ಬೆಂಗಳೂರು: ರಾಜ್ಯದ ಜನತೆಯ ಧ್ವನಿ ಪ್ರತಿಧ್ವನಿಸಬೇಕಾದ ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸಭೆಯಲ್ಲೇ ಆಡಳಿತ ಪಕ್ಷದ ಶಾಸಕ ಕೆ.ಎಂ.ಶಿವಲಿಂಗೇಗೌಡರು ವಿಪಕ್ಷ ನಾಯಕರ ವಿರುದ್ಧ ಏಕವಚನದಲ್ಲಿ, ಅವಾಚ್ಯ ಹಾಗೂ ಅಸಭ್ಯ ಶಬ್ದಗಳನ್ನು ಬಳಸಿ ಆಕ್ರೋಶ ವ್ಯಕ್ತಪಡಿಸಿರುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸದನದ ಗಂಭೀರ ಚರ್ಚೆಯ ವೇಳೆ ಶಾಸಕರೊಬ್ಬರು ತೋರಿದ ಈ ರೀತಿಯ ವರ್ತನೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಮಾಡಿದ ಅವಮಾನವಾಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆ ಮತ್ತು ಖಂಡನೆ ವ್ಯಕ್ತವಾಗುತ್ತಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಮರುಸ್ಥಾಪಿಸಬೇಕು ಹಾಗೂ ವಿಬಿ ಜಿ ರಾಮ್ ಜಿ ಯೋಜನೆಯನ್ನು ರದ್ದುಪಡಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸುವ ಸರ್ಕಾರದ ಅಧಿಕೃತ ನಿರ್ಣಯದ ಮೇಲಿನ ಚರ್ಚೆಯಲ್ಲಿ ಶಿವಲಿಂಗೇಗೌಡರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳನ್ನು ವಿವರಿಸುವ ವೇಳೆ, ಚರ್ಚೆಯ ವಿಷಯದಿಂದ ದಾರಿ ತಪ್ಪಿ, ಅಬಕಾರಿ ಹಗರಣದಲ್ಲಿ ಸಚಿವ ಆರ್.ಬಿ.ತಿಮಾಪುರ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಧರಣಿ ನಡೆಸುತ್ತಿದ್ದ ಬಿಜೆಪಿ–ಜೆಡಿಎಸ್ ಸದಸ್ಯರ ವಿರುದ್ಧ ಹಾಸ್ಯ ಮಾಡುತ್ತಾ, ನೃತ್ಯ ಮಾಡುತ್ತಿರುವಂತೆ ವ್ಯಂಗ್ಯವಾಡಿದರು. ವಿಪಕ್ಷಕ್ಕೆ ಗಂಭೀರತೆ ಇಲ್ಲ ಎಂದು ಟೀಕಿಸಿದ ಅವರು, ಸಂಸತ್ತೀಯ ಸಂಸ್ಕೃತಿಗೆ ವಿರುದ್ಧವಾದ ಶೈಲಿಯಲ್ಲಿ ಮಾತನಾಡಿದರು.

ಇದಕ್ಕೆ ಪ್ರತಿಕ್ರಿಯೆಯಾಗಿ ಬಿಜೆಪಿ ಶಾಸಕ ಶರಣು ಸಲಗರ ಅವರು, ಜೆಡಿಎಸ್ ಪಕ್ಷಕ್ಕೆ ದ್ರೋಹ ಮಾಡಿದವರು, ದೇವೇಗೌಡರಿಗೆ ಮೋಸ ಮಾಡಿದವರು, ಕೊಬ್ಬರಿ ಬೆಳೆಗಾರರಿಗೆ ಅನ್ಯಾಯ ಮಾಡಿದವರು ಶಿವಲಿಂಗೇಗೌಡರೆಂದು ಘೋಷಣೆ ಕೂಗಿದಾಗ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನವಾಯಿತು. ಈ ವೇಳೆ ತಾಳ್ಮೆ ತೋರಿಸಬೇಕಾದ ಶಾಸಕರು, ಸದನದ ಶಿಸ್ತನ್ನು ಕಾಪಾಡಬೇಕಾದ ಜವಾಬ್ದಾರಿಯನ್ನು ಮರೆತು, “ಗಂಭೀರ ಚರ್ಚೆ ನಡೆಯುವಾಗ ಕೋತಿಗಳಂತೆ ಕುಣಿಯುತ್ತಿದ್ದಾರೆ”, “ನಿಮಗೆ ಮಾನ-ಮರ್ಯಾದೆ ಇಲ್ಲ”, “ನಿಮ ಜನಕ್ಕೆ ಬೆಂಕಿ ಹಾಕಬೇಕು” ಎನ್ನುವಂತಹ ಅತ್ಯಂತ ಅವಾಚ್ಯ ಹಾಗೂ ಅಸಹ್ಯಕರ ಪದಗಳನ್ನು ಬಳಸಿ ಆಕ್ರೋಶ ಹೊರಹಾಕಿದರು.
ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದ ಬಿಜೆಪಿ ಶಾಸಕರು ಅಡ್ಡಿಪಡಿಸುತ್ತಾರೆ ಎಂದು ಆರೋಪಿಸಿದ ಶಿವಲಿಂಗೇಗೌಡರು, ವಿರೋಧ ಪಕ್ಷದ ಸದಸ್ಯರನ್ನು ಯೋಗ್ಯತೆಯಿಲ್ಲದವರು ಎಂದು ನಿಂದಿಸುವ ಮೂಲಕ ಸದನದ ಘನತೆಯನ್ನು ಮಣ್ಣಿನ ಪಾಲು ಮಾಡಿದರು. ಶಾಸಕರೊಬ್ಬರಿಂದ ಈ ರೀತಿಯ ಭಾಷೆ ಮತ್ತು ವರ್ತನೆ ನಿರೀಕ್ಷಿತವಲ್ಲ; ಇದು ಶಾಸಕರ ಅಸಹಾಯಕತೆ ಮತ್ತು ಅಸಹನೆಯನ್ನು ಬಹಿರಂಗಪಡಿಸುತ್ತದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಬಿಜೆಪಿ ಕರ್ನಾಟಕ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಖಂಡನಾ ಹೇಳಿಕೆ ಬಿಡುಗಡೆ ಮಾಡಿದ್ದು, “ಅಬಕಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ವಿಪಕ್ಷ ನಾಯಕರು ಶಾಂತಿಯುತ ಧರಣಿ ನಡೆಸುತ್ತಿರುವಾಗ, ಭ್ರಷ್ಟ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡರು ಸದನದಲ್ಲೇ ಬೈಗುಳದ ಮೂಲಕ ದರ್ಪ ತೋರಿಸಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ” ಎಂದು ಆಕ್ರೋಶ ವ್ಯಕ್ತಪಡಿಸಿದೆ.
“ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸಭೆಯ ಘನತೆಯನ್ನು ಮರೆತು, ವಿರೋಧ ಪಕ್ಷದ ನಾಯಕರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸುವುದು ಶಕ್ತಿಯ ಲಕ್ಷಣವಲ್ಲ, ಅದು ನಿಮ್ಮ ಅಸಹಾಯಕತೆಯ ಪ್ರತಿಬಿಂಬ. ಅಧಿಕಾರದ ಅಮಲಿನಲ್ಲಿ ಕಾಂಗ್ರೆಸ್ ಶಾಸಕರು ತೋರಿಸುತ್ತಿರುವ ಗೂಂಡಾ ವರ್ತನೆ ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ನೇರ ಅವಮಾನ.
ಭ್ರಷ್ಟರನ್ನು ರಕ್ಷಿಸುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ” ಎಂದು ಬಿಜೆಪಿ ಹೇಳಿಕೆಯಲ್ಲಿ ತೀವ್ರವಾಗಿ ಟೀಕಿಸಿದೆ.
ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕಾದ ಸದನದಲ್ಲಿ ವೈಯಕ್ತಿಕ ನಿಂದನೆ, ಏಕವಚನ ಬೈಗುಳ ಮತ್ತು ಅಸಭ್ಯ ಪದಗಳ ಬಳಕೆ ಜನಪ್ರತಿನಿಧಿಗಳ ಮೇಲಿನ ವಿಶ್ವಾಸವನ್ನು ಕುಂದಿಸುತ್ತದೆ. ಇಂತಹ ವರ್ತನೆಗೆ ಸ್ಪಷ್ಟ ಖಂಡನೆ ವ್ಯಕ್ತಪಡಿಸುವುದರ ಜೊತೆಗೆ, ಸದನದ ಶಿಸ್ತು ಮತ್ತು ಘನತೆಯನ್ನು ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಜನತೆಯ ಒತ್ತಾಯವಾಗಿದೆ.







