ಬೆಂಗಳೂರು: ದೇಶದ ಬಡವರು, ರೈತರು, ಮಹಿಳೆಯರು ಹಾಗೂ ಯುವಕರ ಜೀವನಮಟ್ಟವನ್ನು ಎತ್ತಿಹಿಡಿಯುವ ಕಾರ್ಯವನ್ನು ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಮಾಡುತ್ತಿದೆ. ಆದರೆ ಕರ್ನಾಟಕದಲ್ಲಿ ಅನುಭವಸಂಪನ್ನ ಮುಖ್ಯಮಂತ್ರಿಯಾಗಿ, 16 ಬಾರಿ ಹಣಕಾಸು ಪ್ರಸ್ತಾವ ಮಂಡಿಸಿರುವ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಜನರು “ಕಾಯುವುದೇ ಕೈಲಾಸ” ಎನ್ನುವ ಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 1000 ದಿನ ಪೂರೈಸಿದ ಸಂಭ್ರಮಾಚರಣೆಗೆ ಹಾವೇರಿಯಲ್ಲಿ ಭಾರಿ ಸಾರ್ವಜನಿಕ ಸಭೆ ಹಮ್ಮಿಕೊಂಡಿರುವುದನ್ನು ಟೀಕಿಸಿದರು. “ಒಂದು ಕಡೆ ಕೇಂದ್ರ ಸರ್ಕಾರ ‘ಕಾಯಕವೇ ಕೈಲಾಸ’ ಎಂಬ ಧ್ಯೇಯದೊಂದಿಗೆ ದೇಶವನ್ನು ಅಭಿವೃದ್ಧಿಯ ದಿಕ್ಕಿನಲ್ಲಿ ಮುನ್ನಡೆಸುತ್ತಿದ್ದರೆ, ರಾಜ್ಯದಲ್ಲಿ ಆಡಳಿತ ವೈಫಲ್ಯಗಳಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ” ಎಂದು ಹೇಳಿದರು.

ಸಾವಿರ ಸುಳ್ಳುಗಳ ನಡುವೆ ಸಾವಿರ ದಿನಗಳ ಸಂಭ್ರಮ
“ನೂರು ಸುಳ್ಳು ಹೇಳಿ ಮದುವೆ ಮಾಡಿ” ಎಂಬ ಗಾದೆಯನ್ನು ಉಲ್ಲೇಖಿಸಿದ ವಿಜಯೇಂದ್ರ, “ಸಾವಿರ ದಿನಗಳ ಸಂಭ್ರಮಾಚರಣೆಯ ಹೆಸರಿನಲ್ಲಿ ಸಾವಿರ ಸುಳ್ಳುಗಳನ್ನು ಹೇಳಿ ರಾಜ್ಯದ ಬಡವರು, ರೈತರು, ಮಹಿಳೆಯರು ಹಾಗೂ ಯುವಜನತೆಗೆ ಅನ್ಯಾಯ ಮಾಡಲಾಗಿದೆ” ಎಂದು ಆರೋಪಿಸಿದರು. ಅಹಿಂದ ಹೆಸರಿನಲ್ಲಿ ಆಡಳಿತ ನಡೆಸುವ ಮುಖ್ಯಮಂತ್ರಿ, ಅಲ್ಪಸಂಖ್ಯಾತರಿಗೆ ಮಾತ್ರ ಆದ್ಯತೆ ನೀಡಿ, ಪರಿಶಿಷ್ಟ ಜಾತಿ–ಪಂಗಡ, ಹಿಂದುಳಿದ ವರ್ಗಗಳು, ಒಕ್ಕಲಿಗರು ಹಾಗೂ ವೀರಶೈವ–ಲಿಂಗಾಯತ ಸಮುದಾಯಗಳಿಗೆ ನ್ಯಾಯ ನೀಡಿಲ್ಲ ಎಂಬ ಅಭಿಪ್ರಾಯ ಜನರಲ್ಲಿ ಮೂಡುತ್ತಿದೆ ಎಂದರು.

ಜಾತಿಗಣತಿ ಕುರಿತ ಟೀಕೆ
ಹಿಂದೆ 170 ಕೋಟಿ ರೂ. ವೆಚ್ಚದಲ್ಲಿ ನಡೆಸಿದ ಜಾತಿಗಣತಿ ವರದಿಯನ್ನು ತಿರಸ್ಕರಿಸಿ, ಇದೀಗ ಮತ್ತೊಮ್ಮೆ 450 ಕೋಟಿ ರೂ. ಖರ್ಚು ಮಾಡಿ ನಡೆಸಿದ ಜಾತಿಗಣತಿಯನ್ನು ರಾಜಕೀಯ ಲಾಭಕ್ಕಾಗಿ ಬಳಸಲು ಹೊರಟಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದರು. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರನ್ನು ಕೇವಲ ಮತಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳಲಾಗುತ್ತಿದೆ; ಅವರ ಜೀವನೋನ್ನತಿಗೆ ಸ್ಪಷ್ಟ ಯೋಜನೆಗಳಿಲ್ಲ ಎಂದರು.
ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯ
ಮುಡಾ ಸೇರಿದಂತೆ ವಿವಿಧ ಭ್ರಷ್ಟಾಚಾರ ಪ್ರಕರಣಗಳನ್ನು ಉಲ್ಲೇಖಿಸಿದ ವಿಜಯೇಂದ್ರ, “ಭ್ರಷ್ಟಾಚಾರ ಹೇಗೆ ಮಾಡಬೇಕು ಎಂಬುದಕ್ಕೆ ಈ ಸರ್ಕಾರವೇ ದೇಶಕ್ಕೆ ಮಾದರಿ” ಎಂದು ಟೀಕಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಅನೇಕ ಜನಪರ ಯೋಜನೆಗಳು ಜಾರಿಗೆ ಬಂದಿದ್ದವು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನರಿಗೆ ಕಿವಿಗೆ ಹೂವು ಮುಡಿಸುವ ಕೆಲಸ ಮಾಡಿದೆ ಎಂದು ದೂರಿದರು.
ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಅಭಿವೃದ್ಧಿಯ ವೇಗ ಕುಂಠಿತಗೊಂಡಿದೆ. “ಕರ್ನಾಟಕವನ್ನು 20-25 ವರ್ಷ ಹಿಂದಕ್ಕೆ ಕೊಂಡೊಯ್ಯಲಾಗಿದೆ” ಎಂದು ಅವರು ಆರೋಪಿಸಿದರು.

ನೇಮಕಾತಿ, ಪಿಂಚಣಿ ಮತ್ತು ಗೌರವಧನ ಪ್ರಶ್ನೆ
ಸುಮಾರು 2.85 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿಯಾಗಿದ್ದರೂ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿಲ್ಲ. ಮೀಸಲಾತಿ ಪ್ರಮಾಣಪಟ್ಟಿ ನೆಪದಲ್ಲಿ ಯುವಜನತೆಗೆ ಅನ್ಯಾಯ ಮಾಡಲಾಗಿದೆ ಎಂದು ವಿಜಯೇಂದ್ರ ಹೇಳಿದರು. ಬೆಳಗಾವಿಯಲ್ಲಿ ಯುವಕರು ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಮುಂದಾದಾಗ ಉನ್ನತ ನ್ಯಾಯಾಲಯ ಮಧ್ಯಸ್ಥಿಕೆ ಅಗತ್ಯವಾದದ್ದು ದುಃಖಕರ ಎಂದರು.
2006ರಿಂದ ಸೇವೆಗೆ ಸೇರಿದ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವ ಭರವಸೆ ಈಡೇರಿಲ್ಲ. ಅಂಗನವಾಡಿ, ಆಶಾ ಕಾರ್ಯಕರ್ತರು ಹಾಗೂ ಬಿಸಿಯೂಟ ತಯಾರಕರ ಗೌರವಧನ ಹೆಚ್ಚಿಸುವುದಾಗಿ ಹೇಳಿ ಕಾರ್ಯರೂಪಕ್ಕೆ ತರಲಿಲ್ಲ ಎಂದು ಆರೋಪಿಸಿದರು.

ನೀರಾವರಿ, ಉದ್ಯೋಗ ಮತ್ತು ಅನ್ನ ವಿತರಣೆ ಪ್ರಶ್ನೆ
ಐದು ವರ್ಷಗಳಲ್ಲಿ 1.50 ಲಕ್ಷ ಕೋಟಿ ರೂ. ನೀರಾವರಿ ಯೋಜನೆಗಳಿಗೆ ಮೀಸಲು ಮಾಡುವುದಾಗಿ ನೀಡಿದ ಭರವಸೆ ಹೇಳಿಕೆಗೇ ಸೀಮಿತವಾಗಿದೆ. ಮೈಸೂರು, ಮಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ತಂತ್ರಜ್ಞಾನ ಉದ್ಯಾನವನ ನಿರ್ಮಿಸಿ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸುವ ಯೋಜನೆಗೂ ಗತಿ ಕಾಣುತ್ತಿಲ್ಲ. 10 ಕೆಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡಿದರೂ, ಕೇಂದ್ರದ 5 ಕೆಜಿಯ ಹೊರತಾಗಿ ರಾಜ್ಯದ ಪಾಲಿನ ಅಕ್ಕಿ ಸರಿಯಾಗಿ ನೀಡಲಾಗುತ್ತಿಲ್ಲ ಎಂದು ಟೀಕಿಸಿದರು.
ಪ್ರಾದೇಶಿಕ ಅಸಮಾನತೆ ಆರೋಪ
ಹಿಂದುಳಿದ ವರ್ಗದ 1.41 ಲಕ್ಷ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ಪ್ರಾದೇಶಿಕ ಅಸಮಾನತೆ ನಿವಾರಣೆಯ ವರದಿಯನ್ನು ಗಮನಿಸಿದರೆ ಸರ್ಕಾರ ಬೆಂಗಳೂರು ಹಾಗೂ ಮೈಸೂರಿಗೆ ಮಾತ್ರ ಸೀಮಿತವಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ವಿಜಯೇಂದ್ರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಮತ್ತು ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ ನಾರಾಯಣ್ ಉಪಸ್ಥಿತರಿದ್ದರು.









