ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

84ನೇ ಜನ್ಮದಿನ ಸಂಭ್ರಮದಲ್ಲಿ ಬಿಎಸ್‌ವೈ ಸಂಕಲ್ಪ: ರಾಜ್ಯ ಸುತ್ತಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದಾಗಿ ಯಡಿಯೂರಪ್ಪ ಘೋಷಣೆ

On: February 27, 2026 10:14 PM
Follow Us:

ಶಿಕಾರಿಪುರ: “ಮುಂದಿನ ದಿನಗಳಲ್ಲಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ, ಕರ್ನಾಟಕದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದು ನನ್ನ ಏಕೈಕ ಗುರಿ” ಎಂದು ಮಾಜಿ ಮುಖ್ಯಮಂತ್ರಿ .ಬಿ.ಎಸ್. ಯಡಿಯೂರಪ್ಪ ಸ್ಪಷ್ಟವಾಗಿ ತಿಳಿಸಿದ್ದಾರೆ.

ತಮ್ಮ 84ನೇ ಜನ್ಮದಿನದ ಅಂಗವಾಗಿ ಹುಟ್ಟೂರು ಶಿಕಾರಿಪುರದಲ್ಲಿ ಆಯೋಜಿಸಲಾದ ಸಂಭ್ರಮೋತ್ಸವದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಪಕ್ಷವನ್ನು ಅಧಿಕಾರಕ್ಕೆ ತರಲು ತಾವು ಪ್ರಾಮಾಣಿಕ ಮತ್ತು ನಿರಂತರ ಪ್ರಯತ್ನ ಮಾಡುವುದಾಗಿ ಘೋಷಿಸಿದರು. “ಈ ಹೋರಾಟದಲ್ಲಿ ನಿಮ್ಮೆಲ್ಲರ ಬೆಂಬಲ, ಸಹಕಾರ ಮತ್ತು ಆಶೀರ್ವಾದ ಅಗತ್ಯ” ಎಂದು ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಮನವಿ ಮಾಡಿದರು.

“ಸಾಧನೆ ಮಾತನಾಡಬೇಕು; ಮಾತನಾಡುವುದೇ ಸಾಧನೆ ಆಗಬಾರದು” ಎಂಬ ತಮ್ಮ ಧ್ಯೇಯವಾಕ್ಯವನ್ನು ಉಲ್ಲೇಖಿಸಿದ ಯಡಿಯೂರಪ್ಪ, ಶೋಷಿತರು, ಪೀಡಿತರು ಹಾಗೂ ದಲಿತ ಸಮುದಾಯಗಳ ಅಭಿವೃದ್ಧಿಗಾಗಿ ತಮ್ಮ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ತಾವು ಜಾರಿಗೆ ತಂದ ಭಾಗ್ಯಲಕ್ಷ್ಮಿ ಯೋಜನೆ ಇಂದಿಗೂ ಕೋಟ್ಯಂತರ ಹೆಣ್ಮಕ್ಕಳ ಬದುಕಿನಲ್ಲಿ ಹೊಸ ಬೆಳಕನ್ನು ತಂದಿದೆ ಎಂದು ವಿವರಿಸಿದರು. ಸಮಾಜದ ಅತೀ ಹಿಂದುಳಿದ ವರ್ಗಗಳ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣವೇ ತಮ್ಮ ಆಡಳಿತದ ಮೂಲ ಉದ್ದೇಶವಾಗಿತ್ತು ಎಂದರು.

ನಾಡಿನ ರೈತರು ನೆಮ್ಮದಿಯಿಂದ, ಗೌರವ ಮತ್ತು ಸ್ವಾಭಿಮಾನದಿಂದ ಬದುಕುವಂತಾಗಬೇಕು ಎಂಬುದು ತಮ್ಮ ಕನಸು ಎಂದು ಹೇಳಿದ ಅವರು, ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿದ ವಿಚಾರವನ್ನು ನೆನಪಿಸಿದರು. ಶಿಕಾರಿಪುರ ಕ್ಷೇತ್ರ ಮಾತ್ರವಲ್ಲದೆ, ಇಡೀ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು. ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯ, ಕೃಷಿ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ ವಿಶೇಷ ಒತ್ತು ನೀಡಿದ್ದಾಗಿ ವಿವರಿಸಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ಮತ್ತು ದುರ್ಬಲ ಆಡಳಿತ ವ್ಯವಸ್ಥೆಯನ್ನು ಕಿತ್ತೊಗೆದು, ಜನಪರ ಮತ್ತು ಅಭಿವೃದ್ಧಿಪರ ಆಡಳಿತವನ್ನು ಮರುಸ್ಥಾಪಿಸುವುದು ಅವಶ್ಯಕ ಎಂದು ಅವರು ಅಭಿಪ್ರಾಯಪಟ್ಟರು. “ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಸಂಕಲ್ಪದೊಂದಿಗೆ ನಾವು ಎಲ್ಲರೂ ಒಂದಾಗಿ ಶ್ರಮಿಸೋಣ” ಎಂದು ಕಾರ್ಯಕರ್ತರನ್ನು ಪ್ರೇರೇಪಿಸಿದರು.

ಈ ಸಂಭ್ರಮೋತ್ಸವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂಸದರಾದ ಬಿ.ವೈ.ರಾಘವೇಂದ್ರ, ಗೋವಿಂದ ಕಾರಜೋಳ, ಪಿ.ಸಿ.ಮೋಹನ್, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಸಿ.ಟಿ.ರವಿ, ಸೇರಿದಂತೆ ಹಲವಾರು ಶಾಸಕರು, ಮಾಜಿ ಶಾಸಕರು, ವಿಧಾನಪರಿಷತ್ ಸದಸ್ಯರು, ವಿವಿಧ ಮಠಾಧೀಶರು ಹಾಗೂ ತಾಲ್ಲೂಕಿನ 70ಕ್ಕೂ ಹೆಚ್ಚು ಸಮಾಜಗಳ ಅಧ್ಯಕ್ಷರು ಮತ್ತು ಪಕ್ಷದ ಪ್ರಮುಖರು ಭಾಗವಹಿಸಿದ್ದರು.

ಯಡಿಯೂರಪ್ಪ ಅವರ ಜನ್ಮದಿನೋತ್ಸವವು ಕೇವಲ ವೈಯಕ್ತಿಕ ಹಬ್ಬವಲ್ಲ; ಕಾರ್ಯಕರ್ತರಿಗೆ ಅದು ಸೇವಾ ಸಂಕಲ್ಪದ ದಿನವಾಗಿಯೇ ಪರಿಣಮಿಸಿತು. ಮುಂದಿನ ರಾಜಕೀಯ ಹೋರಾಟಕ್ಕೆ ದಿಕ್ಕು ನೀಡುವ ಸಂದೇಶವಾಗಿ ಅವರ ಮಾತುಗಳು ಕಾರ್ಯಕರ್ತರಲ್ಲಿ ಹೊಸ ಉತ್ಸಾಹವನ್ನು ತುಂಬಿದವು.

K.M.Sathish Gowda

Join WhatsApp

Join Now

Facebook

Join Now

Read more

Leave a Comment