ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಮಂಗಳವಾರ ವಿಧಾನಸಭೆಯಲ್ಲಿ ಮತ್ತೊಮ್ಮೆ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾದವು. ಅಬಕಾರಿ ಖಾತೆ ಸಚಿವ ಆರ್.ಬಿ. ತಿಮ್ಮಾಪುರ ಅವರ ವಿರುದ್ಧ ಕೇಳಿಬಂದ ಅಕ್ರಮ ಆರೋಪಗಳ ಹಿನ್ನೆಲೆಯಲ್ಲಿ, ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಬಿಗಿಪಟ್ಟು ಹಿಡಿದಿವೆ. ಆದರೆ, ಯಾವುದೇ ಸಮರ್ಪಕ ದಾಖಲೆಗಳಿಲ್ಲದೆ ಕಟ್ಟುಕಥೆ ಆರೋಪ ಮಾಡಲಾಗುತ್ತಿದೆ ಎಂದು ತಿಮ್ಮಾಪುರ ರಾಜೀನಾಮೆಗೆ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಸಚಿವರ ಈ ನಿಲುವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ಶಾಸಕರು, ಸದನದ ಮುಂದೆ ಇಡಲಾಗಿರುವ ದಾಖಲೆಗಳ ಆಧಾರದಲ್ಲಿ ರಾಜೀನಾಮೆ ನೀಡಲೇಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಬೆನ್ನತ್ತಿ, ಮಂಗಳವಾರವೇ ಬಿಜೆಪಿ–ಜೆಡಿಎಸ್ ಶಾಸಕರು ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ಆರಂಭಿಸುವುದಾಗಿ ಘೋಷಿಸಿದರು.

ಕಲಾಪದ ಬಹುಭಾಗ ಅಬಕಾರಿ ಅಕ್ರಮ ಚರ್ಚೆಗೆ ಮೀಸಲು
ಮಂಗಳವಾರದ ಕಲಾಪ ಆರಂಭದಲ್ಲೇ ವಿರೋಧ ಪಕ್ಷದ ಸದಸ್ಯರು ಅಬಕಾರಿ ಇಲಾಖೆಯಲ್ಲಿನ ಅಕ್ರಮಗಳ ಕುರಿತು ತುರ್ತು ಚರ್ಚೆಗೆ ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಸ್ಪೀಕರ್ ಯು.ಟಿ. ಖಾದರ್ ಅವರು, ನಿಯಮ 69ರ ಅಡಿಯಲ್ಲಿ ಅರ್ಧ ಗಂಟೆಯ ಚರ್ಚೆಗೆ ಅವಕಾಶ ನೀಡುವಂತೆ ರೂಲಿಂಗ್ ನೀಡಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು, ಮದ್ಯದಂಗಡಿಗಳಿಗೆ ಪರವಾನಗಿ ನೀಡುವ ಪ್ರಕ್ರಿಯೆ, ಅಧಿಕಾರಿಗಳ ವರ್ಗಾವಣೆ, ಮದ್ಯ ಮಾರಾಟದ ಅನುಮತಿಗಳಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆದಿದೆ ಎಂದು ಆರೋಪಿಸಿದರು. ಅಧಿಕಾರಿಗಳ ಮೂಲಕ ಸಚಿವ ತಿಮ್ಮಾಪುರ ಮತ್ತು ಅವರ ಪುತ್ರರು ಅಕ್ರಮ ಹಣ ಸಂಗ್ರಹಿಸಿದ್ದಾರೆ ಎಂಬ ಗಂಭೀರ ಆರೋಪಗಳನ್ನೂ ಮಾಡಿದರು. ಪ್ರತಿ ಹುದ್ದೆಯ ವರ್ಗಾವಣೆಗೆ ನಿಗದಿತ ದರ ಇಟ್ಟು ಲಂಚ ಪಡೆಯಲಾಗಿದೆ. ಬೇಕಾಬಿಟ್ಟಿಯಾಗಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಈ ಎಲ್ಲಾ ಅಕ್ರಮಗಳ ಹಿಂದೆ ಸಚಿವರ ನೇರ ಪಾತ್ರವಿದ್ದು, ಅವರನ್ನು ತಕ್ಷಣ ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಆಡಳಿತ–ವಿಪಕ್ಷ ವಾಗ್ವಾದ
ವಿರೋಧ ಪಕ್ಷದ ಆರೋಪಗಳಿಗೆ ಕಾಂಗ್ರೆಸ್ ಶಾಸಕರು ತಿರುಗೇಟು ನೀಡಿದರು. ಬಿಜೆಪಿ ಶಾಸಕರ ಕ್ಷೇತ್ರ ಕಾರ್ಕಳದಲ್ಲಿ ನಡೆದ ಪರಶುರಾಮ ಪ್ರತಿಮೆ ಸ್ಥಾಪನೆ ಅಕ್ರಮ, ಪಿಎಸ್‌ಐ ನೇಮಕಾತಿ ಹಗರಣ ಸೇರಿದಂತೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಳಿಬಂದ ಹಲವು ಅಕ್ರಮಗಳನ್ನು ಪ್ರಸ್ತಾಪಿಸಿ, ವಿಪಕ್ಷ ಶಾಸಕರನ್ನು ಕಟ್ಟಿಹಾಕುವ ಪ್ರಯತ್ನ ನಡೆಸಿದರು. ಇದಕ್ಕೆ ಪ್ರತಿಯಾಗಿ ವಿರೋಧ ಪಕ್ಷದ ಶಾಸಕರು, ಹಾಲಿ ಕಾಂಗ್ರೆಸ್ ಸರ್ಕಾರದ ಲೋಪಗಳನ್ನು ಸದನದ ಮುಂದೆ ಇಡುತ್ತೇವೆ ಎಂದು ಪಟ್ಟು ಹಿಡಿದರು. ಇದರಿಂದ ಆಡಳಿತ ಹಾಗೂ ವಿಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆಯಿತು.

ಸಿಎಂ ಆಕ್ಷೇಪ, ಸದನದ ಅಸ್ತವ್ಯಸ್ತತೆ
ಚರ್ಚೆ ನಿರೀಕ್ಷೆಗಿಂತ ಹೆಚ್ಚು ಕಾಲ ಸಾಗುತ್ತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. ನಿಯಮ 69ರ ಅಡಿಯಲ್ಲಿ ಸುಧೀರ್ಘ ಚರ್ಚೆಗೆ ಅವಕಾಶವಿಲ್ಲ. ಸದನದ ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ. ಕಲಾಪ ಆರಂಭಕ್ಕೂ ಮುನ್ನ ಸ್ಪೀಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೇ ವಿರೋಧ ಪಕ್ಷಗಳು ಅರ್ಧ ಗಂಟೆಯಲ್ಲೇ ವಿಷಯ ಮಂಡಿಸುತ್ತೇವೆ ಎಂದು ಒಪ್ಪಿಕೊಂಡಿದ್ದವು. ಆದರೆ ಈಗ ಉದ್ದನೆಯ ಚರ್ಚೆ ನಡೆಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದರ ನಡುವೆಯೇ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಕುರಿತು ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರದ ನಿರ್ಣಯ ಮಂಡಿಸಲು ಮುಂದಾದರು.
‘ಮೊದಲು ಅಬಕಾರಿ ಸಚಿವ ಉತ್ತರ ಕೊಡಲಿ’ – ವಿಪಕ್ಷ ಪಟ್ಟು
ಮುಖ್ಯಮಂತ್ರಿಗಳ ಕ್ರಮಕ್ಕೆ ಅಡ್ಡಿಪಡಿಸಿದ ವಿರೋಧ ಪಕ್ಷದ ಶಾಸಕರು, ಅಬಕಾರಿ ಅಕ್ರಮದ ಕುರಿತು ಮುಖ್ಯಮಂತ್ರಿ ಅಥವಾ ಸಂಬಂಧಿತ ಸಚಿವರು ಮೊದಲು ಉತ್ತರ ನೀಡಬೇಕು. ಅದುವರೆಗೆ ಬೇರೆ ಯಾವುದೇ ಕಾರ್ಯಕಲಾಪ ನಡೆಸಲು ಬಿಡುವುದಿಲ್ಲ ಎಂದು ಘೋಷಿಸಿದರು. ಪರಿಸ್ಥಿತಿ ತೀವ್ರವಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ಸ್ಪೀಕರ್ ಯು.ಟಿ. ಖಾದರ್, ಸಂಜೆ ವೇಳೆಗೆ ಅಬಕಾರಿ ಸಚಿವರಿಂದ ಸ್ಪಷ್ಟ ಉತ್ತರ ಕೊಡಿಸಲಾಗುವುದು ಎಂದು ಹೇಳಿ ಕಲಾಪವನ್ನು ಮುಂದುವರಿಸಿದರು.

‘ಕಟ್ಟುಕಥೆಗೆ ರಾಜೀನಾಮೆ ಇಲ್ಲ’ – ತಿಮ್ಮಾಪುರ ತಿರುಗೇಟು
ಸಂಜೆ ವೇಳೆಗೆ ಸದನದಲ್ಲಿ ಉತ್ತರಿಸಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ತಮ್ಮ ವಿರುದ್ಧದ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿ ಹಾಕಿದರು. ನನ್ನ ವಿರುದ್ಧ ಆರೋಪ ಮಾಡಿರುವ ಮದ್ಯ ಮಾರಾಗಾರರ ಸಂಘಗಳ ಒಕ್ಕೂಟ ಅಸ್ತಿತ್ವದಲ್ಲೇ ಇಲ್ಲ. ಈ ಸಂಘವು ಈ ಹಿಂದೆ ಅಬಕಾರಿ ಸಚಿವರಾಗಿದ್ದ ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಮೇಲೂ ಆರೋಪ ಮಾಡಿತ್ತು. ಇಂತಹ ಅಸ್ತಿತ್ವವಿಲ್ಲದ ಸಂಘದ ಆರೋಪಗಳನ್ನು ಆಧಾರ ಮಾಡಿಕೊಂಡು ನನ್ನ ರಾಜೀನಾಮೆ ಕೇಳಲಾಗುತ್ತಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೋಪಾಲಯ್ಯ, ಶಶಿಕಲಾ ಜೊಲ್ಲೆ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ವಿರುದ್ಧವೂ ಆಡಿಯೋ ಆರೋಪಗಳು ಕೇಳಿಬಂದಿದ್ದವು. ಆಗ ಯಾರೂ ರಾಜೀನಾಮೆ ನೀಡಲಿಲ್ಲ. ಸುಳ್ಳು ಹಾಗೂ ಕಟ್ಟುಕಥೆಗಳ ಆಧಾರದಲ್ಲಿ ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ತಿಮ್ಮಾಪುರ ಸ್ಪಷ್ಟಪಡಿಸಿದರು.

ಎಸ್‌ಐಟಿ ತನಿಖೆಗೆ ಆಗ್ರಹ, ಅಹೋರಾತ್ರಿ ಧರಣಿ ಘೋಷಣೆ
ಸಚಿವರ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ವಿರೋಧ ಪಕ್ಷದ ಶಾಸಕರು, ಸಚಿವರೇ ನೇರವಾಗಿ ಹಣ ಪಡೆದಿದ್ದಾರೆ ಎಂದು ಅಧಿಕಾರಿಗಳು ಹೇಳಿರುವ ಆಡಿಯೋ ದಾಖಲೆಗಳಿವೆ. ಈ ಸಂಬಂಧ ಲೋಕಾಯುಕ್ತದಲ್ಲಿ ದೂರು ಕೂಡ ದಾಖಲಾಗಿದೆ. ಇಷ್ಟೆಲ್ಲ ಸಾಕ್ಷ್ಯಗಳಿದ್ದರೂ ಅಕ್ರಮವೇ ಆಗಿಲ್ಲ ಎಂದು ಸಚಿವರು ಹೇಳುತ್ತಿರುವುದು ಅಸಹ್ಯ. ಮುಖ್ಯಮಂತ್ರಿ ಅವರು ತಕ್ಷಣ ಸಚಿವರ ರಾಜೀನಾಮೆ ಪಡೆಯಬೇಕು. ಜೊತೆಗೆ ಅಬಕಾರಿ ಇಲಾಖೆಯ ಅಕ್ರಮಗಳ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು ಎಂದು ಒತ್ತಾಯಿಸಿದರು.
ಸ್ಪೀಕರ್ ಯು.ಟಿ. ಖಾದರ್ ಅವರು ಬುಧವಾರಕ್ಕೆ ಕಲಾಪವನ್ನು ಮುಂದೂಡಿದ ನಂತರ, ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಜಂಟಿಯಾಗಿ ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ಘೋಷಿಸಿದರು.

“ಸುಮಾರು ಆರು ಸಾವಿರ ಕೋಟಿ ರೂ. ಅಬಕಾರಿ ಹಗರಣದಲ್ಲಿ ಕಾಂಗ್ರೆಸ್ ಹೈಕಮಾಂಡ್‌ಗೂ ಪಾಲು ಹೋಗಿದೆ.”
– ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ







