ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

‘ಇಷ್ಟಲಿಂಗ ದೀಕ್ಷೆಗೆ ವರ್ಣ–ವರ್ಗ ಭೇದವಿಲ್ಲ’: ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರುಗಳಿಂದ ಪಶ್ಚಿಮ ಬಂಗಾಳದ ಯುವಕರಿಗೆ ಇಷ್ಟಲಿಂಗ ದೀಕ್ಷೆ

On: February 21, 2026 10:40 PM
Follow Us:

ವಾರಾಣಸಿ (ಉತ್ತರ ಪ್ರದೇಶ): “ಜೀವನದ ನಡೆನುಡಿಯಲ್ಲಿ ಶುದ್ಧತೆ, ಭಕ್ತಿ ಮತ್ತು ಸದಾಚಾರವನ್ನು ಅಳವಡಿಸಿಕೊಂಡ ಪ್ರತಿಯೊಬ್ಬರಿಗೂ ಇಷ್ಟಲಿಂಗ ದೀಕ್ಷೆಗೆ ಅರ್ಹತೆ ಇದೆ. ಇಷ್ಟಲಿಂಗ ದೀಕ್ಷೆ ಪಡೆಯಲು ವರ್ಣ–ವರ್ಗಗಳ ಯಾವ ಭೇದವೂ ಇರುವುದಿಲ್ಲ,” ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಸ್ಪಷ್ಟಪಡಿಸಿದರು.

ಉತ್ತರ ಪ್ರದೇಶದ ಪವಿತ್ರ ಕ್ಷೇತ್ರವಾದ ವಾರಾಣಸಿಯಲ್ಲಿರುವ ಧರ್ಮಪೀಠದಲ್ಲಿ ನಡೆದ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯ ಬನಮಾಲಿಪಾರ ಗ್ರಾಮ ನಿವಾಸಿಗಳಾದ ರುದ್ರೇಶ ಬಿಸ್ವಾಸ್ ಮತ್ತು ರಕ್ತಿಮ್ ಜೋರ್ದಾರ್ ಎಂಬ ಇಬ್ಬರು ಯುವ ವಿದ್ಯಾರ್ಥಿಗಳಿಗೆ ಜಗದ್ಗುರುಗಳು ಇಷ್ಟಲಿಂಗ ದೀಕ್ಷೆ ಅನುಗ್ರಹಿಸಿ ಆಶೀರ್ವಚನ ನೀಡಿದರು.

ದೀಕ್ಷೆ – ಆತ್ಮಜಾಗೃತಿಯ ದಾರಿ

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಜಗದ್ಗುರುಗಳು, “ದೀಕ್ಷೆ ಎಂದರೆ ಕೇವಲ ಆಚರಣೆ ಅಲ್ಲ; ಅದು ಬದುಕಿನ ಚಿತ್ಕಳೆ. ಶ್ರೀಗುರು ಕರುಣಿಸುವ ಇಷ್ಟಲಿಂಗದ ಅನುಸಂಧಾನದಿಂದ ಅಂತರಂಗ ಶುದ್ಧೀಕರಣ ಸಾಧ್ಯವಾಗುತ್ತದೆ. ಆ ಅನುಭವದ ಬಯಲಬೆಳಗಿನ ಮಹಾಪ್ರಕಾಶದಲ್ಲಿ ಜೀವಾತ್ಮನು ಪರಮಾತ್ಮನ ದಿವ್ಯಸಾನ್ನಿಧ್ಯವನ್ನು ಅನುಭವಿಸುವುದು ಮೋಕ್ಷ ಮಾರ್ಗದ ತಿರುಳು,” ಎಂದು ವಿವರಣೆ ನೀಡಿದರು.

ಇಷ್ಟಲಿಂಗವು ಭಕ್ತ ಮತ್ತು ಪರಮಾತ್ಮನ ನಡುವಿನ ನೇರ ಸಂಬಂಧದ ಪ್ರತೀಕವಾಗಿದ್ದು, ಪ್ರತಿದಿನದ ಆರಾಧನೆ ಮೂಲಕ ಆತ್ಮಾನುಭವದತ್ತ ಸಾಗುವ ಮಾರ್ಗವನ್ನು ವೀರಶೈವ ಧರ್ಮ ಬೋಧಿಸುತ್ತದೆ ಎಂದು ಅವರು ತಿಳಿಸಿದರು.

ಇಷ್ಟಲಿಂಗ ಧಾರಣೆ ಮತ್ತು ಮಂತ್ರೋಪದೇಶ

ಪಶ್ಚಿಮ ಬಂಗಾಳದ ಯುವಕರಲ್ಲಿ ಇಷ್ಟಲಿಂಗಾರ್ಚನೆಯ ಆಸಕ್ತಿ, ನಿಷ್ಠೆ ಮತ್ತು ಭಕ್ತಿಯ ಬದ್ಧತೆಯನ್ನು ಪರಿಶೀಲಿಸಿದ ನಂತರ ಜಗದ್ಗುರುಗಳು ವೀರಶೈವ ಸಿದ್ಧಾಂತಾನುಸಾರ ದೀಕ್ಷೆ ನೀಡಿ ಇಷ್ಟಲಿಂಗ ಧಾರಣೆ ಮಾಡಿಸಿದರು. ಶಿವಪಂಚಾಕ್ಷರಿ ಮಹಾಮಂತ್ರವನ್ನು ಉಪದೇಶಿಸಿ, ಪೂಜೆ ಮತ್ತು ಮಂತ್ರಜಪದ ವಿಧಿ–ವಿಧಾನಗಳನ್ನು ವಿವರಿಸಿದರು.

ಹೆಚ್ಚಿನ ಅಧ್ಯಯನಕ್ಕಾಗಿ ಹಿಂದಿ ಭಾಷೆಯ ‘ಶ್ರೀಸಿದ್ಧಾಂತ ಶಿಖಾಮಣಿ’ ಸೇರಿದಂತೆ ಅಷ್ಟಾವರಣಗಳ ಮಹತ್ವವನ್ನು ಸಾರುವ ಗ್ರಂಥಗಳನ್ನು ಅನುಗ್ರಹಿಸಿ ಆಶೀರ್ವದಿಸಿದರು. ಪಶ್ಚಿಮ ಬಂಗಾಳದಲ್ಲಿ ವೀರಶೈವ ಧರ್ಮ ಜಾಗೃತಿ ಕಾರ್ಯಕ್ಕೆ ಮುಂದಾಗುವಂತೆ ಸೂಚಿಸಿ, ಆಸಕ್ತ ಭಕ್ತರನ್ನು ಕಾಶಿಗೆ ಕರೆದುಕೊಂಡು ಬಂದು ದೀಕ್ಷೆ ಪಡೆಯಲು ಪ್ರೇರೇಪಿಸುವಂತೆ ತಿಳಿಸಿದರು.

ಸಾಮಾಜಿಕ ಮಾಧ್ಯಮದಿಂದ ಧಾರ್ಮಿಕ ಪ್ರೇರಣೆ

ದೀಕ್ಷೆ ಪಡೆದ ರುದ್ರೇಶ ಬಿಸ್ವಾಸ್ ಮತ್ತು ರಕ್ತಿಮ್ ಜೋರ್ದಾರ್ ಮಾತನಾಡಿ, “ನಾವು ಇತ್ತಿಚೆಗೆ ಜಗದ್ಗುರುಗಳನ್ನು ನೇರವಾಗಿ ಭೇಟಿ ಮಾಡಿರಲಿಲ್ಲ. ಫೇಸ್ಬುಕ್, ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್ ಮೂಲಕ ಅವರ ಆಶೀರ್ವಚನಗಳನ್ನು ನಿರಂತರವಾಗಿ ಆಲಿಸಿ ಸನಾತನ ವೀರಶೈವ ಧರ್ಮದ ಮಹತ್ವವನ್ನು ಅರಿತುಕೊಂಡೆವು. ಅದರಿಂದ ಪ್ರಭಾವಿತರಾಗಿ ಇಷ್ಟಲಿಂಗ ದೀಕ್ಷೆ ಪಡೆಯಲು ನಿರ್ಧರಿಸಿ ಕಾಶಿ ಧರ್ಮಪೀಠಕ್ಕೆ ಬಂದೆವು,” ಎಂದು ಹೇಳಿದರು.

“ಜಗದ್ಗುರುಗಳು ಅತ್ಯಂತ ಆತ್ಮೀಯವಾಗಿ ಸ್ವೀಕರಿಸಿ ದೀಕ್ಷೆ ನೀಡಿದ ಬಳಿಕ ನಮ್ಮೊಳಗೆ ಒಂದು ವಿಶಿಷ್ಟ ಚೈತನ್ಯ ಮೂಡಿದೆ. ಇದು ನಮ್ಮ ಜೀವನದ ಹೊಸ ಅಧ್ಯಾಯದ ಆರಂಭ,” ಎಂದು ಅವರು ಭಾವುಕರಾಗಿ ಪ್ರತಿಕ್ರಿಯಿಸಿದರು.

ಧರ್ಮಜಾಗೃತಿಗೆ ಹೊಸ ಆಯಾಮ

ಪಶ್ಚಿಮ ಬಂಗಾಳದಂತಹ ದೂರದ ರಾಜ್ಯದಿಂದ ಯುವಕರು ಕಾಶಿಗೆ ಬಂದು ಇಷ್ಟಲಿಂಗ ದೀಕ್ಷೆ ಪಡೆಯುತ್ತಿರುವುದು ವೀರಶೈವ ಧರ್ಮದ ವಿಸ್ತಾರ ಮತ್ತು ಆಧ್ಯಾತ್ಮಿಕ ಪ್ರಭಾವವನ್ನು ತೋರಿಸುತ್ತದೆ. ವರ್ಣ–ವರ್ಗ ಭೇದಗಳ ಅಂತರವನ್ನು ಮೀರಿ ಸಮಾನತೆಯ ಸಂದೇಶ ಸಾರುವ ಇಷ್ಟಲಿಂಗ ದೀಕ್ಷೆ, ಇಂದಿನ ಸಮಾಜದಲ್ಲಿ ಧಾರ್ಮಿಕ ಸಮಾನತೆಯ ಚಿಂತನೆಗೆ ಬಲ ನೀಡುತ್ತಿದೆ.

ಈ ಕಾರ್ಯಕ್ರಮವು ಧರ್ಮಸಂಸ್ಕೃತಿಯ ವ್ಯಾಪ್ತಿಯನ್ನು ವಿಸ್ತರಿಸುವ ಜೊತೆಗೆ ಯುವಜನರಲ್ಲಿ ಆಧ್ಯಾತ್ಮಿಕ ಚೇತನೆಯನ್ನು ಜಾಗೃತಿಗೊಳಿಸುವ ಮಹತ್ವದ ಹೆಜ್ಜೆಯಾಗಿ ಗುರುತಿಸಲ್ಪಟ್ಟಿದೆ.

K.M.Sathish Gowda

Join WhatsApp

Join Now

Facebook

Join Now

Read more

34 ವರ್ಷಗಳ ನಂತರ ಮರುಕಳಿಸಿದ ಐತಿಹಾಸಿಕ ಕ್ಷಣ: ಮೇ 17 ರಂದು ಶಿವಮೊಗ್ಗದಲ್ಲಿ ಪಂಚಪೀಠಾಧೀಶರ ಭವ್ಯ ಅಡ್ಡಪಲ್ಲಕ್ಕಿ ಮಹೋತ್ಸವ; ಭಕ್ತರಿಗೆ ರಂಭಾಪುರಿ ಶ್ರೀಗಳ ಕರೆ

ತಾಯಿ ಎಂಬುದು ಕೇವಲ ಒಂದು ಪದವಲ್ಲ; ಅದು ಪ್ರೀತಿ, ತ್ಯಾಗ ಮತ್ತು ಕರ್ತವ್ಯದ ಪ್ರತಿರೂಪ: ಶ್ರೀ ಶಾಂತವೀರ ಮಹಾಸ್ವಾಮೀಜಿ

ಶಿವಮೊಗ್ಗದಲ್ಲಿ ಪಂಚಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ ಮಹೋತ್ಸವದ ಸಂಭ್ರಮ: ಅಲ್ಲಮಪ್ರಭು ಮೈದಾನದಲ್ಲಿ ಭೂಮಿ ಪೂಜೆ

ಪುರಲೆ ಗ್ರಾಮದಲ್ಲಿ ಪೂರ್ವಭಾವಿ ಸಭೆ: ಶ್ರೀ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಸಿದ್ಧತೆ

ಪಂಚಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ ಮಹೋತ್ಸವ ಹಾಗೂ ಬಿಎಸ್‌ವೈ ಅಭಿನಂದನಾ ಸಮಾರಂಭ: ಶಿವಮೊಗ್ಗ ಕಾರ್ಯಕ್ರಮಕ್ಕೆ ಭದ್ರಾವತಿಯಲ್ಲಿ ಸಿದ್ಧತಾ ಸಭೆ

ಶಿವಮೊಗ್ಗ: ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಭರದ ಸಿದ್ಧತೆ; “ಉತ್ಸವವನ್ನು ಐತಿಹಾಸಿಕವಾಗಿಸಿ” ಎಂದು ಆಯನೂರು ಮಂಜುನಾಥ್ ಕರೆ

Leave a Comment