ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಫೋನ್ ಕದ್ದಾಲಿಕೆ ಆರೋಪ: “ಹಾಲು-ಜೇನು ಸಂಬಂಧಕ್ಕೆ ಕಲ್ಲೆಸೆಯುವ ಪ್ರಯತ್ನ” – ವಿರೋಧ ಪಕ್ಷಗಳಿಗೆ ಸಿದ್ದರಾಮಯ್ಯ ತಿರುಗೇಟು

On: March 3, 2026 3:29 PM
Follow Us:

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೇಲೆ ಕಣ್ಣಿಡಲು ಫೋನ್ ಕದ್ದಾಲಿಕೆ ನಡೆಯುತ್ತಿದೆ ಎಂಬ ವಿರೋಧ ಪಕ್ಷದ ಆರೋಪಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪಗಳು “ತಾ ಕಳ್ಳ ಇತರರ ನಂಬ” ಎಂಬ ಗಾದೆಯಂತಿದ್ದು, ಇದು ಅತೃಪ್ತ ಆತ್ಮಗಳ ಹತಾಶ ಹೇಳಿಕೆ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಿಸಿದ ತಮ್ಮ ಪ್ರತಿಕ್ರಿಯೆಯಲ್ಲಿ ಮುಖ್ಯಮಂತ್ರಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ವಿರೋಧ ಪಕ್ಷದ ನಾಯಕರು ತಾವು ಮತ್ತು ಡಿ.ಕೆ. ಶಿವಕುಮಾರ್ ಅವರ ನಡುವಿನ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಉಂಟುಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಇಂತಹ ಪ್ರಯತ್ನಗಳಿಂದ ಅವರೊಳಗಿನ ಅಸಮಾಧಾನ ಮಾತ್ರ ಹೊರಹೊಮ್ಮಬಹುದು; ತಮ್ಮಿಬ್ಬರ ನಡುವಿನ “ಹಾಲು-ಜೇನು” ಸಂಬಂಧಕ್ಕೆ ಯಾವುದೇ ಧಕ್ಕೆಯೂ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆರೋಪ ಮಾಡಿದವರಲ್ಲಿ ಒಬ್ಬರು ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿದ್ದವರು, ಮತ್ತೊಬ್ಬರು ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರಾಗಿದ್ದವರು ಎಂಬುದನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, ಅವರ ಕಾಲದಲ್ಲಿಯೂ ಗುಪ್ತಚರ ಇಲಾಖೆ ಮುಖ್ಯಮಂತ್ರಿಯವರ ಅಧೀನದಲ್ಲೇ ಇತ್ತು ಎಂದಿದ್ದಾರೆ. ಹೀಗಾಗಿ ಅವರ ಹೇಳಿಕೆಗಳು ಅವರದೇ ಆಡಳಿತ ಅನುಭವದ ಆಧಾರದ ಮೇಲೆ ಬಂದಂತಿವೆ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಪಕ್ಷದೊಳಗಿನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒತ್ತಿ ಹೇಳಿದ ಮುಖ್ಯಮಂತ್ರಿ, ತಮ್ಮ ಪಕ್ಷವು ಪ್ರಧಾನಿ ಎದುರು ಮಾತಾಡಲು ಹೆದರುವ ಪಕ್ಷವಲ್ಲ, ಅಥವಾ ಏಕಕುಟುಂಬದ ಅಧಿಪತ್ಯದಲ್ಲಿರುವ ಸಂಘಟನೆಯೂ ಅಲ್ಲ ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ. ಪಕ್ಷದ ಶಾಸಕರು ಯಾರೂ ವೈಯಕ್ತಿಕ ನಾಯಕನ ಬೆಂಬಲಿಗರಲ್ಲ; ಎಲ್ಲರೂ ಕಾಂಗ್ರೆಸ್ ತತ್ವ-ಸಿದ್ಧಾಂತಗಳ ಬೆಂಬಲಿಗರು ಎಂದು ಹೇಳಿದ್ದಾರೆ. ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರಿಗೂ ಸ್ವಾತಂತ್ರ್ಯವಿದ್ದರೂ, ಅಂತಿಮವಾಗಿ ಹೈಕಮಾಂಡ್ ತೀರ್ಮಾನಕ್ಕೆ ತಲೆಬಾಗುವುದು ಪಕ್ಷದ ಶಿಸ್ತು ಎಂದು ಪುನರುಚ್ಚರಿಸಿದ್ದಾರೆ.

ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ತಮ್ಮಿಬ್ಬರ ಸಂಬಂಧ ಕೆಡಿಸಿ ರಾಜಕೀಯ ಲಾಭ ಪಡೆಯುವ ದುರಾಲೋಚನೆ ಇದ್ದರೆ ಅದು ಹಗಲು ಕನಸು ಮಾತ್ರ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ಒಬ್ಬ ಕಟ್ಟಾ ಕಾಂಗ್ರೆಸಿಗರಾಗಿದ್ದು, ಸುಳ್ಳು ಪ್ರಕರಣಗಳು, ಜೈಲು ಶಿಕ್ಷೆಗಳ ಒತ್ತಡಗಳ ನಡುವೆಯೂ ಪಕ್ಷಕ್ಕೆ ನಿಷ್ಠೆಯಿಂದ ಉಳಿದಿದ್ದಾರೆ ಎಂಬುದನ್ನು ನೆನಪಿಸಿದ್ದಾರೆ.

ಕರ್ನಾಟಕದ ಇತ್ತೀಚಿನ ರಾಜಕೀಯ ಇತಿಹಾಸವನ್ನು ಒಮ್ಮೆ ಪರಿಶೀಲಿಸಿದರೆ ಫೋನ್ ಕದ್ದಾಲಿಕೆ ಮತ್ತು ಗೂಢಚರ್ಯೆ ಪ್ರಕರಣಗಳು ಯಾವ ಕಾಲದಲ್ಲಿ ನಡೆದವು ಎಂಬುದು ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದ್ದಾರೆ. “ಆಪರೇಷನ್ ಕಮಲ”, ರೆಸಾರ್ಟ್ ರಾಜಕಾರಣ, ವಚನಭಂಗ ಮುಂತಾದ ಅನಿಷ್ಠಗಳು ರಾಜ್ಯ ರಾಜಕೀಯದಲ್ಲಿ ಮೂಡಿಬಂದದ್ದು ಪರಸ್ಪರ ಅಪನಂಬಿಕೆ ಮತ್ತು ಕುತಂತ್ರಗಳ ಪರಿಣಾಮ ಎಂದು ಆರೋಪಿಸಿದ್ದಾರೆ.

2018ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಆದಿಚುಂಚನಗಿರಿಯ ಪೂಜ್ಯ ನಿರ್ಮಲಾನಂದನಾಥ ಸ್ವಾಮಿಗಳ ಫೋನ್ ಕದ್ದಾಲಿಕೆ ಆರೋಪ ಕೇಳಿಬಂದ ವಿಚಾರವನ್ನು ಮುಖ್ಯಮಂತ್ರಿ ಪ್ರಸ್ತಾಪಿಸಿದ್ದಾರೆ. ಈ ಕುರಿತು ತನಿಖೆ ನಡೆಸಿದ ಸಿಬಿಐ ಏಳು ಸ್ವಾಮೀಜಿಗಳ ಫೋನ್‌ಗಳ ಕದ್ದಾಲಿಕೆ ನಡೆದಿರುವುದಾಗಿ ತಿಳಿಸಿತ್ತು ಎಂದು ಹೇಳಿದ್ದಾರೆ. ಇಂತಹ ಹಿನ್ನೆಲೆಯಲ್ಲೇ ಈಗಿನ ಆರೋಪಗಳನ್ನು ನೋಡಬೇಕೆಂದು ಅವರು ಸೂಚಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ನಡೆದಿದೆ ಎಂಬ ಆರೋಪಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ . ಪೊಲೀಸ್, ಸಿಬಿಐ, ಇಡಿ, ಆದಾಯ ತೆರಿಗೆ ಇಲಾಖೆಗಳನ್ನು ರಾಜಕೀಯವಾಗಿ ಬಳಸಲಾಗುತ್ತಿದೆ ಎಂಬ ಮಾತು ದೇಶದಾದ್ಯಂತ ಕೇಳಿಬರುತ್ತಿದೆ ಎಂದು ಅವರು ಹೇಳಿದ್ದಾರೆ. ಇಂತಹ ಬೆದರಿಕೆಗಳಿಗೆ ಕಾಂಗ್ರೆಸ್ ನಾಯಕರು ಜಗ್ಗುವುದಿಲ್ಲ, ಬಗ್ಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹಿಂದಿನ ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೀತಾರಾಂ ಕೇಸರಿ ಅವರ ವಿರುದ್ಧ ನಡೆದ ಗೂಢಚರ್ಯೆ ವಿಚಾರದಿಂದಾಗಿ ಕಾಂಗ್ರೆಸ್ ಬೆಂಬಲ ಹಿಂತೆಗೆದುಕೊಂಡಿತ್ತು ಎಂದು ಸ್ಮರಿಸಿದ್ದಾರೆ. ಇಂತಹ ಅಪನಂಬಿಕೆಗಳ ರಾಜಕಾರಣದಿಂದ ಕನ್ನಡಿಗ ನಾಯಕನಿಗೆ ಹೆಚ್ಚಿನ ಕಾಲ ಪ್ರಧಾನಿಯಾಗುವ ಅವಕಾಶ ತಪ್ಪಿಹೋಯಿತು ಎಂಬುದಾಗಿ ವಿಷಾದ ವ್ಯಕ್ತಪಡಿಸಿದ್ದಾರೆ.

ಕೊನೆಯಲ್ಲಿ, ಹೆಚ್.ಡಿ. ಕುಮಾರಸ್ವಾಮಿ ಮತ್ತು ಆರ್. ಅಶೋಕ್ ಅವರು ಕುತಂತ್ರ ರಾಜಕಾರಣ ಬಿಟ್ಟು ರಚನಾತ್ಮಕ ವಿರೋಧ ಪಕ್ಷದ ರೀತಿಯಲ್ಲಿ ಕೆಲಸ ಮಾಡಿ ರಾಜ್ಯದ ಅಭಿವೃದ್ಧಿಗೆ ಕೈಜೋಡಿಸಲಿ ಎಂದು ಮುಖ್ಯಮಂತ್ರಿ ಹಾರೈಸಿದ್ದಾರೆ. ಜನರು ಐದು ವರ್ಷಗಳ ಆಡಳಿತಕ್ಕೆ ಕಾಂಗ್ರೆಸ್‌ಗೆ ಜನಾದೇಶ ನೀಡಿದ್ದಾರೆ; ವಿರೋಧ ಪಕ್ಷಗಳ ಕುತಂತ್ರಗಳ ನಡುವೆಯೂ ಸರ್ಕಾರ ತನ್ನ ಅವಧಿಯನ್ನು ಪೂರ್ಣಗೊಳಿಸಲಿದೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿಯೇ ಮುಂದುವರಿಯುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

K.M.Sathish Gowda

Join WhatsApp

Join Now

Facebook

Join Now

Read more

“ಆತಂಕ ಬೇಡ, ನಿಮ್ಮ ಜೊತೆಗೆ ನಾವು ಇದ್ದೇವೆ”: ದುಬೈನಲ್ಲಿ ಸಿಲುಕಿದ ಕನ್ನಡಿಗರಿಗೆ ಧೈರ್ಯ ತುಂಬಿದ ಬಿ.ವೈ.ವಿಜಯೇಂದ್ರ

ಸಚಿವ ಮಧು ಬಂಗಾರಪ್ಪ ಹುಟ್ಟುಹಬ್ಬದ ವಿಶೇಷ: ಸೊರಬದ ವಿದ್ಯಾರ್ಥಿಗಳಿಗೆ ವಿಮಾನಯಾನ – ಶಿಕ್ಷಣಕ್ಕೆ ಪ್ರೋತ್ಸಾಹದ ಹೊಸ ಅಧ್ಯಾಯ

ದುಬೈನಲ್ಲಿ ಶಿವಮೊಗ್ಗದ ಪ್ರತಿಭೆಗೆ ಅಂತರರಾಷ್ಟ್ರೀಯ ಗೌರವ: ಪ್ರದೀಪ್ ವಿ. ಎಲಿ ಅವರಿಗೆ ‘ವಿಜಯರತ್ನ 2026’ ಪ್ರಶಸ್ತಿ

ಯಲಹಂಕದಲ್ಲಿ ಹಿಂದುಳಿದ–ದಲಿತ ಸಮುದಾಯಗಳ 24 ಮಠಗಳಿಗೆ ಭೂಮಿ ಹಂಚಿಕೆ: ಸಾಮಾಜಿಕ ಸಮಾನತೆಗೆ ಶಾಸಕ ಎಸ್.ಆರ್. ವಿಶ್ವನಾಥ್ ಮಹತ್ವದ ಹೆಜ್ಜೆ

ಕೊಲ್ಲಿ ದೇಶಗಳಲ್ಲಿ ಕನ್ನಡಿಗರ ಸಂಕಷ್ಟ; ಸರ್ಕಾರ ಮಧ್ಯಪ್ರವೇಶಿಸಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಒತ್ತಾಯ

ಆಡಳಿತದೊಂದಿಗೆ ಕೈಜೋಡಿಸಿ ಕಲುಷಿತ ತುಂಗಭದ್ರೆಯನ್ನು ನಿರ್ಮಲಗೊಳಿಸೋಣ: ನ್ಯಾ.ಮೂ. ಸಂತೋಷ್ ಎಂ.ಎಸ್.

Leave a Comment