ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಕಸ ತಡೆದರೆ ಕಾನೂನು ಕ್ರಮ ಅನಿವಾರ್ಯ: ಬ್ಲಾಕ್‌ಮೇಲ್ ರಾಜಕೀಯಕ್ಕೆ ತಲೆಬಾಗುವುದಿಲ್ಲ ಬಿಜೆಪಿ ವಿರುದ್ಧ ಡಿಕೆಶಿ ಎಚ್ಚರಿಕೆ

On: February 18, 2026 8:17 PM
Follow Us:

ಬೆಂಗಳೂರು: ಕಸದ ವಿಲೇವಾರಿಗೆ ಅಡ್ಡಿಪಡಿಸುವವರ ವಿರುದ್ಧ ಯಾವುದೇ ರಾಜಿ ಇಲ್ಲದೇ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಗೌರವದಿಂದ ನಡೆದುಕೊಂಡರೆ ಸರ್ಕಾರ ಸಹ ಗೌರವದಿಂದಲೇ ವರ್ತಿಸುತ್ತದೆ. ಆದರೆ ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆಯುಂಟು ಮಾಡುವ ರೀತಿಯಲ್ಲಿ ಕಸ ವಿಲೇವಾರಿಗೆ ತಡೆಯೊಡ್ಡಿದರೆ, ಅವರು ಶಾಸಕರಾಗಿದ್ದರೂ ಅಥವಾ ಯಾರೇ ಆಗಿದ್ದರೂ ಎಸ್ಮಾ ಕಾಯ್ದೆ ಅಡಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮಹದೇವಪುರ ಹಾಗೂ ಇತರ ಕಡೆಗಳಲ್ಲಿ ಕಸ ವಿಲೇವಾರಿಗೆ ಅಡ್ಡಿಪಡಿಸಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಶಾಸಕರು ತಮ್ಮ ಕ್ಷೇತ್ರಗಳಿಗೆ ಅನುದಾನ ಒದಗಿಸಬೇಕು ಎಂಬ ಕಾರಣಕ್ಕೆ ಕಸ ವಿಲೇವಾರಿ ತಡೆಯುವ ಮೂಲಕ ಬ್ಲಾಕ್‌ಮೇಲ್ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. “ಮಂಗಳವಾರ ಅರವಿಂದ ಲಿಂಬಾವಳಿ, ಇಂದು ದೊಡ್ಡಬಳ್ಳಾಪುರ ಶಾಸಕರು ಇದೇ ರೀತಿಯ ನಡೆ ತೋರಿದ್ದಾರೆ. ಹೀಗೆ ಮಾಡಿದರೆ ಕಸ ಎಲ್ಲಿಗೆ ಹೋಗಬೇಕು? ಅಗತ್ಯವಿದ್ದರೆ ಆ ಕಸವನ್ನು ಆರ್. ಅಶೋಕ್‌, ವಿಜಯೇಂದ್ರ ಮನೆಯ ಮುಂದೆ ಅಥವಾ ಬಿಜೆಪಿ ಕಚೇರಿ ಮುಂದೆ ಹಾಕಬೇಕಾಗುತ್ತದೆ” ಎಂದು ಅವರು ಕಿಡಿಕಾರಿದರು.

ಅಪಘಾತದ ಹಿನ್ನೆಲೆಯಲ್ಲಿ ಕಸದ ಲಾರಿಗಳಿಗೆ ವಿರೋಧ ವ್ಯಕ್ತವಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಪಘಾತ ಸಂಭವಿಸಿರುವುದು ದುರಂತ, ಅದಕ್ಕೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು. ಆದರೆ ಅದರ ನೆಪದಲ್ಲಿ ಕಸ ವಿಲೇವಾರಿ ಸಂಪೂರ್ಣವಾಗಿ ನಿಲ್ಲಿಸುವುದು ಸರಿಯಲ್ಲ ಎಂದು ತಿಳಿಸಿದರು. ಈಗಾಗಲೇ ವಿವಿಧ ಕ್ಷೇತ್ರಗಳಲ್ಲಿ ನಿಯಮಾನುಸಾರ ಕಸ ವಿಲೇವಾರಿ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

ಇದೇ ವೇಳೆ ಹೊಸದಾಗಿ ಎರಡು ಸ್ಥಳಗಳನ್ನು ಕಸ ವಿಲೇವಾರಿಗೆ ಖರೀದಿಸಿರುವುದಾಗಿ ತಿಳಿಸಿದ ಅವರು, ಕಾನೂನಿನ ಪ್ರಕಾರ ಟೆಂಡರ್‌ ಪ್ರಕ್ರಿಯೆ ನಡೆಸಲಾಗಿದೆ. ಕೆಲವು ಕಾನೂನಾತ್ಮಕ ಅಡೆತಡೆಗಳನ್ನು ಬಗೆಹರಿಸಿ ಶೀಘ್ರದಲ್ಲೇ ಸಮರ್ಪಕ ವ್ಯವಸ್ಥೆ ಜಾರಿಗೆ ತರಲಾಗುತ್ತದೆ ಎಂದರು.

ಅನುದಾನ ಕೊರತೆಗೆ ಬಿಜೆಪಿ ಸರ್ಕಾರವೇ ಕಾರಣ

ಹಿಂದಿನ ಸರ್ಕಾರದ ಅವಧಿಯಲ್ಲಿ ಹಣಕಾಸಿನ ನಿಯಂತ್ರಣವಿಲ್ಲದೇ ಅತಿಯಾದ ಟೆಂಡರ್‌ಗಳನ್ನು ಕರೆಯಲಾಗಿದ್ದು, ಅದರ ಪರಿಣಾಮವನ್ನು ಈಗಿನ ಸರ್ಕಾರ ಎದುರಿಸುತ್ತಿದೆ ಎಂದು ಡಿ.ಕೆ. ಶಿವಕುಮಾರ್‌ ಆರೋಪಿಸಿದರು. “ಹಣಕಾಸು ಲಭ್ಯತೆ ಇಲ್ಲದೇ ಇದ್ದರೂ ಕೆಲಸಗಳನ್ನು ಆರಂಭಿಸಲಾಗಿದೆ. ಉದಾಹರಣೆಗೆ 10 ಸಾವಿರ ಕೋಟಿ ಅನುದಾನ ಇದ್ದರೆ 30-40 ಸಾವಿರ ಕೋಟಿ ಮೌಲ್ಯದ ಟೆಂಡರ್‌ಗಳನ್ನು ಕರೆಯಲಾಗಿದೆ. ಇದರಿಂದ ಬಿಲ್‌ಗಳ ಒತ್ತಡ ಹೆಚ್ಚಾಗಿದೆ. ಇದಕ್ಕೆ ಪೂರ್ಣ ಹೊಣೆಗಾರಿಕೆ ಬಿಜೆಪಿ ಸರ್ಕಾರದ್ದೇ” ಎಂದು ಹೇಳಿದರು.

ಗುತ್ತಿಗೆದಾರರ ಸಂಘ ಕಮಿಷನ್‌ ಆರೋಪ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ದೂರು ಇದ್ದರೆ ಕಾನೂನುಬದ್ಧವಾಗಿ ಸಲ್ಲಿಸಲಿ. ಆದರೆ ಕಾಮಗಾರಿಗಳನ್ನು ನಿಲ್ಲಿಸುವ ಮೂಲಕ ಒತ್ತಡ ತರುವ ಕ್ರಮ ಸರಿ ಅಲ್ಲ ಎಂದು ಹೇಳಿದರು. “ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ ಅನುದಾನವಿಲ್ಲದೇ ಕೆಲಸಗಳನ್ನು ಕೈಗೊಳ್ಳಬೇಡಿ ಎಂದು ಹೇಳಲಾಗಲಿಲ್ಲವೇ? ಆದರೂ ಏಕೆ ಕೆಲಸಗಳನ್ನು ಆರಂಭಿಸಿದರು? ಹಣ ಇಲ್ಲವೆಂಬುದು ಗೊತ್ತಿದ್ದರೂ ಏಕೆ ಮುಂದುವರಿಸಿದರು?” ಎಂದು ಪ್ರಶ್ನಿಸಿದರು.

ಸರ್ಕಾರದ ದಾಖಲೆಗಳನ್ನು ಸಾರ್ವಜನಿಕರಿಗೆ ನೀಡಲು ತಾವು ಸಿದ್ಧ ಎಂದು ತಿಳಿಸಿದ ಅವರು, ಹಣಕಾಸಿನ ಶಿಸ್ತು ಮತ್ತು ಪಾರದರ್ಶಕತೆಯೊಂದಿಗೆ ಆಡಳಿತ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಒಟ್ಟಿನಲ್ಲಿ, ಸಾರ್ವಜನಿಕ ಆರೋಗ್ಯ ಮತ್ತು ನಗರ ಸ್ವಚ್ಛತೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ರಾಜಕೀಯ ಬ್ಲಾಕ್‌ಮೇಲ್‌ಗೆ ಮಣಿಯದೇ ಕಾನೂನು ಪ್ರಕಾರ ಕಸ ವಿಲೇವಾರಿ ಕಾರ್ಯ ಮುಂದುವರಿಯಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕಟ್ಟುನಿಟ್ಟಾಗಿ ಹೇಳಿದರು.

K.M.Sathish Gowda

Join WhatsApp

Join Now

Facebook

Join Now

Read more

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಪದಗ್ರಹಣ: ಧರ್ಮ–ಸಂಸ್ಕೃತಿ ಸಂರಕ್ಷಣೆಗೆ ಯುವಕರ ಸಂಘಟನೆ ಅಗತ್ಯ – ಬೆಕ್ಕಿನಕಲ್ಮಠ ಶ್ರೀ

ಸಾರಿಗೆ ಕಾರ್ಮಿಕರ ಸಂಕಷ್ಟಕ್ಕೆ ಸರ್ಕಾರವೇ ಕಾರಣ: 38 ತಿಂಗಳ ಬಾಕಿ ವೇತನ ತಕ್ಷಣ ಪಾವತಿಸಲಿ – ಬಿ.ವೈ. ವಿಜಯೇಂದ್ರ

ವಿಧಾನಸೌಧದಲ್ಲಿ ಮಾಧ್ಯಮ ನಿರ್ಬಂಧ: ರಾಜ್ಯ ಸರ್ಕಾರ ವಿರುದ್ಧ ಬಿ.ವೈ.ವಿಜಯೇಂದ್ರ ಆಕ್ರೋಶ

2026-27ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆ: ವಿಧಾನಸೌಧದಲ್ಲಿ ಸಿಎಂ ಸಮ್ಮುಖದಲ್ಲಿ ಹೆಚ್.ಆರ್. ಬಸವರಾಜಪ್ಪ ನೇತೃತ್ವದ ರೈತರ ಬೇಡಿಕೆಗಳು

ಈಚಘಟ್ಟದಲ್ಲಿ ನಾಳೆ ರೈತ ಹೋರಾಟ ಮತ್ತು ಗ್ರಾಮ ಘಟಕ ಉದ್ಘಾಟನೆ: ಹೆಚ್.ಆರ್. ಬಸವರಾಜಪ್ಪ ನೇತೃತ್ವದಲ್ಲಿ ರೈತ ಸಂಘಟನೆಗಳ ಎಚ್ಚರಿಕೆ

ಫೆಬ್ರವರಿ 18ರಂದು ಪ್ರದೀಪ್ ವಿ. ಎಲಿ ಅಧಿಕಾರ ಸ್ವೀಕಾರ: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಜಿಲ್ಲಾ ಘಟಕಕ್ಕೆ ಹೊಸ ನಾಯಕತ್ವ

Leave a Comment