ಬೆಂಗಳೂರು: ಅಮೆರಿಕ, ಇಸ್ರೇಲ್–ಇರಾನ್ ನಡುವೆ ಉದ್ಭವಿಸಿರುವ ಯುದ್ಧ ಪರಿಸ್ಥಿತಿಯ ನಡುವೆಯೇ ದುಬೈಯಲ್ಲಿ ಸಿಲುಕಿರುವ ಕನ್ನಡಿಗರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಶಾಸಕರಾದ ಬಿ.ವೈ.ವಿಜಯೇಂದ್ರ ಇಂದು ದೂರವಾಣಿ ಮೂಲಕ ಮಾತನಾಡಿ ಧೈರ್ಯ ತುಂಬಿದರು.
ಪ್ರಶಸ್ತಿ ಸ್ವೀಕಾರಕ್ಕಾಗಿ ತೆರಳಿದ್ದ ಒಟ್ಟು 61 ಸದಸ್ಯರ ತಂಡವು ದುಬೈಯಲ್ಲಿ ವಾಸ್ತವ್ಯವಿದ್ದು, ಇತ್ತೀಚಿನ ಯುದ್ಧ ಪರಿಸ್ಥಿತಿಯಿಂದಾಗಿ ವಾಪಸ್ಸು ಪ್ರಯಾಣ ಸಾಧ್ಯವಾಗದೆ ಆತಂಕದಲ್ಲಿದೆ. ಅರಸೀಕೆರೆಯ ಐವರು ಕೂಡ ಈ ತಂಡದಲ್ಲಿದ್ದು, ಹೋಟೆಲ್‌ನಲ್ಲಿ ತಂಗಿರುವುದಾಗಿ ತಿಳಿಸಿದರು. ಈಗಾಗಲೇ ಏಳು ದಿನಗಳು ಕಳೆದಿದ್ದು, ಇಂದು ರಾತ್ರಿ ನಿಗದಿಯಾಗಿದ್ದ ವಿಮಾನಯಾನವೂ ರದ್ದಾಗಿದೆ ಎಂದು ಅವರು ವಿವರಿಸಿದರು.
ಸಂಕಷ್ಟದಲ್ಲಿ ಸಿಲುಕಿರುವ ಕನ್ನಡಿಗರನ್ನು ತಕ್ಷಣ ಸುರಕ್ಷಿತವಾಗಿ ಕರ್ನಾಟಕಕ್ಕೆ ಕರೆತರಲು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ವಿಜಯೇಂದ್ರ ಭರವಸೆ ನೀಡಿದರು. ಈ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗಮನಕ್ಕೂ ವಿಷಯವನ್ನು ತರಲಾಗುವುದು ಎಂದು ಹೇಳಿದರು.
ಹಿಂದೆ ಉಕ್ರೇನ್‌ನಲ್ಲಿ ಯುದ್ಧ ಪರಿಸ್ಥಿತಿ ಉದ್ಭವಿಸಿದಾಗ ಕೇಂದ್ರ ಸರ್ಕಾರವು ತಕ್ಷಣ ಕ್ರಮ ಕೈಗೊಂಡು ಭಾರತೀಯರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರಲು ವ್ಯವಸ್ಥೆ ಮಾಡಿತ್ತು. ಇದೇ ರೀತಿಯಲ್ಲಿ ಈಗಲೂ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
“ಆತಂಕಗೊಳ್ಳಬೇಡಿ. ನೀವು ಎಲ್ಲರೂ ಸುರಕ್ಷಿತವಾಗಿ ವಾಪಸ್ ಬರಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಾನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ,” ಎಂದು ವಿಜಯೇಂದ್ರ ತಂಡದ ಸದಸ್ಯರಿಗೆ ಧೈರ್ಯ ಹೇಳಿದರು.







