ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

“ಸತ್ಯ ಹೇಳಿ, ಇಲ್ಲದಿದ್ದರೆ ಜನರೇ ತೀರ್ಪು ಕೊಡುತ್ತಾರೆ,.!”: ಸಿದ್ದರಾಮಯ್ಯಗೆ ಕುಮಾರಸ್ವಾಮಿ ವಾಗ್ದಾಳಿ

On: March 4, 2026 12:38 PM
Follow Us:

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಫೋನ್ ಕದ್ದಾಲಿಕೆ ಆರೋಪ ಭಾರೀ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ಎಕ್ಸ್‌ನಲ್ಲಿ ಪ್ರಕಟಿಸಿದ ಕಠಿಣ ಸಂದೇಶದಲ್ಲಿ ಅವರು, “ಪ್ರಶ್ನೆ ಕೇಳಿದರೆ ವಿಷಯಾಂತರ ಬೇಡ, ನೇರ ಉತ್ತರ ನೀಡಿ” ಎಂದು ಖಡಕ್ ಸವಾಲು ಹಾಕಿದ್ದಾರೆ.

“ಕುಂಬಳಕಾಯಿ ಕಳ್ಳ ಎಂದರೆ ನಾನೇ… ನಾನೇ… ಎಂದು ಹೆಗಲು ಮುಟ್ಟಿ ನೋಡಿಕೊಳ್ಳುವ ಪರಿಸ್ಥಿತಿ ಬಂದರೆ ಅದಕ್ಕೆ ನಾನು ಏನು ಮಾಡಲಿ?” ಎಂದು ಕಿಡಿಕಾರಿರುವ ಅವರು, ಫೋನ್ ಕದ್ದಾಲಿಕೆ ವಿಚಾರವನ್ನು ಮಾಧ್ಯಮಗಳೇ ಮೊದಲು ಪ್ರಸ್ತಾಪಿಸಿದ್ದವು; ಆ ಕುರಿತು ಪ್ರಶ್ನೆಗಳು ಎದ್ದ ಹಿನ್ನೆಲೆಯಲ್ಲಿ ತಾವು ಪ್ರತಿಕ್ರಿಯೆ ನೀಡಿದ್ದು ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ. ಅನಗತ್ಯವಾಗಿ ವಿಷಯವನ್ನು ತಿರುಗಿಸಿ ಆರೋಪ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

140ಕ್ಕೂ ಹೆಚ್ಚು ಸ್ಥಾನಗಳ ಬಹುಮತ ಜನರು ಆಡಳಿತ ನಡೆಸಲು ನೀಡಿದ್ದಾರೆ. ಆದರೆ ಪ್ರತಿದಿನ ಕೌಂಟರ್ ರಾಜಕೀಯದಲ್ಲಿ ತೊಡಗುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ತಾವು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದರೂ ಅಧಿಕಾರ ಉಳಿಸಿಕೊಳ್ಳಲು ಅಕ್ರಮ ಮಾರ್ಗಗಳನ್ನು ಬಳಸಿಲ್ಲ ಎಂದು ಅವರು ಹೇಳಿದ್ದಾರೆ. “ನಾನು ಕದ್ದಾಲಿಕೆ ಮಾಡಿದ್ದರೆ ಅಧಿಕಾರ ಕಳೆದುಕೊಳ್ಳುತ್ತಿರಲಿಲ್ಲ” ಎಂಬ ಅರ್ಥದ ಮಾತಿನ ಮೂಲಕ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಅಧಿಕಾರಕ್ಕಾಗಿ ಶಾಸಕರಿಗೆ ಒತ್ತಡ ಹೇರುವುದು, ಗುಪ್ತಚರ ವ್ಯವಸ್ಥೆ ದುರುಪಯೋಗ ಮಾಡುವುದು ತಮ್ಮ ಸಂಸ್ಕೃತಿ ಅಲ್ಲ ಎಂದು ಹೇಳಿದ್ದಾರೆ.

ಫೋನ್ ಕದ್ದಾಲಿಕೆ ಆರೋಪದ ಹಿಂದೆ ಕಾಂಗ್ರೆಸ್‌ನ ಆಂತರಿಕ ಕುರ್ಚಿ ಕಾಳಗವೇ ಕಾರಣ ಎನ್ನುವ ಅನುಮಾನವನ್ನು ಪ್ರತಿಪಕ್ಷಗಳು ವ್ಯಕ್ತಪಡಿಸುತ್ತಿವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಪಕ್ಷದೊಳಗಿನ ಅಸಹನೆವೇ ಹೊರಗೆ ಸ್ಫೋಟಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ತಮ್ಮ ವಿರುದ್ಧ ಟೀಕೆ ಬಂದಾಗಲೆಲ್ಲ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಹೆಸರನ್ನು ಎಳೆದು ತರುವುದನ್ನು ಅವರು ಖಂಡಿಸಿದ್ದಾರೆ. ದೇವೇಗೌಡರು ಅಧಿಕಾರ ತ್ಯಜಿಸಿದ ಸಂದರ್ಭದ ರಾಜಕೀಯ ಶಿಷ್ಟಾಚಾರವನ್ನು ನೆನಪಿಸಿಕೊಂಡು, ಅದೇ ರೀತಿಯ ಧೈರ್ಯ ಪ್ರದರ್ಶಿಸುವಂತೆ ಸವಾಲು ಹಾಕಿದ್ದಾರೆ.

ರಾಜ್ಯದಲ್ಲಿ ತನಿಖಾ ವ್ಯವಸ್ಥೆಗಳನ್ನು ಸೇಡು ಸಾಧನೆಗೆ ಬಳಸಲಾಗುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ. “ಪ್ರಜಾಪ್ರಭುತ್ವ ಎಂದರೆ ಜನರಿಂದ, ಜನರಿಗಾಗಿ, ಜನರಿಗೋಸ್ಕರ ನಡೆಯುವ ಆಡಳಿತ. ಅದನ್ನು ಕಾಪಾಡಿ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಕುಮಾರಸ್ವಾಮಿ ಅವರ ಈ ಕಠಿಣ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ತಂದಿದೆ. ಇದೀಗ ಸರ್ಕಾರ ನೇರ ಸ್ಪಷ್ಟನೆ ನೀಡುತ್ತದೆಯೇ ಅಥವಾ ಆರೋಪ-ಪ್ರತ್ಯಾರೋಪಗಳ ರಾಜಕೀಯ ಮುಂದುವರೆಯುತ್ತದೆಯೇ ಎಂಬುದು ಕಾದು ನೋಡಬೇಕಾಗಿದೆ.

K.M.Sathish Gowda

Join WhatsApp

Join Now

Facebook

Join Now

Read more

Leave a Comment