ಶಿಕಾರಿಪುರ: ಬಿ.ಎಸ್. ಯಡಿಯೂರಪ್ಪನವರ 84ನೇ ಜನ್ಮದಿನದ ಸಂಭ್ರಮೋತ್ಸವವನ್ನು ಫೆಬ್ರವರಿ 27ರಂದು ಶಿಕಾರಿಪುರದಲ್ಲಿ ಅಭಿಮಾನಿ ಬಳಗ ಭಕ್ತಿ, ಗೌರವ ಹಾಗೂ ಅಪಾರ ಉತ್ಸಾಹದೊಂದಿಗೆ ಆಚರಿಸಲು ನಾಳೆ ಸಿದ್ಧತೆ ಮಾಡಿಕೊಂಡಿದೆ. ಸಹಸ್ರ ಚಂದ್ರದರ್ಶನ ಪೂರ್ಣಗೊಳಿಸಿದ ಈ ದಣಿವರಿಯದ ಧೀಮಂತ ಜನನಾಯಕನಿಗೆ ಸಮಾಜದ ವಿವಿಧ ವಲಯಗಳಿಂದ ಗೌರವ ಸಮರ್ಪಣೆ ನಡೆಯಲಿದ್ದು, ಶಿಕಾರಿಪುರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುವ ನಿರೀಕ್ಷೆಯಿದೆ.
ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ – ಇದು ಕೇವಲ ಒಂದು ಹೆಸರು ಮಾತ್ರವಲ್ಲ; ಅದು ಒಂದು ಹೋರಾಟದ ಪ್ರತೀಕ, ಅದಮ್ಯ ಶಕ್ತಿಯ ರೂಪಕ. “ಯಡಿಯೂರಪ್ಪ ಗುಡುಗಿದರೆ ವಿಧಾನಸಭೆ ನಡುಗುವುದು” ಎಂಬ ಮಾತು ರಾಜ್ಯ ರಾಜಕೀಯದಲ್ಲಿ ಮನೆಮಾತಾಗಿದೆ. ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಜೀವನ ಆರಂಭಿಸಿ, ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಮುನ್ನಡೆಸಿದ ಅಪೂರ್ವ ಸಾಧನೆ ಅವರದ್ದು.

ರಾಜಕೀಯ ಪಯಣದ ಆರಂಭ
1974ರಲ್ಲಿ ಶಿಕಾರಿಪುರ ಪುರಸಭೆಯ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ಯಡಿಯೂರಪ್ಪ ಅವರು, 1975ರಲ್ಲಿ ಜನಸಂಘದ ತಾಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 1980ರಲ್ಲಿ ಶಿಕಾರಿಪುರ ಬಿಜೆಪಿ ಅಧ್ಯಕ್ಷರಾಗಿ, 1985ರಲ್ಲಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಹಾಗೂ 1988ರಲ್ಲಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪಕ್ಷವನ್ನು ಬಲಪಡಿಸಿದರು.
1983ರಲ್ಲಿ ಮೊದಲ ಬಾರಿಗೆ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದು, 1994ರಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕನಾದರು. 2006ರಲ್ಲಿ ಉಪಮುಖ್ಯಮಂತ್ರಿಯಾಗಿ, 2007ರಲ್ಲಿ ಮೊದಲ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ನಂತರ 2008, 2014 ಮತ್ತು 2019ರಲ್ಲಿ ಮತ್ತೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ, ನಾಲ್ಕು ಬಾರಿ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ ಅಪರೂಪದ ನಾಯಕನಾದರು.

ರೈತರ ಹಾಗೂ ಬಡವರ ಪರ ಧ್ವನಿ
ಯಡಿಯೂರಪ್ಪ ಅವರು ಸದಾ ಬಡವರು, ದೀನದಲಿತರು, ಶ್ರಮಿಕರು ಹಾಗೂ ಭೂರಹಿತ ಕೃಷಿ ಕಾರ್ಮಿಕರ ಪರ ಧ್ವನಿ ಎತ್ತಿದ ಜನನಾಯಕರು. ಹಲವಾರು ವರ್ಷಗಳ ಹೋರಾಟದ ಫಲವಾಗಿ ರೈತರ ಸಂಕಷ್ಟಗಳನ್ನು ಪರಿಹರಿಸುವ ಅನೇಕ ಯೋಜನೆಗಳನ್ನು ಜಾರಿಗೊಳಿಸಿದರು. ರೈತರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಮಾಡುವ ಮೂಲಕ ದೇಶದಲ್ಲೇ ಹೊಸ ಮಾದರಿ ಸ್ಥಾಪಿಸಿದರು.
ಪ್ರಮುಖ ಯೋಜನೆಗಳು
ತಮ್ಮ ಆಡಳಿತಾವಧಿಯಲ್ಲಿ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದರು. ಅವುಗಳಲ್ಲಿ ಪ್ರಮುಖವಾದವು:
- ಭಾಗ್ಯಲಕ್ಷ್ಮಿ ಯೋಜನೆ (ಹೆಣ್ಣು ಮಕ್ಕಳಿಗಾಗಿ)
- ಉಚಿತ ಸೈಕಲ್ ಯೋಜನೆ
- ರೈತರಿಗೆ ಬಡ್ಡಿರಹಿತ ಸಾಲ ಯೋಜನೆ
- ರೈತರ ಹಾಲಿಗೆ ಪ್ರೋತ್ಸಾಹಧನ
- ನೇಕಾರರು ಮತ್ತು ಮೀನುಗಾರರಿಗೆ ಸಾಲ ಮನ್ನಾ
- ಸಂಧ್ಯಾ ಸುರಕ್ಷಾ ಯೋಜನೆ
- ಆರೋಗ್ಯ ಕವಚ ಯೋಜನೆ
- ವಾಜಪೇಯಿ ಆರೋಗ್ಯಶ್ರೀ ಯೋಜನೆ
- ರೈತ ಸುರಕ್ಷಾ ಪಸಲು ಭೀಮಾ ಯೋಜನೆ
- ಸಾವಯವ ಕೃಷಿ ಮಿಷನ್
- ನಗರೋತ್ಥಾನ ಯೋಜನೆ
ಈ ಯೋಜನೆಗಳು ಸಮಾಜದ ವಿವಿಧ ವರ್ಗಗಳ ಜೀವನಮಟ್ಟವನ್ನು ನಡೆಸಲು ಮಹತ್ತರ ಪಾತ್ರವಹಿಸಿವೆ.
ಪಕ್ಷ ಸಂಘಟನೆಗೆ ಅಪಾರ ಕೊಡುಗೆ
ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷವನ್ನು ಕೆಳಹಂತದಿಂದ ಕಟ್ಟಿದ ಶ್ರೇಯಸ್ಸು ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಕಾರ್ಯಕರ್ತರೊಂದಿಗೆ ನೇರ ಸಂಪರ್ಕ, ಸಂಘಟನೆಗೆ ಶ್ರಮ ಮತ್ತು ನಿರಂತರ ಹೋರಾಟದ ಮನೋಭಾವದಿಂದ ಪಕ್ಷವನ್ನು ರಾಜ್ಯದಲ್ಲಿ ಬಲಿಷ್ಠ ಶಕ್ತಿಯಾಗಿ ರೂಪಿಸಿದರು.
ಸಮಾಜದ ಗೌರವ ಸಮರ್ಪಣೆ
84ನೇ ಜನ್ಮದಿನದ ಅಂಗವಾಗಿ ಶಿಕಾರಿಪುರದಲ್ಲಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳು, ಸೇವಾ ಚಟುವಟಿಕೆಗಳು ಮತ್ತು ಸಾರ್ವಜನಿಕ ಸಭೆಗಳು ನಡೆಯಲಿವೆ. ಅಭಿಮಾನಿಗಳು ಮತ್ತು ಬೆಂಬಲಿಗರು ಅವರನ್ನು “ದಣಿವರಿಯದ ಧೀಮಂತ ಜನನಾಯಕ” ಎಂದು ಕರೆದಾಡುತ್ತಾ, ಅವರ ದೀರ್ಘಾಯುಷ್ಯ ಮತ್ತು ಆರೋಗ್ಯಕ್ಕಾಗಿ ಹಾರೈಸುತ್ತಿದ್ದಾರೆ.
ಒಬ್ಬ ವ್ಯಕ್ತಿಯಲ್ಲ… ಅವರೊಬ್ಬ ಅದಮ್ಯ ಶಕ್ತಿ.
ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ ಅಪ್ರತಿಮ ಹೋರಾಟಗಾರ – ಅದುವೇ ಬಿ.ಎಸ್. ಯಡಿಯೂರಪ್ಪ.
27ರಂದು ಶಿಕಾರಿಪುರದಲ್ಲಿ ಯಡಿಯೂರಪ್ಪ ನವರ ಜನ್ಮದಿನದ ಸಂಭ್ರಮ: ಅರ್ಜುನ್ ಜನ್ಯ ತಂಡದಿಂದ ಸಂಜೆ 7ಕ್ಕೆ ‘ಸಂಗೀತ ಹಬ್ಬ’ ರಸದೌತಣ

ರಾಜ್ಯ ಕಂಡ ಶ್ರೇಷ್ಠ ಧೀಮಂತ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಜನ್ಮದಿನ ಪ್ರಯುಕ್ತ ಫೆಬ್ರವರಿ 27ರಂದು ಶಿಕಾರಿಪುರದಲ್ಲಿ ಸಂಜೆ 7 ಗಂಟೆಗೆ ಅದ್ದೂರಿ ಸಂಭ್ರಮೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಈ ವಿಶೇಷ ಸಂದರ್ಭದಲ್ಲಿ ಮ್ಯೂಸಿಕ್ ಮಾಂತ್ರಿಕ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ತಂಡದಿಂದ ‘ಸಂಗೀತ ಹಬ್ಬ’ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅಭಿಮಾನಿಗಳು ಮತ್ತು ಸಾರ್ವಜನಿಕರಿಗೆ ಸಂಗೀತ ರಸದೌತಣ ನೀಡಲಾಗುತ್ತದೆ. ಜನನಾಯಕನಿಗೆ ಗೌರವ ನಮನ ಸಲ್ಲಿಸುವ ಈ ಸಂಭ್ರಮೋತ್ಸವ ಶಿಕಾರಿಪುರದಲ್ಲಿ ಹಬ್ಬದ ವಾತಾವರಣ ನಿರ್ಮಿಸುವ ನಿರೀಕ್ಷೆಯಿದೆ.

ಬಿ.ಎಸ್. ಯಡಿಯೂರಪ್ಪ ಅಭಿಮಾನಿ ಬಳಗ, ಶಿಕಾರಿಪುರ ಪ್ರಕಟಣೆ
ಬಿ.ಎಸ್. ಯಡಿಯೂರಪ್ಪನವರ 84ನೇ ವರ್ಷದ ಜನ್ಮದಿನದ ಪ್ರಯುಕ್ತ ದಿನಾಂಕ 27ರಂದು ಶಿಕಾರಿಪುರದಲ್ಲಿ ವಿವಿಧ ಕಾರ್ಯಕ್ರಮಗಳು ಆಯೋಜಿಸಲಾಗಿವೆ. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರನ್ನು ಗೌರವಿಸಿ ಅಭಿನಂದಿಸಲು ಬಯಸುವ ಅಭಿಮಾನಿಗಳು, ಸಂಘ–ಸಂಸ್ಥೆಗಳು, ಸಮಾಜದ ಮುಖಂಡರು ಹಾಗೂ ಸಾರ್ವಜನಿಕರಿಗೆ ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 2:00 ಗಂಟೆಯವರೆಗೆ ಶಿವಮೊಗ್ಗ ರಸ್ತೆಯಲ್ಲಿರುವ ಕುಮದ್ವತಿ ಕಾಲೇಜಿನ ಆಡಿಟೋರಿಯಂನಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಯಡಿಯೂರಪ್ಪ ಅವರ ನಿವಾಸದ ಸಮೀಪ ಸಂಚಾರ ನಿಯಂತ್ರಣ ಕಷ್ಟವಾಗುವ ಹಿನ್ನೆಲೆಯಲ್ಲಿ ಈ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆದ್ದರಿಂದ ಅವರನ್ನು ಅಭಿನಂದಿಸಲು ಇಚ್ಛಿಸುವ ಎಲ್ಲರೂ ಕುಮದ್ವತಿ ಕಾಲೇಜಿನ ಆಡಿಟೋರಿಯಂಗೆ ಆಗಮಿಸುವಂತೆ ವಿನಂತಿಸಲಾಗಿದೆ. ನಿವಾಸದ ಬಳಿ ಯಾವುದೇ ಕಾರ್ಯಕ್ರಮ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.







