ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಈಚಘಟ್ಟದಲ್ಲಿ ನಾಳೆ ರೈತ ಹೋರಾಟ ಮತ್ತು ಗ್ರಾಮ ಘಟಕ ಉದ್ಘಾಟನೆ: ಹೆಚ್.ಆರ್. ಬಸವರಾಜಪ್ಪ ನೇತೃತ್ವದಲ್ಲಿ ರೈತ ಸಂಘಟನೆಗಳ ಎಚ್ಚರಿಕೆ

On: February 17, 2026 7:53 PM
Follow Us:

ಈಚಘಟ್ಟ, ಫೆ.17: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ನಾಳೆ (ಫೆ.18) ಬುಧವಾರ ಸಂಜೆ 4.00 ಗಂಟೆಗೆ ಈಚಘಟ್ಟ ಗ್ರಾಮದಲ್ಲಿ ಹೋರಾಟ ಹಾಗೂ ಗ್ರಾಮ ಘಟಕ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯ ಅಧ್ಯಕ್ಷರಾದ ಹೆಚ್.ಆರ್. ಬಸವರಾಜಪ್ಪ ಹಾಗೂ ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷರಾದ ಆಡನೂರು ಶಿವಕುಮಾರ್ ಸೇರಿದಂತೆ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ರೈತ ಮುಖಂಡರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಈಚಘಟ್ಟ ಗ್ರಾಮ ಘಟಕವನ್ನು ಅಧಿಕೃತವಾಗಿ ಉದ್ಘಾಟಿಸಲಾಗುತ್ತದೆ.

ಗ್ರಾಮದ ಸಾಮೂಹಿಕ ಹಿತಾಸಕ್ತಿಗಾಗಿ ಮೀಸಲಾದ ಗೋಮಾಳ ಭೂಮಿಯನ್ನು ಕೈಗಾರಿಕಾ ಉದ್ದೇಶಗಳಿಗೆ ಬಳಸುವುದು ಗ್ರಾಮೀಣ ಪರಿಸರ ಹಾಗೂ ಪಶುಪಾಲನೆಗೆ ಹಾನಿಕಾರಕವಾಗಲಿದೆ ಎಂದು ನಾಯಕರು ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ. ರೈತರ ಬದುಕು ಹಾಗೂ ಪಶುಸಂಗೋಪನೆಗೆ ಅಗತ್ಯವಾದ ಮೇವು ಪ್ರದೇಶವನ್ನು ಕಸಿದುಕೊಳ್ಳುವ ಯಾವುದೇ ಯೋಜನೆಯನ್ನು ಸಂಘಟನೆ ಒಪ್ಪುವುದಿಲ್ಲ ಎಂದು ಎಚ್ಚರಿಕೆ ನೀಡಲಿದ್ದಾರೆ.

ರೈತರಿಗೆ ಸಾಲ ಮರುಪಾವತಿಯಲ್ಲಿ ಸೂಕ್ತ ರಿಯಾಯಿತಿ ನೀಡದಿರುವ ಬ್ಯಾಂಕುಗಳ ವಿರುದ್ಧವೂ ತೀವ್ರ ಆಕ್ರೋಶ ವ್ಯಕ್ತವಾಗಲಿದೆ. ಅನೇಕ ರಾಷ್ಟ್ರೀಕೃತ ಬ್ಯಾಂಕುಗಳು ರೈತರಿಗೆ ಬಡ್ಡಿ ಮನ್ನಾ ಹಾಗೂ ಅಸಲಿನಲ್ಲಿಯೂ ರಿಯಾಯಿತಿ ನೀಡಿದರೆ ಏಕಕಂತಿನಲ್ಲಿ ಸಾಲ ತೀರಿಸಲು ರೈತರು ಸಿದ್ಧರಾಗಿದ್ದಾರೆ. ಆದರೆ ಕೆಲವು ಗ್ರಾಮೀಣ ಬ್ಯಾಂಕುಗಳು ಯಾವುದೇ ರೀತಿಯ ರಿಯಾಯಿತಿ ನೀಡದೇ ಕಠಿಣ ಧೋರಣೆ ಅನುಸರಿಸುತ್ತಿವೆ ಎಂದು ಆರೋಪಿಸಿದೆ.

ಕೃಷಿ ಉತ್ಪನ್ನಗಳ ಬೆಲೆ ಕುಸಿತವಾಗುತ್ತಿರುವ ಸಂದರ್ಭದಲ್ಲೇ, ಕೃಷಿ ವೆಚ್ಚಗಳು ಏರಿಕೆಯಾಗುತ್ತಿವೆ. ಸರ್ಕಾರಗಳು ಹಾಗೂ ಬ್ಯಾಂಕುಗಳು ರೈತರ ಆರ್ಥಿಕ ವೈಫಲ್ಯದ ಮೂಲ ಕಾರಣಗಳನ್ನು ಪರಿಶೀಲಿಸುವಲ್ಲಿ ವಿಫಲವಾಗಿವೆ ಎಂದು ಆರೋಪಿಸಲಿದ್ದಾರೆ. ರೈತರನ್ನು ಶಾಶ್ವತ ಸಾಲದ ಚಕ್ರದಲ್ಲಿ ಸಿಲುಕಿಸುವ ನೀತಿಗಳನ್ನು ತಕ್ಷಣ ಪರಿಷ್ಕರಿಸಬೇಕು ಎಂದು ಆಗ್ರಹಿಸಲಿದೆ.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಉಚಿತ ಯೋಜನೆಗಳ ಕುರಿತು ಕೂಡ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಲಿದೆ. ದುಡಿದು ತಿನ್ನುವ ರೈತರಿಗೆ ಗೌರವ ಕಾಪಾಡುವ ನೀತಿಗಳೇ ಅಗತ್ಯವಿದ್ದು, ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಿದ್ದರೆ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ. ರೈತರು ಉಚಿತ ಯೋಜನೆಗಳನ್ನು ಕೇಳಿಲ್ಲ, ನ್ಯಾಯಸಮ್ಮತ ಬೆಲೆ ಮತ್ತು ಸ್ಥಿರ ಆದಾಯವನ್ನೇ ಕೇಳುತ್ತಿದ್ದಾರೆ ಎಂದು ನಾಯಕರು ತಿಳಿಸಲಿದ್ದಾರೆ.

ಸಭೆಯಲ್ಲಿ ರೈತ ಸಂಘಟನೆಗಳ ಪ್ರಮುಖ ಬೇಡಿಕೆಗಳನ್ನು ಪ್ರಕಟಿಸಿದೆ:

  1. ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಸಮಗ್ರ ಯೋಜನೆ ಜಾರಿಗೆ ತರಬೇಕು. ಈ ಯೋಜನೆಗೆ ಕನಿಷ್ಠ ₹5,000 ಕೋಟಿ ಅನುದಾನವನ್ನು ಸರ್ಕಾರ ಮೀಸಲಿಡಬೇಕು ಎಂದು ಒತ್ತಾಯಿಸಿದೆ.
  2. ಹೊಳಲ್ಕೆರೆ ತಾಲ್ಲೂಕಿನಲ್ಲಿ ನಿರಂತರವಾಗಿ ಏಳು ಗಂಟೆಗಳ ವಿದ್ಯುತ್ ಪೂರೈಕೆಯನ್ನು ಯಾವುದೇ ತಾರತಮ್ಯವಿಲ್ಲದೆ ಒದಗಿಸಬೇಕು ಎಂದು ಆಗ್ರಹಿಸಲಿದೆ.
  3. ಬೆಳೆ ವಿಮೆ ಮತ್ತು ಪಸಲ್ ಭೀಮ ಯೋಜನೆಗಳ ಅನುಷ್ಠಾನದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಕ್ಷಣ ತನಿಖೆ ಮಾಡಬೇಕು. 2024-25ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದೆ.
  4. ರೈತರು ಬೆಳೆದ ಎಲ್ಲಾ ಬೆಳೆಗಳಿಗೆ ವೈಜ್ಞಾನಿಕ ಹಾಗೂ ನ್ಯಾಯಸಮ್ಮತ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದೆ.

ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ರೈತ ಮುಖಂಡರ ನೇತೃತ್ವದಲ್ಲಿ ಸಂಘಟನೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಲಿದೆ ಎಂದು ತಿಳಿಸಲಾಗಿದೆ. ರೈತರ ಹಕ್ಕುಗಳನ್ನು ರಕ್ಷಿಸಲು ಹಾಗೂ ಗೋಮಾಳ ಭೂಮಿಯನ್ನು ಉಳಿಸಲು ಸಂಘಟಿತ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಅನೇಕ ರೈತ ಬಂಧುಗಳು, ಮಹಿಳೆಯರು ಹಾಗೂ ಗ್ರಾಮಸ್ಥರು ಭಾಗವಹಿಸುವ ನಿರೀಕ್ಷೆಯಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment