ಊರಗಡೂರು ದುರಂತಕ್ಕೆ ತ್ವರಿತ ಸ್ಪಂದನೆ – ಎಸ್ಪಿ ನಿಖಿಲ್ ಬಿ ಮಾರ್ಗದರ್ಶನದಲ್ಲಿ ಚುರುಕಾದ ಪೊಲೀಸ್ ಕಾರ್ಯಾಚರಣೆ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ದುರ್ಘಟನೆಯೊಂದರ ನಂತರ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ತೋರಿದ ತ್ವರಿತ ಮತ್ತು ಪರಿಣಾಮಕಾರಿ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಊರಗಡೂರಿನ ಸರ್ಕಾರಿ ಪ್ರೌಢಶಾಲೆ ಹೊರಭಾಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಂಕೇತ್ (16) ಹತ್ಯೆಯಾದ ಘಟನೆ ಜಿಲ್ಲೆಯಲ್ಲಿ ಆಘಾತ ಮೂಡಿಸಿತು. ಆದರೆ ಘಟನೆ ನಡೆದ ತಕ್ಷಣವೇ ಪೊಲೀಸರು ಚುರುಕಾಗಿ ಕಾರ್ಯನಿರ್ವಹಿಸಿ ಆರೋಪಿಗಳನ್ನು ವಶಕ್ಕೆ ಪಡೆದಿರುವುದು ಗಮನಾರ್ಹವಾಗಿದೆ.

ಎಸ್ಪಿ ನಿಖಿಲ್ ಬಿ ನೇತೃತ್ವದಲ್ಲಿ ಸ್ಥಳದಲ್ಲೇ ಕಾರ್ಯಾಚರಣೆ
ಘಟನೆ ತಿಳಿದುಬಂದ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಸ್ವತಃ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು. ಡಿವೈಎಸ್ಪಿ ಸಂಜೀವ್ ಕುಮಾರ್, ಪೊಲೀಸ್ ಇನ್‌ಸ್ಪೆಕ್ಟರ್ ಗುರುರಾಜ್ ಕೆ.ಟಿ., ರಾಘವೇಂದ್ರ ಖಂಡಿಕೆ, ದೀಪಕ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ತೊಡಗಿಕೊಂಡರು. ರಾತ್ರಿ ವೇಳೆಯಲ್ಲೇ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಪೊಲೀಸರು, ಘಟನೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಏಳು ಅಪ್ರಾಪ್ತ ಆರೋಪಿಗಳನ್ನು ವಶಕ್ಕೆ ಪಡೆದು ಕಾನೂನಿನ ಪ್ರಕ್ರಿಯೆ ಪ್ರಾರಂಭಿಸಿದರು.

“ಆಕಸ್ಮಿಕ” ಹೇಳಿಕೆ ಕುರಿತು ಸ್ಪಷ್ಟನೆ – ಎಸ್ಪಿ ನಿಖಿಲ್ ಬಿ ಗೊಂದಲಕ್ಕೆ ತೆರೆ
ಘಟನೆಯ ನಂತರ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಬಂಧಪಟ್ಟ ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಾಥಮಿಕ ಮಾಹಿತಿಯ ಆಧಾರದಲ್ಲಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದರು.
ಆದರೆ, “ಆಕಸ್ಮಿಕ ಘಟನೆ” ಎಂಬ ಪದಪ್ರಯೋಗ ಕುರಿತು ಕೆಲ ವಲಯಗಳಲ್ಲಿ ಗೊಂದಲ ಉಂಟಾದ ಹಿನ್ನೆಲೆಯಲ್ಲಿ, ಎಸ್‌ಪಿ ನಿಖಿಲ್ ಅವರು ನಂತರ ಸ್ಪಷ್ಟಪಡಿಸಿದ್ದು – ತಾವು ಈ ಪ್ರಕರಣವನ್ನು ಸಾಮಾನ್ಯ ಆಕಸ್ಮಿಕ ಘಟನೆ ಎಂದು ಹೇಳಿಲ್ಲ. ಮಾತಿಗೆ ಮಾತು ಬೆಳೆದು ನಡೆದ ಗಲಾಟೆ ದುರ್ಘಟನೆಯಾಗಿ ತಿರುಗಿದೆ ಎಂಬ ಅರ್ಥದಲ್ಲಿ ಮಾತ್ರ ಪ್ರಾಥಮಿಕ ಮಾಹಿತಿ ಹಂಚಿಕೊಂಡಿದ್ದಾಗಿ ತಿಳಿಸಿದ್ದಾರೆ.
ಘಟನೆಯನ್ನು ಯಾವುದೇ ರೀತಿಯಲ್ಲಿ ತಣ್ಣಗಾಗಿಸಲು ಅಥವಾ ತಗ್ಗಿಸಿ ನೋಡಲು ಪೊಲೀಸ್ ಇಲಾಖೆ ಪ್ರಯತ್ನಿಸುತ್ತಿಲ್ಲ ಎಂಬುದನ್ನು ಅವರು ಖಚಿತಪಡಿಸಿದ್ದಾರೆ. ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದ್ದು, ಸಂಪೂರ್ಣ ತನಿಖೆ ನಡೆಸಿ ಸತ್ಯಾಂಶ ಹೊರತೆಗೆದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.
ಸಾರ್ವಜನಿಕರಲ್ಲಿ ಅನಗತ್ಯ ಗೊಂದಲ ಸೃಷ್ಟಿಯಾಗದಂತೆ ಜವಾಬ್ದಾರಿಯುತ ವರದಿ ಮತ್ತು ನಿಖರ ಮಾಹಿತಿ ಹಂಚಿಕೊಳ್ಳುವುದು ಅಗತ್ಯವೆಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.
ಉದ್ವಿಗ್ನತೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಭದ್ರತೆ
ಘಟನೆಯಿಂದ ಪ್ರದೇಶದಲ್ಲಿ ಉದ್ವಿಗ್ನತೆ ನಿರ್ಮಾಣವಾಗುವ ಸಾಧ್ಯತೆ ಕಂಡುಬಂದ ಹಿನ್ನೆಲೆಯಲ್ಲಿ, ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಿ ಶಾಂತಿ ಕಾಪಾಡುವ ಕ್ರಮ ಕೈಗೊಳ್ಳಲಾಯಿತು. ಅನಗತ್ಯ ವದಂತಿಗಳು ಹರಡದಂತೆ ಕಟ್ಟುನಿಟ್ಟಿನ ನಿಗಾವಹಿಸಲಾಯಿತು. ಜಿಲ್ಲಾ ಪೊಲೀಸ್ ಇಲಾಖೆ ಯಾವುದೇ ಮೂಲಾಜಿಲ್ಲದೆ ಕಾರ್ಯನಿರ್ವಹಿಸುತ್ತಿದ್ದು, ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಎಸ್ಪಿ ನಿಖಿಲ್ ಬಿ ಸ್ಪಷ್ಟಪಡಿಸಿದರು.

“ತಪ್ಪಿತಸ್ಥರಿಗೆ ಶಿಕ್ಷೆ ಖಚಿತ” – ಪೊಲೀಸರ ಸ್ಪಷ್ಟ ಸಂದೇಶ, ಮೃತ ಕುಟುಂಬಕ್ಕೆ ಧೈರ್ಯ ತುಂಬಿದ ಎಸ್ಪಿ
ಘಟನೆಯ ಬಳಿಕ ಎಸ್ಪಿ ನಿಖಿಲ್ ಬಿ ಅವರು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ವಿದ್ಯಾರ್ಥಿಯ ಆರೋಗ್ಯ ವಿಚಾರಿಸಿದರು ಹಾಗೂ ಮೃತ ಸಂಕೇತ್ ಅವರ ನಿವಾಸಕ್ಕೆ ತೆರಳಿ ಕುಟುಂಬದವರಿಗೆ ಧೈರ್ಯ ತುಂಬಿದರು. “ನಿಮ್ಮ ಕುಟುಂಬದ ಜೊತೆಗೆ ಪೊಲೀಸ್ ಇಲಾಖೆ ಸದಾ ನಿಂತಿರುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುವವರೆಗೆ ಬಿಡುವುದಿಲ್ಲ” ಎಂಬ ಅವರ ಮಾತುಗಳು ಕುಟುಂಬದವರಿಗೆ ಸಾಂತ್ವನ ನೀಡಿದ್ದಾರೆ.

ಸರ್ಕಾರದಿಂದ 15 ಲಕ್ಷ ಪರಿಹಾರ ಘೋಷಣೆ – ಜಿಲ್ಲಾಡಳಿತದ ಬೆಂಬಲ
ಇದಕ್ಕೆ ಸಮಾನಾಂತರವಾಗಿ ರಾಜ್ಯ ಸರ್ಕಾರ ಮೃತ ಕುಟುಂಬಕ್ಕೆ ಒಟ್ಟು 15 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 10 ಲಕ್ಷ ಮತ್ತು ಶಿಕ್ಷಣ ಇಲಾಖೆಯಿಂದ 5 ಲಕ್ಷ ರೂಪಾಯಿ ನೆರವು ನೀಡಲಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಕಟ್ಟಿ ಮಾಹಿತಿ ನೀಡಿದ್ದಾರೆ. ಪ್ರಕರಣದಲ್ಲಿ ಅಟ್ರಾಸಿಟಿ ಕಾಯ್ದೆಯಡಿಯಲ್ಲಿ ಕೂಡ ಪ್ರಕರಣ ದಾಖಲಾಗಿದ್ದು, ಕಾನೂನು ಕ್ರಮಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ.
ಶಾಂತಿ ಕಾಪಾಡಿದ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ
ಸಾಮಾಜಿಕ ಅಶಾಂತಿ ಉಂಟಾಗದಂತೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ತೋರಿದ ಜಾಗೃತಿ, ಶಿಸ್ತು ಮತ್ತು ಮಾನವೀಯತೆ ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿದೆ. ಅಪ್ರಾಪ್ತರ ನಡುವೆ ಉಂಟಾದ ಗಲಾಟೆ ದುರಂತಕ್ಕೆ ತಿರುಗಿದರೂ, ನಂತರದ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ ಜಿಲ್ಲಾ ಪೊಲೀಸ್ ಇಲಾಖೆಯ ಕಾರ್ಯವೈಖರಿ ಬಗ್ಗೆ ಮತ್ತೊಮ್ಮೆ ಸಾಬೀತುಪಡಿಸಿದೆ.
ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರು ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸಮಾಜದ ಸಹಕಾರವೇ ಶಾಶ್ವತ ಶಾಂತಿಯ ಮೂಲ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.






