ಅಫಜಲಪುರ, ಫೆಬ್ರವರಿ 12: ಭಾರತ ಧರ್ಮಭೂಮಿ. ವಿವಿಧ ಮತ–ಪಂಥಗಳು, ಆಚಾರ–ವಿಚಾರಗಳು, ಆಧ್ಯಾತ್ಮಿಕ ಪರಂಪರೆಗಳು ಒಂದೇ ನೆಲದಲ್ಲಿ ಸಹಬಾಳ್ವೆ ನಡೆಸುತ್ತಿರುವುದು ನಮ್ಮ ದೇಶದ ವೈಶಿಷ್ಟ್ಯ. ಇಂತಹ ಪವಿತ್ರ ಭೂಮಿಯಲ್ಲಿ ಮಠಗಳು ಕೇವಲ ಪೂಜಾ–ಪಾಠಗಳ ಕೇಂದ್ರಗಳಾಗಿ ಮಾತ್ರ ಉಳಿಯದೆ, ಸಮಾಜಕ್ಕೆ ಸಂಸ್ಕಾರ, ಶಿಸ್ತಿನ ಬದುಕು ಮತ್ತು ನೈತಿಕ ಮೌಲ್ಯಗಳನ್ನು ಬೋಧಿಸುವ ಆಧ್ಯಾತ್ಮಿಕ ಕೇಂದ್ರಗಳಾಗಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ತಾಲ್ಲೂಕಿನ ನೀಲೂರು ಗ್ರಾಮದ ಶ್ರೀಮದ್ ರಂಭಾಪುರಿ ಶಾಖಾ ಮಠದಲ್ಲಿ ಆಯೋಜಿಸಿದ್ದ ಶ್ರೀ ರಾಚೋಟೇಶ್ವರ ಹಿರೇಮಠದ ಗುರು ಪಟ್ಟಾಧಿಕಾರ ಮಹೋತ್ಸವ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಜಗದ್ಗುರುಗಳು ಮಾತನಾಡಿ, “ಮಾನವ ಜೀವನವು ಗುರಿಯುತವಾಗಿರಬೇಕು. ಗುರಿಯಿಲ್ಲದ ಜೀವನ ದಿಕ್ಕುತೋಚದ ದೋಣಿಯಂತೆ. ಇಂದಿನ ಯುಗದಲ್ಲಿ ಮಾನಸಿಕ ಒತ್ತಡ, ಅಶಾಂತಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಧರ್ಮಪರ ಜೀವನವು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ವೀರಶೈವ ಧರ್ಮದಲ್ಲಿ ಸಂಸ್ಕಾರಕ್ಕೆ ಅತ್ಯಂತ ಮಹತ್ವವಿದೆ. ಜೀವ ಶಿವನಾಗಲು, ಅಹಂಕಾರ ಹರಣವಾಗಲು ಹಾಗೂ ಭಕ್ತಿಭಾವ ಬೆಳೆಯಲು ಸಂಸ್ಕಾರ ಅನಿವಾರ್ಯ,” ಎಂದು ಹೇಳಿದರು.
ಅವರು ಮುಂದುವರೆದು, “ಅಷ್ಟಾವರಣ, ಪಂಚಾಚಾರ, ಶಟ್ಸ್ಥಲ ಎಂಬ ವೀರಶೈವ ಸಿದ್ಧಾಂತಗಳು ಮಾನವನ ವ್ಯಕ್ತಿತ್ವ ವಿಕಾಸಕ್ಕೆ ದಾರಿ ತೋರಿಸುತ್ತವೆ. ಗುರುಗಳ ಮಾರ್ಗದರ್ಶನದಲ್ಲಿ ನಡೆಯುವ ಜೀವನವೇ ಸಾರ್ಥಕ. ರೇಣುಕಾಚಾರ್ಯರ ಆದರ್ಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ,” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನೀಲೂರು ರಾಚೋಟೇಶ್ವರ ಹಿರೇಮಠವು ರಂಭಾಪುರಿ ಪೀಠದ ಶಾಖಾ ಮಠವಾಗಿರುವ ಹಿನ್ನೆಲೆಯಲ್ಲಿ, ಲಿಂಗೈಕ್ಯರಾದ ಶ್ರೀ ಡಾ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳವರ ನಂತರ ಖಾಲಿಯಾಗಿದ್ದ ಸ್ಥಾನಕ್ಕೆ ಶಿವಬಸವ ದೇವರನ್ನು ಆಯ್ಕೆ ಮಾಡಿ, ಅವರಿಗೆ ಶ್ರೀ ಶಿವರುದ್ರ ಶಿವಾಚಾರ್ಯ ಸ್ವಾಮಿಗಳೆಂಬ ನೂತನ ಅಭಿದಾನ ನೀಡಿ ಗುರುಪಟ್ಟಾಭಿಷೇಕ ನೆರವೇರಿಸಲಾಯಿತು. ದಂಡ, ಕಮಂಡಲ, ಪಂಚಮುದ್ರಾ ಪ್ರದಾನ ಮಾಡುವ ಮೂಲಕ ಅಧಿಕೃತವಾಗಿ ಗುರುಪೀಠದ ಅಧಿಕಾರ ವಹಿಸಲಾಯಿತು.
ನೂತನ ಪೀಠಾಧಿಪತಿಗಳಿಗೆ ರಂಭಾಪುರಿ ಪೀಠದಿಂದ ರೇಷ್ಮೆ ಪೀತಾಂಬರ, ಸ್ಮರಣಿಕೆ ಮತ್ತು ಪುಷ್ಪಾರ್ಚನೆ ಸಲ್ಲಿಸಿ ಜಗದ್ಗುರುಗಳು ಶುಭ ಹಾರೈಸಿದರು.
ಚಿನ್ನಮಗಿರಿ ಸಿದ್ದರಾಮ ಶಿವಾಚಾರ್ಯ ಸ್ವಾಮಿಗಳು ನೂತನ ಸ್ವಾಮಿಗಳಿಗೆ ಧಾರ್ಮಿಕ ಸಂಸ್ಕಾರ ನೀಡಿ ಶಟ್ಸ್ಥಲ ಬ್ರಹ್ಮೋಪದೇಶ ಮಾಡಿದರು. ಗುರುತ್ವಾಧಿಕಾರ ಅನುಗ್ರಹಿಸಿ ಧರ್ಮಪಾಲನೆಯ ಜವಾಬ್ದಾರಿಯನ್ನು ಹಸ್ತಾಂತರಿಸಿದರು.
ಪಟ್ಟಾಭಿಷಿಕ್ತರಾದ ಶ್ರೀ ಶಿವರುದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, “ಭಾರತೀಯ ಸಂಸ್ಕೃತಿ ಎಲ್ಲರ ಬದುಕಿಗೆ ಬೆಳಕು ನೀಡುವ ಶಕ್ತಿ ಹೊಂದಿದೆ. ದೇವರು, ಧರ್ಮ ಮತ್ತು ಗುರುಗಳ ಮೇಲೆ ನಂಬಿಕೆ ಇಟ್ಟು ನಡೆದುಕೊಂಡರೆ ಜೀವನ ಉದಾತ್ತವಾಗುತ್ತದೆ. ರಂಭಾಪುರಿ ಜಗದ್ಗುರುಗಳ ಆಶೀರ್ವಾದದ ಬಲದಿಂದ ಸಮಾಜದಲ್ಲಿ ಸಾಮರಸ್ಯ ಮತ್ತು ಧಾರ್ಮಿಕ ಜಾಗೃತಿ ಮೂಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ,” ಎಂದು ಸಂಕಲ್ಪ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಮತ್ತು ಗಣ್ಯರು ಉಪಸ್ಥಿತರಿದ್ದರು. ಸಂಜೆ 5 ಗಂಟೆಗೆ ನೂತನ ಸ್ವಾಮಿಗಳ ಪಲ್ಲಕ್ಕಿ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಕಳೆದ 15 ದಿನಗಳಿಂದ ಜರಟಗಿ ಮಡಿವಾಳೇಶ್ವರ ಶಾಸ್ತ್ರಿಗಳವರಿಂದ ನಡೆದ ಕಲಬುರಗಿ ಶರಣ ಬಸವೇಶ್ವರ ಪುರಾಣ ಮಂಗಳ ಸಮಾರಂಭವೂ ಈ ಸಂದರ್ಭದಲ್ಲಿ ನೆರವೇರಿತು.
ಸಮಾರಂಭಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಧಾರ್ಮಿಕ ಭಕ್ತಿ, ಸಂಸ್ಕಾರ ಮತ್ತು ಸಮಾಜಸೇವೆಯ ಸಂದೇಶವನ್ನು ಸಾರಿದ ಈ ಮಹೋತ್ಸವವು ಭಕ್ತರ ಮನಸ್ಸಿನಲ್ಲಿ ಆಧ್ಯಾತ್ಮಿಕ ಉತ್ಸಾಹ ಮೂಡಿಸಿತು.











