ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಕೋಟೆ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ: ಭಕ್ತಿಸಾಗರಕ್ಕೆ ಸಜ್ಜಾದ ಶಿವಮೊಗ್ಗ ನಗರ

On: February 23, 2026 11:17 PM
Follow Us:

ಶಿವಮೊಗ್ಗ: ಮಲೆನಾಡಿನ ಹೃದಯ ಭಾಗವಾದ ಶಿವಮೊಗ್ಗ ನಗರದಲ್ಲಿ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬಾ ದೇವಿಯ ಐದು ದಿನಗಳ ಜಾತ್ರಾ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆಗಳು ಪೂರ್ಣಗೊಂಡಿವೆ. ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ಈ ಜಾತ್ರೆ ಧಾರ್ಮಿಕ ಭಕ್ತಿ, ಸಾಂಸ್ಕೃತಿಕ ವೈಭವ ಮತ್ತು ಸಾಮಾಜಿಕ ಸಮನ್ವಯದ ಪ್ರತೀಕವಾಗಿ ಪ್ರಸಿದ್ಧಿ ಪಡೆದಿದೆ.

ಬೆಳಿಗ್ಗೆ 5 ಗಂಟೆಗೆ ಮಂಗಳವಾದ್ಯದ ನಾದದೊಂದಿಗೆ ಬಿ.ಬಿ. ರಸ್ತೆಯ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬದವರನ್ನು ಪೂಜೆಗೆ ಗೌರವಪೂರ್ವಕವಾಗಿ ಆಹ್ವಾನಿಸಲಾಗುತ್ತದೆ. ಮುತ್ತೈದೆಯರು ಭಕ್ತಿಭಾವದ ಮೆರವಣಿಗೆಯೊಂದಿಗೆ ಗಾಂಧಿಬಜಾರದ ತವರು ಮನೆಯಲ್ಲಿರುವ ಶ್ರೀ ಮಾರಿಕಾಂಬಾ ದೇವಿಗೆ ಉಡಿ ತುಂಬಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ವಿಶ್ವಕರ್ಮ ಸಮಾಜದವರು ವಿಸರ್ಜನಾ ಮೂರ್ತಿಗೆ ಮಾಂಗಲ್ಯಧಾರಣೆ ನೆರವೇರಿಸಿ ಸಾರ್ವಜನಿಕ ಪೂಜೆಗೆ ಚಾಲನೆ ನೀಡಲಿದ್ದಾರೆ. ದಿನಪೂರ್ತಿ ಲಕ್ಷಾಂತರ ಮುತ್ತೈದೆಯರು ಮಡ್ಲಕ್ಕಿ ನೀಡಿ ಉಡಿ ತುಂಬುವ ಸಂಪ್ರದಾಯವನ್ನು ಆಚರಿಸಲಿದ್ದಾರೆ. ಬಳಿಕ ಉಪ್ಪಾರ ಸಮಾಜದವರು ಅಮ್ಮನವರನ್ನು ರಥದಲ್ಲಿ ಗದ್ದಿಗೆಗೆ ಕರೆತರುವ ವೈಭವಮಯ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಗಂಗಾಪರಮೇಶ್ವರಿ ದೇವಸ್ಥಾನದಿಂದ ಗಂಗಾಮತಸ್ಥ ಸಮಾಜದವರು ಗಂಗೆ ಪೂಜೆಯೊಂದಿಗೆ ಭಕ್ತಿಪೂರ್ವಕ ಸ್ವಾಗತ ಕೋರಲಿದ್ದಾರೆ.

ಬೆಳಿಗ್ಗೆ 4 ಗಂಟೆಗೆ ಹರಿಜನ ಸಮಾಜದವರು ಬೇವಿನುಡುಗೆಯೊಂದಿಗೆ ಆಗಮಿಸಿ ಪೂಜೆ ಸಲ್ಲಿಸಲಿದ್ದಾರೆ. ನಂತರ ಅಮ್ಮನವರನ್ನು ಗದ್ದುಗೆಯಲ್ಲಿ ಕೂರಿಸಲಾಗುತ್ತದೆ. ಕುರುಬ ಸಮಾಜದ ಚೌಡಿಕೆ ಕುಟುಂಬದವರು ನೈವೇದ್ಯ ಸಲ್ಲಿಸಲಿದ್ದಾರೆ. ವಾಲ್ಮೀಕಿ, ಉಪ್ಪಾರ ಹಾಗೂ ಮಡಿವಾಳ ಸಮಾಜದವರು ಕ್ರಮವಾಗಿ ನಾಲ್ಕು ದಿನಗಳ ಕಾಲ ಸಂಪ್ರದಾಯಬದ್ಧ ಪೂಜೆಗಳನ್ನು ನೆರವೇರಿಸಲಿದ್ದಾರೆ. ಜಾತ್ರೆಯ ಪ್ರಮುಖ ವೈಶಿಷ್ಟ್ಯವೆಂದರೆ ವಿವಿಧ ಸಮಾಜಗಳ ಸಮಾನ ಪಾಲ್ಗೊಳ್ಳುವಿಕೆ ಮತ್ತು ಸಹಭಾಗಿತ್ವ.

ರಾತ್ರಿ 7 ಗಂಟೆಗೆ ಜಾನಪದ ಕಲಾತಂಡಗಳ ಮೆರಗು ನಡುವೆ ಶ್ರೀ ಮಾರಿಕಾಂಬೆಯ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅಮ್ಮನವರನ್ನು ವನ ಪ್ರವೇಶಕ್ಕೆ ಕಳಿಸಿಕೊಡುವ ಮೂಲಕ ಜಾತ್ರೆಗೆ ಸಂಪ್ರದಾಯಬದ್ಧವಾಗಿ ತೆರೆ ಎಳೆಯಲಾಗುತ್ತದೆ. ಮಡಿವಾಳ ಸಮಾಜದವರು ವನದಲ್ಲಿ ಅಂತಿಮ ಪೂಜೆ ನೆರವೇರಿಸಲಿದ್ದಾರೆ.

ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿ ಕಾಳಿ ಅಲಂಕಾರದ ಭವ್ಯ ಮಹಾದ್ವಾರ ನಿರ್ಮಿಸಲಾಗಿದ್ದು, ಜಾತ್ರಾ ವಾತಾವರಣವನ್ನು ಮತ್ತಷ್ಟು ಭಕ್ತಿಪೂರ್ಣವಾಗಿಸಲಾಗಿದೆ. ಶಿವಪ್ಪ ನಾಯಕ ಪ್ರತಿಮೆಯಿಂದ ಗದ್ದಿಗೆವರೆಗೆ ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದ್ದು, ದೂರದೂರಿನಿಂದ ಆಗಮಿಸುವ ಭಕ್ತರಿಗೆ ಸುರಕ್ಷಿತ ಮತ್ತು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಿ.ಹೆಚ್. ರಸ್ತೆಯಲ್ಲೂ ಶಾಮಿಯಾನಗಳನ್ನು ಹಾಕಿ ನೆರಳು ಹಾಗೂ ವಿಶ್ರಾಂತಿ ಸೌಲಭ್ಯ ಒದಗಿಸಲಾಗಿದೆ.

ಈ ಬಾರಿ ಗದ್ದಿಗೆ ಬಳಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ. ವಿವಿಧ ಬಗೆಯ ಹಣ್ಣುಗಳು ಮತ್ತು ಹೂಗಳನ್ನು ಬಳಸಿ ದೇವಿಯ ಅಲಂಕಾರವನ್ನು ಅತಿ ಸುಂದರವಾಗಿ ರೂಪಿಸಲಾಗಿದೆ. ನಗರದೆಲ್ಲೆಡೆ ವಿದ್ಯುತ್ ದೀಪಾಲಂಕಾರ ಕಂಗೊಳಿಸುತ್ತಿದ್ದು, ಜಾತ್ರಾ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರಮುಖ ರಸ್ತೆಗಳಲ್ಲಿ ಪ್ಲೆಕ್ಸ್‌ಗಳು ಅಳವಡಿಸಲಾಗಿದ್ದು, ಭಕ್ತರಲ್ಲಿ ಉತ್ಸಾಹದ ವಾತಾವರಣ ಮೂಡಿಸಿದೆ.

ಜಾತ್ರೆಯ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಗಾಂಧಿಬಜಾರ್ ಭಾಗದಲ್ಲಿ ದೇವಿಯ ದರ್ಶನಕ್ಕೆ ಯಾವುದೇ ಅಡಚಣೆ ಆಗದಂತೆ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಪೊಲೀಸರು ಅಗತ್ಯ ಕ್ರಮಗಳನ್ನು ಜಾರಿಗೊಳಿಸಿದ್ದಾರೆ.

ಒಟ್ಟಿನಲ್ಲಿ, ಐದು ದಿನಗಳ ಕಾಲ ನಡೆಯಲಿರುವ ಕೋಟೆ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವ ಈ ಬಾರಿ ಅದ್ಧೂರಿ ಸಿದ್ಧತೆಗಳೊಂದಿಗೆ ನಗರಕ್ಕೆ ಮತ್ತೊಮ್ಮೆ ಧಾರ್ಮಿಕ ಉತ್ಸಾಹ ಮತ್ತು ಸಾಂಸ್ಕೃತಿಕ ವೈಭವವನ್ನು ತಂದುಕೊಡಲು ಸಜ್ಜಾಗಿದೆ.

ವಿಶೇಷವಾಗಿ ಗಮನಾರ್ಹ ಸಂಗತಿಯೆಂದರೆ, ಶ್ರೀ ಮಾರಿಕಾಂಬಾ ಸೇವಾ ಸಮಿತಿ ವತಿಯಿಂದ ಸಾರ್ವಜನಿಕರು ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿ ಸಮಿತಿಗೆ ಸಹಕಾರ ನೀಡುವ ಮೂಲಕ ಜಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಲಾಗಿದೆ. ಸಮಿತಿ ಅಧ್ಯಕ್ಷ ಎಸ್.ಕೆ. ಮರಿಯಪ್ಪ ಅವರ ನೇತೃತ್ವದಲ್ಲಿ ಉಪಾಧ್ಯಕ್ಷರಾದ ಎನ್. ಉಮಾಪತಿ, ಎಂ.ಕೆ. ಸುರೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್, ವಿ. ರಾಜು, ಸುನೀಲ್, ಹರೀಶ್ ಲಾಲ್ ಸೇರಿದಂತೆ ಪದಾಧಿಕಾರಿಗಳ ಸಮನ್ವಯದಿಂದ ಜಾತ್ರೆಯ ಸಕಲ ಸಿದ್ಧತೆಗಳು ಭರ್ಜರಿಯಾಗಿ ನಡೆದಿವೆ. ಅವರ ಸಂಘಟಿತ ಪ್ರಯತ್ನ ಮತ್ತು ಪರಿಶ್ರಮವೇ ಈ ಮಹೋತ್ಸವದ ಯಶಸ್ಸಿಗೆ ಪ್ರಮುಖ ಕಾರಣವಾಗಿದ್ದು, ಈ ಬಾರಿ ಜಾತ್ರೆ ಇನ್ನಷ್ಟು ವೈಭವದಿಂದ ನಡೆಯಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment