ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಜಾತಿಗಣತಿ ವರದಿ ಬಳಿಕ ಕುರುಬ ಸಮುದಾಯ ಎಸ್‌ಟಿ ಸೇರ್ಪಡೆ ಜಾರಿ: ಸಿಎಂ ಸಿದ್ದರಾಮಯ್ಯ

On: February 2, 2026 9:35 PM
Follow Us:

ರಾಯಚೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರಿಸುವ ಕುರಿತಂತೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರ ಈಗಾಗಲೇ ತನ್ನ ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಜಾತಿಗಣತಿ ವರದಿ ಇನ್ನೊಂದು ತಿಂಗಳೊಳಗೆ ಸಲ್ಲಿಕೆಯಾಗಲಿದೆ. ವರದಿ ಬಂದ ನಂತರ ಸೂಕ್ತ ಚರ್ಚೆ ನಡೆಸಿ ಅದನ್ನು ಅಂಗೀಕರಿಸಿ ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.

ದೇವದುರ್ಗ ತಾಲೂಕಿನ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ, ತಿಂಥಣಿ ಬ್ರಿಡ್ಜ್ ವತಿಯಿಂದ ಆಯೋಜಿಸಲಾಗಿದ್ದ ಪರಮಪೂಜ್ಯ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಯವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕನಕಗುರುಪೀಠ ಜಾತ್ಯಾತೀತ ಪೀಠವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು. ಪೂಜ್ಯ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಯವರು ತಮ್ಮ ಜೀವನದುದ್ದಕ್ಕೂ ಶಿಕ್ಷಣ, ಆಧ್ಯಾತ್ಮ ಮತ್ತು ಜಾತ್ಯಾತೀತ ಮನೋಭಾವಕ್ಕೆ ಹೆಚ್ಚಿನ ಒತ್ತು ನೀಡುತ್ತಾ ಸಮಾಜವನ್ನು ಬೆಳಗಿಸಿದ್ದಾರೆ ಎಂದು ಸ್ಮರಿಸಿದರು.

ಕುರುಬ ಸಮುದಾಯಕ್ಕೆ ಮೊದಲ ಬಾರಿಗೆ ಕಾಗಿನೆಲೆ ಗುರುಪೀಠವನ್ನು 1992ರಲ್ಲಿ ಸ್ಥಾಪಿಸಲಾಗಿದ್ದು, ಶ್ರೀ ತಾರಕಾನಂದ ಸ್ವಾಮೀಜಿಯವರು ಅದರ ಮೊದಲ ಪೀಠಾಧಿಪತಿಗಳಾಗಿದ್ದರು. ನಂತರ ಕಲ್ಯಾಣ ಕರ್ನಾಟಕ, ಬೆಂಗಳೂರು, ಮೈಸೂರು ಹಾಗೂ ಮುಂಬಯಿ-ಕರ್ನಾಟಕ ವಿಭಾಗಗಳನ್ನು ಸ್ಥಾಪಿಸಿ ಪ್ರತಿಯೊಂದು ವಿಭಾಗಕ್ಕೂ ಪ್ರತ್ಯೇಕ ಗುರುಗಳನ್ನು ನೇಮಿಸಲಾಗಿತ್ತು. ಈ ವಿಭಾಗದ ಗುರುಗಳಾಗಿ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಯವರು ಸೇವೆ ಸಲ್ಲಿಸಿ, ಗುರುಪೀಠದ ಆಶಯಗಳನ್ನು ಜನಸಾಮಾನ್ಯರ ಜೀವನದಲ್ಲಿ ಅಳವಡಿಸಲು ಶ್ರಮಿಸಿದರು ಎಂದು ಸಿಎಂ ಹೇಳಿದರು.

ಕಾಗಿನೆಲೆ ಗುರುಪೀಠದ ಸ್ಥಾಪನೆಯ ಮೂಲ ಉದ್ದೇಶವೇ ಸಮಸಮಾಜ ನಿರ್ಮಾಣವಾಗಿದ್ದು, ಜಾತಿ-ಧರ್ಮಗಳ ಭೇದವಿಲ್ಲದೆ ಎಲ್ಲರಿಗೂ ಸಮಾನತೆ ಮತ್ತು ಗೌರವ ದೊರಕಬೇಕು ಎಂಬ ಆಶಯವನ್ನು ಶ್ರೀಗಳು ಸದಾ ಪ್ರತಿಪಾದಿಸುತ್ತಿದ್ದರು. ಅವರ ಆತ್ಮಕ್ಕೆ ಶಾಂತಿ ಕೋರಿ, ಅವರ ಕುಟುಂಬ ವರ್ಗ ಹಾಗೂ ಇಡೀ ಸಮಾಜಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಮುಖ್ಯಮಂತ್ರಿ ಪ್ರಾರ್ಥಿಸಿದರು.

ಕನಕದಾಸರು ಹೇಳಿದಂತೆ ‘ಕುಲಕುಲವೆಂದು ಹೊಡೆದಾಡದಿರಿ’ ಎಂಬ ಸಂದೇಶವು ಇಂದಿಗೂ ಪ್ರಸ್ತುತವಾಗಿದೆ. ಬುದ್ಧ, ಬಸವಣ್ಣ ಸೇರಿದಂತೆ ಅನೇಕ ಶರಣರು ಜಾತಿವ್ಯವಸ್ಥೆಯನ್ನು ತೀವ್ರವಾಗಿ ವಿರೋಧಿಸುತ್ತಾ ಸಮಾನತೆಯ ಸಮಾಜಕ್ಕಾಗಿ ಹೋರಾಡಿದ್ದಾರೆ. ನಮ್ಮ ಸಮಾಜ ವಿವಿಧ ಜಾತಿ, ಧರ್ಮ, ವರ್ಗ ಮತ್ತು ಭಾಷೆಗಳಿಂದ ಕೂಡಿದ್ದು, ಮನುಜರೆಲ್ಲರೂ ಒಂದೇ ಕುಟುಂಬ ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಸಾಮಾಜಿಕ ಚಿಂತಕ ರಾಮಮನೋಹರ ಲೋಹಿಯಾ ಅವರ ಮಾತುಗಳನ್ನು ಉಲ್ಲೇಖಿಸಿದ ಅವರು, ಮುಂದುವರಿದ ಜಾತಿಯವರೇ ಕೆಲವೊಮ್ಮೆ ಸಮಾಜವನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಾರೆ ಎಂದಿದ್ದರು ಎಂದು ನೆನಪಿಸಿದರು. ಎಲ್ಲರಿಗೂ ಸಮಾನ ಅವಕಾಶ ದೊರೆಯುವ ಸಮಸಮಾಜವನ್ನು ನಿರ್ಮಿಸುವುದು ಇಂದಿನ ಅಗತ್ಯವಾಗಿದೆ ಎಂದರು.

ಕೆಲವರು ಶಿಕ್ಷಣ ಪಡೆದರೂ ಗುಲಾಮಗಿರಿಯ ಮನಸ್ಥಿತಿಯಿಂದ ಹೊರಬರಲಾಗುತ್ತಿಲ್ಲ. ಸ್ವಾಭಿಮಾನದಿಂದ ಬದುಕುವುದು ಮುಖ್ಯ. ವೈಚಾರಿಕ ಹಾಗೂ ವೈಜ್ಞಾನಿಕ ಶಿಕ್ಷಣ ಪಡೆದ ಯುವಪೀಳಿಗೆ ಸ್ವಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಸ್ವಾತಂತ್ರ್ಯ ಬಂದ ಸಮಯದಲ್ಲಿ ಕೇವಲ ಶೇ.15ರಷ್ಟಿದ್ದ ಶಿಕ್ಷಣ ಪ್ರಮಾಣ ಇಂದು ಶೇ.76ಕ್ಕೆ ಏರಿಕೆಯಾದರೂ ಜಾತಿವ್ಯವಸ್ಥೆ ಸಂಪೂರ್ಣವಾಗಿ ನಾಶವಾಗಿಲ್ಲ ಎಂಬುದು ವಿಷಾದಕರ ಸಂಗತಿ ಎಂದು ಅವರು ಹೇಳಿದರು.

ಜಡತ್ವದಿಂದ ಕೂಡಿದ ಸಮಾಜಕ್ಕೆ ಚೈತನ್ಯ ತರಲು ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ಅವಶ್ಯಕವಾಗಿದೆ. ಸಮಾಜದಲ್ಲಿರುವ ಮೌಢ್ಯಗಳನ್ನು ಅಳಿಸಿ ಪ್ರಗತಿಪಥದತ್ತ ಕೊಂಡೊಯ್ಯುವ ಕಾರ್ಯದಲ್ಲಿ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಯವರು ನಿರಂತರವಾಗಿ ತೊಡಗಿಸಿಕೊಂಡಿದ್ದರು ಎಂದು ಮುಖ್ಯಮಂತ್ರಿ ಪ್ರಶಂಸಿಸಿದರು.

ಜನರ ಆಶೀರ್ವಾದದಿಂದ ಎಂಟು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದು, ಎರಡನೇ ಬಾರಿ ಮುಖ್ಯಮಂತ್ರಿಯಾಗಿರುವೆನು. ನಾಡಿನ ಜನರ ಪ್ರೀತಿ ಮತ್ತು ವಿಶ್ವಾಸದಿಂದಲೇ ನಾನು ರಾಜಕೀಯ ಜೀವನದಲ್ಲಿ ಮುಂದುವರಿಯುತ್ತಿದ್ದೇನೆ. ಧ್ವನಿಯಿಲ್ಲದವರ ಪರವಾಗಿ ಹೋರಾಡುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಸಿಎಂ ಹೇಳಿದರು.

ಇಡೀ ರಾಜ್ಯಕ್ಕೆ ಕನಕಗುರುಪೀಠ ಜಾತ್ಯಾತೀತ ಪೀಠವಾಗಿ ಸೇವೆ ಸಲ್ಲಿಸುತ್ತಿದ್ದು, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯ, ಯಾತ್ರಿನಿವಾಸ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಸರ್ಕಾರದಿಂದ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ದಲಿತ ಮತ್ತು ಹಿಂದುಳಿದ ವರ್ಗಗಳ ಎಲ್ಲಾ ಮಠಗಳಿಗೆ ಬೆಂಗಳೂರಿನಲ್ಲಿ ಸುಮಾರು 50 ಎಕರೆ ಭೂಮಿಯನ್ನು ನೀಡಲು ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.

K.M.Sathish Gowda

Join WhatsApp

Join Now

Facebook

Join Now

Leave a Comment