ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವದ ಅಂಗವಾಗಿ ಫೆ.15ರಂದು ಭರ್ಜರಿ ಟಗರು ಕಾಳಗ
ಶಿವಮೊಗ್ಗ: ಶಿವಮೊಗ್ಗದ ಪ್ರತಿಷ್ಠಿತ ಕೋಟೆ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ‘ನಮ್ಮೂರ ಬಳಗ’ ವತಿಯಿಂದ ಫೆಬ್ರವರಿ 15ರಂದು ಹಮ್ಮಿಕೊಳ್ಳಲಾಗಿರುವ ರಾಷ್ಟ್ರಮಟ್ಟದ ಭಾರಿ ಟಗರು ಕಾಳಗಕ್ಕೆ ಸಜ್ಜಾಗಿದ್ದು, ಈ ಕಾಳಗದಲ್ಲಿ ಪ್ರದಾನಗೊಳ್ಳಲಿರುವ ಗೌರವಾನ್ವಿತ ಟ್ರೋಫಿಗಳನ್ನು ಸ್ಯಾಂಡಲ್‌ವುಡ್‌ನ ನಟರಾಕ್ಷಸ ಡಾಲಿ ಧನಂಜಯ್ ಅವರು ಅನಾವರಣಗೊಳಿಸಿದರು.
ಶಿವಮೊಗ್ಗ ಮಾರಿ ಜಾತ್ರೆಯ ಸಂಭ್ರಮಕ್ಕೆ ಮತ್ತಷ್ಟು ಕಳೆ ತಂದ ಈ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್ ಅವರು ಮಾತನಾಡಿ, “ನಾಡಿನ ಸಾಂಸ್ಕೃತಿಕ ಪರಂಪರೆ, ಗ್ರಾಮೀಣ ಕ್ರೀಡೆಗಳು ಹಾಗೂ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಕಾಳಗಗಳ ಪಾತ್ರ ಮಹತ್ವದ್ದಾಗಿದೆ. ಶಿವಮೊಗ್ಗದ ಮಾರಿ ಜಾತ್ರೆಯ ಅಂಗವಾಗಿ ನಡೆಯುವ ಟಗರು ಕಾಳಗ ಯಶಸ್ವಿಯಾಗಲಿ” ಎಂದು ಶುಭಾಶಯ ಕೋರಿದರು.

ಈ ಬಾರಿ ಕಾಳಗದಲ್ಲಿ ವಿಜೇತರಿಗೆ ‘ಸಂಗೊಳ್ಳಿ ರಾಯಣ್ಣ’, ‘ವೀರ ಶಿವಪ್ಪ ನಾಯಕ’, ‘ಭಗೀರಥ’ ಹಾಗೂ ‘ವೀರ ಸಿಂಧೂರ ಲಕ್ಷ್ಮಣ’ ಹೆಸರಿನ ವಿಶಿಷ್ಟ ಟ್ರೋಫಿಗಳನ್ನು ನೀಡಲಾಗುತ್ತಿದೆ. ಐತಿಹಾಸಿಕ ಮತ್ತು ವೀರರ ಸ್ಮರಣಾರ್ಥ ಈ ಟ್ರೋಫಿಗಳನ್ನು ರೂಪಿಸಲಾಗಿದ್ದು, ರಾಷ್ಟ್ರಮಟ್ಟದ ಸ್ಪರ್ಧಿಗಳಿಗೆ ಇದು ಗೌರವದ ಪ್ರತೀಕವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ‘ನಮ್ಮೂರ ಬಳಗ’ದ ಪ್ರಧಾನ ಸಂಚಾಲಕರಾದ ಕೆ. ರಂಗನಾಥ್ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಜಾತ್ರೆಯ ಅಂಗವಾಗಿ ಟಗರು ಕಾಳಗವನ್ನು ಯಶಸ್ವಿಯಾಗಿ ಆಯೋಜಿಸುತ್ತಿದ್ದೇವೆ. ಈ ಬಾರಿ ರಾಷ್ಟ್ರಮಟ್ಟದ ಸ್ಪರ್ಧೆಯನ್ನು ಆಯೋಜಿಸಿರುವುದು ವಿಶೇಷ. ವಿವಿಧ ರಾಜ್ಯಗಳಿಂದ ಶ್ರೇಷ್ಠ ಟಗರುಗಳು ಭಾಗವಹಿಸುವ ನಿರೀಕ್ಷೆಯಿದ್ದು, ಭಾರೀ ಜನಸ್ತೋಮ ಸೇರುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಮ್ಮೂರ ಬಳಗದ ಗೌರವ ಸಂಚಾಲಕರಾದ ನಾಗರಾಜ್ ಕಂಕರಿ, ಎಚ್. ಪಾಲಾಕ್ಷಿ, ಐಡಿಯಲ್ ಗೋಪಿ, ಪಿ.ಎಚ್. ಮಾಲ್ತೇಶ್, ಸಂಚಾಲಕರಾದ ಎಚ್.ಪಿ. ಗಿರೀಶ್, ಎಂ. ರಾಕೇಶ್, ರಾಜೇಶ್ ಮಂದಾರ, ಮನ್ವಿತ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕೋಟೆ ಮಾರಿಕಾಂಬ ಜಾತ್ರೆಯ ವೈಭವಕ್ಕೆ ರಾಷ್ಟ್ರಮಟ್ಟದ ಟಗರು ಕಾಳಗ ಮತ್ತೊಂದು ಮೆರುಗು ನೀಡಲಿದ್ದು, ಶಿವಮೊಗ್ಗದ ಕ್ರೀಡಾಭಿಮಾನಿಗಳಲ್ಲಿ ಉತ್ಸಾಹ ಮನೆಮಾಡಿದೆ.








