೂತನ ಮಂಡಳಿ ಹಾಗೂ ಸ್ಟೀರಿಂಗ್ ಸಮಿತಿಗಳಲ್ಲಿ ಮಹಿಳೆಯರು, ಪರಿಶಿಷ್ಟ ಜಾತಿ–ವರ್ಗ, ಒಬಿಸಿ ಹಾಗೂ ಅಲ್ಪಸಂಖ್ಯಾತರಿಗೆ ನೀಡಲಾಗುತ್ತಿದ್ದ ಕಡ್ಡಾಯ ಪ್ರಾತಿನಿಧ್ಯವನ್ನು ರದ್ದುಗೊಳಿಸಲಾಗಿದೆ. ಯೋಜನೆಯ ಜಾರಿಯಲ್ಲಿ ಅಧಿಕಾರವಿಲ್ಲದಿದ್ದರೂ, ಕೇಂದ್ರ ಸರ್ಕಾರ ನಿಗದಿಪಡಿಸಿದ ಅನುದಾನದಲ್ಲಿ ಶೇ.40 ಹಣವನ್ನು ರಾಜ್ಯ ಸರ್ಕಾರವೇ ಭರಿಸಬೇಕಾದ ಅನ್ಯಾಯಕರ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಗ್ರಾಮೀಣ ಬಡವರ ಬದುಕಿಗೆ ಭದ್ರತೆ ನೀಡಿದ ನರೇಗಾ ಕಾಯ್ದೆ

2005ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಅಂದಿನ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ಹಾಗೂ ಯುಪಿಎ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಅವರ ದೂರದೃಷ್ಟಿಯ ಫಲವಾಗಿ ಜಾರಿಗೆ ಬಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ, ಗ್ರಾಮೀಣ ಭಾರತದ ಬಡ ಕುಟುಂಬಗಳಿಗೆ ಜೀವನೋಪಾಯ ಭದ್ರತೆ ನೀಡಿದ ಐತಿಹಾಸಿಕ ಕಾನೂನಾಗಿದೆ. ಗ್ರಾಮೀಣ ಪ್ರದೇಶದ ಕೌಶಲ್ಯರಹಿತ ವಯಸ್ಕರಿಗೆ ವರ್ಷಕ್ಕೆ ಕನಿಷ್ಠ 100 ದಿನಗಳ ಉದ್ಯೋಗವನ್ನು ಹಕ್ಕಿನ ರೂಪದಲ್ಲಿ ಒದಗಿಸುವ ಮೂಲಕ ಈ ಯೋಜನೆ ಬಡವರ ಬದುಕಿಗೆ ಭದ್ರತಾ ಕವಚವಾಗಿ ಪರಿಣಮಿಸಿತು.

ಕೇಂದ್ರ ಸರ್ಕಾರ ಶೇ.90 ಹಾಗೂ ರಾಜ್ಯ ಸರ್ಕಾರ ಶೇ.10 ಅನುದಾನದೊಂದಿಗೆ ಈ ಯೋಜನೆಯನ್ನು ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಜಾರಿಗೊಳಿಸಲಾಗಿದ್ದು, ಕರ್ನಾಟಕದಲ್ಲಿ ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ವ್ಯಾಪಕವಾಗಿ ಅನುಷ್ಠಾನಗೊಂಡಿತ್ತು. ಸಸಿ ನೆಡುವುದು, ರಸ್ತೆ ಬದಿಯ ನೆಡುತೋಪುಗಳ ನಿರ್ಮಾಣ, ಬ್ಲಾಕ್ ಪ್ಲಾಂಟೇಷನ್, ಮಣ್ಣು ಮತ್ತು ನೀರಿನ ಸಂರಕ್ಷಣಾ ಕಾಮಗಾರಿಗಳು, ಕೃಷಿ ಹೊಂಡಗಳ ನಿರ್ಮಾಣ ಸೇರಿದಂತೆ ಅನೇಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಈ ಯೋಜನೆಯಡಿ ಕೈಗೊಳ್ಳಲಾಗಿದ್ದು, ಗ್ರಾಮೀಣ ಆರ್ಥಿಕತೆಗೆ ಮಹತ್ವದ ಚೈತನ್ಯ ನೀಡಿತ್ತು.

ಇದಲ್ಲದೆ ಉದ್ಯೋಗಕ್ಕೆ ಪೂರ್ವನಿರ್ಧಾರಿತ 60 ದಿನಗಳ ಮಿತಿ ವಿಧಿಸುವ ಮೂಲಕ ಕಾರ್ಮಿಕರ ಕೆಲಸದ ಬೇಡಿಕೆ ಸಲ್ಲಿಸುವ ಹಕ್ಕಿಗೆ ಕತ್ತರಿ ಹಾಕಲಾಗಿದೆ. ಗುತ್ತಿಗೆದಾರರಿಗೆ ಪರೋಕ್ಷವಾಗಿ ಪ್ರವೇಶ ಕಲ್ಪಿಸುವ ವ್ಯವಸ್ಥೆ ಸೃಷ್ಟಿಯಾಗಿದ್ದು, ಜಟಿಲ ತಾಂತ್ರಿಕ ನಿಯಮಗಳ ಮೂಲಕ ಕಾರ್ಮಿಕರನ್ನು ಕೆಲಸದಿಂದ ವಂಚಿಸುವ ಯತ್ನ ನಡೆಯುತ್ತಿದೆ. ಪಂಚಾಯಿತಿಗಳಿಗೆ ‘ನಿಯಮಾತ್ಮಕ ಹಂಚಿಕೆ’ಯನ್ವಯ ಅನುದಾನ ನೀಡಲಾಗುತ್ತಿದ್ದು, ಹೆಚ್ಚುವರಿ ಕೆಲಸ ಅಥವಾ ಬೇಡಿಕೆ ಬಂದರೆ ಕೇಂದ್ರ ಸರ್ಕಾರ ಹಣ ನೀಡುವುದಿಲ್ಲ. ಇದರಿಂದ ಜನರ ಕೆಲಸದ ಅಗತ್ಯತೆಗೆ ಯಾವುದೇ ಮೌಲ್ಯ ಉಳಿದಿಲ್ಲ.

“ವಿಬಿ ಗ್ರಾಮ್ ಜಿ” ಮೂಲಕ ಉದ್ಯೋಗ ಹಕ್ಕಿಗೆ ಕತ್ತರಿ

ಇಂತಹ ಜನಪರ ಯೋಜನೆಯನ್ನು ಬಿಜೆಪಿ ಸರ್ಕಾರ “ವಿಬಿ ಗ್ರಾಮ್ ಜಿ” ಎಂದು ಮರುನಾಮಕರಣ ಮಾಡಿ, ಮಹಾತ್ಮ ಗಾಂಧಿ ಅವರ ಹೆಸರನ್ನೇ ಕೈಬಿಟ್ಟು, ನರೇಗಾ ಕಾಯ್ದೆಯ ಮೂಲ ಸ್ವರೂಪವನ್ನೇ ಬದಲಾಯಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.

ಈ ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್. ಪ್ರಸನ್ನಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಹೆಚ್.ಎಂ.ಚಂದ್ರಶೇಖರಪ್ಪ, ಎನ್. ರಮೇಶ್, ಹೆಚ್.ಸಿ.ಯೋಗೀಶ್, ಕಲಗೋಡು ರತ್ನಾಕರ್, ನಯಾಜ್ ಪಾಷಾ, ಶಿವಕುಮಾರ್, ಚೇತನ್ ಗೌಡ, ದೇವಿಕುಮಾರ್, ಶರತ್ ಮರಿಯಪ್ಪ, ಶಿವಮೊಗ್ಗ ನಗರ ಕಾರ್ಮಿಕ ಘಟಕದ ಅಧ್ಯಕ್ಷ ರಮೇಶ್ ಎಸ್.ಎನ್., ಉತ್ತರ ಮತ್ತು ದಕ್ಷಿಣ ಬ್ಲಾಕ್ ಕಾಂಗ್ರೆಸ್, ಮುಂಚೂಣಿ ಘಟಕಗಳ ಅಧ್ಯಕ್ಷರು, ವಾರ್ಡ್ ಹಾಗೂ ಬೂತ್ ಅಧ್ಯಕ್ಷರುಗಳು ಮತ್ತು ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

K.M.Sathish Gowda

Join WhatsApp

Join Now

Facebook

Join Now

Leave a Comment