ಶಿವಮೊಗ್ಗ: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ಶಿವಮೊಗ್ಗ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇಂದು ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ನೆರವೇರಿತು.
ಪೂಜ್ಯ ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಈ ಸಮಾರಂಭದಲ್ಲಿ ಬೆಕ್ಕಿನಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಬಿಳಿಕಿ ಹೀರೆಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಹಾಗೂ ಮಳಲಿ ಮಠದ ಶ್ರೀ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿದರು. ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಎಸ್.ಎಸ್. ಜ್ಯೋತಿಪ್ರಕಾಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೀರಶೈವ ಲಿಂಗಾಯತ ಮಠಗಳು ಮತ್ತು ಸಮಾಜ ಕೈಜೋಡಿಸಬೇಕು: ಪೂಜ್ಯರ ಸಂದೇಶ
ಗುರುಗಳು ತಮ್ಮ ಆಶೀರ್ವಚನದಲ್ಲಿ, “ಮಠಗಳು ಸರಿ ದಾರಿಯಲ್ಲಿ ಇದ್ದರೆ ಸಮಾಜದ ಭಕ್ತರೂ ಸರಿ ದಾರಿಯಲ್ಲಿ ಇರುತ್ತಾರೆ. ಮಠ–ಸಮಾಜದ ಸಂಬಂಧದಲ್ಲಿ ಅಸಮರ್ಪಕತೆ ಉಂಟಾದರೆ ಮುಂದಿನ ದಿನಗಳಲ್ಲಿ ಹಲವು ಸಮಸ್ಯೆಗಳು ಎದುರಾಗಬಹುದು. ಈ ಆತಂಕವನ್ನು ಮನಗಂಡು ಹಾನಗಲ್ ಕುಮಾರಸ್ವಾಮಿ ಅವರು ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಸ್ಥಾಪಿಸಿದ್ದರು. ಅವರ ಸಂಘಟನಾ ದಕ್ಷತೆಯ ಫಲವಾಗಿ ಇಂದು ಮಠಾಧೀಶರು ಮತ್ತು ಸಮಾಜ ಬೆಳವಣಿಗೆಯ ದಾರಿಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ,” ಎಂದು ಹೇಳಿದರು.

ಇದೇ ವೇಳೆ ಯುವಜನತೆಗೆ ವಿಶೇಷವಾಗಿ ಸಂದೇಶ ನೀಡಿದ ಗುರುಗಳು, “ಇಂದಿನ ಯುವಕರು ವೀರಶೈವ ಧರ್ಮದ ಆಚಾರ–ವಿಚಾರ, ಧಾರ್ಮಿಕ ಪದ್ಧತಿಗಳನ್ನು ಮರೆಯುವಂತಾಗಬಾರದು. ಲಿಂಗಧಾರಣೆ ಹಾಗೂ ಇಷ್ಟಲಿಂಗ ಪೂಜೆ ಮಾಡುವ ಸಂಪ್ರದಾಯವನ್ನು ಮುಂದುವರಿಸುವುದು ಅತ್ಯಗತ್ಯ. ಸಂಘಟನೆಯು ಯುವಕರಿಗೆ ಮಾರ್ಗದರ್ಶನ ನೀಡುವ ಮೂಲಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ತಿಳಿಸಿ, ಅವರನ್ನು ಸಂಘಟಿತ ಶಕ್ತಿಯನ್ನಾಗಿ ರೂಪಿಸಬೇಕು,” ಎಂದು ಕರೆ ನೀಡಿದರು.

ಪ್ರದೀಪ್ ವಿ. ಎಲಿ ಜಿಲ್ಲಾ ಅಧ್ಯಕ್ಷರಾಗಿ ಪದಗ್ರಹಣ
ಈ ಸಂದರ್ಭದಲ್ಲಿ ಪ್ರದೀಪ್ ವಿ. ಎಲಿ ಅವರು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ನೂತನ ಜಿಲ್ಲಾ ಅಧ್ಯಕ್ಷರಾಗಿ ಪದಗ್ರಹಣ ಮಾಡಿದರು. ಶಿವಮೊಗ್ಗ ನಗರದ ಉದ್ಯಮಿಯಾಗಿರುವ ಅವರು ತಮ್ಮ ಸಾಮಾಜಿಕ ಕಳಕಳಿಯಿಂದಲೇ ಗುರುತಿಸಿಕೊಂಡಿದ್ದಾರೆ. ಉದ್ಯಮದ ಜೊತೆಗೆ ಸಂಘಟನಾ ಕಾರ್ಯಕ್ಕೂ ಕೈಜೋಡಿಸಿರುವುದು ಶ್ಲಾಘನೀಯ ಬೆಳವಣಿಗೆ ಎಂದು ಗುರುಗಳು ಮೆಚ್ಚುಗೆ ವ್ಯಕ್ತಪಡಿಸಿದರು.

“ಪ್ರದೀಪ್ ವಿ. ಎಲಿ ಅವರ ನೇತೃತ್ವದಲ್ಲಿ ಸಂಘಟನೆ ಇನ್ನಷ್ಟು ಬಲವಾಗಿ ಬೆಳೆಯಲಿ. ಸಮಾಜದಲ್ಲಿ ಹೊಸ ಚೇತನ ಮೂಡಿ, ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಯೊಂದಿಗೆ ಕೈಜೋಡಿಸಲಿ,” ಎಂದು ಬೆಕ್ಕಿನಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಶುಭಹಾರೈಸಿದರು.
ಹುದ್ದೆಗಳ ಹಸ್ತಾಂತರವಲ್ಲ, ಸಂಘಟನಾ ನವಯುಗದ ಆರಂಭ: ಗುರುಗಳ ಆಶೀರ್ವಾದದಲ್ಲಿ ವೀರಶೈವ ಲಿಂಗಾಯತ ಸಮಾಜದ ಬಲವರ್ಧನೆಗೆ ಹೊಸ ಸಂಕಲ್ಪ
ಈ ಪದಗ್ರಹಣ ಸಮಾರಂಭವು ಕೇವಲ ಹುದ್ದೆಗಳ ಹಸ್ತಾಂತರವಷ್ಟೇ ಅಲ್ಲ, ವೀರಶೈವ ಲಿಂಗಾಯತ ಸಮಾಜದ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಸಂಘಟನಾ ಬಲವರ್ಧನೆಗೆ ಹೊಸ ಅಧ್ಯಾಯ ಆರಂಭವಾದ ಕ್ಷಣವಾಗಿ ಗುರುತಿಸಲ್ಪಟ್ಟಿತು. ಗುರುಗಳ ಆಶೀರ್ವಾದ, ಹಿರಿಯರ ಮಾರ್ಗದರ್ಶನ ಮತ್ತು ಯುವಜನರ ಸಕ್ರಿಯ ಭಾಗವಹಿಸುವಿಕೆಯಿಂದ ಸಂಘಟನೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯಲಿದೆ ಎಂಬ ವಿಶ್ವಾಸ ವ್ಯಕ್ತವಾಯಿತು.

ಯುವಜನತೆಗೆ ಮಾರ್ಗದರ್ಶನ – ಸಂಘಟನೆಯ ಮುಂದಿನ ದಿಕ್ಕು
ನೂತನ ಅಧ್ಯಕ್ಷ ಪ್ರದೀಪ್ ವಿ. ಎಲಿ ಅವರು ಮಾತನಾಡಿ ಸಂಘಟನೆಯನ್ನು ತಾಲೂಕು ಮತ್ತು ಗ್ರಾಮ ಮಟ್ಟದವರೆಗೆ ವಿಸ್ತರಿಸುವ ಸಂಕಲ್ಪ ವ್ಯಕ್ತಪಡಿಸಿದರು. ಯುವಕರಿಗೆ ವೀರಶೈವ ಲಿಂಗಾಯತ ಧರ್ಮದ ತತ್ವಗಳು, ಆಚರಣೆಗಳು, ಸಂಪ್ರದಾಯಗಳ ಕುರಿತು ತರಬೇತಿ ಶಿಬಿರಗಳು, ಧಾರ್ಮಿಕ ಉಪನ್ಯಾಸಗಳು ಹಾಗೂ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸದಸ್ಯರನ್ನು ಸಕ್ರಿಯವಾಗಿ ಸಂಘಟಿಸುವುದು, ಮಹಿಳೆಯರು ಮತ್ತು ಯುವಕರಿಗೆ ಪ್ರತ್ಯೇಕ ವೇದಿಕೆ ಕಲ್ಪಿಸುವುದು, ಮಠಾಧೀಶರ ಮಾರ್ಗದರ್ಶನದಲ್ಲಿ ಧರ್ಮಜಾಗೃತಿ ಅಭಿಯಾನಗಳನ್ನು ನಡೆಸುವುದು ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸುವ ಉದ್ದೇಶವನ್ನು ಅವರು ಹಂಚಿಕೊಂಡರು.

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ತ್ಯಾಜವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ‘ಸಾತ್ವಿಕನುಡಿ’ ಪತ್ರಿಕೆಯ ಸಂಪಾದಕರಾದ ಸತೀಶ್ ಹೆಚ್.ಎಂ (ಮುಂಚೇಮನೆ) ಅವರಿಗೆ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಸಮಾಜ ಹಾಗೂ ಸಹಕಾರ ಕ್ಷೇತ್ರದಲ್ಲಿ ಅವರು ನೀಡಿರುವ ಸೇವೆಯನ್ನು ಮೆಚ್ಚಿ ಸಂಘಟನೆಯ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದರು.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ರುದ್ರಮುನಿ ಸಜ್ಜನ್, ಎಸ್.ಪಿ. ದಿನೇಶ್, ಬಳ್ಳೆಕೆರೆ ಸಂತೋಷ್, ಶ್ರೀಮತಿ ಅನಿತಾ ರವಿಶಂಕರ್, ವಿರೂಪಾಕ್ಷಪ್ಪ ಜೆ., ಹೆಚ್.ವಿ. ಮಹೇಶ್ವರಪ್ಪ ಸೇರಿದಂತೆ ಸಂಘಟನೆಯ ನೂತನ ಜಿಲ್ಲಾ ಅಧ್ಯಕ್ಷ ಪ್ರದೀಪ್ ವಿ. ಎಲಿ, ಉಪಾಧ್ಯಕ್ಷರಾದ ಉಮೇಶ್ ಕೆ.ಬಿ., ಉಮೇಶ್ ಹಿರೇಮಠ, ರಮೇಶಣ್ಣ ಮಲ್ಲಿಗೇನಹಳ್ಳಿ, ಪ್ರಧಾನ ಕಾರ್ಯದರ್ಶಿ ಎಂ. ಮುತ್ತಣ್ಣ, ಧನರಾಜ್ ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.





