ಬೆಂಗಳೂರು: ಸಾಹಸ, ಸಂಕಲ್ಪ ಮತ್ತು ಸ್ವಾಭಿಮಾನಗಳ ಸಮನ್ವಯವಾಗಿರುವ ಅಪರೂಪದ ಸಾಧಕಿಯನ್ನು ಸನ್ಮಾನಿಸಲು ನಾಳೆ ತರಳಬಾಳು ಕೇಂದ್ರದಲ್ಲಿ ಭಕ್ತಿಪೂರ್ವಕ ಹಾಗೂ ವೈಭವಯುತ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಮೊಮ್ಮಗಳಾದ ಅನನ್ಯಾ ಶಿವಪ್ರಸಾದ್ ಅವರು ಅಟ್ಲಾಂಟಿಕ್ ಮಹಾಸಾಗರವನ್ನು ಏಕಾಂಗಿಯಾಗಿ ದಾಟಿ ವಿಶ್ವದ ಗಮನ ಸೆಳೆದಿರುವ ಹಿನ್ನೆಲೆ, ‘ತೊರೆಯ ಹಂಬಲ’ ಎಂಬ ಶೀರ್ಷಿಕೆಯಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ.

ಇಂಗ್ಲೆಂಡ್‌ನಲ್ಲಿ ಹುಟ್ಟಿ ಬೆಳೆದಿದ್ದರೂ, ಕನ್ನಡ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಹೃದಯಂಗಮ ಮಾಡಿಕೊಂಡಿರುವ ಅನನ್ಯಾ, ವಿದ್ಯುತ್ ಅಥವಾ ಡೀಸಲ್ ಯಂತ್ರಗಳ ನೆರವಿಲ್ಲದ ದೋಣಿಯನ್ನು ತನ್ನ ತೋಳ್ಬಲದಿಂದಲೇ ಸಾಗಿಸಿ ಅಟ್ಲಾಂಟಿಕ್ ಮಹಾಸಾಗರವನ್ನು ದಾಟಿದ ಧೀರ ಯುವತಿ. ಸುಮಾರು ಮೂರು ಸಾವಿರ ಮೈಲುಗಳ ಈ ಸಮುದ್ರಯಾನವು 52 ದಿನ, 5 ಗಂಟೆ, 44 ನಿಮಿಷಗಳ ಅವಧಿಯಲ್ಲಿ ಪೂರ್ಣಗೊಂಡಿದೆ. ‘ಒಡೆಸ್ಸಿ (Odyssey)’ ಎಂಬ ಹೆಸರಿನ ದೋಣಿಯಲ್ಲಿ ಅವರು ಕೈಗೊಂಡ ಈ ಸಾಹಸಯಾನ, ಐದು ಶತಮಾನಗಳ ಹಿಂದೆ ಕ್ರಿಸ್ಟೋಫರ್ ಕೊಲಂಬಸ್ ಸಾಗಿದ ಮಾರ್ಗವನ್ನೇ ಅನುಸರಿಸಿರುವುದು ವಿಶೇಷ.
ಕೆನರಿ ದ್ವೀಪಗಳ ಲಾ ಗೊಮೆರಾದಿಂದ ವೆಸ್ಟ್ ಇಂಡೀಸ್‌ನ ಆಂಟಿಗುವಾ ದ್ವೀಪದವರೆಗೆ ನಡೆದ ಈ ದೀರ್ಘ ಸಮುದ್ರಯಾನವು ಶಾರೀರಿಕ ಸಾಮರ್ಥ್ಯ ಮಾತ್ರವಲ್ಲ, ಮಾನಸಿಕ ದೃಢತೆ, ಧೈರ್ಯ ಮತ್ತು ಅಪಾರ ಸಂಕಲ್ಪದ ಪ್ರತೀಕವಾಗಿದೆ. ಇಂತಹ ಮಹಾಸಾಧನೆ ಮೂಲಕ ಅನನ್ಯಾ ಕನ್ನಡ ನಾಡಿನ ಹೆಮ್ಮೆಯನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಎತ್ತಿ ಹಿಡಿದಿದ್ದಾರೆ.

ಈ ಅಪರೂಪದ ಸಾಧಕಿಯ ಅಭಿನಂದನಾ ಕಾರ್ಯಕ್ರಮವು 22-02-2026 ರ ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಬೆಂಗಳೂರಿನ ತರಳಬಾಳು ಕೇಂದ್ರದಲ್ಲಿ ನಡೆಯಲಿದೆ. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಪರಮ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ಭಕ್ತಿಪೂರ್ವಕವಾಗಿ ಸಾಧಕಿಯ ಧೈರ್ಯ, ಶ್ರದ್ಧೆ ಮತ್ತು ತ್ಯಾಗಮಯ ಮನೋಭಾವವನ್ನು ಕೊಂಡಾಡಿರುವ ಪೂಜ್ಯರು, “ಯುವಜನತೆಗೆ ಇಂತಹ ಸಾಧನೆಗಳು ದಾರಿದೀಪವಾಗಬೇಕು. ಆತ್ಮವಿಶ್ವಾಸ ಮತ್ತು ಸಂಕಲ್ಪ ಇದ್ದರೆ ಅಸಾಧ್ಯವೆಂಬುದೇ ಇಲ್ಲ” ಎಂದು ಆಶೀರ್ವಚನ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಖ್ಯಾತ ಸಾಹಿತಿ ಬಿ.ಆರ್. ಲಕ್ಷಣ್ ರಾವ್ ಅವರು ಭಾಗವಹಿಸಲಿದ್ದಾರೆ. ಅನನ್ಯಾಳ ತಂದೆ-ತಾಯಿಗಳಾದ ಇಂಗ್ಲೆಂಡ್‌ನ ಖ್ಯಾತ ಮಕ್ಕಳ ರೋಗ ತಜ್ಞರಾದ ಡಾ. ಶಿವಪ್ರಸಾದ್ ಹಾಗೂ ಡಾ. ಪೂರ್ಣಿಮ ಅವರು ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಮಗಳ ಸಾಧನೆ ಕುರಿತು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಶ್ರೀಮತಿ ಶ್ವೇತಾ ಹಿರೇಮಠ್ ಮತ್ತು ವೃಂದದವರಿಂದ ಗಾಯನ ಗೋಷ್ಠಿ, ಅನುಸ್ಪೃತಿ ತಂಡದಿಂದ ನೃತ್ಯ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮದ ನಂತರ ದಾಸೋಹ ವ್ಯವಸ್ಥೆ ಮಾಡಲಾಗಿದೆ.

ಶೈಕ್ಷಣಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ತರಳಬಾಳು ಮಠವು ಸದಾ ಯುವಜನತೆಗೆ ಪ್ರೇರಣೆಯ ದೀಪವಾಗಿದ್ದು, ಇಂತಹ ಸಾಧಕರನ್ನು ಗೌರವಿಸುವ ಮೂಲಕ ಸಮಾಜದಲ್ಲಿ ಧೈರ್ಯ ಮತ್ತು ನಂಬಿಕೆಯ ಸಂದೇಶವನ್ನು ಹರಡುತ್ತಿದೆ.
ಅಪರೂಪದ ಸಾಧಕಿಯ ಅಭಿನಂದನಾ ಕಾರ್ಯಕ್ರಮಕ್ಕೆ ನಗರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತರಳಬಾಳು ಕೇಂದ್ರದ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಾತಿ ಅವರು ವಿನಂತಿಸಿದ್ದಾರೆ.










