ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಜಾತಿ ರಾಜಕಾರಣ: ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ತೀವ್ರ ವಾಗ್ದಾಳಿ

On: February 23, 2026 2:12 PM
Follow Us:

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಾಮಾಜಿಕ ನ್ಯಾಯ, ಜಾತಿ ರಾಜಕಾರಣ ಹಾಗೂ ಅಧಿಕಾರ ಹಂಚಿಕೆ ಕುರಿತಾಗಿ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ತಮ್ಮ ಹೇಳಿಕೆಯಲ್ಲಿ ಅವರು ನೇರವಾಗಿ ಮುಖ್ಯಮಂತ್ರಿಯನ್ನು ಉದ್ದೇಶಿಸಿ ಹಲವು ಆರೋಪಗಳನ್ನು ಮಾಡಿದ್ದಾರೆ.

“ನಾನು ಸುತ್ತಿಬಳಸಿ ಮಾತನಾಡುವವನು ಅಲ್ಲ. ನೇರವಾಗಿ ವಿಷಯಕ್ಕೇ ಬರುತ್ತೇನೆ,” ಎಂದು ಆರಂಭಿಸಿದ ಕುಮಾರಸ್ವಾಮಿ, “ಕುರ್ಚಿಗಾಗಿ ಜಾತಿಯನ್ನು ಎಳೆದು ತಂದಿದ್ದಾರೆ ಎಂಬುದು ತಮಾಷೆಗೆ ಹೇಳಿದ ಮಾತಲ್ಲ; ಸಂಪೂರ್ಣ ಗಂಭೀರವಾಗಿ ಹೇಳಿದ್ದೇನೆ. ತಮಾಷೆ ಎಂದಿಟ್ಟುಕೊಂಡರೂ ಇಷ್ಟೊಂದು ದೊಡ್ಡ ಪ್ರತಿಕ್ರಿಯೆ ನೀಡಬೇಕಾದ ಅಗತ್ಯವಿರಲಿಲ್ಲ,” ಎಂದು ಟೀಕಿಸಿದರು. ಮುಖ್ಯಮಂತ್ರಿಯವರು ತಮ್ಮ ಹೇಳಿಕೆಯನ್ನು ಅತಿಯಾಗಿ ಪ್ರತಿಕ್ರಿಯಿಸಿರುವುದು ಅವರು ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರುವುದಕ್ಕೆ ಸಾಕ್ಷಿಯೆಂದರು.

ಮುಂದೆ ಮಾತನಾಡಿದ ಅವರು, “ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಮಾತನಾಡುವ ನೀವು, ವಾಸ್ತವದಲ್ಲಿ ಸಾಮಾಜಿಕ ನ್ಯಾಯದ ಸಂಹಾರಿಯೇ,” ಎಂದು ಕಟುವಾಗಿ ಹೇಳಿದರು. ಮಾಜಿ ಪ್ರಧಾನಿ ದೇವೇಗೌಡ ಅವರ ರಾಜಕೀಯ ಬೆಂಬಲ ಮತ್ತು ಅವಕಾಶಗಳಿಂದಲೇ ಸಿದ್ದರಾಮಯ್ಯರು ಮೇಲೇರಿದರು ಎಂಬುದನ್ನು ಉಲ್ಲೇಖಿಸಿ, “ಅಂದು ಗೌಡರು ಸ್ವಜಾತಿ ಅಥವಾ ಕುಟುಂಬ ರಾಜಕಾರಣವನ್ನು ಮುಂದಿಟ್ಟಿದ್ದರೆ, ನಿಮಗೆ ಹಣಕಾಸು ಮಂತ್ರಿಯಾಗುವುದೇ ಅಲ್ಲ, ಕನಿಷ್ಠ ಒಂದು ನಿಗಮದ ಅಧ್ಯಕ್ಷ ಸ್ಥಾನವೂ ಸಿಕ್ಕಿರಲಿಲ್ಲ,” ಎಂದು ವಾಗ್ದಾಳಿ ನಡೆಸಿದರು. ದೇವೇಗೌಡರ ಶ್ರಮ ಮತ್ತು ತ್ಯಾಗದಿಂದ ಅನೇಕ ನಾಯಕರು ಬೆಳೆದಿದ್ದಾರೆ; ಅದನ್ನು ಮರೆತಿರುವುದು ಕೃತಘ್ನತೆ ಎಂದು ಅವರು ಆರೋಪಿಸಿದ್ದಾರೆ.

ಒಕ್ಕಲಿಗ ಸಮುದಾಯದ ನಾಯಕರ ಪಟ್ಟಿಯನ್ನು ಉಲ್ಲೇಖಿಸಿರುವ ವಿಚಾರವನ್ನೂ ಕುಮಾರಸ್ವಾಮಿ ಪ್ರಶ್ನಿಸಿದರು. “ಆ ಪಟ್ಟಿಯಲ್ಲಿರುವ ಎಲ್ಲರೂ ದೇವೇಗೌಡರ ಕಾಲದಲ್ಲಿ ವಿವಿಧ ಅಧಿಕಾರ ಸ್ಥಾನಗಳನ್ನು ಅನುಭವಿಸಿದ್ದಾರೆ. ಆಗ ಅವರು ಅಧಿಕಾರದಲ್ಲಿದ್ದ ಸ್ಥಾನಗಳಲ್ಲಿ ದೇವೇಗೌಡರೇ ಕೂತಿದ್ದರಾ? ಕುಟುಂಬವೇ ಮಿಗಿಲು ಎಂದು ಭಾವಿಸಿದ್ದರೆ, ಅವರಲ್ಲಿ ಒಬ್ಬರೂ ಶಾಸಕ, ಸಚಿವ ಅಥವಾ ಸಂಸದರಾಗುತ್ತಿರಲಿಲ್ಲ,” ಎಂದು ಪ್ರಶ್ನಿಸಿದರು. “ನೆರಳು ಕೊಟ್ಟ ವೃಕ್ಷಕ್ಕೆ ಕೊಡಲಿ ಹಾಕುವಂತಾಗಿದೆ ನಿಮ್ಮ ನಡೆ,” ಎಂದು ಟೀಕಿಸಿದ್ದಾರೆ.

ಹಿರಿಯ ನಾಯಕರುಗಳಾದ ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ ಹಾಗೂ ಎಸ್.ಎಂ.ಕೃಷ್ಣ ಅವರ ಹೆಸರುಗಳನ್ನು ರಾಜಕೀಯ ಸ್ವಾರ್ಥಕ್ಕಾಗಿ ಎಳೆದು ತರುತ್ತಿರುವುದನ್ನೂ ಅವರು ಪ್ರಶ್ನಿಸಿದರು. ವಿಶೇಷವಾಗಿ ಎಸ್.ಎಂ. ಕೃಷ್ಣ ಕುರಿತು ಮಾತನಾಡಿದ ಕುಮಾರಸ್ವಾಮಿ, “ಅವರನ್ನು ‘ಅನ್‌ ಪಾಲಿಷ್ಡ್‌ ಡೈಮಂಡ್‌’ ಎಂದು ಹೇಳಿ ಕಾಂಗ್ರೆಸ್ ಮೆಟ್ಟಿಲೇರಿದ ನೀವು, ನಂತರ ಅವರನ್ನು ರಾಜಕೀಯವಾಗಿ ಹೇಗೆ ಕಡೆಗಣಿಸಿದ್ದೀರಿ ಎಂಬುದು ಜಗತ್ತಿಗೆ ಗೊತ್ತಿದೆ,” ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಒಕ್ಕಲಿಗರನ್ನು ಬೆಳೆಸಿದೆ ಎಂಬ ಹೇಳಿಕೆಯನ್ನು ತಳ್ಳಿಹಾಕಿದ ಅವರು, “ವಿಧಾನಸೌಧ ನಿರ್ಮಿಸಿದ ಕೆಂಗಲ್ ಹನುಮಂತಯ್ಯ ಅವರಿಗೆ ಯಾವ ರೀತಿಯ ಅಪಮಾನ ನಡೆದಿತ್ತು? ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ್ ಅರಸ್ ಅವರಿಗೆ ಬೆನ್ನಿಗೆ ಇರಿದವರು ಯಾರು?” ಎಂದು ಪ್ರಶ್ನಿಸಿದರು. “ಒಕ್ಕಲಿಗರನ್ನು ಮುಖ್ಯಮಂತ್ರಿ ಮಾಡುವುದೇ ಕಾಂಗ್ರೆಸ್ ಉದಾರತೆ ಎಂದಾದರೆ, ತತ್‌ಕ್ಷಣವೇ ನೀವು ಅಧಿಕಾರ ಬಿಟ್ಟು ಒಕ್ಕಲಿಗ ಸಮುದಾಯದವರಿಗೆ ಅವಕಾಶ ನೀಡಬೇಕು,” ಎಂದು ಸವಾಲು ಹಾಕಿದ್ದಾರೆ.

ದೆಹಲಿಯಲ್ಲಿ ನಡೆದ ಅಧಿಕಾರ ಹಂಚಿಕೆ ಒಪ್ಪಂದದ ವಿಚಾರವನ್ನೂ ಅವರು ಮುಂದಿಟ್ಟರು. ಆ ಸಂದರ್ಭದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಹಿರಿಯರು ಸಾಕ್ಷಿಯಾಗಿದ್ದರು ಎಂದು ಹೇಳಿ, ಆ ಒಪ್ಪಂದವನ್ನು ಬಹಿರಂಗಪಡಿಸುವ ಧೈರ್ಯ ತೋರಬೇಕು ಎಂದು ಒತ್ತಾಯಿಸಿದ್ದಾರೆ.

ದಲಿತ ನಾಯಕರುಗಳ ವಿಚಾರದಲ್ಲಿ ಕೂಡ ಕುಮಾರಸ್ವಾಮಿ ತೀವ್ರ ಟೀಕೆ ಮಾಡಿದರು. “ನಿಮ್ಮಿಗಿಂತ ಮುಂಚೆ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಆಗಬೇಕಾಗಿತ್ತು. ಆದರೆ ಅವರನ್ನು ರಾಜಕೀಯವಾಗಿ ಹಿಂಬಾಲಿಸಲಾಯಿತು. ಡಾ. ಜಿ.ಪರಮೇಶ್ವರ್ ಅವರನ್ನೂ ಅಡ್ಡಬರುತ್ತಾರೆಂದು ರಾಜಕೀಯವಾಗಿ ದುರ್ಬಲಗೊಳಿಸಲಾಯಿತು. ನಿಮ್ಮನ್ನು ಕಾಂಗ್ರೆಸ್‌ ಕರೆತಂದ ಹೆಚ್.ವಿಶ್ವನಾಥ್ ಅವರನ್ನು ಎಲ್ಲಿ ಇಟ್ಟಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ.

“ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಸಮರ್ಥ ನಾಯಕರನ್ನು ರಾಜಕೀಯವಾಗಿ ನಿಷ್ಕ್ರಿಯಗೊಳಿಸಿ ನೀವು ಮುಖ್ಯಮಂತ್ರಿಯಾಗಿದ್ದೀರಿ. ಇದು ಅರ್ಹತೆಯಿಂದ ಪಡೆದ ಸ್ಥಾನವಲ್ಲ,” ಎಂದು ಅವರು ಆರೋಪಿಸಿದ್ದಾರೆ.

ಅಹಿಂದಾ ರಾಜಕಾರಣದ ಪ್ರಶ್ನೆ ಎತ್ತಿದ ಕುಮಾರಸ್ವಾಮಿ, “ನೀವು ನಿಜವಾಗಿಯೂ ಅಹಿಂದಾ ನಾಯಕನಾಗಿದ್ದರೆ, ಈ ಸೂಕ್ಷ್ಮ ಸಂದರ್ಭದಲ್ಲಿ ನಿಮ್ಮ ಹುಟ್ಟಿನ ಜಾತಿಯನ್ನು ರಾಜಕೀಯಕ್ಕೆ ಎಳೆಯುತ್ತಿರಲಿಲ್ಲ,” ಎಂದು ಹೇಳಿದ್ದಾರೆ. ಬಸವಣ್ಣ, ನಾರಾಯಣ ಗುರು, ಕುವೆಂಪು ಹಾಗೂ ದೇವರಾಜ ಅರಸು ಅವರ ತತ್ವಗಳನ್ನು ನಂಬುತ್ತೇನೆ ಎನ್ನುವ ನೀವು, ಆ ಮಹನೀಯರ ಹೆಸರನ್ನು ರಾಜಕೀಯಕ್ಕಾಗಿ ಬಳಸಬಾರದು ಎಂದು ಸಲಹೆ ನೀಡಿದ್ದಾರೆ.

ಒಟ್ಟಾರೆ, ಕುಮಾರಸ್ವಾಮಿ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಮತ್ತೊಂದು ತೀವ್ರ ವಾಗ್ವಾದಕ್ಕೆ ಕಾರಣವಾಗಿದ್ದು, ಜಾತಿ, ಸಾಮಾಜಿಕ ನ್ಯಾಯ ಮತ್ತು ಅಧಿಕಾರ ಹಂಚಿಕೆ ಕುರಿತ ಚರ್ಚೆಗೆ ಹೊಸ ಆಯಾಮ ನೀಡಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment