ಬೆಂಗಳೂರು: ರಾಜಕೀಯ ಎಂಬುದು ಸಾಧ್ಯತೆಗಳ ಕಲೆ. ಇಲ್ಲಿ ಅಸಾಧ್ಯವೆಂಬುದೇ ಇಲ್ಲ. ಧೈರ್ಯ, ದೃಢ ನಿಲುವು ಮತ್ತು ಸಂಕಲ್ಪ ಬಲ ಇದ್ದರೆ ಒಬ್ಬ ವ್ಯಕ್ತಿಯೇ ಬಹುಮತವನ್ನು ನಿರ್ಮಿಸಬಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಸ್ಪಷ್ಟವಾಗಿ ಹೇಳಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಅಧಿಕಾರ ಹಂಚಿಕೆ ಮತ್ತು ಡಿ.ಕೆ.ಶಿವಕುಮಾರ್ ಅವರ ಇತ್ತೀಚಿನ ಹೇಳಿಕೆ–ಟ್ವೀಟ್‌ಗಳ ಕುರಿತು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ರಾಜಕೀಯದ ನೈಜತೆ ಮತ್ತು ತಮ್ಮ ನಿಲುವಿನ ಬಗ್ಗೆ ವಿವರವಾಗಿ ಉತ್ತರ ನೀಡಿದರು.
“ರಾಜಕೀಯದಲ್ಲಿ ಎಲ್ಲವೂ ಸಾಧ್ಯ. ಇದು ಸಾಧ್ಯತೆಗಳ ಕಲೆ. One man with courage makes a majority ಎಂಬ ಮಾತನ್ನು ನಾನು ನಂಬುತ್ತೇನೆ. ದೃಢವಾದ ನಿಲುವು ಮತ್ತು ಸಂಕಲ್ಪ ಇದ್ದರೆ ಒಬ್ಬನೇ ಸಾಕು. ಅವನ ಜೊತೆ 140 ಜನ ಶಾಸಕರೂ ನಿಲ್ಲುತ್ತಾರೆ, ಅಗತ್ಯವಿದ್ದರೆ ಅದಕ್ಕಿಂತ ಹೆಚ್ಚಿನ ಸಂಖ್ಯೆಯೂ ಬರುತ್ತದೆ. 2028ರಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡೋಣ” ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಇದಕ್ಕೆ ಪ್ರತಿಯಾಗಿ ಮಾತನಾಡಿದ ಆರ್.ಅಶೋಕ್ ಅವರು, “ಕಳೆದ ಒಂದು ತಿಂಗಳಿಂದ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗಳು ಹಾಗೂ ಟ್ವೀಟ್‌ಗಳು ನೂರು ಅರ್ಥ ಬರುವಂತಿವೆ. ಇದರಿಂದ ಗೊಂದಲ ಸೃಷ್ಟಿಯಾಗಿದೆ” ಎಂದು ಆರೋಪಿಸಿದರು.
ಅಶೋಕ್ ಅವರ ಮಾತಿಗೆ ಸ್ಪಷ್ಟನೆ ನೀಡಿದ ಡಿಸಿಎಂ, “ಅಶೋಕ್ ಅವರೇ, ನೀವು ಹಿರಿಯ ರಾಜಕಾರಣಿ. ಯಾರು ಏನು ಮಾತನಾಡಿದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ವಿದ್ಯಾರ್ಥಿ ನಾಯಕನಾಗಿ ರಾಜಕೀಯ ಜೀವನ ಆರಂಭಿಸಿದ್ದವನು. ನನ್ನದೇ ಆದ ಮೌಲ್ಯಗಳನ್ನು ಕಟ್ಟಿಕೊಂಡು ಇಲ್ಲಿವರೆಗೂ ಬಂದಿದ್ದೇನೆ. ಪಕ್ಷವು ನನಗೆ ಚಿಕ್ಕ ವಯಸ್ಸಿನಲ್ಲೇ ಅವಕಾಶ ನೀಡಿತು. ಅಂದಿನಿಂದಲೂ ಪಕ್ಷದ ಜೊತೆ ಬೆಳೆದು ಬಂದಿದ್ದೇನೆ” ಎಂದು ಹೇಳಿದರು.
“ರಾಜಕೀಯದಲ್ಲಿ ಏಳು–ಬೀಳು ಸಹಜ. ನಾನು ಅನೇಕ ಏಳು–ಬೀಳುಗಳನ್ನು ಕಂಡಿದ್ದೇನೆ. ನಾನು ಬಿದ್ದಿದ್ದೇನೆ, ಮತ್ತೆ ಎದ್ದಿದ್ದೇನೆ. ಜೈಲುವಾಸವನ್ನೂ ಅನುಭವಿಸಿದ್ದೇನೆ. ಇನ್ನು ಒಂದು ತಿಂಗಳ ನಂತರ ನಾನು ಪಕ್ಷದ ಅಧ್ಯಕ್ಷನಾಗಿ ಆರು ವರ್ಷ ಪೂರೈಸುತ್ತೇನೆ” ಎಂದು ತಮ್ಮ ರಾಜಕೀಯ ಪಯಣವನ್ನು ನೆನಪಿಸಿಕೊಂಡರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ತಮ್ಮ ಸಂಬಂಧದ ಕುರಿತು ಯಾವುದೇ ಅನುಮಾನ ಬೇಡವೆಂದು ಡಿ.ಕೆ.ಶಿವಕುಮಾರ್ ಅವರು ಸ್ಪಷ್ಟಪಡಿಸಿದರು. “ಸಿಎಂ ಸಿದ್ದರಾಮಯ್ಯ ಸೇರಿದಂತೆ 139 ಶಾಸಕರೂ ನನ್ನ ಬಲ. ಸಿದ್ದರಾಮಯ್ಯ ಅವರು ಶೇ.100 ರಷ್ಟು ನನ್ನ ಜೊತೆಗಿದ್ದಾರೆ. ಇದರಲ್ಲಿ ಯಾವುದೇ ಪ್ರಶ್ನೆಯೇ ಇಲ್ಲ. ನಾವಿಬ್ಬರೂ ಪರಸ್ಪರ ಕೈಜೋಡಿಸಿಕೊಂಡು ಜನಪರವಾಗಿ ಕೆಲಸ ಮಾಡುತ್ತಿದ್ದೇವೆ, ಮುಂದೆಯೂ ಮಾಡುತ್ತೇವೆ” ಎಂದು ಹೇಳಿದರು.
“ನಾವು ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕೆಲಸ ಮಾಡುತ್ತಿದ್ದೇವೆ. ನುಡಿದಂತೆ ನಡೆಯುತ್ತಿದ್ದೇವೆ. ಅವರ ಕಷ್ಟಕಾಲದಲ್ಲಿ ನಾನು ಅವರ ಜೊತೆ ನಿಂತಿದ್ದೇನೆ, ಮುಂದೆಯೂ ನಿಲ್ಲುತ್ತೇನೆ. ಅದೇ ರೀತಿ ಅವರು ಕೂಡ ನನ್ನ ಕಷ್ಟಕಾಲದಲ್ಲಿ ನನ್ನ ಜೊತೆ ನಿಲ್ಲುತ್ತಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಮ್ಮ ಟ್ವೀಟ್‌ಗಳ ಅರ್ಥವೇನು ಎಂದು ಅಶೋಕ್ ಅವರು ಮತ್ತೆ ಪ್ರಶ್ನಿಸಿದಾಗ, “ನೀವು ಟ್ವೀಟ್ ಅನ್ನು ಯಾವ ರೀತಿಯಲ್ಲಿ ಅರ್ಥಮಾಡಿಕೊಳ್ಳುತ್ತೀರೋ ಅದು ನಿಮ್ಮ ವಿಚಾರ” ಎಂದು ಡಿ.ಕೆ.ಶಿವಕುಮಾರ್ ಅವರು ವ್ಯಂಗ್ಯವಾಗಿ ಉತ್ತರಿಸಿದರು.
ತಾಳ್ಮೆ ಕುರಿತು ಮಾತನಾಡಿದ್ದೇಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಯಾರ್ಯಾರೋ ಮಾತನಾಡುವುದಕ್ಕೆಲ್ಲಾ ನಾನು ಉತ್ತರ ಕೊಡಲು ಸಾಧ್ಯವಿಲ್ಲ. ನಮ್ಮ ಪಕ್ಷದಲ್ಲೂ, ನಿಮ್ಮ ಬಿಜೆಪಿ ಪಕ್ಷದಲ್ಲೂ ಸಂಖ್ಯಾಬಲಕ್ಕಿಂತ ಪಕ್ಷದ ತೀರ್ಮಾನವೇ ಮುಖ್ಯ. ನಿಮ್ಮ ಸರ್ಕಾರದ ಅವಧಿಯಲ್ಲಿ ಎಷ್ಟೋ ಬಾರಿ ಮುಖ್ಯಮಂತ್ರಿಗಳು ಬದಲಾಗಿದ್ದಾರೆ, ಸಚಿವ ಸಂಪುಟಗಳೇ ಬದಲಾದವು. ಹೀಗಾಗಿ ನಿಮ್ಮ ಮಾತಿಗೆ ನಾನು ಜಗ್ಗುವುದಿಲ್ಲ. ನೀವು ಸುಮ್ಮನೇ ತಲೆಕೆಡಿಸಿಕೊಳ್ಳಬೇಡಿ” ಎಂದು ಹೇಳಿದರು.
ಡಿಸಿಎಂ ಅವರ ಈ ಸ್ಪಷ್ಟ ಹಾಗೂ ಧೈರ್ಯದ ಹೇಳಿಕೆಗಳು ವಿಧಾನಸಭೆಯಲ್ಲಿ ರಾಜಕೀಯ ವಲಯದ ಗಮನ ಸೆಳೆದವು.







