ಬೆಂಗಳೂರು: ನಗರದ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು, “ಇದು ಕೇವಲ ಸಂಘಟನಾತ್ಮಕ ಸಭೆಯಲ್ಲ; ಆತ್ಮಪರಿಶೀಲನೆ ಮತ್ತು ಭವಿಷ್ಯದ ಸಂಕಲ್ಪದ ಸಭೆ” ಎಂದು ಹೇಳಿದರು.
ನರೇಂದ್ರ ಮೋದಿಯವರ ವಿಕಸಿತ ಭಾರತ ಪರಿಕಲ್ಪನೆಯನ್ನು ಮನನ ಮಾಡುವುದರೊಂದಿಗೆ, ರಾಜ್ಯದಲ್ಲಿ ಭ್ರಷ್ಟ ಆಡಳಿತವನ್ನು ದೂರಿಸಿ ಮತ್ತೆ ಬಿಜೆಪಿ ಸರ್ಕಾರವನ್ನು ಸ್ಥಾಪಿಸುವ ಗುರಿಯೊಂದಿಗೆ ಈ ಸಭೆ ನಡೆಯುತ್ತಿದೆ ಎಂದು ಅವರು ವಿವರಿಸಿದರು. ಛತ್ರಪತಿ ಶಿವಾಜಿ ಮಹಾರಾಜರ ಸಂಘರ್ಷ ಮತ್ತು ರಾಷ್ಟ್ರಭಕ್ತಿ ಇಂದಿಗೂ ನಮ್ಮೆಲ್ಲರಿಗೂ ಪ್ರೇರಣೆಯಾಗಿವೆ ಎಂದು ಉಲ್ಲೇಖಿಸಿದರು.

ಬಿಜೆಪಿ ಸಾಂಸ್ಕೃತಿಕ ರಾಷ್ಟ್ರವಾದದ ಆಂದೋಲನವಾಗಿದ್ದು, ಪಕ್ಷದ ಉದಯದ ಸಂದರ್ಭದಲ್ಲಿ “ಕತ್ತಲೆ ದೂರವಾಗಿ ಕಮಲ ಅರಳಲಿದೆ” ಎಂದು ಹೇಳಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಮಾತುಗಳನ್ನು ಸ್ಮರಿಸಿದರು. ಜನಸಂಘದ ಮೂಲಕ ಬಿತ್ತಿದ ಬೀಜ ಇಂದು ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿದೆ ಎಂದರು. ಪಕ್ಷದ ಸ್ಥಾಪಕರಿಂದ ಹಿಡಿದು ತಳಮಟ್ಟದ ಕಾರ್ಯಕರ್ತರ ತನಕ ಎಲ್ಲರ ಪರಿಶ್ರಮವೇ ಈ ಬೆಳವಣಿಗೆಗೆ ಮೂಲ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು.

ಕರ್ನಾಟಕದಲ್ಲಿ ಪಕ್ಷವನ್ನು ಬಲಪಡಿಸುವಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಕಾಂಗ್ರೆಸ್ ಆಡಳಿತದ ವಿರುದ್ಧ ಟೀಕೆ
ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ನ ಇತಿಹಾಸವನ್ನು ಉಲ್ಲೇಖಿಸಿ, ವಿಪಕ್ಷ ನಾಯಕರನ್ನು ಜೈಲಿಗೆ ಕಳುಹಿಸಿದ್ದ ಘಟನೆಗಳನ್ನು ಖಂಡಿಸಿದರು. “ಅದೇ ನಾಯಕರು ಇಂದು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳುವುದು ವಿಚಿತ್ರ” ಎಂದು ಟೀಕಿಸಿದರು. ವಿಕಸಿತ ಭಾರತ ನಿರ್ಮಾಣದ ಗುರಿ ಸಾಧಿಸಲು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಿದೆ ಎಂದರು.
ರಾಜ್ಯದಲ್ಲಿ ಭ್ರಷ್ಟಾಚಾರ, ಆರ್ಥಿಕ ಸಂಕಷ್ಟ ಮತ್ತು ಅಸಮರ್ಥ ಆಡಳಿತ ಮುಂದುವರೆದಿದೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಸ್ಥಾನಕ್ಕಾಗಿ ಆರಂಭದಲ್ಲೇ ಒಳಜಗಳಗಳು ನಡೆದಿದ್ದು, ಅದು ಇನ್ನೂ ಮುಂದುವರಿದಿದೆ ಎಂದು ಹೇಳಿದರು. ಇದು ಜನಾದೇಶಕ್ಕೆ ಅವಮಾನವಾಗಿದ್ದು, ಜನರು ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ ಪ್ರಶ್ನಿಸುತ್ತಿದ್ದಾರೆ ಎಂದರು. ರಾಜ್ಯದ ಸಾಲದ ಪ್ರಮಾಣ ಹೆಚ್ಚುತ್ತಿರುವುದರ ಕುರಿತು ಆತಂಕ ವ್ಯಕ್ತಪಡಿಸಿದರು.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ಸಂಕಲ್ಪ ಕೈಗೊಳ್ಳಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ತಳಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸಿ, ಮನೆಮನೆಗೆ ತೆರಳಿ ಕಾಂಗ್ರೆಸ್ನ ವೈಫಲ್ಯಗಳನ್ನು ಜನರಿಗೆ ತಲುಪಿಸುವಂತೆ ಸೂಚಿಸಿದರು.

2028ರಲ್ಲಿ ಬಿಜೆಪಿ ಗೆಲುವು ಖಚಿತ – ರಾಧಾಮೋಹನ್ ದಾಸ್ ಅಗ್ರವಾಲ್
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗ್ರವಾಲ್ ಮಾತನಾಡಿ, 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯ ಘಟಕದ ನಿರಂತರ ಹೋರಾಟ ಮತ್ತು ಸಂಘಟನಾ ಶಕ್ತಿ ಮೆಚ್ಚುವಂತದ್ದು ಎಂದರು.
ರಾಜ್ಯದಲ್ಲಿ ಆರ್ಎಸ್ಎಸ್ ಚಟುವಟಿಕೆಗಳನ್ನು ನಿಷೇಧಿಸುವ ಪ್ರಯತ್ನವನ್ನು ಅವರು ಖಂಡಿಸಿದರು. ವಕ್ಫ್ ಅತಿಕ್ರಮಣ ವಿರೋಧಿ ಹೋರಾಟಕ್ಕೆ ಬಿಜೆಪಿ ರಾಜ್ಯ ಘಟಕವನ್ನು ಅಭಿನಂದಿಸಿದರು. ಪರಿಶಿಷ್ಟ ವರ್ಗಗಳಿಗೆ ಮೀಸಲಾದ ಸೌಲಭ್ಯಗಳ ಹಂಚಿಕೆ ಬಗ್ಗೆ ಪ್ರಶ್ನೆ ಎತ್ತಿ, ಸರ್ಕಾರದ ನೀತಿಗಳನ್ನು ಟೀಕಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದರು.
ಹಾಗೆಯೇ ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದ ಗೌಡ, ಜಗದೀಶ್ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ. ಸಿ.ಎನ್. ಅಶ್ವತ್ಥನಾರಾಯಣ್, ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯ ಸಚೇತಕರಾದ ದೊಡ್ಡನಗೌಡ ಪಾಟೀಲ್, ಎನ್. ರವಿಕುಮಾರ್ ಸೇರಿದಂತೆ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಚಿವರು ಹಾಗೂ ಕಾರ್ಯಕಾರಿಣಿ ಸದಸ್ಯರು ಉಪಸ್ಥಿತರಿದ್ದರು.
ರಾಜ್ಯ ಕಾರ್ಯಕಾರಿಣಿ ಸಭೆಯು 2028ರ ಚುನಾವಣೆಯನ್ನು ಗುರಿಯಾಗಿಸಿಕೊಂಡು ಸಂಘಟನಾ ಬಲವರ್ಧನೆ, ವೈಚಾರಿಕ ಪುನರುಜ್ಜೀವನ ಹಾಗೂ ಜನಸಂಪರ್ಕ ವಿಸ್ತರಣೆಗೆ ದಿಕ್ಕು ತೋರಿದ ಮಹತ್ವದ ವೇದಿಕೆಯಾಗಿ ಪರಿಣಮಿಸಿದೆ.






